/newsfirstlive-kannada/media/post_attachments/wp-content/uploads/2025/07/PANT_RAHUL.jpg)
ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶುಭ್ಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ನೆಲಕಚ್ಚಿದೆ. ಕೇವಲ 22 ರನ್ಗಳಿಂದ ಭಾರತ ತಂಡ ಸೋಲೋಪ್ಪಿಕೊಂಡಿದೆ. ಇದರಿಂದ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1ರಿಂದ ಮುನ್ನಡೆ ಕಾಯ್ದುಕೊಂಡಿದೆ.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲ ಪಡೆಯ ನಾಯಕ ಬೆನ್ ಸ್ಟೋಕ್ಸ್ ಅವರು ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ್ದರು. ಆದರೆ ಭಾರತದ ಬೌಲರ್ಗಳ ಮಾರಕ ದಾಳಿಗೆ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲದ ಇಂಗ್ಲೆಂಡ್ ಬ್ಯಾಟರ್ಗಳು ಕೇವಲ 387 ರನ್ಗೆ ಆಲೌಟ್ ಆಗಿದ್ದರು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ 387 ರನ್ಗೆ ಆಲೌಟ್ ಆಗಿದ್ದರಿಂದ ಮುನ್ನಡೆ ಕಾಯ್ದುಕೊಳ್ಳಲಾಗಲಿಲ್ಲ. ಇದರಿಂದ ಮೊದಲ ಇನ್ನಿಂಗ್ಸ್ ಟೈ ಎಂದೇ ಹೇಳಬಹುದು.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ಗಿಂತ ಹೀನಾಯವಾಗಿ ಆಡಿದ್ದರು. ಏಕೆಂದರೆ ಯಾವೊಬ್ಬ ಬ್ಯಾಟರ್ ಕೂಡ 40 ರನ್ಗಳ ಗಡಿ ದಾಟಿರಲಿಲ್ಲ. ಹೀಗಾಗಿ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಕೇವಲ 192 ರನ್ಗಳಿಗೆ ಆಲೌಟ್ ಆಗಿತ್ತು. ಈ ಅಲ್ಪ ಮೊತ್ತದ ಟಾರ್ಗೆಟ್ ಅನ್ನು ಚೇಸ್ ಮಾಡಲಾಗದೇ ಟೀಮ್ ಇಂಡಿಯಾ ಪರಾಭವಗೊಂಡಿರುವುದು ಭಾರೀ ನಿರಾಶೆ ಮೂಡಿಸಿದೆ. ಯುವ ಬ್ಯಾಟರ್ಗಳಿಂದ ಕೂಡಿದ ಭಾರತ 3ನೇ ಟೆಸ್ಟ್ ಪಂದ್ಯವನ್ನು ಕೈಚೆಲ್ಲಿ ಕುಳಿತಿದೆ.
2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಆರಂಭದಲ್ಲೇ ದೊಡ್ಡ ಪೆಟ್ಟು ತಿಂದಿತು. ಯಶಸ್ವಿ ಜೈಸ್ವಾಲ್ ಅವರು ಡಕೌಟ್ ಆಗಿರುವುದು ತಂಡಕ್ಕೆ ಮಾರಕವಾಗಿ ಕಾಡಿತು. ಕನ್ನಡಿಗ ಕೆ.ಎಲ್ ರಾಹುಲ್ ಕೊನೆ ದಿನದವರೆಗೆ ಬ್ಯಾಟಿಂಗ್ ಕಾಯ್ದುಕೊಂಡರೂ ಉಪಯೋಗವಾಗಲಿಲ್ಲ. 39 ರನ್ಗೆ ಎಲ್ಬಿಗೆ ಬಲಿಯಾದರು. ಮೊದಲೆರಡು ಟೆಸ್ಟ್ನಲ್ಲಿ ವಿಫಲವಾಗಿದ್ದ ಕನ್ನಡಿಗ ಕರುಣ್ ನಾಯರ್ (14) ಈ ಪಂದ್ಯದಲ್ಲೂ ತಂಡಕ್ಕೆ ಭಾರವಾದರು. ನಾಯಕ ಗಿಲ್ 6, ಆಕಾಶ್ ದೀಪ್ 1 ರನ್ಗೆ ಬ್ಯಾಟಿಂಗ್ ಮುಗಿಸಿ ಪೆವಿಲಿಯನ್ಗೆ ನಡೆದರು.
ಇದನ್ನೂ ಓದಿ: ಕರುಣ್ ನಾಯರ್ಗೆ ಇದು ಒಳ್ಳೆ ಸರಣಿ.. ಕನ್ನಡಿಗನ ಬೆನ್ನಿಗೆ ನಿಂತ ಲೆಜೆಂಡರಿ ಕ್ರಿಕೆಟರ್ ಅನಿಲ್ ಕುಂಬ್ಳೆ, ಏನಂದ್ರು?
ವಿಕೆಟ್ ಕೀಪರ್ ರಿಷಭ್ ಪಂತ್ ಭರವಸೆ ಮೂಡಿಸುತ್ತಾರೆ ಎಂದುಕೊಳ್ಳುವಷ್ಟರಲ್ಲಿ 9 ರನ್ಗೆ ಕ್ಲೀನ್ ಬೋಲ್ಡ್ ಆಗಿ ಫ್ಯಾನ್ಸ್ಗೆ ನಿರಾಶೆ ಮೂಡಿಸಿದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಡಕೌಟ್ ಆಗಿದ್ದು ಮತ್ತಷ್ಟು ರನ್ಗಳ ಹಿನ್ನಡೆಗೆ ಕಾರಣವಾಯಿತು. ರವೀಂಧ್ರ ಜಡೇಜಾ (ಅಜೇಯ 61 ರನ್) ತಂಡಕ್ಕೆ ಬಲವಾದ ಅಸ್ತ್ರದಂತೆ ಕಂಡರೂ ಯಾವ ಬ್ಯಾಟರ್ ಕೂಡ ಜಡೇಜಾಗೆ ಸಾಥ್ ಕೊಡಲಿಲ್ಲ.
ಹೀಗಾಗಿ ಟೀಮ್ ಇಂಡಿಯಾ ಆಂಗ್ಲರ ಎದುರು ತಲೆ ಬಾಗುವಂತೆ ಆಯಿತು. ಕೊನೆ ದಿನವಾಗಿದ್ದರಿಂದ ಡ್ರಾ ಮಾಡಿಕೊಳ್ಳುವ ಅವಕಾಶವೂ ಭಾರತಕ್ಕಿತ್ತು. ಆದರೆ ವಿಕೆಟ್ಗಳು ಪಟ ಪಟ ಉದುರುತ್ತಿದ್ದಂರಿಂದ ಡ್ರಾಗೆ ಪ್ರಯತ್ನಿಸಲಿಲ್ಲ. 22 ರನ್ಗಳಿಂದ ಭಾರತ ಪರಾಭವಗೊಂಡಿದ್ದು ಇಂಗ್ಲೆಂಡ್ ತಂಡ 2-1 ರಿಂದ ಸರಣಿಯಲ್ಲಿ ಮುನ್ನಡೆಯಲ್ಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ