/newsfirstlive-kannada/media/post_attachments/wp-content/uploads/2025/07/GILL_269.jpg)
ಎಡ್ಜ್ಬಾಸ್ಟನ್ ಟೆಸ್ಟ್ನ 2ನೇ ದಿನದಾಟದಲ್ಲೂ ಟೀಮ್ ಇಂಡಿಯಾ ನಾಯಕನ ದರ್ಬಾರ್ ಜೋರಾಗಿ ನಡೀತು. ಕ್ಯಾಪ್ಟನ್ ಶುಭ್ಮನ್ ಗಿಲ್ ಕೂಲ್ AND ಕಾಮ್ ಆಟಕ್ಕೆ ಆಂಗ್ಲರು ಕಂಗಾಲ್ ಆಗಿ ಬಿಟ್ರು. ಕ್ಯಾಪ್ಟನ್ ಬೆನ್ಸ್ಟೋಕ್ಸ್ ದಿಕ್ಕೇ ತೋಚದೆ ತಲೆ ಮೇಲೆ ಕೈ ಹೊತ್ರೆ, ಬೌಲರ್ಗಳು ಬೌಲಿಂಗ್ ಮಾಡಿ ಮಾಡಿ ಬಸವಳಿದರು. ಗಿಲ್ ಘರ್ಜನೆಯ ಹೈಲೆಟ್ಸ್?.
ಎಡ್ಜ್ಬಾಸ್ಟನ್ನಲ್ಲಿ ಪಂಜಾಬ್ ಪುತ್ತರ್ ಗಿಲ್ ಘರ್ಜನೆ.!
2ನೇ ದಿನದಾಟದಲ್ಲೂ ಶುಭ್ಮನ್ ಇಂಗ್ಲೆಂಡ್ ಬೌಲರ್ಗಳ ಬಿಡದೇ ಕಾಡಿದರು. ಗುಡ್ ಬಾಲ್ನ ಗೌರವಿಸಿದರು. ಹಾಗೇ ಬ್ಯಾಡ್ ಬಾಲ್ಗಳನ್ನ ಪರ್ಫೆಕ್ಟ್ ಆಗಿ ಫನಿಷ್ ಮಾಡಿದರು. ಗಿಲ್ನ ಔಟ್ ಮಾಡೋಕೆ ಇಂಗ್ಲೆಂಡ್ ಮಾಡಿದ ಪ್ಲಾನ್ ಒಂದಾ.? ಎರಡಾ.? ಶಾರ್ಟ್ಬಾಲ್ ಹಾಕಿದರು, ಔಟ್ ಸೈಡ್ ಆಫ್ ಸ್ಟಂಪ್ ಲೈನ್ನಲ್ಲಿ ಸತತವಾಗಿ ಬೌಲಿಂಗ್ ಮಾಡಿದರು. ಬೌನ್ಸರ್ಗಳ ಪ್ರಯೋಗ ಮಾಡಿದರು, ಸ್ಪಿನ್ ಜಾದೂ ಮಾಡಿ ಔಟ್ ಮಾಡೋಕೂ ಪ್ರಯತ್ನಿಸಿದರು. ಅವೆಲ್ಲವಕ್ಕೂ ಗಿಲ್ ತಾಳ್ಮೆಯ ಆಟದಿಂದಲೇ ದಿಟ್ಟ ಆನ್ಸರ್ ಕೊಟ್ಟರು.
ಎಡ್ಜ್ಬಾಸ್ಟನ್ನಲ್ಲಿ ಶುಭ್ಮನ್ ದ್ವಿಶತಕ ವೈಭವ.!
114 ರನ್ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಶುಭ್ಮನ್ ಗಿಲ್ ಮೊದಲ ಸೆಷನ್ನಲ್ಲೇ 150 ರನ್ಗಡಿ ದಾಟಿದರು. ಜಡೇಜಾ ಜೊತೆಗೆ ಸಾಲಿಡ್ ಪಾರ್ಟನರ್ಶಿಪ್ ಬ್ಯುಲ್ಡ್ ಮಾಡಿದ ಶುಭ್ಮನ್ ಗಿಲ್ 263 ಎಸೆತಗಳಲ್ಲಿ 150 ರನ್ಗಳಿಸಿದರು. 150ರ ಗಡಿದಾಟಿದ ಬಳಿಕ ಲಂಚ್ ಬ್ರೇಕ್ ತೆಗೆದುಕೊಂಡರೂ ಶುಭ್ಮನ್ ಗಿಲ್ ಏಕಾಗ್ರತೆಯನ್ನ ಕಳೆದುಕೊಳ್ಳಲಿಲ್ಲ.
ಬೊಂಬಾಟ್ ಆಟ ಮುಂದುವರೆಸಿದ ಗಿಲ್ 311 ಎಸೆತಗಳಲ್ಲಿ ಡಬಲ್ ಸೆಂಚುರಿ ಸಿಡಿಸಿ ಮಿಂಚಿದರು. ಡಬಲ್ ಸೆಂಚುರಿ ಗಡಿ ದಾಟಿದ ಮಾತ್ರಕ್ಕೆ ಗಿಲ್ ರನ್ ದಾಹ ಕಡಿಮೆಯಾಗಲಿಲ್ಲ. ದ್ವಿಶತಕ ಸಿಡಿಸಿದ ಬಳಿಕ ಅಬ್ಬರದ ಆಟವಾಡಿದ ಗಿಲ್ ಜಸ್ಟ್ 37 ಎಸೆತಗಳಲ್ಲಿ 250 ರನ್ ಸಿಡಿಸಿದ್ರು. 200ರಿಂದ 250ರವರೆಗಿನ ಆಟದಲ್ಲಿ 8 ಆಕರ್ಷಕ ಬೌಂಡರಿ, 1 ಸಾಲಿಡ್ ಸಿಕ್ಸರ್ ಬಾರಿಸಿದರು.
ಸಾಲಿಡ್ ಟಚ್ನಲ್ಲಿದ್ದ ಶುಭ್ಮನ್ ಗಿಲ್ ತ್ರಿಶತಕ ಸಿಡಿಸೋ ನಿರೀಕ್ಷೆ ಮೂಡಿಸಿದರು. ಆದ್ರೆ, ಜೋಶ್ ಟಂಗ್ ಬೌಲಿಂಗ್ನಲ್ಲಿ ಮಿಸ್ ಜಡ್ಜ್ ಮಾಡಿ ಎಡವಿದರು. ಬರೋಬ್ಬರಿ 387 ಎಸೆತ ಎದುರಿಸಿದ ಗಿಲ್ 269 ರನ್ಗಳಿಸಿ ಆಟ ಮುಗಿಸಿದರು. 3 ಸಿಕ್ಸರ್, 30 ಬೌಂಡರಿ ಬಾರಿಸಿದರು.
ಕ್ಯಾಪ್ಟನ್ ಶುಭ್ಮನ್ ಆಟಕ್ಕೆ ದಾಖಲೆಗಳು ಉಡೀಸ್.!
ತ್ರಿಶತಕದ ಹೊಸ್ತಿಲಲ್ಲಿ ಎಡವಿದರು ಶುಭ್ಮನ್ ಗಿಲ್ ದಾಖಲೆಗಳ ಮೇಲೆ ದಾಖಲೆ ಬರೆದರು. ಟೆಸ್ಟ್ನಲ್ಲಿ ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ ಶುಭ್ಮನ್ ಗಿಲ್ ಸೇನಾ ರಾಷ್ಟ್ರಗಳಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ಏಷ್ಯನ್ ಕ್ಯಾಪ್ಟನ್ ಅನ್ನೋ ದಾಖಲೆ ಬರೆದರು. ವಿರಾಟ್ ಕೊಹ್ಲಿಯನ್ನ ಹಿಂದಿಕ್ಕಿ ಭಾರತದ ನಾಯಕನಾಗಿ ಇನ್ನಿಂಗ್ಸ್ವೊಂದರಲ್ಲಿ ಹೆಚ್ಚು ರನ್ಗಳಿಸಿದ ಸಾಧನೆಯನ್ನೂ ಮಾಡಿದರು.
ಭಾರತದ ನಾಯಕನಾಗಿ ಹೆಚ್ಚು ರನ್
- ಶುಭ್ಮನ್ ಗಿಲ್- 269
- ವಿರಾಟ್ ಕೊಹ್ಲಿ- 254*
- ವಿರಾಟ್ ಕೊಹ್ಲಿ- 243
- ವಿರಾಟ್ ಕೊಹ್ಲಿ- 235
- MS ಧೋನಿ- 224
ಇಷ್ಟೇ ಅಲ್ಲ, ಇಂಗ್ಲೆಂಡ್ನಲ್ಲಿ ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟರ್ ಅನ್ನೋ ಖ್ಯಾತಿಗೂ ಶುಭ್ಮನ್ ಭಾಜನರಾದರು.
ಇಂಗ್ಲೆಂಡ್ನಲ್ಲಿ ಭಾರತೀಯರ ಬೆಸ್ಟ್ ಸ್ಕೋರ್
- ಶುಭ್ಮನ್ ಗಿಲ್- 269
- ಸುನಿಲ್ ಗವಾಸ್ಕರ್- 221
- ರಾಹುಲ್ ದ್ರಾವಿಡ್- 217
- ಸಚಿನ್ ತೆಂಡುಲ್ಕರ್- 193
- ರವಿ ಶಾಸ್ತ್ರಿ- 187
ಇದನ್ನೂ ಓದಿ:ಪ್ರಸಾರ ಭಾರತಿಯಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಉದ್ಯೋಗಗಳು ಖಾಲಿ.. ಅಪ್ಲೇ ಮಾಡಿ!
ಏಕದಿನದಲ್ಲೂ ದ್ವಿಶತಕ, ಟೆಸ್ಟ್ನಲ್ಲೂ ಡಬಲ್ ಧಮಾಕಾ.!
ಎಡ್ಜ್ಬಾಸ್ಟನ್ನಲ್ಲಿ ಟೆಸ್ಟ್ ಕ್ರಿಕೆಟ್‌ನ ಚೊಚ್ಚಲ ದ್ವಿಶತಕ ಬಾರಿಸಿದ ಶುಭ್ಮನ್ ಗಿಲ್, ಏಕದಿನ ಫಾರ್ಮೆಟ್ನಲ್ಲೂ ಡಬಲ್ ಸೆಂಚುರಿ ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 145 ಎಸೆತಗಳಲ್ಲಿ ಶುಭ್ಮನ್ ಗಿಲ್ ಏಕದಿನ ಫಾರ್ಮೆಟ್ನಲ್ಲಿ ದ್ವಿಶತಕ ಸಿಡಿಸಿದ್ದರು. ಟೆಸ್ಟ್ ಹಾಗೂ ಏಕದಿನ ಫಾರ್ಮೆಟ್ನಲ್ಲಿ ಡಬಲ್ ಧಮಾಕಾ ಸಿಡಿಸಿದ 4ನೇ ಭಾರತೀಯ ಬ್ಯಾಟರ್ ಅನ್ನೋ ಹೆಗ್ಗಳಿಕೆ ಈಗ ಶುಭ್ಮನ್ ಗಿಲ್ದ್ದು.
ಈ ಸರಣಿ ಆರಂಭಕ್ಕೂ ಹಲವಾರು ಪ್ರಶ್ನೆಗಳಿದ್ವು. ಬಾಂಗ್ಲಾದೇಶ ಬಿಟ್ರೆ ವಿದೇಶದಲ್ಲಿ ಶುಭ್ಮನ್ ಬ್ಯಾಟ್ ಸೌಂಡ್ ಮಾಡಿರಲಿಲ್ಲ. ಇಂಗ್ಲೆಂಡ್ನಲ್ಲಂತೂ ಕಳಪೆ ಪ್ರದರ್ಶನ ನೀಡಿದರು. ಇದರ ನಡುವೆ ನಾಯಕತ್ವದ ಜವಾಬ್ದಾರಿ ಗಿಲ್ಗೆ ಬಂದಿತ್ತು. ಇದನ್ನ ಗಿಲ್ ಹೇಗೆ ನಿಭಾಯಿಸ್ತಾರೆ ಎಂಬ ಪ್ರಶ್ನೆಗಳಿದ್ದವು. ಎಲ್ಲಾ ಪ್ರಶ್ನೆಗಳಿಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಆಟದಿಂದ ಆನ್ಸರ್ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ