/newsfirstlive-kannada/media/post_attachments/wp-content/uploads/2025/02/SIDDHARUDHA-MATH.jpg)
ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಜಾತ್ರಾ ಮಹೋತ್ಸವ ಕಳೆಗಟ್ಟಿತ್ತು.. ರಾಜ್ಯದ ಮೂಲೆ ಮೂಲೆಯಿಂದ ಬಂದ ಲಕ್ಷಾಂತರ ಭಕ್ತರು ಸ್ವಾಮಿ ಕೃಪೆಗೆ ಪಾತ್ರರಾಗಿ ಭಕ್ತಯ ನಮನ ಸಲ್ಲಿಸಿದ್ರು. ಸರ್ವಾಲಂಕೃತವಾಗಿದ್ದ ತೇರು.. ಕಳೆಗಟ್ಟಿದ್ದ ಸಿದ್ಧಾರೂಡರ ಮೂರ್ತಿ. ಲಕ್ಷಾಂತರ ಭಕ್ತರ ಸಮೂಹ.ಇದು ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ಕಳೆಗಟ್ಟಿದ ವಾತಾವರಣ
ಸಂಭ್ರಮ, ಸಡಗರ, ಜನ.. ಜನ.. ಕಣ್ಣು ಹಾಯಿಸದಷ್ಟೂ ಜನವೋ ಜನ. ಸಿದ್ಧಾರೂಢರ ಅದ್ಧೂರಿ ರಥೋತ್ಸವ. ರಥೋತ್ಸವವನ್ನ ಕಣ್ತುಂಬಿಕೊಳ್ಳುತ್ತಿರೋ ಭಕ್ತಗಣ. ಗುರುದ್ವಯರ ರಥವನ್ನ ಎಳೆಯುವ ಸಂಭ್ರಮ. ಇದು ಉತ್ತರ ಕರ್ನಾಟಕದ ಆರಾಧ್ಯ ದೈವ. ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿದ ರಥೋತ್ಸವ.. ಶಿವರಾತ್ರಿ ನಿಮ್ಮಿತ್ತ ಲಕ್ಷಾಂತರ ಭಕ್ತರ ಹರ್ಷೋದ್ಘಾರದ ನಡುವೆ ಸಿದ್ಧಾರೂಢರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.
ಸಿದ್ಧಾರೂಢರ ರಥ ದೇವಸ್ಥಾನದ ಮುಖ್ಯ ಬೀದಿಯಲ್ಲಿ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ನಿಂಬೆಹಣ್ಣು ಎಸೆದು ಭಕ್ತಿ ಸಮರ್ಪಿಸಿದ್ರು. ಡೊಳ್ಳು, ಬ್ಯಾಂಜೋ ಸೇರಿದಂತೆ ವಿವಿಧ ವಾದ್ಯ-ಮೇಳಗಳ ಝೇಂಕಾರ. ನೃತ್ಯದ ಕಲರವ ಜಾತ್ರೆಯ ಸಂಭ್ರಮ ಇಮ್ಮಡಿಗೊಳಿಸ್ತು. ಸಂಜೆ 5.30ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಭೂಕೈಲಾಸ, ಹುಬ್ಬಳ್ಳಿಯಲ್ಲಿ ಶ್ರೀ ಸಿದ್ಧಾರೂಢ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನ ಅಲಂಕೃತ ತೇರಿನಲ್ಲಿಟ್ಟು ಎಳೆಯಲಾಯ್ತು. ಜಾತಿ, ಧರ್ಮದ ಸಂಕೋಲೆಗಳನ್ನು ಮೀರಿ ಸರ್ವ ಜನಾಂಗದವರು ರಥೋತ್ಸವದಲ್ಲಿ ಭಾಗಿಯಾಗಿದ್ರು.
ಇದನ್ನೂ ಓದಿ: 5 ವರ್ಷದ ಹಿಂದೆ ಬೆಂಗಳೂರು ಆಸ್ಪತ್ರೆಯಿಂದ ಮಗು ಕಳ್ಳತನ; 10 ವರ್ಷ ಜೈಲು, 1 ಲಕ್ಷ ದಂಡ ವಿಧಿಸಿದ ಕೋರ್ಟ್!
ಮಹಾ ರಥೋತ್ಸವದ ಅಂಗವಾಗಿ ಸುಮಾರು 70 ಅಡಿ ಎತ್ತರದ ತೇರನ್ನ ಶೃಂಗಾರ ಮಾಡಲಾಗಿತ್ತು.. ಮಠದ ಆವರಣದಿಂದ ಹೊರಟ ತೇರು ಮಹಾದ್ವಾರದವರೆಗೆ ತಲುಪಿ ಮತ್ತೆ ಮಠಕ್ಕೆ ಮರಳಿತು. ಇನ್ನು, ರಾಜ್ಯದ ವಿವಿಧ ಭಾಗದಿಂದ ಬಂದ ಲಕ್ಷಾಂತರ ಭಕ್ತರು ಸ್ವಾಮಿ ಕೃಪೆಗೆ ಪಾತ್ರರಾದ್ರು. ಅತ್ತ, ವಿಶೇಷ ಕಳೆ ಪಡೆದಿದ್ದ ಶ್ರೀಮಠ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ಇದನ್ನೂ ಓದಿ:ಇಡೀ ಭಾರತದಲ್ಲಿ ಇದೇ ಮೊದಲು.. ಸಾಕುವ ಬೆಕ್ಕಿನಲ್ಲಿ H5N1 ಜ್ವರ ಪತ್ತೆ; ಆತಂಕಕ್ಕೆ ಕಾರಣವೇನು?
ಉತ್ತರ ಕರ್ನಾಟಕದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ ಸಿದ್ಧಾರೂಢ ಮಠಕ್ಕೆ ಬರುವ ಭಕ್ತರಿಗೆ ಊಟ, ಉಪಹಾರದ ಉಚಿತ ವ್ಯವಸ್ಥೆ ಕೂಡ ಮಾಡಲಾಗಿತ್ತು. ಒಟ್ಟಾರೆ, ಬಹಳ ಅದ್ಧೂರಿಯಿಂದ ಸಿದ್ಧಾರೂಢ ಸ್ವಾಮಿ ಜಾತ್ರೆಗೆ ನಡೆದಿದ್ದು, ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಭಕ್ತರು ಸ್ವಾಮಿ ಪಾದಗಳಿಗೆ ಬೇಡಿಕೊಂಡ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ