/newsfirstlive-kannada/media/post_attachments/wp-content/uploads/2025/07/Shubman_Gill_200-1.jpg)
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ 336 ರನ್​ಗಳ ಬೃಹತ್​ ಮೊತ್ತದ ಅಂತರದಿಂದ ಗೆದ್ದು ಸಂಭ್ರಮಿಸಿದೆ. ಈ ಮೂಲಕ ಭಾರತ ತಂಡಕ್ಕೆ ನಾಯಕನಾದ ಶುಭ್​ಮನ್ ಗಿಲ್ ಅವರು ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಆದರೆ ಈ ಟೆಸ್ಟ್​ ಪಂದ್ಯದ ನಡುವೆ ಶುಭ್​ಮನ್ ಗಿಲ್​ ದೊಡ್ಡ ತಪ್ಪು ಎಸಗಿರುವುದು ಇದೀಗ ಮೂರನೇ ಕಣ್ಣಿನಿಂದ ಗೊತ್ತಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಶುಭ್​ಮನ್​ ಗಿಲ್​ ಅಮೋಘವಾದ ದ್ವಿಶತಕ ಹಾಗೂ 2ನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿ ಮಿಂಚಿದ್ದರು. ಪಂದ್ಯದ 4ನೇ ದಿನದಾಟದ ವೇಳೆ ಕ್ರೀಸ್​​ನಲ್ಲಿ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದರು. ಟೀಮ್ ಇಂಡಿಯಾ 607 ರನ್​ಗಳ ಬೃಹತ್​ ಮೊತ್ತ ಕಲೆ ಹಾಕಿದ್ದರಿಂದ ಬಾಲ್ಕನಿಯಲ್ಲಿದ್ದ ಶುಭ್​ಮನ್​ ಗಿಲ್ ಅವರು ಇನ್ನಿಂಗ್ಸ್​ ಡಿಕ್ಲೇರ್ ಮಾಡಿ ಇಬ್ಬರು ಬ್ಯಾಟ್ಸ್​ಮನ್​ಗಳನ್ನ ವಾಪಸ್​ ಕರೆದಿದ್ದಾರೆ.
ಬಾಲ್ಕನಿಯಿಂದ ಕರೆಯುವಾಗ ಶುಭ್​ಮನ್ ಗಿಲ್ ಅವರು ​ನೈಕ್​ ಕಂಪನಿಯ ಟೀ-ಶರ್ಟ್ ಧರಿಸಿದ್ದರು. ಇದರಿಂದ ಬಿಸಿಸಿಐ ಒಪ್ಪಂದವನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನಲಾಗಿದೆ. ಬಿಸಿಸಿಐಗೆ ಕೋಟಿ ಕೋಟಿ ಹಣ ಕೊಟ್ಟು ಅಡೀಡಸ್ ಕಂಪನಿ ಒಪ್ಪಂದ ಮಾಡಿಕೊಂಡರೇ, ಗಿಲ್ ಅವರು ನೈಕ್​ ಕಂಪನಿ ಟೀ-ಶರ್ಟ್​ ಧರಿಸಿ ಕ್ಯಾಮೆರಾ ಕಣ್ಣಿಗೆ ಬಿದ್ದಿರುವುದು ಒಪ್ಪಂದ ಉಲ್ಲಂಘನೆ ಮಾಡಲಾಗಿದೆ. ಇದರಿಂದ ಗಿಲ್​ಗೆ ಸಂಕಷ್ಟ ಎದುರಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಜೊತೆ ನೈಕ್ ಕಂಪನಿ ಈ ಮೊದಲು ಅಂದರೆ 2006 ರಿಂದ 2020ರವರೆಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದಾದ ಮೇಲೆ 2023ರ ಬಳಿಕ ಬಿಸಿಸಿಐ ಜೊತೆ ಅಡೀಡಸ್ ಒಪ್ಪಂದ ಮಾಡಿಕೊಂಡಿದ್ದು ಆಟಗಾರರು ಕೂಡ ಅಡೀಡಸ್ ಉಡುಪು ಧರಿಸಿಯೇ ಇರಬೇಕು. ಆದರೆ ಬೇರೆ ಕಂಪನಿಯ ಟೀಶರ್ಟ್​ ಧರಿಸಿ ಕ್ಯಾಪ್ಟನ್ ಗಿಲ್ ತಪ್ಪು ಮಾಡಿದ್ದಾರೆ ಎನ್ನಲಾಗುತ್ತಿದೆ. ಗಿಲ್ ಧರಿಸಿರುವ ನೈಕ್ ಟೀ-ಶರ್ಟ್​ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಫ್ಯಾನ್ಸ್ ವಿಧವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ