/newsfirstlive-kannada/media/post_attachments/wp-content/uploads/2025/06/Maharastra-MP-CAR-DRIVER-3.jpg)
ಮಹಾರಾಷ್ಟ್ರದಲ್ಲಿ ಭೂಮಿಯ ಗಿಫ್ಟ್ ಡೀಡ್ (Gift deed) ಒಂದು ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಬರೋಬ್ಬರಿ 150 ಕೋಟಿ ರೂಪಾಯಿ ಬೆಲೆಬಾಳುವ 3 ಎಕರೆ ಭೂಮಿಯನ್ನು ಹೈದರಾಬಾದ್‌ನ ರಾಜಮನೆತನದ ಸಲಾರ್ ಜಂಗ್ ಕುಟುಂಬವು ಕಾರು ಡ್ರೈವರ್ ಒಬ್ಬರಿಗೆ ದಾನವಾಗಿ ನೀಡಿದೆ. ಅಧಿಕೃತವಾಗಿ ಭೂಮಿಯನ್ನು ದಾನಪತ್ರದ ಮೂಲಕ ಕಾರು ಡ್ರೈವರ್ ಹೆಸರಿಗೆ ನೀಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿದೆ. ಶಿವಸೆನೇಯ ಸಂಸದ ಸಂದೀಪನ್ ರಾವ್ ಭೂಮ್ರೆ ಅವರ ಕಾರು ಚಾಲಕನಿಗೆ 150 ಕೋಟಿ ರೂಪಾಯಿ ಬೆಲೆಬಾಳುವ ಭೂಮಿ ನೀಡಿರುವುದು ಈಗ ಅನುಮಾನಕ್ಕೆ ಕಾರಣವಾಗಿದ್ದು, ಆರ್ಥಿಕ ಅಪರಾಧ ವಿಭಾಗ ತನಿಖೆ ಆರಂಭಿಸಿದೆ.
ಜಾವೇದ್ ರಸೂಲ್ ಶೇಖ್ (Jawed Rasul Shaikh) ಎಂಬಾತ ಸಂಸದ ಸಂದೀಪನ್ ರಾವ್ ಭೂಮ್ರೆ ಅವರಿಗೂ ಹಾಗೂ ಅವರ ಶಾಸಕ ಪುತ್ರ ವಿಲಾಸ್‌ಗೆ ಕಳೆದ 13 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಜಾವೇದ್ ರಸೂಲ್ ಶೇಖ್ ಹೆಸರಿಗೆ ಸಲಾರ್ ಜಂಗ್ ಕುಟುಂಬ ಬರೋಬ್ಬರಿ 150 ಕೋಟಿ ರೂಪಾಯಿ ಬೆಲೆಬಾಳುವ 3 ಎಕರೆ ಭೂಮಿಯನ್ನು ದಾನಪತ್ರದ ಮೂಲಕ ದಾನವಾಗಿ ನೀಡಿದೆ. ಭೂಮಿಯು ಸಂಭಾಜಿನಗರ ಜಿಲ್ಲೆಯ ದಾವೂದ್‌ಪುರದ ಜಲ್ನಾ ರಸ್ತೆಯಲ್ಲಿದೆ. ಭೂಮಿಯ ಮಾಲೀಕರು ಮೀರ್ ಮಹಜರ್ ಅಲಿ ಖಾನ್ ಮತ್ತು ಅವರ 6 ಮಂದಿ ಸಂಬಂಧಿಕರು. ಇವರೆಲ್ಲರೂ ಸಲಾರ್ ಜಂಗ್ ಕುಟುಂಬದ ಉತ್ತರಾಧಿಕಾರಿಗಳು. ಸಲಾರ್ ಜಂಗ್, ಹೈದರಾಬಾದ್ ರಾಜನಾಗಿದ್ದ ನಿಜಾಮರ ಪ್ರಧಾನಮಂತ್ರಿಯಾಗಿದ್ದವರು. ಗಿಫ್ಟ್ ಡೀಡ್ ಅನ್ನು ಹೀಬಾನಾಮಾ (Hibanama) ಅಂತ ಕರೆಯುತ್ತಾರೆ.
ಇದನ್ನೂ ಓದಿ: ಹಲ್ಲುಗಳು ಫಳಫಳ ಹೊಳಿಬೇಕಂತ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ.. ಈ ಟಿಪ್ಸ್ ಪಾಲಿಸಿ..!
ಛತ್ರಪತಿ ಸಂಭಾಜಿನಗರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದಿಂದ (Economic Offences Wing (EOW) of Chhatrapati Sambhajinagar Police station) ಹೇಗೆ ಇಷ್ಟೊಂದು ಮೌಲ್ಯಯುತವಾದ ಭೂಮಿಯನ್ನು ಕುಟುಂಬಕ್ಕೆ ಯಾವುದೇ ಸಂಬಂಧವೂ ಇಲ್ಲದ ವ್ಯಕ್ತಿಗೆ ದಾನವಾಗಿ ನೀಡಿದರು ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.
ಜಾವೇದ್ ಹೇಳೋದು ಏನು..?
ಜಾವೇದ್ ರಸೂಲ್ ಶೇಖ್ ಹೇಳುವ ಪ್ರಕಾರ.. ಸಲಾರ್ ಜಂಗ್ ಕುಟುಂಬದ ಜೊತೆಗೆ ಉತ್ತಮ ಭಾಂಧವ್ಯ ಹೊಂದಿದ್ದರಂತೆ. ಹೀಗಾಗಿ ಭೂಮಿಯನ್ನ ತಮಗೆ ದಾನವಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಈಗ ಆರ್ಥಿಕ ಅಪರಾಧ ವಿಭಾಗದ ತನಿಖೆಗೆ ಪೂರ್ಣ ಸಹಕಾರ ನೀಡುತ್ತೇನೆ. ಪೊಲೀಸರು ಕೇಳಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದೇನೆ ಎಂದು ಜಾವೇದ್ ರಸೂಲ್ ಶೇಖ್ ಹೇಳಿದ್ದಾರೆ.
ಪೊಲೀಸ್ ಕಮೀಷನರ್ ಪ್ರವೀಣ್ ಪವಾರ್ ಹೇಳುವ ಪ್ರಕಾರ.. ಪರಬಾನಿಯ ವಕೀಲರೊಬ್ಬರು ದೂರು ನೀಡಿದ ಬಳಿಕ ತನಿಖೆ ಆರಂಭವಾಗಿದೆ. ಆರ್ಥಿಕ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ಸಂಭಾಜಿ ಪವಾರ್ ಹೇಳುವ ಪ್ರಕಾರ, ನಾವು ಜಾವೇದ್ ರಸೂಲ್ ಶೇಖ್‌ರ ಆದಾಯ, ಟ್ಯಾಕ್ಸ್ ರಿರ್ಟನ್ಸ್ ಹಾಗೂ ಸಾಧ್ಯವಿರುವ ಸಂಪತ್ತಿನ ಮೂಲದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಜಾವೇದ್ ರಸೂಲ್‌ಗೆ ಏಕೆ ಬೆಲೆಬಾಳುವ ಗಿಫ್ಟ್ ಅನ್ನು ನೀಡಿದ್ರು ಎಂಬ ಬಗ್ಗೆ ಸ್ಪಷ್ಟವಾಗಿ ವಿವರಣೆ ನೀಡಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ: 61ನೇ ವಯಸ್ಸಿಗೆ ಅಮೆಜಾನ್ ಸಂಸ್ಥಾಪಕನಿಗೆ ಮತ್ತೊಂದು ಮದ್ವೆ.. ವೆನ್ನಿಸ್ ನಗರದಲ್ಲಿ ವಿಶ್ವದ 4ನೇ ಶ್ರೀಮಂತನ ಕಲ್ಯಾಣ..!
ಮಹಾರಾಷ್ಟ್ರದ ಎಕನಾಮಿಕ್ ಅಫೇನ್ಸ್ ವಿಂಗ್ನಿಂದ ಹೈದರಾಬಾದ್‌ನ ಸಲಾರ್ ಜಂಗ್ ಕುಟುಂಬಕ್ಕೂ ನೋಟಿಸ್ ನೀಡಲಾಗಿದೆ. ಸಲಾರ್ ಜಂಗ್ ಕುಟುಂಬ ಇನ್ನೂ ಈ ಭೂಮಿಯನ್ನು ದಾನಪತ್ರದ ಮೂಲಕ ಡ್ರೈವರ್ಗೆ ನೀಡಿದ ಬಗ್ಗೆ ಯಾವುದೇ ಉತ್ತರ, ವಿವರಣೆ ನೀಡಿಲ್ಲ. ನೋಟಿಸ್‌ಗೆ ಉತ್ತರಿಸಿಲ್ಲ.
ಪೈಠಾಣ್ ಕ್ಷೇತ್ರದ ಶಾಸಕರಾಗಿರುವ ವಿಲಾಸ್ ಹೇಳುವ ಪ್ರಕಾರ.. ಜಾವೇದ್ ರಸೂಲ್ ಶೇಖ್ ನಮ್ಮ ಕಾರ್ ಡ್ರೈವರ್ ಆಗಿದ್ದಾರೆ. ನಾವು ಜಾವೇದ್ ವೈಯಕ್ತಿಕ ತೀರ್ಮಾನಗಳನ್ನ ನಿಯಂತ್ರಿಸುವುದಿಲ್ಲ. ಪೊಲೀಸರು ಈಗಾಗಲೇ ನನ್ನನ್ನು ಪ್ರಶ್ನಿಸಿದ್ದಾರೆ. ಹಿಬಾನಾಮಾ ಅಥವಾ ದಾನಪತ್ರ ಕಾನೂನು ಬದ್ದ ದಾಖಲೆಯಾಗಿದೆ. ಒಂದು ವೇಳೆ ಜಾವೇದ್ ದಾನಪತ್ರದ ಮೂಲಕ ಭೂಮಿ ಪಡೆದಿದ್ದರೆ ಅದು ಅವರ ವಿಷಯ ಎಂದು ಶಾಸಕ ವಿಲಾಸ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಐದು ಹುಲಿಗಳ ಕಳೆಬರ ಪತ್ತೆ ಆಗಿದ್ದೇಗೆ..? ಪ್ರಕರಣ ಬೆಳಕಿಗೆ ಬಂದ ಇಂಚಿಂಚೂ ಮಾಹಿತಿ ಕೊಟ್ಟ ಅಧಿಕಾರಿ
ಮಹಾರಾಷ್ಟ್ರದ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿರುವ ವಕೀಲ ಮುಜಾಯೀದ್ ಖಾನ್ ಹೇಳುವ ಪ್ರಕಾರ ಜಾವೇದ್ ರಸೂಲ್ ಶೇಖ್ ಕುಟುಂಬಕ್ಕೂ ಸಲಾರ್ ಜಂಗ್ ಉತ್ತರಾಧಿಕಾರಿಗಳಿಗೂ ಯವುದೇ ಸಂಬಂಧವಿಲ್ಲ. ಹೀಬಾನಾಮಾ ರಕ್ತ ಸಂಬಂಧಿಗಳ ನಡುವೆ ಮಾತ್ರ ನಡೆಯುತ್ತೆ. ಅದಕ್ಕೆ ಮಾತ್ರ ಮಾನ್ಯತೆ ಇದೆ. ಜಾವೇದ್ ರಸೂಲ್ ಶೇಖ್ ಮತ್ತು ಹೈದರಾಬಾದ್ ಸಲಾರ್ ಜಂಗ್ ಕುಟುಂಬಗಳು ಬೇರೆ ಬೇರೆ. ಜೊತೆಗೆ ಇಸ್ಲಾಂನ ಬೇರೆಬೇರೆ ಪಂಥಗಳನ್ನು ಫಾಲೋ ಮಾಡುತ್ತಿವೆ ಎಂದು ಮುಜಾಯೀದ್ ಖಾನ್ ಹೇಳಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ