/newsfirstlive-kannada/media/post_attachments/wp-content/uploads/2025/01/Pratika_Rawal_Smriti_Mandhana.jpg)
ಮಹಿಳೆಯರ ಐಸಿಸಿ ಚಾಂಪಿಯನ್ಶಿಪ್ ಟೂರ್ನಿಯ 3ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತದ ಮಹಿಳಾ ತಂಡ ಬೃಹತ್ ಮೊತ್ತದ ರನ್ಗಳನ್ನ ಕಲೆ ಹಾಕಿ ಐತಿಹಾಸಿಕ ದಾಖಲೆ ಬರೆದಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಹಾಗೂ ಪ್ರತೀಕಾ ರಾವಲ್ ಅವರ ಅತ್ಯದ್ಭುತವಾದ ಶತಕದ ನೆರವಿನಿಂದ 50 ಓವರ್ಗಳಲ್ಲಿ 5 ವಿಕೆಟ್ಗೆ 435 ರನ್ಗಳನ್ನ ಸಂಗ್ರಹಿಸಿದೆ.
ಗುಜರಾತ್ನಲ್ಲಿನ ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಸ್ಮೃತಿ ಮಂದಾನ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ನಾಯಕಿ ಸ್ಮೃತಿ ಮಂದಾನ ಹಾಗೂ ಪ್ರತೀಕಾ ರಾವಲ್, ಐರ್ಲೆಂಡ್ನ ಮಹಿಳಾ ಮಣಿಗಳನ್ನ ಎಡಬಿಡದೇ ಕಾಡಿದರು. ಓಪನಿಂಗ್ ಬ್ಯಾಟಿಂಗ್ ಪಾರ್ಟನರ್ಶಿಪ್ ಬ್ರೇಕ್ ಮಾಡೋದು ಹೇಗೆ ಎಂದು ಐರ್ಲೆಂಡ್ ಆಟಗಾರರ್ತಿಯರು ತಲೆ ಕೆಡಿಸಿಕೊಂಡಿದ್ದರು.
ಏಕೆಂದರೆ ಅತಿ ವೇಗದ ಶತಕ ಸಿಡಿಸಿದ ಸ್ಮೃತಿ ಮಂದಾನ ಕೇವಲ 70 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ಬರೆದರು. ಈ ಹಿಂದೆ ಈ ದಾಖಲೆ ನಾಯಕಿ ಹರ್ಮನ್ಪ್ರೀತ್ ಕೌರ್ ಹೆಸರಲ್ಲಿತ್ತು. ಅವರು 87 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆದರೆ ಈಗ ಈ ದಾಖಲೆ ಸ್ಮೃತಿ ಮಂದಾನ ಹೆಸರಿಗೆ ವರ್ಗವಾಗಿದೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಸ್ಮೃತಿ ಮಂದಾನ ಕೇವಲ 80 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಮೇತ 135 ರನ್ಗಳನ್ನು ಬಾರಿಸಿದರು.
ಸ್ಮೃತಿ ಮಂದಾನ ಜೊತೆ ತಾಳ್ಮೆಯ ಬ್ಯಾಟಿಂಗ್ ಮಾಡಿದ ಯುವ ಆಟಗಾರ್ತಿ ಪ್ರತೀಕಾ ರಾವಲ್ ತಮ್ಮ ಚೊಚ್ಚಲ ಶತಕ ಸಿಡಿಸಿದರು. 100 ಎಸೆತಗಳಲ್ಲಿ 100 ರನ್ ಬಾರಿಸಿ ಐರ್ಲೆಂಡ್ ಬೌಲರ್ಗಳನ್ನು ಬೆವರಿಳಿಸಿದರು. ಟೂರ್ನಿಯಲ್ಲಿ ತಮ್ಮ ಸಮೃದ್ಧ ಫಾರ್ಮ್ ಅನ್ನು ಮುಂದುವರೆಸಿದ ಅವರು ಈ ಪಂದ್ಯದಲ್ಲಿ ಒಟ್ಟು 129 ಎಸೆತಗಳನ್ನು ಎದುರಿಸಿದ ಪ್ರತೀಕಾ ರಾವಲ್ 1 ಸಿಕ್ಸರ್, 20 ಬೌಂಡರಿಗಳಿಂದ 154 ರನ್ ಗಳಿಸಿ ಸಂಭ್ರಮಿಸಿದರು. ರಿಚಾ ಘೋಷ್ ಕೂಡ ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು.
ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ಗೆ ಬಿಗ್ ಶಾಕ್; ಗಂಭೀರ್ ಪವರ್ ಕಟ್ ಮಾಡಿದ ಬಿಸಿಸಿಐ ಬಾಸ್ಗಳು
ಬೌಂಡರಿಗಳನ್ನು ಬಾರಿಸಿದ ತಂಡದ ಪೈಕಿ ಟೀಮ್ ಇಂಡಿಯಾ 3ನೇ ಸ್ಥಾನ ಪಡೆದುಕೊಂಡಿದೆ. ನ್ಯೂಜಿಲೆಂಡ್ 71 ಹಾಗೂ 59 ರನ್ಗಳಿಂದ ಮೊದಲ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕೇವಲ 5 ವಿಕೆಟ್ಗೆ 435 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಮಹಿಳಾ ಟೂರ್ನಿಯಲ್ಲೇ 4ನೇ ಅತ್ಯಧಿಕ ರನ್ ಗಳಿಸಿದ ಕೀರ್ತಿಗೆ ಭಾರತ ಪಾತ್ರವಾಯಿತು.
ಅತ್ಯಧಿಕ ರನ್ ಗಳಿಸಿದ ವಿಶ್ವದ ಮಹಿಳಾ ತಂಡಗಳು
- 2018ರಲ್ಲಿ ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ- 491/4
- 1997 ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ತಂಡ- 455/5
- 2018ರಲ್ಲಿ ಐರ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ- 440/3
- 2025 ಐರ್ಲೆಂಡ್ ವಿರುದ್ಧ ಭಾರತ ತಂಡ- 435/5
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ