/newsfirstlive-kannada/media/post_attachments/wp-content/uploads/2025/03/shreyas_iyer-2.jpg)
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಚಾಂಪಿಯನ್ ಜರ್ನಿಯಲ್ಲಿ ಮುಂಬೈಕರ್ ಶ್ರೇಯಸ್ ಅಯ್ಯರ್ ಶ್ರಮ ಅಪಾರ. ಇಡೀ ಟೂರ್ನಿಯಲ್ಲಿ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ನಿಂದ ಮಿಂಚಿದ ಶ್ರೇಯಸ್ ಅಯ್ಯರ್ ಈಗ ಟೀಮ್ ಇಂಡಿಯಾದ ಹೀರೋ. ಆದ್ರೆ, ಒಂದು ವರ್ಷದ ಹಿಂದೆ ಈತ ಬಿಸಿಸಿಐ ಪಾಲಿಗೆ ವಿಲನ್ ಆಗಿದ್ದ. ಈ ವಿಲನ್ ಟು ಹೀರೋ ಜರ್ನಿಯಲ್ಲಿ 5 ಟ್ರೋಫಿಗಳ ಇಂಟರೆಸ್ಟಿಂಗ್ ಕತೆಯಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿ. ಟೀಮ್ ಇಂಡಿಯಾ ಭರ್ಜರಿ ಪರ್ಫಾಮೆನ್ಸ್ ನೀಡಿ ಅಜೇಯವಾಗಿ ಫೈನಲ್ಗೆ ಬಂದಿತ್ತು. ದುರಾದೃಷ್ಟವಶಾತ್ ಫೈನಲ್ ಸೋಲುಂಡಿತ್ತು. ಟೀಮ್ ಇಂಡಿಯಾ ಆಡಿದ ಆಟ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿತ್ತು. ಅದರಲ್ಲೂ ಮುಂಬೈಕರ್ ಶ್ರೇಯಸ್ ಅಯ್ಯರ್ ನೀಡಿದ್ದ ಪರ್ಫಾಮೆನ್ಸ್ಗೆ ಕ್ರಿಕೆಟ್ ಪಂಡಿತರು, ಫ್ಯಾನ್ಸ್ ಎಲ್ಲಾ ಸಲಾಂ ಅಂದಿದ್ದರು. ಆದ್ರೆ, ಈ ವಿಶ್ವಕಪ್ ಮುಗಿದ ಬೆನ್ನಲ್ಲೇ ಹೀರೋ ಆಗಿದ್ದ ಶ್ರೇಯಸ್ ವಿಲನ್ ಆಗಿದ್ದರು.
ವಿಶ್ವಕಪ್ನಲ್ಲಿ ಸಾಲಿಡ್ ಆಟವಾಡಿ ಮಿಂಚಿದ ಶ್ರೇಯಸ್ ಅಯ್ಯರ್ ಬಳಿಕ ಕಾಂಟ್ರವರ್ಸಿಯಲ್ಲಿ ತಗಲಾಕಿಕೊಂಡಿದ್ದರು. ಶ್ರೇಯಸ್ ವಿರುದ್ಧ ಗರಂ ಆದ ಬಿಸಿಸಿಐ ಬಾಸ್ಗಳು ಸೆಂಟ್ರಲ್ ಕಾಂಟ್ರ್ಯಾಕ್ಟ್ನಿಂದಲೇ ಕೊಕ್ ಕೊಟ್ಟಿದ್ದರು. ಟೀಮ್ ಇಂಡಿಯಾದಿಂದ ಶ್ರೇಯಸ್ ಡ್ರಾಪ್ ಆದ್ರು. ಬೇರೆ ಯಾರೋ ಆದ್ರೆ ಕುಗ್ಗಿ ಹೋಗಿ ಬಿಡುತ್ತಿದ್ದರು. ಆದ್ರೆ, ಶ್ರೇಯಸ್ ಕರಿಯರ್ನಲ್ಲಿ ಆಗಿದ್ದೇ ಬೇರೆ. every setback is a setup for a comeback ಅನ್ನೋ ಮೈಂಡ್ಸೆಟ್ ಯುದ್ಧಕ್ಕಿಳಿದ ಶ್ರೇಯಸ್ ಅಯ್ಯರ್ ಶ್ರೇಯಸ್ಸು ಏನು ಅನ್ನೋದು ಈಗ ವಿಶ್ವಕ್ಕೆ ಗೊತ್ತಾಗಿದೆ.
1 ವರ್ಷ, 5 ಟೂರ್ನಿ, 5 ಟ್ರೋಫಿ.. ಶ್ರೇಯಸ್ ಯಶೋಗಾಥೆ.!
ಟೀಮ್ ಇಂಡಿಯಾ ಡ್ರಾಪ್ ಆದ ಮೇಲೆ ಶ್ರೇಯಸ್ ಅಯ್ಯರ್ ಅಸಲಿ ಕ್ರಿಕೆಟ್ ಜೀವನ ಶುರುವಾದಂತಿದೆ. ನ್ಯಾಷನಲ್ ಟೀಮ್ನಿಂದ ಡ್ರಾಪ್ ಆಗಿ ಡೊಮೆಸ್ಟಿಕ್ ಅಂಗಳಕ್ಕೆ ಮರಳಿದ ಶ್ರೇಯಸ್ ಕಳೆದೊಂದು ವರ್ಷದಲ್ಲಿ ಮಾಡದ ಸಾಧನೆಯೇ ಇಲ್ಲ. ಕಳೆದ ಮಾರ್ಚ್ನಿಂದ ಈ ಮಾರ್ಚ್ವರೆಗೆ 5 ಟೂರ್ನಿಗಳಲ್ಲಿ ಆಡಿ 5 ಟ್ರೊಫಿ ಗೆದ್ದ ಸಾಧನೆ ಮಾಡಿದ್ದಾರೆ.
ಮಾರ್ಚ್ 14, 2024- ರಣಜಿ ಟ್ರೋಫಿ
ಟೀಮ್ ಇಂಡಿಯಾದಿಂದ ಡ್ರಾಪ್ ಆದ ಬಳಿಕ ರಣಜಿ ಅಖಾಡಕ್ಕೆ ಮರಳಿದ ಶ್ರೇಯಸ್ ಮುಂಬೈ ತಂಡ ಕೂಡಿಕೊಂಡ್ರು. ರಣಜಿ ಸೀಸನ್ನಲ್ಲಿ ಸಾಲಿಡ್ ಬ್ಯಾಟಿಂಗ್ ನಡೆಸಿ ಶೈನ್ ಆದ್ರು. ಅದ್ಭುತ ಆಟವಾಡಿದ ಶ್ರೇಯಸ್ ಮುಂಬೈ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೇ 26, 2024- ಐಪಿಎಲ್ ಟ್ರೋಫಿ
ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ನ ನಾಯಕನಾದ ಶ್ರೇಯಸ್ ಅಯ್ಯರ್ ಸೀಸನ್ 17ರಲ್ಲಿ ಮಿಂಚಿದರು. ಬ್ಯಾಟಿಂಗ್ನಲ್ಲಿ ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡಿದ ಮುಂಬೈಕರ್, ನಾಯಕನಾಗಿ ತಂಡವನ್ನ ಸಮರ್ಥವಾಗಿ ಮುನ್ನಡೆಸಿದರು. ಅಂತಿಮವಾಗಿ ಮೇ 26 ರಂದು ಕೆಕೆಆರ್ಗೆ ಟ್ರೋಫಿ ಗೆಲ್ಲಿಸಿಕೊಟ್ಟರು.
ಆಕ್ಟೋಬರ್ 5, 2024- ಇರಾನಿ ಟ್ರೋಫಿ
ಪ್ರತಿಷ್ಠಿತ ಇರಾನಿ ಟ್ರೋಫಿ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್ ಸಾಲಿಡ್ ಆಟವಾಡಿದರು. ರೆಸ್ಟ್ ಇಂಡಿಯಾ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಶ್ರೇಯಸ್ ಮುಂಬೈ ಫಸ್ಟ್ ಇನ್ನಿಂಗ್ಸ್ ಲೀಡ್ ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಲೀಡ್ ಆಧಾರದಲ್ಲಿ ಮುಂಬೈ ಟ್ರೋಫಿ ಗೆಲ್ತು. ಅಕ್ಟೋಬರ್ 5ರಂದು ಶ್ರೇಯಸ್ 3ನೇ ಪ್ರತಿಷ್ಠಿತ ಟ್ರೋಫಿಗೆ ಮುತ್ತಿಕ್ಕಿದರು.
ಡಿಸೆಂಬರ್ 15, 2024- ಸೈಯದ್ ಮುಷ್ತಾಕ್ ಅಲಿ ಟ್ರೋಫಿ
2024ರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಶ್ರೇಯಸ್ ಅಯ್ಯರ್ದು ಡ್ರೀಮ್ ರನ್. ಟೂರ್ನಿಯಲ್ಲಿ 188ರ ಸ್ಟ್ರೈಕ್ರೇಟ್ನಲ್ಲಿ ಘರ್ಜಿಸಿದ ಶ್ರೇಯಸ್, 49.28ರ ಸರಾಸರಿಯಲ್ಲಿ ರನ್ ಕೊಳ್ಳೆ ಹೊಡೆದ್ರು. ಬ್ಯಾಟಿಂಗ್ ಜೊತೆಗೆ ನಾಯಕತ್ವದಲ್ಲೂ ಚಾಣಕ್ಯ ನಡೆಯಿಂದ ಗಮನ ಸೆಳೆದರು. ಅಂತಿಮವಾಗಿ ಫೈನಲ್ಸ್ನಲ್ಲಿ ಮಧ್ಯಪ್ರದೇಶ ವಿರುದ್ಧ ಗೆದ್ದ ಶ್ರೇಯಸ್ ನಾಯಕತ್ವದ ಮುಂಬೈ ಚಾಂಪಿಯನ್ ಆಯಿತು.
ಇದನ್ನೂ ಓದಿ:20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ನಟಿ ಸೌಂದರ್ಯ ಕೇಸ್.. 6 ಎಕರೆ ಭೂಮಿಗಾಗಿ ದುರಂತ ನಡೆಸಿದ್ರಾ?
ಮಾರ್ಚ್ 9, 2025- ಚಾಂಪಿಯನ್ಸ್ ಟ್ರೋಫಿ
ಐಪಿಎಲ್, ಡೊಮೆಸ್ಟಿಕ್ ಕ್ರಿಕೆಟ್‌ನ ಸಕ್ಸಸ್ನೊಂದಿಗೆ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಶ್ರೇಯಸ್ ಅಯ್ಯರ್ ಚಾಂಪಿಯನ್ ಟ್ರೋಫಿಯಲ್ಲಿ ಚಾಂಪಿಯನ್ ಆಟವಾಡಿದರು. ಮಿಡಲ್ ಆರ್ಡರ್ನಲ್ಲಿ ಜವಾಬ್ದಾರಿಯುತ ಆಟವಾಡಿದ ಶ್ರೇಯಸ್, ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡಿದರು. 4ನೇ ಕ್ರಮಾಂಕದಲ್ಲಿ ಮಿಂಚಿದ ಮುಂಬೈಕರ್ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಅಂದು ಬಿಸಿಸಿಐ ಬಾಸ್ಗಳ ಕೆಂಗಣ್ಣಿಗೆ ಗುರಿಯಾಗಿ ಟೀಮ್ ಇಂಡಿಯಾದಿಂದ ಹೊರಬಿದ್ದ ಶ್ರೇಯಸ್ ಅಯ್ಯರ್ ಇದೀಗ 1 ವರ್ಷದ ಅಂತರದಲ್ಲಿ 5 ಪ್ರತಿಷ್ಠಿತ ಟ್ರೋಫಿ ಗೆದ್ದು ಬೀಗಿದ್ದಾರೆ. ಇಂಪ್ರೆಸ್ ಆಗಿರೋ ಬಾಸ್ಗಳು ಕೂಡ ಮತ್ತೆ ಸೆಂಟ್ರಲ್ ಕಾಂಟ್ರ್ಯಾಕ್ಟ್ ನೀಡಲು ಮುಂದಾಗಿದ್ದಾರೆ. ನಿಜವಾದ ಕಮ್ಬ್ಯಾಕ್ ಅಂದ್ರೆ ಇದೇ ಅಲ್ವಾ.?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ