ಮಹಾಕುಂಭಮೇಳದಲ್ಲಿ ಶಾಹಿಸ್ನಾನ; ಗಂಗೆಯಲ್ಲಿ ಮಿಂದೆದ್ದ ಒಟ್ಟು 3.86 ಕೋಟಿ ಭಕ್ತಾದಿಗಳು!

author-image
Gopal Kulkarni
Updated On
60 ಕೋಟಿಯನ್ನು ದಾಟಿದ ಭಕ್ತರ ದಂಡು.. ಮಹಾಕುಂಭಮೇಳಕ್ಕೆ ವೈಭವದ ತೆರೆ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ!
Advertisment
  • ವಸಂತ ಪಂಚಮಿಗೆ 2.57 ಕೋಟಿ ಮಂದಿ ಶಾಹಿಸ್ನಾನ
  • ಕಳೆದ 2 ದಿನಗಳಿಂದ 3.86 ಕೋಟಿ ಮಂದಿ ಅಭ್ಯಂಜನ
  • ಮಧ್ಯರಾತ್ರಿ 3 ಗಂಟೆಯಲ್ಲೂ ವಾರ್​ರೂಂನಲ್ಲಿ ಕೂತ ಯೋಗಿ

ಪ್ರಯಾಗ್​ರಾಜ್​ನ ಶತಮಾನದ ಮಹಾಕುಂಭಮೇಳದಲ್ಲಿ ವಸಂತ ಪಂಚಮಿ ಪುಣ್ಯಸ್ನಾನ ನಿರ್ವಿಘ್ನವಾಗಿ ಸಂಪನ್ನಗೊಂಡಿದೆ.. ಇಡೀ ರಾತ್ರಿ ಖುದ್ದು ಸಿಎಂ ಯೋಗಿ ಆದಿತ್ಯನಾಥ್ ಪರಿಸ್ಥಿತಿಯನ್ನು ಮಾನಿಟರ್ ಮಾಡಿದ್ದಾರೆ. ನಿನ್ನೆ ಎರಡೂ ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕಾಲ್ತುಳಿತ ದುರಂತದ ತನಿಖೆ ಮುಂದುವರಿದಿದ್ದು ಎಸ್​ಪಿ ಸಂಸದೆ ಜಯಾಬಚ್ಚನ್ ವಿವಾದಾತ್ಮಕ ಹೇಳಿಕೆಯಿಂದ ಟೀಕೆಗೆ ಗುರಿಯಾಗಿದ್ದಾರೆ.

ಗಂಗಾ-ಯುಮುನಾ-ಸರಸ್ವತಿ ನದಿಗಳ ಪುಣ್ಯ ಸಂಗಮ. ಪುಣ್ಯಸ್ನಾನದಿಂದ ಜನ್ಮಜನ್ಮಾಂತರಗಳ ಪಾಪ-ಕರ್ಮಗಳು ಕಳೆಯುತ್ತವೆ ಎಂಬ ನಂಬಿಕೆ.. ಪಂಡಿತರಿಂದ ಪಾಮರವರೆಗೆ ಪ್ರಯಾಗ್​ರಾಜ್​ಗೆ ಭೇಟಿ ನೀಡಿ ಪುಣ್ಯಸ್ನಾನ ಮಾಡ್ತಿದ್ದು ಗತವೈಭವ ಮೇಳೈಸಿದೆ.

ಕಳೆದ ಜನವರಿ 13ರಿಂದ ಆರಂಭವಾಗಿರುವ ಪ್ರಯಾಗ್​ರಾಜ್ ಮಹಾಕುಂಭಮೇಳ 22ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 26ರವರೆಗೆ ಇನ್ನೂ 23 ದಿನಗಳು ಮಹಾಜಾತ್ರೆ ನಡೆಯಲಿದೆ. ಮಹಾಸಂಕ್ರಾಂತಿ, ಮೌನಿ ಅಮಾವಾಸ್ಯೆ ಹಾಗೂ ನಿನ್ನೆ ವಸಂತ ಪಂಚಮಿ ಸೇರಿ ಒಟ್ಟು ಮೂರು ಶಾಹಿಸ್ನಾನಗಳು ನೆರವೇರಿವೆ. ನಿನ್ನೆ ವಸಂತಪಂಚಮಿಯಂದು 2.57 ಕೋಟಿ ಮಂದಿ ಅಮೃತಸ್ನಾನ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತದ ಬೆನ್ನಲ್ಲೇ ಹೈಅಲರ್ಟ್ ಆಗಿದ್ದ ಯುಪಿ ಯಾವುದೇ ಅವಘಡ ನಡೆಯದಂತೆ ಕಟ್ಟೆಚ್ಚರ ವಹಿಸಿತ್ತು. ಇನ್ನು ಭಾನುವಾರ ಬೆಳಗ್ಗೆಯಿಂದ ಸೋಮವಾರ ಸಂಜೆವರೆಗೆ 3.86 ಕೋಟಿ ಯಾತ್ರಿಕರು ಪುಣ್ಯಸ್ನಾನ ಮಾಡಿದ್ದಾರೆ.

publive-image

ಕಾಲ್ತುಳಿತದಂತೆ ಪ್ರಯಾಗ್​​ರಾಜ್​ನಲ್ಲಿ ಮತ್ತೊಂದು ಅವಘಡ ನಡೆಯದಂತೆ ಯುಪಿ ಸರ್ಕಾರ ಹೈ ಅರ್ಲಟ್ ಮಾಡಿತ್ತು.. ಎಲ್ಲೆಡೆ ಭದ್ರತಾಪಡೆ ಹದ್ದಿನಕಣ್ಣು ಇರಿಸಿತ್ತು.. ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುಂದಾಳತ್ವ ವಹಿಸಿದ್ದರು. ಇಡೀ ರಾತ್ರಿ ಭದ್ರತಾ ಕಚೇರಿಯಲ್ಲಿ ಸಿಸಿಟಿವಿ ವೀಕ್ಷಿಸಿದ್ರು. ಡಿಜಿಪಿ ಸೇರಿ ಇತರೆ ಅಧಿಕಾರಿಗಳ ಜೊತೆ ಕೂತು ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದ್ದಾರೆ.

ಇನ್ನು ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸ್ತಿರುವ ತನಿಖಾಧಿಕಾರಿಗಳು ಶಂಕಿತ ವ್ಯಕ್ತಿಗಳನ್ನು ಗುರುತಿಸಿದ್ದು ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ..

ಕಾಲ್ತುಳಿತ ದುರಂತದ ಬಳಿಕ ಪ್ರಯಾಗ್‌ರಾಜ್‌ನಲ್ಲಿ ಹೋಟೆಲ್ ಬುಕಿಂಗ್ ಶೇ.40-60 ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ. ಶೇ. 40-60ರಷ್ಟು ಯಾತ್ರಿಕರು ಪ್ರಯಾಗ್​ರಾಜ್ ಭೇಟಿ ರದ್ದುಗೊಳಿಸಿದ್ದಾರೆ.. ಫೆಬ್ರವರಿ 5 ರಿಂದ 26 ರವರೆಗೆ ಸರಾಸರಿ ಶೇ. 30-35ರಷ್ಟಿದೆ ಎಂದು ಪ್ರಯಾಗ್ರಾಜ್ ಹೋಟೆಲ್ ಅಸೋಸಿಯೇಷನ್ ತಿಳಿಸಿದೆ.

publive-image

‘ಕಾಲ್ತುಳಿತ ದುರಂತದಲ್ಲಿ ಸತ್ತವರನ್ನು ನದಿಗೆ ಎಸೆಯಲಾಗಿದೆ’

ಈ ನಡುವೆ ಸಮಾಜವಾದಿ ಪಕ್ಷದ ರಾಜ್ಯಸಭಾ ಸಂಸದೆ ಜಯಬಚ್ಚನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂಸತ್ತಿನ ಅಧಿವೇಶನದಲ್ಲಿ ಮಹಾಕುಂಭಮೇಳವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಜಯಾ ಬಚ್ಚನ್, ಮಹಾಕುಂಭದ ನೀರು ಅತ್ಯಂತ ಕಲುಷಿತವಾಗಿದೆ. ಪವಿತ್ರ ಗಂಗೆ ಕಲುಷಿತಳಾಗಿದ್ದಾಳೆ ಎಂಬುದು ಬೇಸರದ ಸಂಗತಿ, ಕಾಲ್ತುಳಿತದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಶವಗಳನ್ನು ಗಂಗಾ ನದಿಗೆ ಎಸೆಯಲಾಗಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ. ಕೋಟ್ಯಂತರ ಜನರು ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಅಂತ ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ,ಇದನ್ನು ನಂಬಲು ಸಾಧ್ಯವೇ ಅಂತ ಬಾಂಬ್ ಸಿಡಿಸಿದ್ದಾರೆ. ಜಯ ಬಚ್ಚನ್ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ.

ಕುಂಭಮೇಳದಲ್ಲಿ ಸ್ವಚ್ಛ ನೀರು ಕಲುಷಿತವಾಗಿದೆ. ಮೃತರ ಮೃತದೇಹಗಳನ್ನು ಗಂಗೆಗೆ ಎಸೆಯಲಾಗಿದೆ. ಇದ್ರಿಂದ ನೀರು ಕಲುಷಿತವಾಗಿದೆ. ಇದೇ ನೀರನ್ನೇ ಪ್ರಯಾಗ್​ರಾಜ್​ನಲ್ಲಿ ಜನರಿಗ ಕೊಡಲಾಗ್ತಿದೆ. ಸರ್ಕಾರ ಸುಳ್ಳು ಹೇಳುತ್ತಿದೆ. ಇಷ್ಟೊಂದು ದೊಡ್ಡ ಸಂಖ್ಯೆಯ ಜನ ಹೇಗೆ ಸೇರಲು ಸಾಧ್ಯವಿದೆ, ಸುಳ್ಳು ಹೇಳ್ತಿದ್ದಾರೆ ಎಂದು ಜಯಾಬಚ್ಚನ್ ಹೇಳಿದ್ದಾರೆ.

ಮಹಾಕುಂಭಮೇಳದಲ್ಲಿ ಕಾಲ್ತುಳಿತ ದುರಂತದ ತನಿಖೆ ನಡೆಯುತ್ತಿದ್ದು ಪಿತೂರಿಯ ವಾಸನೆ ಬರುತ್ತಿದೆ ಅಂತ ಬಿಜೆಪಿ ಸಂಸದ ರವಿಶಂಕರ್​ ಪ್ರಸಾದ್ ಹೇಳಿದ್ದಾರೆ. ಸಂಪೂರ್ಣ ತನಿಖೆ ಬಳಿಕ ಪಿತೂರಿ ಮಾಡಿದವರ ಬಂಡವಾಳ ಬಯಲಾಗುತ್ತೆ ಎಂದಿದ್ದಾರೆ.

ಒಟ್ಟಾರೆ, ಯಾವುದೇ ಅನಾಹುತ ನಡೆಯದಂತೆ ಬಸಂತ ಪಂಚಮಿ ಶಾಹಿಸ್ನಾನವನ್ನು ನಿರ್ವಹಿಸಲಾಗಿದೆ. ಇನ್ನು ಫೆಬ್ರವರಿ 12ರಂದು ಮಾಘಿಸ್ನಾನ ಹಾಗೂ ಫೆಬ್ರವರಿ 26ರಂದು ಶಾಹಿಸ್ನಾನಗಳು ನಡೆಯಲಿದೆ. ಅದರಲ್ಲೂ ಫೆಬ್ರವರಿ 26ರಂದು ಮಹಾಶಿವರಾತ್ರಿ ಹಬ್ಬ ಇದ್ದು ಅಂದು ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೇಳಲು ಸಜ್ಜಾಗಿದ್ದಾರೆ.. ಯೋಗಿ ಸರ್ಕಾರ ಮತ್ತಷ್ಟು ಭದ್ರತೆಯನ್ನು ಹೆಚ್ಚಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment