/newsfirstlive-kannada/media/post_attachments/wp-content/uploads/2024/03/HK-PATIL-1.jpg)
ಗಡಿ ಭಾಗದ ಕನ್ನಡ ಸಂಘಟನೆಗಳ ದೀರ್ಘ ಕಾಲದ ಬೇಡಿಕೆಯಾಗಿದ್ದ ಗಡಿ ಉಸ್ತುವಾರಿ ಸಚಿವರ ನೇಮಕ ಕೊನೆಗೂ ಆಗಿದೆ. ಸಂಪುಟದ ಹಿರಿಯ ನಾಯಕ ಹೆಚ್.ಕೆ.ಪಾಟೀಲರನ್ನು ಗಡಿ ಹಾಗೂ ಜಲ ವಿವಾದಗಳ ಉಸ್ತುವಾರಿ ಸಚಿವರನ್ನಾಗಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ನೇಮಕ ಮಾಡಿದೆ.
2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಕೆ ಪಾಟೀಲರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿತ್ತು. 2018ರ ನಂತರ ಅಧಿಕಾರಕ್ಕೆ ಬಂದ ನಂತರ ಯಾವುದೇ ಸರ್ಕಾರ ನೇಮಕ ಮಾಡಿರಲಿಲ್ಲ. ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಗಡಿ ವಿವಾದ ಸಂಬಂಧ ಇಬ್ಬರು ಉಸ್ತುವಾರಿ ಸಚಿವರನ್ನು ನೇಮಕ ಮಾಡಿದೆ.
ಸರ್ಕಾರಕ್ಕೆ ಕೃತಜ್ಞತೆ..
ಹೆಚ್ಕೆ ಪಾಟೀಲರ ನೇಮಕಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕರ್ನಾಟಕದ ಗಡಿ ಭಾಗದಲ್ಲಿ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಕನ್ನಡ ಪರ ಕಾರ್ಯ ನಿರ್ವಹಿಸುತ್ತಿರುವ ಕನ್ನಡ ಮಾಧ್ಯಮ ಶಾಲೆಗಳ ಸಮಸ್ಯೆಗಳು ಮತ್ತು ಸವಾಲುಗಳು ತುಂಬಾ ಗಂಭೀರವಾಗಿವೆ. ಕರ್ನಾಟಕ ರಾಜ್ಯದ ಒಳಗಿರುವ ಗಡಿ ಭಾಗದಲ್ಲಿನ ಪ್ರದೇಶಗಳ ಅಭಿವೃದ್ಧಿಯ ಜೊತೆಗೆ ಕರ್ನಾಟಕದ ಹೊರಗಿರುವ ಆರು ನೆರೆ ರಾಜ್ಯಗಳಿಗೆ ಹೊಂದಿಕೊಂಡಂತೆ ಇರುವ ಕನ್ನಡ ಪ್ರದೇಶಗಳಲ್ಲಿನ ಕನ್ನಡದ ಕಾಯಕವನ್ನು ಕೈಗೊಳ್ಳುವುದು ತೀರಾ ಅಗತ್ಯವಾಗಿರುತ್ತದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಇದೆ ಪ್ರಬಲ ಅಸ್ತ್ರ -2ನೇ ಟೆಸ್ಟ್ಗೆ ಕಣಕ್ಕಿಳಿಸಿದ್ರೆ ಗೆಲುವು ನಮ್ಮದೇ..!
ಕರ್ನಾಟಕ ಸರ್ಕಾರವು 63 ತಾಲ್ಲೂಕುಗಳನ್ನು ಗಡಿ ಭಾಗದ ತಾಲ್ಲೂಕುಗಳೆಂದು ಗುರುತಿಸಿದೆ. ಇವು ಸುಮಾರು 19 ಗಡಿ ಜಿಲ್ಲೆಗಳ ವ್ಯಾಪ್ತಿಗೆ ಬರುತ್ತವೆ. ಜೊತೆಗೆ ಆರು ನೆರೆ ರಾಜ್ಯಗಳಲ್ಲಿನ ಕರ್ನಾಟಕದ ಗಡಿ ಭಾಗದ ಪ್ರದೇಶದಲ್ಲಿರುವ ಕನ್ನಡಿಗರಿಗೂ ಹಲವಾರು ಸಮಸ್ಯೆಗಳಿವೆ. ಇವರ ಸಮಸ್ಯೆಗಳ ಪರಿಹಾರಕ್ಕೆ ಕರ್ನಾಟಕ ಸರ್ಕಾರವು 2010ರಲ್ಲಿ ‘ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪಿಸಿ ಅದನ್ನು ಈಗ ಯೋಜನಾ ಆಯೋಗದ ಅಡಿಗೆ ತಂದಿದೆ.
ರಾಜ್ಯದ ಹಾಗೂ ಹೊರ ರಾಜ್ಯದ ಕನ್ನಡ ಪರ ಸಂಘ/ಸಂಸ್ಥೆಗಳಿಗೆ ಭಾಷಾ ಚಟುವಟಿಕೆಗಳಿಗಾಗಿ ಪ್ರೋತ್ಸಾಹ ನೀಡುವುದು ಹಾಗೂ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳ ಮೂಲಭೂತ ಸೌಕರ್ಯಗಳಾದ ಶಾಲಾ ಕೊಠಡಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಶಾಲಾ ಶೌಚಾಲಯ, ಶಾಲಾ ಆವರಣ ಗೋಡೆ, ಇತ್ಯಾದಿ ಸೌಲಭ್ಯಗಳನ್ನು ಪ್ರಾಧಿಕಾರದಿಂದ ಒದಗಿಸಲಾಗುತ್ತಿದೆ.
ಇದನ್ನೂ ಓದಿ: ನಾಳೆಯಿಂದ ಟೋಲ್ ದರ ಹೆಚ್ಚಳ.. ಬೆಂಗಳೂರು ಪ್ರಯಾಣಿಕರು ಓದಲೇಬೇಕಾದ ಸ್ಟೋರಿ..!
ಸರಕಾರವು ಇದೀಗ ಗಡಿ ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಹಿರಿಯ ಸಚಿವರಾದ ಹೆಚ್ ಕೆ ಪಾಟೀಲರಿಗೆ ವಹಿಸಿದೆ. ಇದು ಗಡಿ ಭಾಗದ ಕನ್ನಡಿಗರ ಬೇಡಿಕೆಯೂ ಹೌದು. ಈ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡಿತ್ತು. ಪಾಟೀಲರಿಗೆ ಅಭಿನಂದನೆಗಳು. ಗಡಿ ಭಾಗದ ಕನ್ನಡಿಗರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿ. ಈ ನಿಟ್ಟಿನಲ್ಲಿ ಉಚಿತ ನಿರ್ಧಾರ ತೆಗೆದುಕೊಂಡಿರುವ ಸರ್ಕಾರಕ್ಕೆ ಕೃತಜ್ಞತೆಗಳನ್ನ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ