/newsfirstlive-kannada/media/post_attachments/wp-content/uploads/2025/06/Siddaramaiah-5.jpg)
- ಸಿಎಂ ಭೇಟಿ ಮಾಡಿದ ಬಿಆರ್‌ಪಿ, ರಾಜು ಕಾಗೆ!
- ಶಾಸಕರ ಸಮಾಧಾನಕ್ಕೆ ಮುಂದಾದ ಸಿದ್ದರಾಮಯ್ಯ
- ತಮ್ಮ ಮೇಲಿನ ಆರೋಪಕ್ಕೆ ಜಮೀರ್ ಹೇಳಿದ್ದೇನು?
ಸರ್ಕಾರದ ವಿರುದ್ಧವೇ ಕಾಂಗ್ರೆಸ್ ಶಾಸಕರು ಸಿಡಿದೆದ್ದಿದ್ದಾರೆ. ಬಹಿರಂಗವಾಗಿ ಹೇಳಿಕೆ ನೀಡುತ್ತಾ ಸಿಎಂ ಸಿದ್ದರಾಮಯ್ಯಗೆ ಮುಜುಗರ ತರಿಸ್ತಿದ್ದಾರೆ. ಇದ್ರ ಬೆನ್ನಲ್ಲೇ ಶಾಸಕರನ್ನ ಕರೆಸಿ ಸಿದ್ದು ಸಮಾಧಾನ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ವೇಳೆ ಸಿಡಿದ ಶಾಸಕರು ಸಚಿವರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದಾರೆ.
ಸಿಎಂ ಭೇಟಿ ಮಾಡಿದ ಬಿಆರ್‌ಪಿ, ರಾಜು ಕಾಗೆ!
ವಸತಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಅಂತ ಆಳಂದ ಶಾಸಕ ಬಿ.ಆರ್​.ಪಾಟೀಲ್​ ಸ್ವಪಕ್ಷದ ವಿರುದ್ಧವೇ ಸಿಡಿದೆದ್ದಿದ್ರು. ಮನೆ ಕೊಟ್ರೆ ಮನಿ ಎಂಬ ಆಡಿಯೋ ಬಾಂಬ್ ಸಿಡಿಸಿದ್ರು. ಇದು ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತ ಕಾಂಗ್ರೆಸ್ ಶಾಸಕ ರಾಜು ಕಾಗೆ ಅನುದಾನ ಕದನ ಶುರು ಮಾಡಿದ್ರು. ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಶಾಸಕರ ಸಿಟ್ಟು ಹೈಕಮಾಂಡ್‌ವರೆಗೂ ತಲುಪಿದೆ. ಇದೀಗ ಸಿಎಂ ಸಿದ್ದರಾಮಯ್ಯ ಇಬ್ಬರೂ ಶಾಸಕರನ್ನ ಕರೆಸಿಕೊಂಡು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಕಾರು ಓವರ್​ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್..!
ಬೆಂಗಳೂರಿನಲ್ಲಿರೋ ಸಿಎಂ ಸಿದ್ದರಾಮಯ್ಯರ ಗೃಹಕಚೇರಿ ಕೃಷ್ಣಗೆ ಆಳಂದ ಶಾಸಕ ಬಿ.ಆರ್.ಪಾಟೀಲ್, ಕಾಗವಾಡ ಶಾಸಕ ರಾಜು ಕಾಗೆ ಭೇಟಿ ನೀಡಿದ್ರು. ಈ ವೇಳೆ ಸಿಎಂನ ಭೇಟಿ ಮಾಡಿ ಮನದಾಳದಲ್ಲಿರೋ ಅಸಮಾಧಾನವನ್ನ ಹೊರಹಾಕಿದ್ದಾರೆ. ಇಬ್ಬರು ಶಾಸಕರ ಜೊತೆ ಸಿಎಂ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜ್ಯದ ಸಚಿವರ ಕಾರ್ಯವೈಖರಿಯ ಬಗ್ಗೆ ಇಬ್ಬರು ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಶಾಸಕರನ್ನ ಸಮಾಧಾನಪಡಿಸಿದ್ದಾರೆ ಅಂತ ತಿಳಿದುಬಂದಿದೆ.
ಶಾಸಕರಿಗೆ ಸಿಎಂ ಬುದ್ಧಿಮಾತು!
- ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನದ ಅಗತ್ಯ ಇದೆ ಎಂದ ಕಾಗೆ
- ಮನೆಗಳ ಹಂಚಿಕೆ ಬಗ್ಗೆ ಸಿಎಂ ಮುಂದೆ ಬಿ.ಆರ್.ಪಾಟೀಲ್ ಬೇಸರ
- ಪತ್ರಕ್ಕೆ ಅಲ್ಲಿ ಮಾನ್ಯತೆಯೇ ಸಿಕ್ಕಿಲ್ಲ, ಹಣ ಪಡೆದು ಹಂಚಿಕೆ ಮಾಡಲಾಗಿದೆ
- ಈ ವೇಳೆ ಇಬ್ಬರೂ ಶಾಸಕರಿಗೆ ಅನುದಾನದ ಭರವಸೆ ನೀಡಿರುವ ಸಿಎಂ
- ಸಚಿವರ ಜೊತೆಗೂ ಸಭೆ ನಡೆಸಿ ತಿಳಿಸುತ್ತೇನೆ ಎಂದಿರುವ ಸಿದ್ದರಾಮಯ್ಯ
- ಶಾಸಕರಿಗೆ ಆದ್ಯತೆ ನೀಡುವಂತೆ ಮತ್ತೊಮ್ಮೆ ಹೇಳುತ್ತೇನೆ ಅಂತ ಭರವಸೆ
- ಆದರೆ, ನೀವು ಯಾವುದೇ ಕಾರಣಕ್ಕೂ ಬಹಿರಂಗವಾಗಿ ಮಾತಾಡಬೇಡಿ
- ನಿಮ್ಮ ಬಹಿರಂಗ ಮಾತುಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಲಿದೆ
- ನಿಮ್ಮ ಆರೋಪಗಳು ಪ್ರತಿಪಕ್ಷಗಳಿಗೆ ಅಸ್ತ್ರ ಮಾಡಿಕೊಟ್ಟಂತಾಗಲಿದೆ
- ಎಲ್ಲಾ ಸರಿ ಹೋಗುತ್ತಿದೆ, ಸರಿ ಮಾಡಿಕೊಂಡು ಹೋಗೋಣ ಎಂದ ಸಿಎಂ
- ಏನೇ ಸಮಸ್ಯೆಗಳಿದ್ರೂ ಮುಂದೆ ಸರಿ ಹೋಗಲಿದೆ ಅಂತ ಸಿಎಂ ಭರವಸೆ
ಸಿಎಂ ಸಿದ್ದರಾಮಯ್ಯ ಭೇಟಿಗೂ ಮುನ್ನ ಶಾಸಕ ಬಿ.ಆರ್. ಪಾಟೀಲ್ ಡಿಸಿಎಂ ಡಿ.ಕೆ. ಶಿವಕುಮಾರ್‌ರನ್ನ ಭೇಟಿ ಮಾಡಿದ್ರು. ಈ ತಾವು ಮಾಡಿರೋ ಆರೋಪದ ಬಗ್ಗೆ ಡಿಕೆಶಿ ಎದುರು ಎಳೆ ಎಳೆಯಾಗಿ ಬಿಚ್ಚಿಟ್ರು. ವಸತಿ ಇಲಾಖೆಯಲ್ಲಿ ನಡೀತಿರೋ ಕರ್ಮಕಾಂಡದ ಬಗ್ಗೆ ಡಿಕೆ ಶಿವಕುಮಾರ್ ಮುಂದೆ ತೆೆರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬೆಡ್, ಟಾಯ್ಲೆಟ್, ಮಿನಿ ಫ್ರಿಡ್ಜ್.. ಅಮೆರಿಕ B-2 ಯುದ್ಧ ವಿಮಾನದೊಳಗೆ ಏನೇನಿದೆ..?
ವಸತಿ ಇಲಾಖೆಯಲ್ಲಿ ಗೋಲ್ಮಾಲ್ ಎಂಬ ಸುದ್ದಿ ಸದ್ದು ಮಾಡ್ತಿದ್ದಂತೆ ವಸತಿ ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯಗೆ ತಮ್ಮ ಇಲಾಖೆಯ ವರದಿ ಸಲ್ಲಿಕೆ ಮಾಡಿದ್ದಾರೆ. ಯಾವುದೇ ಅಕ್ರಮ ನಡೆದಿಲ್ಲ ಅಂತ ಜಮೀರ್ ವಾದ ಮಂಡನೆ ಮಾಡ್ತಿದ್ದಾರೆ. ಒಟ್ಟಾರೆ, ಕಾಂಗ್ರೆಸ್ ಶಾಸಕರ ಅಸಮಾಧಾನವನ್ನ ತಣಿಸಲು ಸಿದ್ದುಗೆ ಹೈಕಮಾಂಡ್ ಟಾಸ್ಕ್ ನೀಡಿದೆ. ಡೆಲ್ಲಿಯಲ್ಲಿ ಖರ್ಗೆ ಜೊತೆ ಚರ್ಚಿಸಿ ಬಂದಿರೋ ಸಿಎಂ ಸರ್ಕಾರಕ್ಕೆ ಆಗಿರೋ ಡ್ಯಾಮೇಜ್‌ನ ಕಂಟ್ರೋಲ್ ಮಾಡುವ ಕಾರ್ಯಕ್ಕೆ ಕೈಹಾಕಿದ್ದಾರೆ. ಆದ್ರೆ, ಸಿದ್ದರಾಮಯ್ಯ ಕೊಟ್ಟಿರೋ ಭರವಸೆಯನ್ನ ನಂಬಿ ಶಾಸಕರು ಸೈಲೆಂಟ್ ಆಗ್ತಾರಾ? ಅಥವಾ ಮತ್ತೆ ವೈಲೆಂಟ್ ಆಗಿ ಬಿರುಗಾಳಿ ಎಬ್ಬಿಸ್ತಾರಾ? ಇದೇ ಮುಂದಿರೋ ಪ್ರಶ್ನೆ.
ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿ ಪ್ರವಾಸದಲ್ಲಿ ಏನೆಲ್ಲ ಆಯ್ತು..? ಹೈಕಮಾಂಡ್​ ಗರಂ ಆಗಿದ್ದು ಯಾಕೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ