/newsfirstlive-kannada/media/post_attachments/wp-content/uploads/2024/12/SM_KRISHAN_RAJKUMAR.jpg)
ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಇಂದು ನಿಧನರಾಗಿದ್ದಾರೆ. 92 ವರ್ಷಗಳು ಆಗಿದ್ದ ಎಸ್.ಎಂ ಕೃಷ್ಣ ಅವರಿಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ತಡರಾತ್ರಿ ಸದಾಶಿವ ನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವರನಟ ಡಾ.ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದನು. ಈ ವೇಳೆ ಸಿಎಂ ಆಗಿದ್ದ ಎಸ್.ಎಂ ಕೃಷ್ಣ ಬಹಳಷ್ಟು ನೊಂದುಕೊಂಡಿದ್ದರು.
ಮೇರುನಟ ಡಾ.ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿರುವುದು ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಅವರ ಅಪಹರಣ ಮಾಡಿರುವುದು ರಾಜ್ಯದ ಮುಜುಗರದ ಜೊತೆಗೆ ಸಿಎಂ ಆಗಿದ್ದ ಎಸ್.ಎಂ ಕೃಷ್ಣ ಅವರಿಗೂ ಮಾನಸಿಕ ಚಿಂತೆ ತಂದಿಟ್ಟಿತ್ತು. ರಾಜ್ಯದ ಹಿರಿಯ ಸಿನಿಮಾ ನಟರನ್ನು ಕಿಡ್ನಾಪ್ ಮಾಡಿರುವುದು ಅಭಿಮಾನಿಗಳಿಗೆ ಸಹಿಸದ ವಿಚಾರವಾಗಿತ್ತು. ಅಭಿಮಾನಿಗಳು ಸಿಡಿದೆದ್ದರೇ ಏನು ಗತಿ ಎನ್ನುವ ಆಲೋಚನೆ ಎಸ್.ಎಂ ಕೃಷ್ಣರನ್ನ ಕಾಡಿತ್ತಿ.
ಕಾಡುಗಳ್ಳ ವೀರಪ್ಪನ್ ಒಂದು ವೇಳೆ ಡಾ.ರಾಜ್ಕುಮಾರ್ ಅವರಿಗೆ ಏನಾದರೂ ಹಾನಿ ಮಾಡಿದರೆ ಸಮಸ್ಯೆ ದೊಡ್ಡದಾಗುತ್ತದೆ. ಬೆಂಗಳೂರಲ್ಲಿ ತಮಿಳರು ಇದ್ದಾರೆ. ಇವರ ವಿರುದ್ಧ ಕನ್ನಡಿಗರು ಸಿಡಿದೆದ್ದರೇ ರಾಜ್ಯದ ಚಿತ್ರಣವೇ ಬೇರೆ ರೀತಿ ಆಗುತ್ತದೆ ಅಂತ ಎಸ್.ಎಂ ಕೃಷ್ಣರ ಮನಸ್ಸು ಕದಡಿತ್ತು. ರಾಜ್ಕುಮಾರ್ ಅವರನ್ನು ವಾಪಸ್ ಕರೆದುಕೊಂಡು ಬರುವುದು ಸಿಎಂಗೆ ದೊಡ್ಡ ಸವಾಲಾಗಿತ್ತು.
ಈ ಸಂಬಂಧ ಎಸ್.ಎಂ ಕೃಷ್ಣ ಅವರು ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ರಾಜಕೀಯ ನಾಯಕರು ಕರುಣಾನಿಧಿ, ಜಯಲಲಿತಾ ಸೇರಿ ಇತರೆ ನಾಯಕರನ್ನು ಭೇಟಿ ಮಾಡಿದ್ದರು. ರಾಜ್ಕುಮಾರ್ ಅವರನ್ನು ಬಿಡಿಸಿಕೊಂಡು ಬರುವುದು ಹೇಗೆ ಎಂದು ಅವರ ಜೊತೆ ಚರ್ಚೆ ಮಾಡಿದ್ದರು. ಮುಂದೆ ಆಗುವ ಅನಾಹುತಗಳ ಬಗ್ಗೆಯು ಎಸ್.ಎಂ ಕೃಷ್ಣ ಅವರು ತಮಿಳುನಾಡಿನ ರಾಜಕೀಯ ನಾಯಕರಿಗೆ ತಿಳಿ ಹೇಳಿದ್ದರು. ರಾಜ್ಕುಮಾರ್ ಅವರನ್ನು ಕರೆದುಕೊಂಡು ಬರುವಲ್ಲಿ ಸತತ ಪ್ರಯತ್ನ ಪಟ್ಟಿದ್ದರು.
ಇದನ್ನೂ ಓದಿ: ‘ಕರ್ನಾಟಕ ಸದಾ ಋಣಿಯಾಗಿರುತ್ತದೆ’ -SM ಕೃಷ್ಣ ಅಗಲಿಕೆಗೆ ಸಂತಾಪ ಸೂಚಿಸಿದ ಸಿಎಂ ಸಿದ್ದರಾಮಯ್ಯ
ಡಾ.ರಾಜ್ ಕುಟುಂಬದ ಜೊತೆಯು ಎಸ್.ಎಂ ಕೃಷ್ಣ ಅವರು ನಿರಂತರ ಸಂಪರ್ಕದಲ್ಲಿದ್ದರು. ರಾಜ್ಕುಮಾರ್ ಪತ್ನಿ ಪಾರ್ವತಮ್ಮ ಅವರನ್ನು ಭೇಟಿಯಾಗಿ ಮಾತನಾಡಿ, ಎಲ್ಲ ಮಾಹಿತಿಗಳನ್ನು ಪಡೆಯುತ್ತಿದ್ದರು. ಇವರ ನಿರಂತರ ಫಲವಾಗಿ 108 ದಿನಗಳ ಬಳಿಕ ಡಾ.ರಾಜ್ಕುಮಾರ್ ಅವರು ಆರೋಗ್ಯವಾಗಿ, ಸುರಕ್ಷಿತವಾಗಿಯೇ ವಾಪಸ್ ರಾಜ್ಯಕ್ಕೆ ಬಂದರು. ಈ ವೇಳೆ ಇಡೀ ಕರ್ನಾಟಕವೆಲ್ಲಾ ದೊಡ್ಡ ಸಂಭ್ರಮಾಚರಣೆ ಮಾಡಿತು. ಡಾ.ರಾಜ್ಕುಮಾರನ್ನ ಕರೆದುಕೊಂಡು ಬಂದ ಮೇಲೆ ಎಸ್.ಎಂ ಕೃಷ್ಣ ಅವರು ಸಂತಸ ಪಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ