/newsfirstlive-kannada/media/post_attachments/wp-content/uploads/2025/01/Naxals.jpg)
ಬೆಂಗಳೂರು: ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಘಟಿಸಿದ ಘಟನೆ. ದಶಕಗಳ ಕಾಲ ಕಾಡಿನಲ್ಲಿ ಬಂದೂಕು ಹಿಡಿದು ಬದುಕುತ್ತಿದ್ದ ನಕ್ಸಲರು ಸರ್ಕಾರದ ಎದುರು ಶರಣಾಗಿದ್ದು ಹೊಸ ಸಂಕ್ರಮಣ ಆಗಿದೆ. 4 ರಾಜ್ಯಗಳಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ನಕ್ಸಲರು ಮಂಡಿಯೂರಿದ್ದು ಇದರೊಂದಿಗೆ ಕರ್ನಾಟಕದಲ್ಲಿ ನಕ್ಸಲರ ಯುಗಾಂತ್ಯವಾಗಿದೆ.
ವ್ಯವಸ್ಥೆ ವಿರುದ್ಧ ಸಿಡಿದೆದ್ದು ಭೂಗತರಾಗಿದ್ದ ನಕ್ಸಲರಿಗೆ ಈಗ ಶಾಂತಿಯ ಮಂತ್ರೋಪದೇಶ ಆಗಿದೆ. ಹಲವು ವರ್ಷಗಳಿಂದ ಅಡವಿಯೊಳಗೆ ಅಡಗಿ ಕುಳಿತು ಸಂಘರ್ಷದ ಹಾದಿ ತುಳಿದಿದ್ದವರಿಗೆ ಪ್ರಾಯಶ್ಚಿತ್ತವಾಗಿದೆ. 4 ದಶಕಗಳ ಬಳಿಕ ಕರ್ನಾಟಕ ನಕ್ಸಲ್ ಮುಕ್ತ ಆಗುವ ಮುನ್ನುಡಿ ಬರೆದಿದೆ.
ಸರ್ಕಾರದ ಎದುರು ಶರಣು
ಕಾಫಿನಾಡಿನ ದಟ್ಟಾರಣ್ಯದಲ್ಲಿ ಅಡಗಿದ್ದ ರಾಜ್ಯದ ಮೋಸ್ಟ್ ವಾಂಟೆಡ್ ನಕ್ಸಲರು ಕೊನೆಗೂ ಮುಖ್ಯವಾಹಿನಿಗೆ ಮರಳಿದ್ದಾರೆ. ಇವತ್ತು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ. ಪರಮೇಶ್ವರ್ ಎದುರು ಶರಣಾಗಿದ್ದಾರೆ. 24 ವರ್ಷಗಳ ಬಳಿಕ 6 ನಕ್ಸಲರು ಶರಣಾಗಿದ್ದು ಕರ್ನಾಟಕದ ಇತಿಹಾಸದಲ್ಲಿಯೇ ಅತಿ ದೊಡ್ಡ ನಕ್ಸಲರ ಗುಂಪಿನ ಶರಣಾಗತಿಯಾದಂತಾಗಿದೆ. ಶಾಂತಿಗಾಗಿ ನಾಗರಿಕ ಸಮಿತಿಯ ಸದಸ್ಯರು ನಕ್ಸಲರ ಜೊತೆ ಸಂಧಾನ ನಡೆಸಿ ಶರಣಾಗತಿಗೆ ಮನವೊಲಿಸಿದ್ದರು.
ಚಿಕ್ಕಮಗಳೂರು ಡಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ಶರಣಾಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ಕೊನೇ ಘಳಿಗೆಯಲ್ಲಿ ಪೊಲೀಸರ ಬಿಗಿಭದ್ರತೆಯೊಂದಿಗೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದು ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಶರಣಾಗಿದ್ದಾರೆ. ಇನ್ನು ಶರಣಾಗತಿಯಾಗಿರುವ ನಕ್ಸಲರು ಒಳ್ಳೆಯ ಪ್ರಜೆಗಳಾಗಿ ಬದುಕಲು ಅವಕಾಶ ಕೊಡಬೇಕು ಅಂತ ಪ್ರಗತಿಪರರು ಮನವಿ ಮಾಡಿದ್ದಾರೆ.
ಇನ್ನು 6 ಜನ ನಕ್ಸಲರ ಶರಣಾಗತಿ ಆಗಿದ್ದು ಮತ್ತೋರ್ವ ರವಿ ಎಂಬ ನಕ್ಸಲ್ ಶರಣಾಗತಿ ಬಾಕಿ ಇದೆ. ಕರ್ನಾಟಕ ಮೂಲದವನಲ್ಲದ ರವಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ರವಿ ಸಂಪರ್ಕಿಸುವ ಯತ್ನ ಮುಂದುವರಿದಿದ್ದು, ಶೀಘ್ರವೇ ಶರಣಾಗುವ ಸಾಧ್ಯತೆ ಇದೆ.
ಒಟ್ಟಾರೆ ಬಂದೂಕು ಕೆಳಗಿಳಿಸಿ ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲರಿಗೆ ಇದು ಸುಗ್ಗಿ ಕಾಲ. ನಕ್ಸಲ್ ನಾಯಕ ವಿಕ್ರಂಗೌಡ ಎನ್‌ಕೌಂಟರ್ ಬಳಿಕ ದಿಕ್ಕು ತಪ್ಪಿದ್ದ ನಕ್ಸಲರು ಶರಣಾಗತಿ ಆಗಿರೋದು ಆಶದಾಯಕ ಬೆಳವಣಿಗೆ ಆಗಿದೆ.
ಇದನ್ನೂ ಓದಿ:2025ರ ಚಾಂಪಿಯನ್ಸ್ ಟ್ರೋಫಿ; ಸ್ಟಾರ್ ಎಂಟ್ರಿಯಿಂದ ಟೀಮ್ ಇಂಡಿಯಾಗೆ ಬಂತು ಆನೆಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ