/newsfirstlive-kannada/media/post_attachments/wp-content/uploads/2025/05/SHREYAS_IYER_RCB.jpg)
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬಗ್ಗೆ, ಕ್ರಿಕೆಟ್ ವಲಯದಲ್ಲಿ ಜೋರಾಗೇ ಚರ್ಚೆ ನಡೆಯುತ್ತಿದೆ. ಶ್ರೇಯಸ್ ನಾಯಕತ್ವ, ಶ್ರೇಯಸ್ ಬ್ಯಾಟಿಂಗ್ ಬಗ್ಗೆ ಒಬ್ಬೊಬ್ಬರು, ಒಂದೊಂದು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್, ಐಪಿಎಲ್ ಟೇಬಲ್ ಟಾಪರ್ ಆದ್ರೂ ಶ್ರೇಯಸ್ ಇಷ್ಟೊಂದು ಸುದ್ದಿಯಲ್ಲಿರೋದು ಯಾಕೆ?.
ಸೆಟ್ಬ್ಯಾಕ್ ಅಥವಾ ಹಿನ್ನಡೆ, ಒಬ್ಬ ವ್ಯಕ್ತಿಯನ್ನ ಏನ್ ಬೇಕಾದ್ರೂ ಮಾಡುತ್ತೆ. ಸೆಟ್ಬ್ಯಾಕ್ನಿಂದ ಆ ವ್ಯಕ್ತಿ ಎತ್ತರಕ್ಕೆ ಬೆಳೆಯಬಹುದು ಅಥವಾ ಪಾತಾಳಕ್ಕೂ ಬೀಳಬಹುದು. ಆದ್ರೆ ಸೆಟ್ಬ್ಯಾಕ್, ಒಬ್ಬ ಕ್ರಿಕೆಟಿಗನನ್ನ ಬಹು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ. ನಾವು ಮಾತಾಡ್ತಾ ಇರೋದು ಪಂಜಾಬ್ ಕಿಂಗ್ಸ್ ತಂಡದ ಸಕ್ಸಸ್ಫುಲ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬಗ್ಗೆ.
ಅಂದು ಬಿಸಿಸಿಐ ಮಾತಿಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್ ಕ್ರಿಕೆಟ್ ಕರಿಯರ್, ಖತಂ ಅಂತಾನೇ ಎಲ್ಲರೂ ಭಾವಿಸಿದರು. ಆ ಕೆಟ್ಟ ಘಟನೆಯಿಂದ ಶ್ರೇಯಸ್ ಅಯ್ಯರ್ ಮತ್ತೆ ಕ್ರಿಕೆಟ್ ಆಡ್ತಾರೋ ಇಲ್ವೋ ಅಂತ ಅನುಮಾನ ವ್ಯಕ್ತವಾಗಿತ್ತು. ಆದ್ರೆ ಆ ಸೆಟ್ಬ್ಯಾಕ್ನಿಂದ ಇಂದು ಶ್ರೇಯಸ್ ಅಯ್ಯರ್, ಮನೆ ಮನೆ ಮಾತಾಗಿದ್ದಾರೆ. ದಿಗ್ಗಜ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು, ಕ್ರಿಕೆಟ್ ಪಂಡಿತರು, ಶ್ರೇಯಸ್ ಅಯ್ಯರ್ನ ಕೊಂಡಾಡುತ್ತಿದ್ದಾರೆ.
ಐಪಿಎಲ್ ಸೀಸನ್-18ರ ಬೆಸ್ಟ್ ಕ್ಯಾಪ್ಟನ್
ಐಪಿಎಲ್ ಸೀಸನ್-18ರ ಬೆಸ್ಟ್ ಕ್ಯಾಪ್ಟನ್ ಯಾರು ಅಂದ್ರೆ, ಥಟ್ ಅಂತ ನೆನಪಾಗೋ ಹೆಸರು ಒಂದೇ, ಅದು ಶ್ರೇಯಸ್ ಅಯ್ಯರ್. ಯುವ ಸೈನ್ಯದ ಸಾರಥಿಯಾಗಿ ಶ್ರೇಯಸ್, ಆನ್ಫೀಲ್ಡ್ನಲ್ಲಿ ಉತ್ತಮ ನಿರ್ಣಯಗಳನ್ನ ಕೈಗೊಂಡಿದ್ದಾರೆ. ಶ್ರೇಯಸ್ರ ಗೇಮ್ಪ್ಲಾನ್, ಸ್ಟ್ರಾಟಜಿ, ಟ್ಯಾಕ್ಟಿಕ್ಸ್ ಎಲ್ಲವೂ ಸುಪರ್ಬ್. ಎಲ್ಲದಕ್ಕಿಂತ ಮುಖ್ಯವಾಗಿ ಶ್ರೇಯಸ್, ಪ್ಲೇಯಿಂಗ್ ಇಲೆವೆನ್ ಆಯ್ಕೆಗೆ ಬಿಗ್ ಕ್ರೆಡಿಟ್ ಕೊಡಲೇಬೇಕು. ಶ್ರೇಯಸ್, ದಿ ಬೆಸ್ಟ್ ಕ್ಯಾಪ್ಟನ್ ಅನ್ನೋದಕ್ಕೆ, ಇದಕ್ಕಿಂತ ಬೇರೇನು ಬೇಕು ಹೇಳಿ?.
ಶ್ರೇಯಸ್ ಎಲ್ಲಾ ನಾಯಕರಿಗಿಂತ ಮುಂದು
ಆರು ಐಪಿಎಲ್ ಸೀಸನ್ಗಳಲ್ಲಿ ನಾಯಕನಾಗಿ ಶ್ರೇಯಸ್ ಅಯ್ಯರ್, 5 ಬಾರಿ ತಂಡವನ್ನ ಪ್ಲೇ-ಆಫ್ಗೆ ಕೊಂಡೊಯ್ದಿದ್ದಾರೆ. ಧೋನಿ 16 ಸೀಸನ್ಗಳಲ್ಲಿ 12 ಬಾರಿ, ರೋಹಿತ್ ಶರ್ಮಾ 11 ಸೀಸನ್ಗಳಲ್ಲಿ 7 ಬಾರಿ, ಗೌತಮ್ ಗಂಭೀರ್ 7 ಸೀಸನ್ಗಳಲ್ಲಿ 5 ಬಾರಿ ಮತ್ತು ವಿರಾಟ್ ಕೊಹ್ಲಿ 9 ಸೀಸನ್ಗಳಲ್ಲಿ ನಾಯಕನಾಗಿ 4 ಬಾರಿ ತಮ್ಮ ತಂಡವನ್ನ ಪ್ಲೇ-ಆಫ್ಗೆ ಎಂಟ್ರಿ ಕೊಡಿಸಿದ್ದಾರೆ.
ನಾಯಕನಾಗಿ ಶ್ರೇಯಸ್ ಐಪಿಎಲ್ನಲ್ಲಿ ಹೆಚ್ಚು ಹೆಚ್ಚು ಸಕ್ಸಸ್ ಕಂಡಿದ್ದಾರೆ. ಹಾಗೇ ಬ್ಯಾಟ್ಸ್ಮನ್ ಆಗಿಯೂ ಶ್ರೇಯಸ್, ಯಾರಿಗಿಂತ ಕಮ್ಮಿ ಇಲ್ಲ. ಇದೇ ಆರ್ಸಿಬಿಗೆ ಈಗ ಕಾಡುತ್ತಿದೆ. ಆರ್ಸಿಬಿಗೆ ಭಯ ಇಲ್ಲದಿದ್ದರೂ ಸಕ್ಸಸ್ ಅನ್ನೋದು ಶ್ರೇಯಸ್ ಸುತ್ತ ಸುತ್ತುತ್ತಿದೆ. ಇದೆ ಬೆಂಗಳೂರಿಗೆ ಮುಳುವಾಗುತ್ತಾ ಎನ್ನುವುದು ಪ್ರಶ್ನೆ. ಇನ್ನೊಂದು ಪಂದ್ಯವಿದ್ದರೂ ಶ್ರೇಯಸ್ ಅಯ್ಯರ್ ಪಡೆಯನ್ನು ಮಣಿಸಿದರೆ ಮತ್ತೊಂದರ ಬಗ್ಗೆ ಚಿಂತೆ ಇಲ್ಲದೇ ಫೈನಲ್ ಹೋಗಬಹುದು.
ಬ್ಯಾಟ್ಸ್ಮನ್ ಆಗಿ ಶ್ರೇಯಸ್ ಮಿಂಚಿನ ಆಟ
ಈ ಸೀಸನ್ನಲ್ಲಿ ಶ್ರೇಯಸ್ ಆರಂಭದಲ್ಲೇ, ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದಾರೆ. 14 ಪಂದ್ಯಗಳನ್ನ ಆಡಿರೋ ಶ್ರೇಯಸ್, ಒಟ್ಟು 299 ಎಸೆತಗಳನ್ನ ಎದುರಿಸಿದ್ದಾರೆ. 172ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 514 ರನ್ಗಳಿಸಿರುವ ಶ್ರೇಯಸ್, 5 ಆಕರ್ಷಕ ಅರ್ಧಶತಕಗಳನ್ನೂ ಸಿಡಿಸಿದ್ದಾರೆ. ಟೂರ್ನಿಯಲ್ಲಿ ಅತಿ ಹೆಚ್ಚು ರನ್ಗಳಿಸಿರೋ ಟಾಪ್-10 ಲಿಸ್ಟ್ನಲ್ಲಿ ಪಂಜಾಬ್ ಕ್ಯಾಪ್ಟನ್ ಕಾಣಿಸಿಕೊಂಡಿದ್ದಾರೆ.
ಯಾವ ಸ್ಲಾಟ್ನಲ್ಲಿ ಎಷ್ಟು ರನ್
ಶ್ರೇಯಸ್ ಅಯ್ಯರ್ರ ಫೇವರಿಟ್ ಸ್ಲಾಟ್, ನಂಬರ್ 3. ಈ ಸ್ಲಾಟ್ನಲ್ಲಿ ಶ್ರೇಯಸ್ 181ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ 360 ರನ್ಗಳಿಸಿದ್ದಾರೆ. ನಂಬರ್ 4 ಸ್ಲಾಟ್ನಲ್ಲಿ ಶ್ರೇಯಸ್ 165ರ ಸ್ಟ್ರೈಕ್ರೇಟ್ನಲ್ಲಿ 124 ರನ್ಗಳಿಸಿದ್ದಾರೆ. ಯಾವ ಸ್ಲಾಟ್ನಲ್ಲಿ ಬ್ಯಾಟಿಂಗ್ ನಡೆಸಿದರೂ, ಶ್ರೇಯಸ್ ಬ್ಯಾಟ್ನಿಂದ ರನ್ಮಳೆ ಪಕ್ಕಾ.
ಶ್ರೇಯಸ್, ಇದುವರೆಗೂ ಮೂರು ಐಪಿಎಲ್ ತಂಡಗಳನ್ನ ಮುನ್ನಡೆಸಿದ್ದಾರೆ. ನಾಯಕನಾಗಿ ಶ್ರೇಯಸ್ ಫುಲ್ ಮಾರ್ಕ್ಸ್ ಪಡೆದು, ಸೂಪರ್ಹಿಟ್ ದಾಖಲೆ ಹೊಂದಿದ್ದಾರೆ.
3 ತಂಡಗಳು, 3 ಬಾರಿ ಟಾಪ್ 2, ಕ್ಯಾಪ್ಟನ್ ಫೆಂಟಾಸ್ಟಿಕ್..!
ಡೆಲ್ಲಿ, ಕೆಕೆಆರ್ ಮತ್ತು ಪಂಜಾಬ್ ಕಿಂಗ್ಸ್ ಈ ಮೂರೂ ತಂಡಗಳ ಸಾರಥಿಯಾಗಿ ಶ್ರೇಯಸ್ ಸೇವೆ ಸಲ್ಲಿಸಿದ್ದಾರೆ. ಶ್ರೇಯಸ್ ನಾಯಕತ್ವದಲ್ಲಿ 2019ರಲ್ಲಿ ಕ್ವಾಲಿಫೈಯರ್-2, 2020ರಲ್ಲಿ ಫೈನಲ್ ಮತ್ತು 2021ರಲ್ಲಿ ಕ್ವಾಲಿಫೈಯರ್-2ಗೆ ಡೆಲ್ಲಿ ಕ್ಯಾಪಿಟಲ್ಸ್ ಎಂಟ್ರಿ ಕೊಟ್ಟಿತ್ತು. 2024ರಲ್ಲಿ ಕೊಲ್ಕತ್ತಾ ನೈಟ್ರೈಡರ್ಸ್ ತಂಡವನ್ನ ಚಾಂಪಿಯನ್ ಮಾಡಿದ್ದ ಶ್ರೇಯಸ್, ಈ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಟಾಪ್-1 ಸ್ಥಾನಕ್ಕೇರಿಸಿದ್ದಾರೆ.
ಇದನ್ನೂ ಓದಿ: RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?
ಐಪಿಎಲ್ ಕಪ್ ಗೆದ್ದು ದಾಖಲೆ ಬರೆಯುತ್ತಾರಾ ಶ್ರೇಯಸ್..?
ಕಳೆದ ಬಾರಿ ಕೊಲ್ಕತ್ತಾ ನೈಟ್ರೈಡರ್ಸ್ ತಂಡದ ಸಾರಥಿಯಾಗಿ ಶ್ರೇಯಸ್, ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಈ ಬಾರಿ ಕೂಡ ಶ್ರೇಯಸ್ ನಾಯಕತ್ವದ ಪಂಜಾಬ್ ಕಿಂಗ್ಸ್, ಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ಒಂದು ವೇಳೆ ಪಂಜಾಬ್, ಐಪಿಎಲ್ ಟ್ರೋಫಿ ಗೆದ್ರೆ ಶ್ರೇಯಸ್ ಪಕ್ಕಾ ದಾಖಲೆ ಬರೆಯುತ್ತಾರೆ. ಬ್ಯಾಕ್ ಟು ಬ್ಯಾಕ್ ಐಪಿಎಲ್ ಕಪ್ ಗೆದ್ದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಆದ್ರೆ ಇದು ಶ್ರೇಯಸ್ಗೆ ಸಾಧ್ಯಾನಾ?.
ಶ್ರೇಯಸ್, ಬಾರ್ನ್ ಲೀಡರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಒಬ್ಬ ನಾಯಕನಿಗೆ ಇರೋ ಎಲ್ಲಾ ಕ್ವಾಲಿಟಿಗಳು, ಶ್ರೇಯಸ್ ಅಯ್ಯರ್ರಲ್ಲಿ ಇದೆ. ಹಾಗಾಗೇ ಶ್ರೇಯಸ್ಗೆ, ನಾಯಕನಾಗಿ ಶ್ರೇಯಸ್ಸು ಸಲ್ಲುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ