/newsfirstlive-kannada/media/post_attachments/wp-content/uploads/2024/08/Palak-Muchhal7.jpg)
ಸಂಗೀತಕ್ಕೆ ಕಾಯಿಲೆಗಳನ್ನ ಕ್ಯೂರ್ ಮಾಡೋ ಗುಣ ಇದೆ ಅಂತ ಹೇಳ್ತಾನೆ ಇರ್ತಾರೆ. ಕೆಲವು ಕೇಸ್ಗಳಲ್ಲಿ ಇದು ನಿಜವೂ ಇರಬಹುದು. ನೋವುಂಡ ಮನಸಿಗಂತೂ ಸಂಗೀತ ಮುದ ನೀಡಿ, ನೋವನ್ನ ಕಡಿಮೆ ಮಾಡೋದ್ರಲ್ಲಿ ನೋ ಡೌಟ್. ಆದ್ರೆ, ಅದೇ ಸಂಗೀತ, ಹಾಡು, ಗಾಯಕಿಯೊಬ್ಬಳ ಹಾಡುಗಾರಿಕೆ ಒಂದಲ್ಲ, ಎರಡಲ್ಲ, ಮೂರು ಸಾವಿರಕ್ಕೂ ಹೆಚ್ಚು ಮಕ್ಕಳ ಹೃದಯಾಂತರಾಳಕ್ಕೆ ಹೋಗಿ, ಎದೆ ಬಡಿತವನ್ನ ಹೆಚ್ಚಿಸಿ, ಜೀವಕ್ಕೆ ಆಸರೆಯಾಗಿದೆ, ಜೀವ ಉಳಿಸಿದೆ, ಜೀವನವನ್ನ ಕಟ್ಟಿಕೊಟ್ಟಿದೆ, ಇನ್ನೂ ನೂರಾರು ಮಕ್ಕಳ ಜೀವ ಉಳಿಸಿದೆ ಅನ್ನೋದು, ಇವತ್ತಿನ ಸತ್ಯ.
ಇದನ್ನೂ ಓದಿ:‘13 ವರ್ಷದ ಹಿಂದೆಯೇ ಸತ್ತ ನನ್ನ ಗಂಡನಿಂದ ಗರ್ಭಿಣಿಯಾದೆ’- ಮಹಿಳೆ ಶಾಕಿಂಗ್ ಹೇಳಿಕೆ
ಸಕ್ಸಸ್ ಫುಲ್ ಪ್ಲೇಬ್ಯಾಕ್ ಸಿಂಗರ್ ಒಬ್ಬಳು, ಅದೆಷ್ಟೋ ಮಕ್ಕಳ ಮನಸ್ಸಿನಲ್ಲಿ ನಲ್ಮೆಯ ಅಕ್ಕನಾಗಿ, ಅವರ ಜೀವಕ್ಕೆ ಆಸರೆಯಾಗಿ ನಿಂತ, ಹೃದಯವನ್ನ ತಟ್ಟೋ ಕಥೆ ಇದು. ಲಿಟ್ಲ್ ಹಾರ್ಟ್ಗಳನ್ನ ರಕ್ಷಣೆ ಮಾಡ್ತಿರೋ ದೊಡ್ಡ ಹೃದಯವಂತಿಕೆಯ ಗಾಯಕಿಯ ಹೆಸರು ಪಲಕ್ ಮುಚ್ಚಲ್. 32 ವರ್ಷದ ಗುಂಗರು ಕೂದಲಿನ ಚೆಲುವೆ ಪಲಕ್, ನೋಡೋಕೆ ಎಷ್ಟು ಸುಂದರವೋ, ಬಡ ಜೀವಗಳಿಗೆ ಆಕೆ ಆಸರೆ ಆಗ್ತಿರೋದು, ಅದಕ್ಕಿಂತಲೂ ಬ್ಯೂಟಿಫುಲ್. ಪಲಕ್ ಮುಚ್ಚಲ್ ಈ ಸೇವೆಯನ್ನ ಇವತ್ತೋ, ನಿನ್ನೆಯೋ ಶುರು ಮಾಡಿದ್ದಲ್ಲ. ಪಲಕ್ಗೆ ಜಸ್ಟ್ 7 ವರ್ಷವಿದ್ದಾಗಿನಿಂದಲೇ ಈ ರೀತಿಯ ಸಾಮಾಜಿಕ ಸೇವೆಯಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಳು. ಕೇವಲ 4 ವರ್ಷದ ವಯಸ್ಸಿನಲ್ಲಿ ಕಲ್ಯಾಣ್ಜಿ, ಆನಂದ್ಜಿ ಲಿಟ್ಲ್ ಸ್ಟಾರ್ ಅನ್ನೋ ಯುವ ಗಾಯಕರ ತಂಡವನ್ನ ಪಲಕ್ ಸೇರಿದ್ದರು. 1999ರಲ್ಲಿ ತನ್ನ 7ನೇ ವಯಸ್ಸಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನ ಅಪ್ಪಿದ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡೋ ಉದ್ದೇಶದಿಂದ ದೇಣಿಗೆಯನ್ನ ಪಲಕ್ ಸಂಗ್ರಹಿಸಿದ್ರು. ತನ್ನ ತವರೂರಾದ ಮಧ್ಯಪ್ರದೇಶದ ಇಂದೋರ್ನಲ್ಲಿ ಸುಮಾರು 1 ವಾರಗಳ ಕಾಲ ಅಂಗಡಿಗಳಲ್ಲಿ ಹಾಡುಗಳನ್ನ ಹಾಡುತ್ತಾ ಪಲಕ್ 25 ಸಾವಿರ ರೂಪಾಯಿ ದೇಣಿಗೆ ಸಂಗ್ರಹಿಸಿದ್ರು. 1999ರಲ್ಲೇ, ಒಡಿಶಾದಲ್ಲಿ ಚಂಡಮಾರುತದಲ್ಲಿ ಆಸ್ತಿ ಪಾಸ್ತಿ, ಜೀವ ಕಳೆದುಕೊಂಡವರ ನೆರವಿಗೆ ಸಹ ದೇಣಿಗೆಯನ್ನ ಸಂಗ್ರಹಿಸಿದ್ರು.
ಚಿಕ್ಕ ಮಕ್ಕಳು ತಮ್ಮ ಬಟ್ಟೆಗಳನ್ನೇ ಬಳಸಿ ರೈಲಿನ ಕಂಪಾರ್ಟ್ಮೆಂಟ್ ಸ್ವಚ್ಛಗೊಳಿಸುತ್ತಿದ್ದಿದ್ದನ್ನ ಪುಟ್ಟ ಪಲಕ್ ನೋಡಿದಾಗ, ತನ್ನ ದನಿಯಿಂದ, ತನ್ನ ಗಾಯನದಿಂದ ಮಕ್ಕಳಿಗೆ ನೆರವಾಗಬೇಕು ಅನ್ನೋ ನಿರ್ಧಾರವನ್ನ ಮಾಡಿದ್ದರು. ಇದೇ ಸಮಯಕ್ಕೆ ಸರಿಯಾಗಿ ಇಂದೋರ್ನ ನಿಧಿ ಬಾಲ ವಿದ್ಯಾ ಮಂದಿರದ ಶಿಕ್ಷಕರು, ತಮ್ಮ ವಿದ್ಯಾರ್ಥಿಯಾಗಿದ್ದ ಲೋಕೇಶ್ ಎನ್ನುವವನ ಹೃದಯ ಸಂಬಂಧಿ ಚಿಕಿತ್ಸೆಗಾಗಿ ಚಾರಿಟಿ ಶೋ ಒಂದನ್ನ ಮಾಡಿಕೊಡುವಂತೆ ಪಲಕ್ ಪೋಷಕರನ್ನ ಸಂಪರ್ಕಿಸುತ್ತಾರೆ. ಚಪ್ಪಲಿ ಮಾರಾಟ ಮಾಡ್ತಿದ್ದ ಲೋಕೇಶ್ನ ತಂದೆಗೆ ಶಸ್ತ್ರ ಚಿಕಿತ್ಸೆ ಮಾಡಿಸೋದಕ್ಕೆ ದೊಡ್ಡ ಮೊತ್ತದ ಹಣ ಇರಲ್ಲ. ಮಾರ್ಚ್ 2000 ಇಸವಿಯಲ್ಲಿ, ಬೀದಿ ವ್ಯಾಪಾರಕ್ಕೆ ಬಳಸುವ ಬಂಡಿಯನ್ನೇ ವೇದಿಕೆಯಾಗಿಸಿಕೊಂಡು ಪಲಕ್ ಮುಚ್ಚಲ್ ಪರ್ಫಾರ್ಮೆನ್ಸ್ ನೀಡೋ ಮೂಲಕ, 51 ಸಾವಿರ ರೂಪಾಯಿಯನ್ನ ಸಂಗ್ರಹಿಸಿ ಕೊಟ್ಟರು. ಇದನ್ನ ಗಮನಿಸಿದ ಬೆಂಗಳೂರಿನ ಖ್ಯಾತ ಹೃದ್ರೋಗ ತಜ್ಞರಾಗಿದ್ದ ದೇವಿಪ್ರಸಾದ್ ಶೆಟ್ಟಿಯವರು, ಲೋಕೇಶ್ಗೆ ಹಾರ್ಟ್ ಸರ್ಜಿಯನ್ನ ಸಂಪೂರ್ಣ ಉಚಿತವಾಗಿ ಮಾಡ್ತಾರೆ.
ಇತ್ತ ಪಲಕ್ರ ಪೋಷಕರು, ಸ್ಥಳೀಯ ಪೇಪರ್ಗಳಲ್ಲಿ, ಲೋಕೇಶ್ನಂತೆಯೇ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗೆ ಡೊನೇಷನ್ ನೀಡುವಂತೆ ಜಾಹೀರಾತು ನೀಡ್ತಾರೆ. ಇದರ ಫಲವಾಗಿ 33 ಮಕ್ಕಳಿಗೆ ವಿವಿಧ ರೀತಿಯ ಹೃದಯ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರೋ ಪಟ್ಟಿಯೂ ಸಿದ್ಧವಾಗುತ್ತೆ. 2000 ಇಸವಿಯಲ್ಲೇ ಸಾಲು ಸಾಲಾಗಿ ಪಲಕ್ ಚಾರಿಟಿ ಶೋಗಳನ್ನ ನಡೆಸ್ತಾರೆ. ಸಿಂಗಿಂಗ್ ಕಾನ್ಸರ್ಟ್ಗಳ ಮೂಲಕ 2 ಲಕ್ಷ 25 ಸಾವಿರ ರೂಪಾಯಿ ಕೂಡ ಸಂಗ್ರಹಿಸ್ತಾರೆ. ಈ ಹಣವನ್ನ ಬೆಂಗಳೂರು ಹಾಗೂ ಇಂದೋರ್ನ ಭಂಡಾರಿ ಆಸ್ಪತ್ರೆಯಲ್ಲಿರುವ ಮಕ್ಕಳ ಹಾರ್ಟ್ ಸರ್ಜರಿಗೆ ಬಳಸಲಾಗುತ್ತೆ. ಚಿಕ್ಕ ವಯಸ್ಸಲ್ಲೇ ಪಲಕ್ ಮಾಡೋ ಸೇವೆಯನ್ನ ಕಂಡು, ಆಕೆಯನ್ನ ಪ್ರೋತ್ಸಾಹಿಸೋ ಉದ್ದೇಶದಿಂದ ಇಂದೋರ್ನ ಟಿ. ಚೋಯ್ತ್ರಮ್ ಆಸ್ಪತ್ರೆ, ಹಾರ್ಟ್ ಸರ್ಜರಿಯ ಮೊತ್ತವನ್ನ ಶೇಕಡ 50ರಷ್ಟು ಕಡಿತಗೊಳಿಸುತ್ತೆ. 80 ಸಾವಿರ ರೂಪಾಯಿ ಶಸ್ತ್ರ ಚಿಕಿತ್ಸೆಯನ್ನ ಕೇವಲ 40 ಸಾವಿರ ರೂಪಾಯಿಗೆ ಮಾಡಲು ಶುರು ಮಾಡುತ್ತೆ. ಅಲ್ಲದೆ ಇದೇ ಆಸ್ಪತ್ರೆಯ ಸರ್ಜನ್ ಧೀರಜ್ ಗಾಂಧಿ ಅನ್ನೋರು, ಮುಚ್ಚಲ್ ಮೂಲಕ ಶಸ್ತ್ರ ಚಿಕಿತ್ಸೆಗೆ ಬರುವ ಮಕ್ಕಳಿಗೆ ತಮ್ಮ ಕನ್ಸಲ್ಟೇಷನ್ ಹಾಗೂ ಸರ್ಜರಿ ಫೀಸ್ ತೆಗೆದುಕೊಳ್ಳೋದಿಲ್ಲ ಅನ್ನೋ ನಿರ್ಧಾರ ಮಾಡ್ತಾರೆ.
ಇದನ್ನೂ ಓದಿ:‘ನಾನು ಸೋತಿದ್ದೇನೆ, ಆದರೆ..’ ನೋವಿನಲ್ಲೇ ಕುಸ್ತಿಗೆ ವಿದಾಯ.. ಫೋಗಟ್ ಭಾವುಕ ಪೋಸ್ಟ್ನಲ್ಲಿ ಏನಿದೆ..?
ಇದಾದ ಮೇಲೆ ಪಲಕ್ ಹಾಗೂ ಅವ್ರ ಕಿರಿಯ ಸೋದರ ಪಲಾಶ್ ಇಬ್ಬರೂ ದೇಶಾದ್ಯಂತ ಮ್ಯೂಸಿಕ್ ಶೋಗಳನ್ನ ನೀಡಲು ಆರಂಭಿಸಿದ್ರು. ದಿಲ್ ಸೇ ದಿಲ್ ತಕ್ ಹಾಗೂ ಸೇವ್ ಲಿಟ್ಲ್ ಹಾರ್ಟ್ಸ್ ಹೆಸರಿನಲ್ಲಿ ಇವರ ಚಾರಿಟಿ ಶೋಗಳು ಈಗ ದೇಶ, ವಿದೇಶಗಳಲ್ಲೂ ನಡೆಯುತ್ತೆ. ಪಲಕ್ ಹೃದಯ ಸಂಬಂಧಿ ಚಿಕಿತ್ಸೆಗಾಗಿ ದೇಣಿಗೆ ಸಂಗ್ರಹಿಸಿದ್ರೆ, ಸೋದರ ಪಲಾಶ್, ಮಕ್ಕಳ ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ತಮ್ಮ ಹಾಡುಗಳ ಮೂಲಕ ದೇಣಿಗೆ ಸಂಗ್ರಹಿಸ್ತಾರೆ. ನಾನು, ಈ ಕೆಲಸ ಆರಂಭಿಸಿದಾಗ, ಪುಟ್ಟ ಹುಡುಗಿಯ ಒಂದು ಚಿಕ್ಕ ಪ್ರಯತ್ನವಾಗಿತ್ತು ಅಷ್ಟೇ. ಇವತ್ತು ದೊಡ್ಡದಾಗಿ ಬೆಳೆದಿದ್ದು, ಇದು ನನ್ನ ಜೀವನದ ಗುರಿಯಾಗೋಗಿದೆ. ಇದು ನನ್ನದೇ ಜವಾಬ್ದಾರಿ ಅನಿಸುತ್ತದೆ. ದೇವರು ಇಂತಹ ಒಳ್ಳೆಯ ಕೆಲಸಕ್ಕಾಗಿ ನನ್ನನ್ನ ಆಯ್ಕೆ ಮಾಡಿಕೊಂಡಿರೋದು ನನಗೆ ನಿಜಕ್ಕೂ ಖುಷಿ ಅಂತ ಖುದ್ದು ಪಲಕ್ ಮುಚ್ಚಲ್ ಹೇಳಿಕೊಂಡಿದ್ದಾರೆ.
ಪಲಕ್ ಮುಚ್ಚಲ್ ಏಕ್ ಥಾ ಟೈಗರ್, ಆಶಿಕಿ 2, ಕಿಕ್, ಌಕ್ಷನ್ ಜಾಕ್ಸನ್, ಪ್ರೇಮ್ ರತನ್ ಧನ್ ಪಾಯೋ, ಎಂ.ಎಸ್. ಧೋನಿ ದಿ ಅನ್ಟೋಲ್ಡ್ ಸ್ಟೋರಿ, ಕಾಬಿಲ್, ಪಲ್ ಪಲ್ ದಿಲ್ ಕೇ ಪಾಸ್ ಸೇರಿದಂತೆ ಹಲವು ಹಿಟ್ ಚಿತ್ರಗಳ ಹಿಟ್ ಹಾಡುಗಳಿಗೆ ದನಿಯಾಗಿದ್ದಾರೆ. ಟೀನೇಜ್ಗೆ ಬರೋ ಮೊದಲೇ ಪಲಕ್ರ ಆಲ್ಬಮ್ಗಳು ಕೂಡ ರಿಲೀಸ್ ಆಗಿದ್ವು. ಇನ್ನೂ ಶಾಲೆಯಲ್ಲಿರುವಾಗಲೇ, ಪಲಕ್ರ 6 ಆಲ್ಬಮ್ಗಳನ್ನ ಟಿಪ್ಸ್ ಮ್ಯೂಸಿಕ್, ಟಿ ಸೀರೀಸ್ನ ಪ್ರತಿಷ್ಠಿತ ಸಂಸ್ಥೆಗಳು ಹೊರ ತಂದಿದ್ದವು. ಇನ್ನು, ತಮ್ಮ ಚಾರಿಟಿ ಶೋಗಳಲ್ಲಿ ಪಲಕ್ ಒಂದೊಂದು ಶೋನಲ್ಲೂ ಕನಿಷ್ಠವೆಂದ್ರೂ 40 ಹಾಡುಗಳನ್ನ ಹಾಡ್ತಾರೆ. ಇದರ ಬಗ್ಗೆಯೂ ಮಾತನಾಡಿರುವ ಪಲಕ್, ನನಗೆ ಫಿಲ್ಮ್ಗಳಲ್ಲಿ ಕೆಲಸ ಇಲ್ಲದೇ ಇದ್ದಾಗ, ನಾನು ಕಾನ್ಸರ್ಟ್ಗಳನ್ನ ಮಾಡ್ತಿದ್ದೆ. ಮೂರು ಮೂರು ಗಂಟೆಗಳ ಕಾಲ ಹಾಡಿ, ಒಂದು ಮಗುವಿಗಾಗಿ ಡೊನೇಷನ್ ಕಲೆಕ್ಟ್ ಮಾಡ್ತಿದ್ದೆ. ನನ್ನ ಹಾಡುಗಳು ಪಾಪ್ಯುಲರ್ ಆಗುತ್ತಿದ್ದಂತೆ, ನನ್ನ ರೆಮ್ಯುನರೇಷನ್ ಕೂಡ ಹೆಚ್ಚಾಗುತ್ತಾ ಹೋಯ್ತು. ಮೊದಲಿಗೆ ಒಂದು ಕಾನ್ಸರ್ಟ್ನಿಂದ ಓರ್ವ ಮಗುವಿನ ಚಿಕಿತ್ಸೆಗೆ ಮಾತ್ರ ಹಣ ಸಂಗ್ರಹವಾಗ್ತಿತ್ತು. ನಂತರ ಒಂದೇ ಕಾನ್ಸರ್ಟ್ನಿಂದ ನಾನು 13 ರಿಂದ 14 ಮಕ್ಕಳ ಚಿಕಿತ್ಸೆಗೆ ಬೇಕಾಗುಷ್ಟು ಹಣವನ್ನ ಸಂಗ್ರಹಿಸಲು ಶುರು ಮಾಡಿದ್ದೆ. ಹೀಗಾಗಿ ನಾನು ಇದ್ದನ್ನೇ ಮುಂದುವರಿಸುತ್ತಿದ್ದೇನೆ ಅಂತ ಪಲಕ್ ಹೇಳಿಕೊಂಡಿದ್ದಾರೆ.
2001ರಲ್ಲಿ ಗುಜರಾತ್ನಲ್ಲಿ ಸಂಭವಿಸಿದ ಭೂಕಂಪದ ಸಂದರ್ಭದಲ್ಲಿ ಪಲಕ್ 10 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದ್ರು. 2003ರಲ್ಲಿ ಹೃದಯಲ್ಲಿ ರಂದ್ರ ಹೊಂದಿದ್ದ ಪಾಕಿಸ್ತಾನದ ಮಗುವಿನ ಪೋಷಕರಿಗೂ ಶಸ್ತ್ರ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನ ನೀಡಿದ್ದರು. ಸದ್ಯ ಪಲಕ್, ತಮ್ಮ ಹೆಸರಿನಲ್ಲೇ ಪಲಕ್ ಮುಚ್ಚಾಲ್ ಹಾರ್ಟ್ ಫೌಂಡೇಷನ್ ಅನ್ನೋ ಸೇವಾ ಸಂಸ್ಥೆಯನ್ನ ನಡೆಸುತ್ತಿದ್ದಾರೆ. ಇದರ ಮೂಲಕವೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2006ರ ವೇಳೆಗೆ 1.2 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸೋ ಮೂಲಕ ತಮ್ಮ ಫೌಂಡೇಷನ್ನಿಂದ 243 ಮಕ್ಕಳಿಗೆ ಪಲಕ್ ನೆರವಾಗಿದ್ರು. ಅಲ್ಲದೆ, ಹಣದ ಕೊರತೆಯಿಂದಾಗಿ ಹಾರ್ಟ್ ಆಪರೇಷನ್ಗಳು ನಿಲ್ಲಬಾರದು ಅನ್ನೋ ಕಾರಣಕ್ಕೆ ಇಂದೋರ್ನ ಭಂಡಾರಿ ಆಸ್ಪತ್ರೆ, ಪಲಕ್ ಮುಚ್ಚಾಲ್ ಹಾರ್ಟ್ ಫೌಂಡೇಷನ್ಗೆ 10 ಲಕ್ಷ ರೂಪಾಯಿವರೆಗೂ ಸಾಲದ ಮಿತಿಯನ್ನೂ ನೀಡಿದೆ.
2009ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 1,460 ಚಾರಿಟಿ ಶೋಗಳನ್ನ ನೀಡಿದ್ದ ಪಲಕ್, 1.71 ಕೋಟಿ ರೂಪಾಯಿ ಸಂಗ್ರಹಿಸಿ, 338 ಮಕ್ಕಳ ಜೀವವನ್ನ ಉಳಿಸ್ತಾರೆ. ಬಾಲಿವುಡ್ನಲ್ಲಿ ಆಫರ್ಗಳು ಸಿಕ್ಕಾಗಲೂ ತಮ್ಮ ಗುರಿಯಿಂದ ಹಿಂದೆ ಸರಿಯದ ಪಲಕ್ ಮುಚ್ಚಲ್ ಈವರೆಗೂ ಒಟ್ಟಾರೆಯಾಗಿ 3 ಸಾವಿರಕ್ಕೂ ಹೆಚ್ಚು ಮಕ್ಕಳ ಜೀವವನ್ನ ಉಳಿಸಿದ್ದಾರೆ. ಅವರ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗೋ ಮೂಲಕ ಎಲ್ಲರ ಹಾರ್ಟ್ ಗೆದ್ದಿದ್ದಾರೆ. ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಆಗೋ ಸಂದರ್ಭದಲ್ಲಿ ವೈದ್ಯರು, ಆಪರೇಷನ್ ಥಿಯೇಟರ್ನಲ್ಲಿ ಪಲಕ್ಗೂ ಇರೋದಕ್ಕೆ ಅವಕಾಶವನ್ನ ಕೊಡ್ತಾರೆ. ತಮ್ಮದೇ ಸರ್ಜಿಕಲ್ ಗೌನ್ ಧರಿಸಿ ಹೋಗುವ ಪಲಕ್, ಆಪರೇಷನ್ ಥಿಯೇಟರ್ನಲ್ಲಿ ಜೈನ್ ನಾವ್ಕರ್ ಮಂತ್ರವನ್ನ ಪಠಿಸುತ್ತಿರುತ್ತಾರೆ. ಇನ್ನು, ಪಲಕ್ ನಡೆಸುವ ಚಾರಿಟಿ ಶೋಗಳಿಂದ ಅವರ ಫೌಂಡೇಷನ್ಗೆ ಮಾತ್ರ ಹಣ ಹೋಗುತ್ತೆ. ವೈಯಕ್ತಿಕವಾಗಿ ಪಲಕ್ ಯಾವುದೇ ಹಣವನ್ನ ಪಡೆಯೋದಿಲ್ಲ. ಆದ್ರೆ, ತನ್ನ ಕಾರ್ಯದ ಮೂಲಕ ಗುಣಮುಖವಾಗೋ ಪ್ರತಿ ಮಗುವಿಗೆ ಒಂದರಂತೆ ಪಲಕ್ ಒಂದು ಗೊಂಬೆಯನ್ನ ಮಾತ್ರ ಪಡೆಯುತ್ತಾರೆ. 3 ಸಾವಿರಕ್ಕೂ ಹೆಚ್ಚು ಮಕ್ಕಳ ಹೃದಯವನ್ನ ಗೆದ್ದಿದ್ದರೂ, ಈಗಲೂ ಪಲಕ್ರ ಹಾರ್ಟ್ ಫೌಂಡೇಷನ್ನಲ್ಲಿರುವ ಲಿಸ್ಟ್ನಲ್ಲಿ 400ಕ್ಕೂ ಹೆಚ್ಚು ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇದೆ. ಇದಕ್ಕಾಗಿ ಪಲಕ್ ಮುಚ್ಚಲ್ ಕೂಡ ಅವಿರತ ಶ್ರಮ ಹಾಕ್ತಿದ್ದು, ಅವ್ರ ಸೇವೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ.
ವಿಶೇಷ ವರದಿ: ನವೀನ್ ಕುಮಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ