/newsfirstlive-kannada/media/post_attachments/wp-content/uploads/2024/12/shivanna.jpg)
ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್, ಡಾ. ಶಿವರಾಜ್​ಕುಮಾರ್ ಅವರು ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ. ಈ ಚಿಕಿತ್ಸೆಯ ಮಧ್ಯೆ ಶಿವರಾಜ್ ಕುಮಾರ್ ಕುಟುಂಬ ಬಹಳ ನೋವಿನಿಂದ ಭಾವನಾತ್ಮಕ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.
ನಟ ಶಿವರಾಜ್ ಕುಮಾರ್ ಅವರ ಪ್ರೀತಿಯ ಶ್ವಾನ ನೀಮೋ ಇನ್ನಿಲ್ಲ.. ನೀಮೋವನ್ನು ಮನೆ ಸದಸ್ಯನಾಗಿ ಪರಿಗಣಿಸಿದ್ದ ಶಿವಣ್ಣ ಕುಟುಂಬ ಅಮೆರಿಕಾದಿಂದಲೇ ತಮ್ಮ ನೋವು ಹಂಚಿಕೊಂಡಿದ್ದಾರೆ. ಪ್ರೀತಿಯ ನಾಯಿ ಅಗಲಿಕೆಗೆ ಭಾವನಾತ್ಮಕ ಪತ್ರ ಬರೆದು ಲವ್ ಯು ನೀಮೋ ಎನ್ನುತ್ತಾ ನಮ್ಮ ಜೊತೆ ಇಷ್ಟು ದಿನ ಕಾಲ ಕಳೆದಿದ್ದಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/Shivaraj-Kumar-Neemo-Dog.jpg)
ನಮ್ಮ ಮನೆಯಲ್ಲಿ ನಾವು ಐದಲ್ಲಾ, ಆರು ಜನ.
ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನನ್ನು ಗಿಫ್ಟ್ ಆಗಿ ತಂದರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗೋದಿಲ್ಲ ಎಂದು ನಮ್ಮ ಮನೆಗೆ ತಂದ್ವಿ! ಹೀಗೆ ಅವನು ನಮ್ಮ ಮನೆಯಲ್ಲಿ ಆರನೆಯವನಾದ. Thanks Dileep for bringing him to our life.
ಎಲ್ಲರೂ ಅವರ ಪೆಟ್ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗೂ ನನ್ನ ಹಿಂದೆ. ನಾನು ಕಿಚನ್‌ನಲ್ಲಿ ಇರುವಾಗ ಅಥವಾ ಮನೆಯಲ್ಲಿ ಎಲ್ಲೇ ಹೋದ್ರೂ ಅವನು ಯಾವಾಗಲೂ ನನ್ನ ಹಿಂದೆ. ನನ್ನ ಕೆಲಸ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು, ಆಂಗಲ್ ಅಡ್ಜಸ್ಟ್ ಮಾಡಿಕೊಂಡು, ನನ್ನ ಮುಖ ಕಾಣೋ ಹಾಗೆ ಕೂರ್ತಿದ್ದ ನೀಮೋ.
ಇದನ್ನೂ ಓದಿ: ಅಭಿಮಾನಿಗಳಿಗೆ ಸಿಹಿಸುದ್ದಿ; ಶಿವಣ್ಣ ಅವರ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯರು ಕೊಟ್ಟ ಮಾಹಿತಿ ಏನು..?
ನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದ್ರು ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟ್ರೀಟ್‌ಮೆಂಟ್, ಅದಾದ ಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೆರಿಕಾಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗೋಲ್ಲ. ನಾವು ಅಮೆರಿಕಾಗೆ ಬಂದ ಮೇಲೆನೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ನಿಸುತ್ತೆ.
/newsfirstlive-kannada/media/post_attachments/wp-content/uploads/2024/12/GEETA-SHIVARAJ-KUMAR-2.jpg)
ಊಟ ಮಾಡುವಾಗ ನಿಶು ಚೇರ್ ಹಿಂದೆ, ಆಮೇಲೆ ನಿವಿ ಜೊತೆಗೆ, ಹಾಗು ಮಲಗುತ್ತಿದ್ದಿದ್ದು ನಮ್ಮ ಜೊತೆಗೆ. ಈಗ ಒಂದು ತಿಂಗಳಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲ್ಲೆಲ್ಲಾ ಅವನು ಹೀಗೆ ಮಾಡಿದವನಲ್ಲ. ನಿನ್ನೆ ಮಾತನಾಡುವಾಗ ನಿವಿ 'ಅವನಿಗೆ ಪಪ್ಪನಿಗೆ ಏನು ಆಗ್ತಾ ಇತ್ತು ಅಂತ ಗೊತ್ತಿತ್ತು ಅನ್ನಿಸುತ್ತೆ, ಅದಕ್ಕೆ ಹಾಗೆ ಮಲಗುತ್ತಿದ್ದ' ಅಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ, ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದೆಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದ. ಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜೊತೆಯಲ್ಲೇ ನಿಂತಿದ್ದು ದಿಲೀಪ್. ನಮ್ಮ ಮನೆಯಲ್ಲಿ ಕಿರಣ, ಆಕಾಶ್, ಗಂಗಮ್ಮ, ಮನು, ಚಿಕ್ ಮನು ಎಲ್ಲರೂ ನೀಮೋನನ್ನು ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆ. ಅವರ ಕುಟುಂಬದ ಭಾಗದಂತೆ ನೋಡಿಕೊಂಡಿದ್ದಾರೆ. ಲಾವಣ್ಯಾ, ದಿಗಂತ್ ಹಾಗೂ ಅವರ ಮಗ ವಿಷ್ಣು, ಇವರಿಗೂ ನೀಮೋ ಅಂದರೆ ಅಷ್ಟೇ ಪ್ರೀತಿ. ವಿಷ್ಣು ಮತ್ತು ನೀಮೋ ಆಟ ಆಡುವಾಗ, ಅಥವಾ ವಿಷ್ಣು ಅವನ ಬಳಿ ಮಾತನಾಡೋದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗಲೂ ಇರ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತೆಗೆದುಕೊಂಡು ಹೋಗ್ತಾರಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ.
ಲವ್ ಯು ನೀಮೋ
- ಗೀತಾ ಶಿವರಾಜಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us