/newsfirstlive-kannada/media/media_files/2025/10/09/gilli-kavya-ashwini-gowda-2025-10-09-16-01-09.png)
Photograph: (colors kannada)
ಒಂಟಿಗಳು ಅರಸರು ಎಂದು ಸೋಲಲು ಹಿಂಜರಿಯುತ್ತಿದ್ದರೆ ಜಂಟಿಗಳು ಅರಸರ ಮಾತನ್ನು ಕೇಳುವುದು ಬಿಡುವುದು ತಮಗೆ ಬಿಟ್ಟದ್ದು ಅನ್ನುವ ಅಹಂನಲ್ಲಿದ್ದಾರೆ. ಇದರಿಂದ ಅಸುರರಾಜನಿಗೇ ಹೊಟ್ಟೆಗೆ ಹಿಟ್ಟಿಲ್ಲ.
ಒಂಟಿಗಳು ಅರಸರು, ಜಂಟಿಗಳು ಸೇವಕರು ಎನ್ನುವ ಬಿಗ್‌ಬಾಸ್ ಮನೆಯ ಮೂಲ ನಿಯಮವನ್ನು ಮೀರಬಾರದೆಂದು ಬಿಗ್‌ಬಾಸ್ ಅಸುರರಾಜ ಕಾಕ್ರೋಚ್ ಸುಧೀಗೆ ಮತ್ತೊಮ್ಮೆ ಅದೇಶ ನೀಡಿದ್ದಾರೆ.
ಅಸುರ ರಾಜ ಕಾಕ್ರೋಚ್ ಸುಧೀರ್ ರನ್ನು ಬಿಗ್ ಬಾಸ್, ಸೀಕ್ರೆಟ್ ರೂಮುಗೆ ಕರೆಸಿಕೊಂಡು ಬಿಗ್ ಬಾಸ್ ಮೂಲ ನಿಯಮವನ್ನೇ ಮರೆತಿದ್ದು ಏಕೆ ಎಂದು ಪ್ರಶ್ನಿಸಿದೆ. ಒಂಟಿಗಳು ಈಗಲೂ ಬಿಗ್ ಬಾಸ್ ಮನೆಯ ರಾಜ, ರಾಣಿಯರು. ಜಂಟಿಗಳು ಸೇವಕರು ಎಂಬ ಮೂಲ ನಿಯಮವನ್ನು ಮರೆತಿರುವುದೇಕೆ ಎಂದು ಕಾಕ್ರೋಚ್ ಸುಧೀರ್ ರನ್ನು ಬಿಗ್ ಬಾಸ್ ಪ್ರಶ್ನಿಸಿದೆ. ಈ ಮೂಲ ನಿಯಮವನ್ನು ಮತ್ತೆ ಕಟ್ಟುನಿಟ್ಟಾಗಿ ತಪ್ಪದೇ ಜಾರಿ ಮಾಡಬೇಕು ಎಂದು ಕಾಕ್ರೋಚ್ ಸುಧೀರ್‌ಗೆ ಬಿಗ್ ಬಾಸ್ ಹೇಳಿದೆ.
ಇದನ್ನು ರಾಜ ಕಾಕ್ರೋಚ್ ಸುಧೀರ್, ಮನೆಯವರಿಗೆ ಹೇಳಿದ್ದೂ ಆಗಿದೆ. ಬಳಿಕ ಒಂಟಿ ತಂಡದ ಅಶ್ವಿನಿ ಗೌಡ ಹಾಗೂ ಜಾಹ್ನವಿ, ಕಾಕ್ರೋಚ್ ಸುಧೀರ್ ಬಳಿ ತೆರಳಿ ಮಾತನಾಡಿದ್ದಾರೆ. ಬಿಗ್ ಬಾಸ್ ನಿಮಗೆ ಏನು ಹೇಳಿದ್ದಾರೆ? ಏನು ಸಂದೇಶ ನೀಡಿದ್ದಾರೆ ಎಂದು ಕೇಳಿದ್ದಾರೆ. ಒಂಟಿ ತಂಡದವರು ರಾಜ ರಾಣಿಯರಾಗಿ ಮುಂದುವರಿಯಬೇಕು, ಜಂಟಿ ತಂಡದವರು ಸೇವಕರಾಗಿ ಮುಂದುವರಿಯಬೇಕು, ಈ ಮೂಲ ನಿಯಮದ ಪಾಲನೆ ಏಕೆ ಆಗುತ್ತಿಲ್ಲ ಎಂದು ನನ್ನನ್ನು ಕೇಳಿದ್ದರು. ನೀವು ರಾಜ, ರಾಣಿಯರಾಗಿಯೇ ಆಟ ಆಡಿ ಎಂದು ಸುಧೀರ್, ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ಹೇಳಿದ್ದಾರೆ. ಇದನ್ನು ಕೇಳುತ್ತಿದ್ದಂತೆ, ಅಶ್ವಿನಿಗೌಡ ಮತ್ತೆ ತಾವೇ ಮಹಾರಾಣಿ ಎಂದು ವರಸೆ ಶುರು ಮಾಡಿದ್ದಾರೆ.
ಆದರೀಗ ಜಂಟಿಗಳು ಅರಸರ ವಿರುದ್ಧವೇ ದಂಗೆ ಎದ್ದಿದ್ದಾರೆ. ಅರಸರ ಮಾತನ್ನು ಪಾಲಿಸುವುದು ಬಿಡುವುದು ತಮ್ಮ ಇಚ್ಛೆಗೆ ಬಿಟ್ಟಿದ್ದು ಎಂದು ನಿರ್ಧರಿಸಿದ್ದಾರೆ.
ಒಂಟಿಗಳು ಕೂಡ ಅರಸರು ಎನ್ನುವ ತಮ್ಮ ಅಧಿಕಾರವನ್ನು ಬದಿಗಿರಿಸಿ ಸೇವಕರ ಎದುರುಗಡೆ ಸೋಲಲು ಹಿಂದೇಟು ಹಾಕುತ್ತಿದ್ದು, ಬಿಗ್‌ಬಾಸ್ ಮನೆಯ ಒಲೆಯೇ ಉರಿದಿಲ್ಲ. ಇದು ಅಸುರ ಸರ್ವೋಚ್ಚ ಅಧಿಪತಿ ಕಾಕ್ರೋಚ್ ಸುಧಿಗೆ ಚಿಂತೆಯನ್ನುಂಟು ಮಾಡಿದೆ. ಹೊಟ್ಟೆಗೆ ಕೂಳಿಲ್ಲದೆ ತಲೆ ಎಲ್ಲ ಕೆಟ್ಟಿದೆ. ಯಾರಾದರೂ ಏನಾದರೂ ಮಾಡಿ ಹಾಕಿ ಅನ್ನೋ ಮಟ್ಟಕ್ಕೆ ಬಂದಿದ್ದಾರೆ.
/filters:format(webp)/newsfirstlive-kannada/media/media_files/2025/10/09/bbk-sudhi-2025-10-09-16-04-32.png)
ಒಂಟಿಗಳು ಇದಕ್ಕೆ ಸಿದ್ಧರಿಲ್ಲ. ಕೊನೆಯದಾಗಿ ಜಂಟಿಗಳ ಜೊತೆಗೆ ಮೀಟಿಂಗ್ ಮಾಡಿ ನಿರ್ಧಾರ ಮಾಡುವ ಎನ್ನುತ್ತಿದ್ದಾರೆ ಅಸುರ ರಾಜ ಕಾಕ್ರೋಚ್ ಸುಧೀರ್. ಮೊದಲು ಈಟಿಂಗ್ ಮತ್ತೆ ಮೀಟಿಂಗ್ ಅನ್ನುತ್ತಿದ್ದಾರೆ. ಅರಸ – ಸೇವಕರ ಜಟಾಪಟಿಯಲ್ಲಿ ಅಸುರರಾಜನೇ ಸೋತು ಸುಣ್ಣಾಗುವಂತಾಗಿದೆ. ಇವರನ್ನು ಹಿಡಿತಕ್ಕೆ ತರಲು ಯಾವ ತಂತ್ರ ಹೆಣೆಯುತ್ತಾರೋ ಕಾದು ನೋಡಬೇಕು.
ಇನ್ನೂ ಅಡುಗೆ ಮಾಡುವಾಗ, ಜಂಟಿ ತಂಡದ ಮಂಜುಭಾಷಿಣಿ ಹಾಗೂ ಒಂಟಿ ತಂಡದ ರಕ್ಷಿತಾ ಶೆಟ್ಟಿ ಮಧ್ಯೆ ಜೋರು ಜಗಳವೇ ನಡೆದಿದೆ. ಚಿಕನ್ ಅಡುಗೆಗೆ ರಕ್ಷಿತಾ ಶೆಟ್ಟಿ, ಹಾಗಲಕಾಯಿ ಹಾಕಿದ್ದಾರೆ ಎಂದು ಮಂಜುಭಾಷಿಣಿ, ರಕ್ಷಿತಾ ಶೆಟ್ಟಿ ಜೊತೆ ಜಗಳವಾಡಿದ್ದಾರೆ. ಈ ಹಿಂದೆ ನಾನು ಅಡುಗೆ ಮಾಡುವಾಗ ಕೂಡ ಟೀ ಪುಡಿ ಹಾಕಿದ್ದರು. ಅದಕ್ಕೆ ನಾನು ಹೀಗೆ ಮಾಡಿದೆ ಎಂದು ರಕ್ಷಿತಾ ಶೆಟ್ಟಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆ ಅಶ್ವಿನಿಗೌಡ ಕೂಡ ರಕ್ಷಿತಾ ಶೆಟ್ಟಿಗೆ ಬೆಂಬಲವಾಗಿ ನಿಂತರು. ಆದರೇ, ಜಂಟಿ ತಂಡದವರಾರು ತಾನು ರಕ್ಷಿತಾ ಶೆಟ್ಟಿ ಜೊತೆ ಜಗಳವಾಡುತ್ತಿದ್ದಾಗ, ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಎಲ್ಲರೂ ನೋಡುತ್ತಾ ನಿಂತಿದ್ದೀರಿ. ಹೀಗಾದರೇ, ಜಂಟಿ ತಂಡ ಗೆಲ್ಲಲು ಹೇಗೆ ಸಾಧ್ಯ ಎಂದು ಮಂಜುಭಾಷಿಣಿ ತಮ್ಮ ಜಂಟಿ ತಂಡದ ಸದಸ್ಯರನ್ನು ಪ್ರಶ್ನಿಸಿದ್ದಾರೆ.
ಒಂಟಿ ತಂಡದಲ್ಲಿ ಒಗ್ಗಟ್ಟು ಕಂಡು ಬಂದರೇ, ಜಂಟಿ ತಂಡದಲ್ಲಿ ಆ ರೀತಿಯ ಒಗ್ಗಟ್ಟು , ಜಂಟಿಯಾಗಿ ಹೆಚ್ಚಿನ ಶಕ್ತಿ ಪ್ರದರ್ಶನ ಮಾಡಬೇಕೆಂಬ ಧೋರಣೆಯೇ ಕಂಡು ಬರುತ್ತಿಲ್ಲ. ಇದನ್ನೇ ವಾರದ ಪಂಚಾಯಿತಿ , ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೂಡ ಹೇಳಿದ್ದಾರೆ. ಆದರೇ, ಜಂಟಿ ತಂಡದವರು ಒಗ್ಗಟ್ಟಿನಿಂದ ಬಲ ಪ್ರದರ್ಶಿಸುವ ಹಾಗೂ ಒಂಟಿ ತಂಡವನ್ನು ಟಾಸ್ಕ್ ಗಳಲ್ಲಿ ಸೋಲಿಸುವ ಪ್ರಾಮಾಣಿಕ ಯತ್ನ ಕಾಣುತ್ತಿಲ್ಲ. ಅಶ್ವಿನಿಗೌಡ ಅವಾಜ್ ಗೆ ಜಂಟಿ ತಂಡ ಸೈಲೆಂಟ್ ಆಗಬೇಕಾದ ಸ್ಥಿತಿಯಲ್ಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.