/newsfirstlive-kannada/media/post_attachments/wp-content/uploads/2024/11/SANDHYA-3.jpg)
ದಾರುಣ, ನಿಜಕ್ಕೂ ಈ ಸಾವು ಘೋರ. ತಪ್ಪೇ ಮಾಡದೇ ಮಸಣ ಸೇರಿದ್ದು ಜೇನದನಿ. ಆ ಧ್ವನಿಯಲ್ಲಿ ಅಪಾರ ಜೀವನೋತ್ಸಾಹ ತುಂಬಿತ್ತು. ಆ ಮಾತು ಮಾನೋಲ್ಲಾಸ ತರುತ್ತಿತ್ತು. ಆ ಮುಖ ಚೈತನ್ಯದ ಚಿಲುಮೆ ಆಗಿತ್ತು. ಯಾರದ್ದೋ ಕ್ರೌರ್ಯಕ್ಕೆ ರಕ್ತಸಿಕ್ತಗೊಂಡು ಸತ್ತಿದ್ದು ಪ್ರತಿಭಾವಂತೆ. ನಾಳೆಯೇ ಅದ್ಭುತ ಎಂದವಳ ನಾಳೆಗಳ ಹೊಸಕಿದ್ದು ಯಾರು? ಕೆಂಗೇರಿ ಬಸ್ ಸ್ಟ್ಯಾಂಡ್ ಬಳಿ ನಿಜಕ್ಕೂ ಆಗಿದ್ದೇನು? ನಿರ್ದಯಿ ವ್ಯವಸ್ಥೆಯಲ್ಲಿ ಆ ಸಂಜೆ ಏನೇನಾಯ್ತು? ಅಷ್ಟಕ್ಕೂ ಯಾರೀ ಬೆಳದಿಂಗಳ ಬಾಲೆ ಇದೆಲ್ಲದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ನಾಳೆಗಳ ನಂಬಿಕೆಯ ನಿತ್ಯಸತ್ಯ ನುಡಿದ ಸುಭಾಷಿಣಿ. ಕಿವಿಗೆ ಹಾಲ್ಜೇನ ಸುರಿದು ಧ್ವನಿಯಲ್ಲೇ ನಕ್ಕ ಸುಹಾಸಿನಿ. ದಿಕ್ಕೆಟ್ಟ ಬದುಕಿಗೆ ಸ್ಫುಟವಿಟ್ಟ ಸ್ಫೂರ್ತಿ ತುಂಬಿದ ಮನಸ್ವಿನಿ. ಸದಾ ಚೈತನ್ಯದ ಚಿಲುಮೆಯಂತಿದ್ದ ಸೌದಾಮಿನಿ. ಬಿರಿದ ಮಲ್ಲಿಗೆ ಮನಸ್ಸಿನ ಧ್ವನಿಯ ದುಂಡು ಮಲ್ಲಿಗೆ ನಮ್ಮೊಂದಿಗಿಲ್ಲ. ಆದರೆ, ಜೇನು ಅದ್ದಿದ ಅದೇ ಮಧುರ ಮಾತು ಅಳಿಸುತ್ತಿದೆ.
ಇದನ್ನೂ ಓದಿ:ಸಂಧ್ಯಾ ಕೇಸ್; ಹಂತಕನ ತಂದೆಯಿಂದ ಕಾಂಪ್ರಮೈಸ್ಗೆ ಯತ್ನ; ಎಷ್ಟು ಕೋಟಿ ಆಫರ್ ಕೊಟ್ರು ಗೊತ್ತಾ?
ಸಂಧ್ಯಾ, ತುಟಿ ತೆರೆದಲ್ಲಿ ಅಲ್ಲೊಂದು ಸುಮಧುರ ಗೀತೆ ತೇಲಿ ಬರುತ್ತಿತ್ತು, ಅಂತಹ ಅದ್ಭುತ ಹಾಡುಗಾರ್ತಿ. ಕೈಯಲ್ಲಿ ಕುಂಚ ಹಿಡಿದ್ರೆ ಉತ್ತಮ ಚಿತ್ರಗಾರ್ತಿ. ಬಸವಳಿದ ಕಿವಿಗೆ ಜೀವನ ಸ್ಫೂರ್ತಿ. ಬದುಕನ್ನ ಚೆಂದದ ಚಿತ್ತಾರ ಆಗಿಸಿಕೊಂಡಿದ್ದ ಕಲಾಕೃತಿ. ಸೋತವರನ್ನು ಗೆದ್ದೇ ಗೆಲ್ಲುವೆ ಅನ್ನೋ ಪ್ರೇರಕ ಶಕ್ತಿ. ಸಿನಿಮಾ, ಸೀರಿಯಲ್ಸ್ಗೆ ವಾಯ್ಸ್ ಓವರ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡಿದ್ರು ಈ ಬೆಳದಿಂಗಳ ಬಾಲೆ. ಇಂಥಾ ಜೀವನೋತ್ಸಾಹದ ಚಿಲುಮೆ ಇವತ್ತು ಬತ್ತಿದೆ. ಆದರೇ, ಜೇನದನಿಯೊಂದು ಅಂತ್ಯ ಕಂಡಿದ್ದು ಮಾತ್ರ ದಾರುಣ.
ಬದುಕು ಜಟಕಾಬಂಡಿ ಇದ್ದಂತೆ. ಜಾಗ್ರತೆ ಇಂದಿರಬೇಕು. ತಪ್ಪು ತಿದ್ದಿ ನಡೀಬೇಕು. ತಿದ್ದಿಕೊಂಡು ಮುನ್ನುಗುವುದೇ ಜೀವನ ಅಂತ ಹೇಳಿದ್ರು. ಇಂಥದ್ದೊಂದು ಸ್ಫೂರ್ತಿಯ ಮಾತಿಗೆ ಕಾರಿನ ಉದಾಹರಣೆ ಕೊಟ್ಟಿದ್ದರು. ಆದರೇ, ಒಂದು ಕಾರೇ ಜೇನ ದನಿಯನ್ನು ನುಂಗಿ ಹಾಕಿದೆ. ನಿಜಕ್ಕೂ, ಅದ್ಭುತ ಮಾತುಗಾತಿ ದಾರುಣ ಅಂತ್ಯ ಕಾಣೋಕ್ಕೆ ಕಾರೇ ಕಾರಣವಾಯ್ತು. ನೋಡಿ, ಕಾರಿನ ಸ್ಥಿತಿ ನೋಡಿದ್ರೆ ಸಾಕು.. ಸಂಧ್ಯಾಗೆ ಏನಾಯ್ತು ಅನ್ನೋದು ಅರ್ಥವಾಗುತ್ತದೆ. ಆ ದಾರುಣ ಕಣ್ಮುಂದೆ ಬಂದು ನಿಲ್ಲುತ್ತದೆ.
ಬೆನ್ಜ್ ಕಾರು ಅಪಘಾತ, 10 ಅಡಿ ಎತ್ತರಕ್ಕೆ ಹಾರಿತ್ತು ದೇಹ!
ಆ ದಾರುಣ ದೃಶ್ಯ ಹೇಗಿತ್ತು ಅಂದ್ರೆ ನೋಡಿದ ಜನರೇ ಶಾಕ್ ಆಗಿದ್ರು. ಭರ್ತಿ 10 ಅಡಿ ಎತ್ತರಕ್ಕೆ ಸಂಧ್ಯಾ ದೇಹ ಹಾರಿ ಕೆಳಗೆ ಬಿದ್ದಿತ್ತು. ಕುಡಿದ ಗತ್ತಿನ ಮತ್ತಿನ ದೌಲತ್ತಿನಲ್ಲಿ ರಸ್ತೆ ದಾಟುತ್ತಿದ್ದ ಸಂಧ್ಯಾರನ್ನ ಗುದ್ದಿದ್ದ 21 ವರ್ಷದ ಧನುಷ್.
ಕೆಂಗೇರಿ ಬಸ್ ನಿಲ್ದಾಣದ ಆ ಒಂದು ಜಾಗದಲ್ಲೇ ಸಂಧ್ಯಾ ದಾರುಣವಾಗಿ ಅಪಘಾತಕ್ಕೆ ಬಲಿ ಆಗಿದ್ದಾಳೆ. ಆ ಕ್ಷಣ ಟ್ರಾಫಿಕ್ ಪೊಲೀಸರು ನಡೆದುಕೊಂಡ ರೀತಿ ಜನರನ್ನ ಆಕ್ರೋಶಕ್ಕೆ ದೂಡಿತ್ತು. ನಿಜಕ್ಕೂ ಈ ಕೊಲೆಗಾರನ ಜೊತೆ ಪೊಲೀಸರು ಶಾಮೀಲಾಗಿದ್ದಾರಾ? ಇಂಥದ್ದೊಂದು ಪ್ರಶ್ನೆಯನ್ನ ಅಲ್ಲಿದ್ದ ಜನರೇ ಕೇಳುತ್ತಿದ್ದಾರೆ.
ಅಲ್ಲೊಬ್ಬ ಪೊಲೀಸ್ ಆಫಿಸರ್ ಸಾರ್ವಜನಿಕರು ಆ ಕ್ಷಣದ ದೃಶ್ಯ ಸೆರೆ ಹಿಡಿಯುತ್ತಿದ್ದರೆ ಅವರಿಗೆ ಧಮ್ಕಿ ಹಾಕಿದ ಘಟನೆಯೂ ನಡೆದಿದೆ. ಇಕ್ಕೂ ನಿನಗೂ ಏನು ಸಂಬಂಧ ಅನ್ನೋ ಮೂಲಕ ಶ್ರೀಸಾಮಾನ್ಯ ಏನೇ ಆದ್ರೂ ಕಿವಿ ಬಾಯಿ ಮುಚ್ಕೊಂಡು ಸುಮ್ಮನಿರಬೇಕು ಅಂತಾ ಯೂನಿಫಾರ್ಮ್ ಹಾಕ್ಕೊಂಡು ಪಾಠ ಮಾಡಿದ್ದಾರೆ. . ಮೃತ ಸಂಧ್ಯಾ ವಯಸ್ಸಿನ ಮಗಳೋ? ಮಗನೋ? ಈ ಆಫೀಸರ್ ಮನೆಯಲ್ಲಿ ಇರೋದಿಲ್ವಾ? ಯಾಕಂದ್ರೆ, ಟ್ರಾಫಿಕ್ ಪೊಲೀಸ್ ಆಗಿದ್ದುಕೊಂಡು ಸಿವಿಲ್ ಪೊಲೀಸ್ ರೇಂಜ್ನಲ್ಲಿ ಎಗರಾಡಿದ ದೃಶ್ಯ ಇದೀಗ ವೈರಲ್ ಆಗ್ತಿದೆ. ಇದೇ ದೃಶ್ಯಗಳೇ ಸಂಧ್ಯಾಗೆ ನ್ಯಾಯ ಸಿಗುತ್ತೋ? ಇಲ್ಲವೋ? ಅನ್ನೋ ಅನುಮಾನಕ್ಕೆ ಕಾರಣವಾಗಿರೋದು.
ದೇಹದ ಎಲ್ಲಾ ಮೂಳೆಗಳು ಮುರಿದು ಪೀಸ್ ಪೀಸ್ ಆಗಿದ್ದವು!
ನಡೆದ ಅಪಘಾತ ಅದ್ಯಾವ ಮಟ್ಟಕ್ಕೆ ಭೀಕರವಾಗಿತ್ತು ಅಂದ್ರೆ ಸಂಧ್ಯಾ ದೇಹದ ಎಲ್ಲಾ ಮೂಳೆಗಳು ಮುರಿದು ಹೋಗಿದ್ದವು. ಬೆನ್ಜ್ ಕಾರ್ ಗುದ್ದಿದ ರಭಸಕ್ಕೆ ಸಂಧ್ಯಾ ದೇಹವೇ 10 ಅಡಿ ಮೇಲಕ್ಕೆ ಹಾರಿ ಬಿದ್ದಿತ್ತು. ಸಂಧ್ಯಾರಿಗಷ್ಟೇ ಅಲ್ಲ, ಮತ್ತೊಬ್ಬರಿಗೂ ಗುದ್ದಿ ವೇಗವಾಗಿ ಹೋಗ್ತಿದ್ದ ಆರೋಪಿಯನ್ನ ಸ್ಥಳೀಯರೇ ನಾಲ್ಕು ಬಿಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಸಂಧ್ಯಾ ಮೃತ ದೇಹವನ್ನು ಕಂಡ ವೈದ್ಯರು ಅಕ್ಷರಶಃ ಬೆಚ್ಚಿಬಿದ್ದಿದ್ದರು.
ಮೊದಲಿಗೆ ಪೊಲೀಸರು FIR ಹಾಕೋದಕ್ಕೂ ಹಿಂದೇಟು ಹಾಕಿದ್ರು!?
ಕಾರ್ ಗುದ್ದಿದ ರಭಸಕ್ಕೆ ಸ್ಥಳದಲ್ಲೇ ಮೃತ ಪಟ್ಟ ಸಂಧ್ಯಾಳ ದಾರುಣ ಸಾವನ್ನ ಕಂಡ ಮೇಲೂ ಪೊಲೀಸರ ನಡೆಗಳು ಸಂಶಯ ಹುಟ್ಟಿಸುವಂತಿವೆ. ಸಂಧ್ಯಾರಿಗೆ ನ್ಯಾಯ ಸಿಗುತ್ತೋ? ಇಲ್ಲವೋ? ಅನ್ನೋ ಅನುಮಾನ ಎದ್ದಿದೆ. ಆರಂಭದಲ್ಲೇ ಆರೋಪಿಯನ್ನು ಬಚಾವ್ ಮಾಡೋದಕ್ಕೆ ಮುಂದಾಗಿದ್ದು ಸಾರ್ವಜನಿಕರು ಸೆರೆಹಿಡಿದ ದೃಶ್ಯದಲ್ಲೇ ಕಾಣುತ್ತದೆ. ಇನ್ನು, ಎಫ್ಐಆರ್ ಹಾಕೋದಕ್ಕೂ ಪೊಲೀಸರು ಆರಂಭದಲ್ಲಿ ಹಿಂದೇಟು ಹಾಕಿದ್ರು. ಸಿಸಿಟಿವಿ ಫೂಟೇಜ್ ಕೂಡ ಮೃತ ಸಂಧ್ಯಾ ಕುಟುಂಬಕ್ಕೆ ನೀಡುತ್ತಿಲ್ಲ.
ಕರೆಂಟ್ ಇಲ್ಲ ಅನ್ನೋ ಸಬೂಬು ಹೇಳಿ ಎಫ್ಐಆರ್ ಹಾಕೋದಕ್ಕೂ ಹಿಂದೇಟು ಹಾಕಿದ್ರಂತೆ. ನಿಜಕ್ಕೂ ಇದೇ ಹೆಣ್ಣು ಮಗಳು ಆಡಿದ ಒಂದಷ್ಟು ಮಾತುಗಳನ್ನು ಪೊಲೀಸರು ಕೇಳಿದ್ರು ಮರುಗುತ್ತಿದ್ದರೋ? ಇಲ್ಲವೋ? ಯಾಕಂದ್ರೆ, ಆಕ್ಸಿಡೆಂಟ್ ಸ್ಫಾಟಲ್ಲಿದ್ದ ಪೊಲೀಸಪ್ಪ ನಡೆದುಕೊಂಡ ರೀತಿ ನೋಡಿದ್ರೆ ಎಲ್ಲವೂ ಅರ್ಥವಾಗುತ್ತದೆ.
ಉತ್ಸಾಹದ ಬ್ಯಾಟರಿ ಡೌನ್ ಆದ್ರೆ ಡೆತ್ ಆಗ್ತೀವಿ ಅಂದಿದ್ರು ಸಂಧ್ಯಾ!
ಈ ಮಾತುಗಳನ್ನ ಯಾರೇ ಕೇಳಿದ್ರೂ ಚೈತನ್ಯದ ಚಿಲುಮೆ ಚಿಮ್ಮುತ್ತದೆ. ಇಂಥಾ ಭರವಸೆಯ ಮಾತುಗಳಿಂದಲೇ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಗಿದ್ದ ಬೆಳದಿಂಗಳ ಬಾಲೆ ಸಂಧ್ಯಾ. ನುಡಿದರೇ ಮುತ್ತಿನ ಹಾರದಂತಿರಬೇಕು ಅಂತಾರಲ್ವಾ? ಅಷ್ಟೇ ಅಚ್ಚುಕಟ್ಟಾಗಿ ಮಾತಾಡ್ತಿದ್ದ ಸಂಧ್ಯಾಗೆ ಆ ಸಂಜೆ ವಿಧಿ ದಾರುಣವನ್ನೇ ಬರೆದುಬಿಟ್ಟಿದ್ದ. ಆ ಕ್ಷಣದ ಬಳಿಕವೂ ಸಂಧ್ಯಾಗೆ ನ್ಯಾಯ ಸಿಗೋ ರೀತಿಯಂತೂ ಕಾಣ್ತಿಲ್ಲ. ಯಾಕಂದ್ರೆ ಉತ್ಸಾಹದ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಬೇಕಿದ್ದ ಹುಡುಗ ಕುಡಿದು ಸಂಧ್ಯಾರನ್ನು ಮಸಣಕ್ಕೆ ಕಳಿಸಿಬಿಟ್ಟ. ಆ ಬಳಿಕವೂ ವ್ಯವಸ್ಥೆ, ಅದರಲ್ಲೂ ಪೊಲೀಸ್ ವ್ಯವಸ್ಥೆ ನಡೆದುಕೊಂಡ ರೀತಿ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ.
ಪೊಲೀಸ್ ಅಧಿಕಾರಿ ಸಹ ಆ ಕ್ಷಣಕ್ಕೆ ಧನುಷ್ನಿಂದಾಗಿ ಸಂಧ್ಯಾ ಸಾವನ್ನಪ್ಪಿಲ್ಲ. ಆಸ್ಪತ್ರೆಗೆ ದಾಖಲಾದ ಮೇಲೆ ಉಸಿರು ನಿಂತಿದೆ ಅನ್ನೋ ಮಾತನ್ನೇ ಹೇಳುತ್ತಿದ್ದಾರೆ. ಅದೆಷ್ಟೋ ನಾಳೆಗಳ ಭರವಸೆಯಲ್ಲೇ ಬದುಕಬೇಕು ಅನ್ನೋ ಸ್ಫೂರ್ತಿಯ ಮಾತಾಡುತ್ತಿದ್ದ ಸಂಧ್ಯಾ ಸಾವಿಗೆ ನ್ಯಾಯ ಸಿಗುತ್ತೆ ಅಂತ ಹೇಳೋದಕ್ಕೂ ಕಷ್ಟವಾಗುತ್ತಿದೆ. ಸಂಧ್ಯಾ ಎಂಥಾ ಹೆಣ್ಣು ಮಗಳು ಅಂದ್ರೆ, ತಮ್ಮನ ಪಾಲಿಗೆ ಅಮ್ಮನೇ ಆಗಿದ್ರು.
ಇದನ್ನೂ ಓದಿ:Justice For Sandhya: ಸಂಧ್ಯಾ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್.. ಆರೋಪಿ ರಕ್ಷಿಸಲು ಕೋಟಿ, ಕೋಟಿ ಆಫರ್?
ಧನುಷ್ ಅನ್ನೋ ಯುವಕ ಕುಡಿದು ತೂರಾಡಿಕೊಂಡು, ಬೆನ್ಜ್ ಕಾರಿನಲ್ಲಿ ಬಂದು ಸಂಧ್ಯಾರಿಗೆ ಗುದ್ದಿದ್ದ. ಮನೆಯಲ್ಲಿ ಕಲಿಸೋ ಅಪ್ಪ ಅಮ್ಮ ಸರಿಯಾಗಿದ್ರೆ ಇಂಥದ್ದು ಆಗ್ತಿರ್ಲಿಲ್ಲ ಅಂತ ಜನ ಮಾತಾಡ್ತಿದ್ದಾರೆ. ಆದರೇ, ತನ್ನ ಬಾಳಿಗೆ ಎಲ್ಲವೂ ಆಗಿದ್ದ ಅಕ್ಕನೇ ಇಲ್ಲವಾಗಿದ್ದಾರೆ. ಮೊದಲು ಅಮ್ಮನನ್ನ ಕಳೆದುಕೊಂಡಿದ್ದೆ. ಎರಡನೇ ಅಮ್ಮನೇ ಆಗಿದ್ದ ಅಕ್ಕನೂ ಇದೀಗ ಇಲ್ಲವಾದಳು ಅನ್ನೋ ಮೂಲಕ ಸಂಧ್ಯಾ ಸೋದರ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಾರೆ. ಅಷ್ಟೇ ಅಲ್ಲ, ಚೈತನ್ಯದ ಚಿಲುಮೆಯಂತಿದ್ದ ಸಂಧ್ಯಾ ಸಾವಿನ ಬಗ್ಗೆ ಸ್ಫೋಟಕ ಸುಳಿವನ್ನೂ ನೀಡಿದ್ದಾರೆ. ಆ ಒಬ್ಬ ಪ್ರಭಾವಿ ಆಸ್ಪತ್ರೆಗೂ ಬಂದು ಹೋಗಿದ್ದ ಅನ್ನುತ್ತಿದ್ದಾರೆ. ಅಷ್ಟೇ ಅಲ್ಲ, ಅದೊಂದು ಮಾತನ್ನ ಖುದ್ದು ಸಂಧ್ಯಾ ಸೋದರನ ಎದುರಿನಲ್ಲೇ ಹೇಳೋಕೆ ಸಂಧಾನಕಾರರನ್ನ ಕಳಿಸಿದ್ದನಂತೆ. ಹಾಗಾಗಿಯೇ ಸಂಧ್ಯಾ ಸಹೋದರ ನ್ಯಾಯ ಸಿಗುತ್ತೋ? ಇಲ್ಲವೋ? ಅನ್ನೋ ಆತಂಕದಲ್ಲೇ ಮಾತಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ