/newsfirstlive-kannada/media/post_attachments/wp-content/uploads/2025/06/sourav_ganguly.jpg)
ನಾಯಕನಾಗಿ ಟೀಮ್ ಇಂಡಿಯಾದ ಚರಿಷ್ಮಾವನ್ನೇ ಬದಲಿಸಿದ ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷರಾಗಿಯೂ ಭಾರತೀಯ ಕ್ರಿಕೆಟ್‌ನ ಆಳಿದ್ದಾರೆ. ಇದೀಗ ಈ ಕೊಲ್ಕತ್ತಾ ಪ್ರಿನ್ಸ್ ಹೊಸ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಟೀಮ್ ಇಂಡಿಯಾದ ಬಾಸ್ ಆಗೋಕೆ ಸದ್ದಿಲ್ಲದೇ ಸಿದ್ಧತೆ ನಡೆಸ್ತಿದ್ದಾರೆ. ಹಾಗಾದ್ರೆ, ದಾದಾ ಮುಂದಿನ ಟಾರ್ಗೆಟ್ ಏನು?.
ಸೌರವ್ ಗಂಗೂಲಿ.. ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ. ಮ್ಯಾಚ್ ಫಿಕ್ಸಿಂಗ್ನಿಂದ ಅಧಃಪತನದತ್ತ ಸಾಗಿದ್ದ ಟೀಮ್ ಇಂಡಿಯಾದ ಚರೀಷ್ಮಾವನ್ನೇ ಬದಲಿಸಿದ ಡೇರಿಂಗ್ ಕ್ಯಾಪ್ಟನ್. ಟೀಮ್ ಇಂಡಿಯಾ ನಾಯಕನಾಗಿ, ಬಿಸಿಸಿಐ ಅಧ್ಯಕ್ಷನಾಗಿ ಗಂಗೂಲಿ ಮಾಡಿದ ಸಾಧನೆಗಳು ಹಲವು. ಅಭಿಮಾನಿಗಳ ಪಾಲಿನ ದಾದಾ, ಬೆಂಗಾಲ್ ಟೈಗರ್ ಇದೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದ್ದಾರೆ.
ಕ್ಯಾಪ್ಟನ್ ಆಯ್ತು.. ಅಧ್ಯಕ್ಷ ಹುದ್ದೆ ಆಯ್ತು.. ಈಗ ಹೊಸ ರೋಲ್.!
ಟೀಮ್ ಇಂಡಿಯಾ ನಾಯಕನಾಗಿ ದಾದಾಗಿರಿ ಶುರು ಮಾಡಿದ್ದ ಸೌರವ್ ಗಂಗೂಲಿ, ಬಿಸಿಸಿಐ ಬಾಸ್ ಆಗಿ ಕೆಲ ಕಾಲ ಭಾರತೀಯ ಕ್ರಿಕೆಟ್ ಲೋಕವನ್ನ ಆಳಿದ್ದರು. ಇದೀಗ ಮತ್ತೆ ಟೀಮ್ ಇಂಡಿಯಾಗೆ ವಾಪಸ್ ಆಗಲು ಬೆಂಗಾಲ್ ಟೈಗರ್ ಸನ್ನದ್ಧರಾಗಿದ್ದಾರೆ. ಈ ಬಾರಿ ಹೊಸ ಪಾತ್ರದಲ್ಲಿ.. ಹೊಸ ಜವಾಬ್ದಾರಿ ನಿಭಾಯಿಸಲು ರೆಡಿಯಾಗಿದ್ದಾರೆ.
ನಾನು ಆ ಬಗ್ಗೆ ಯೋಚಿಸಿಲ್ಲ. ಆದ್ರೆ, ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ವಿವಿಧ ಹುದ್ದೆಗಳನ್ನು ನಿಭಾಯಿಸಿದೆ. ಬಂಗಾಳ ಕ್ರಿಕೆಟ್ ಅಸೋಸಿಯೇಷನ್, ಬಿಸಿಸಿಐ ಅಧ್ಯಕ್ಷನಾದೆ. ಆದ್ರೆ, ಭವಿಷ್ಯದಲ್ಲಿ ಏನಾಗುತ್ತೆ ಹೇಳಲು ಸಾಧ್ಯವಿಲ್ಲ. ನನಗೀಗ 50 ವರ್ಷ. ಅವಕಾಶ ಬಂದರೆ ನೋಡೋಣ. ನಾನು ಮುಖ್ಯ ಕೋಚ್ ಆಗಿ ಕೆಲಸ ಮಾಡಲು ಮುಕ್ತನಾಗಿದ್ದೇನೆ.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ
ಪಿಟಿಐ ಸಂದರ್ಶನದಲ್ಲಿ ಮಾತನಾಡಿರೋ ಸೌರವ್ ಗಂಗೂಲಿ ಮನದಾಳದ ಆಸೆಯನ್ನ ಬಿಚ್ಚಿಟ್ಟಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗೋ ಕನಸನ್ನ ಹೇಳಿಕೊಂಡಿದ್ದಾರೆ. ಇಷ್ಟೇ ಅಲ್ಲ, ವೃತ್ತಿ ಜೀವನದ ಏಳು-ಬೀಳುಗಳ ಜೊತೆಗೆ ಗ್ರೇಗ್ ಚಾಪೆಲ್ ಜೊತೆಗಿನ ವಿವಾದದ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 10 ಸಾವಿರ ರನ್ ಗಳಿಸಿದ್ದೆ. ಆದ್ರೆ, 8 ತಿಂಗಳು ಒಡಿಐನಿಂದ ದೂರವಿದ್ದೆ. ಮತ್ತೆ ಕಮ್ಬ್ಯಾಕ್ ಮಾಡಿದೆ. ಅದಕ್ಕೆ ಕಾರಣ ಏನೆಂದು ನಾನು ಊಹಿಸಬಲ್ಲೆ. 9 ವರ್ಷದಲ್ಲಿ 10 ಸಾವಿರ ರನ್ ಗಳಿಸಿ, ಕರಿಯರ್ನ ಉತ್ತುಂಗದಲ್ಲಿದ್ದಾಗ ತಂಡದಲ್ಲಿ ಚಾನ್ಸ್ ನೀಡಲಿಲ್ಲ. ಅದು ನನಗೆ ಸಪ್ರೈಸ್ ಎನಿಸಿತ್ತು. ಜೀವದಲ್ಲಿ ಅದು ಆಗುತ್ತೆ.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ
ರಾಜಕೀಯಕ್ಕೆ ಬರ್ತರಾ ಸೌರವ್ ಗಂಗೂಲಿ..?
ವೆಸ್ಟ್ ಬೆಂಗಾಲ್ ಎಲೆಕ್ಷನ್ ಬಂದ್ರೆ ಸಾಕು. ಸೌರವ್ ಗಂಗೂಲಿ ರಾಜಕೀಯ ಸೇರ್ತಾರೆ ಅನ್ನೋ ಚರ್ಚೆಗಳು ಮುನ್ನಲೆಗೆ ಬರ್ತವೆ. 2026ರಲ್ಲಿ ಪಶ್ಚಿಮ ಬಂಗಾಳ ಅಸೆಂಬ್ಲಿ ಎಲೆಕ್ಷನ್ ನಡೆಯಲಿದ್ದು, ಮತ್ತದೆ ಚರ್ಚೆ ನಡೀತಿದೆ. ಯಾವ ಪಕ್ಷ ಸೇರ್ತಿರಾ..? ಸಿಎಂ ಭರವಸೆ ನೀಡಿದ್ರೆ ನಿಮ್ಮ ನಡೆ ಏನು ಎಂಬ ಪ್ರಶ್ನೆಯನ್ನ ನಗುತ್ತಲೇ ದಾದಾ ತಿರಸ್ಕರಿಸಿದರು.
2026ರ ಅಂತ್ಯಕ್ಕೆ ಗಂಗೂಲಿಯ ಬಯೋಪಿಕ್..!
ಸೌರವ್ ಗಂಗೂಲಿಯ ಬಯೋಪಿಕ್.. ಕಳೆದ ಕೆಲ ವರ್ಷಗಳಿಂದ ಚರ್ಚೆಯಲ್ಲಿರುವ ಟಾಪಿಕ್.. ಈ ಚಿತ್ರದ ಹೀರೋ ಯಾರು..? ಯಾವಾಗ ರೀಲಿಸ್ ಆಗುತ್ತೆ.? ಈ ಚಿತ್ರದ ಅಪ್ಡೇಟ್ ಏನು ಅನ್ನೋದು ಬಹುತೇಕ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಕಾಡ್ತಿತ್ತು. ಇದೀಗ ಈ ಬಗ್ಗೆ ಗಂಗೂಲಿ ಕ್ಲಾರಿಟಿ ಕೊಟ್ಟಿದ್ದಾರೆ.
ಸರಿಯಾದ ವ್ಯಕ್ತಿಯೇ ಮಾಡ್ತಿದ್ದಾರೆ. ನಾನು ಸಹ ಸಹಾಯ ಮಾಡ್ತಿದ್ದೇನೆ. ಉತ್ತಮವಾಗಿ ನಡೀತಿದೆ. ಬಹುಷಃ ಮುಂದಿನ ಡಿಸೆಂಬರ್ನಲ್ಲಿ ರಿಲೀಸ್ ಆಗುತ್ತೆ. ಜನವರಿಯಿಂದ ಶೂಟಿಂಗ್ ಶುರುವಾಗಲಿದೆ. ಪ್ರೀ ಪ್ರೊಡಕ್ಷನ್, ಸ್ಟೋರಿ ಬರೆಯಲು ಹೆಚ್ಚು ಸಮಯ ತೆಗೆದುಕೊಳ್ತು. ಆದ್ರೆ, ಶೂಟಿಂಗ್ಗೆ ಹೆಚ್ಚು ಸಮಯ ತೆಗೆದುಕೊಳ್ಳಲ್ಲ.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ
ವಿರಾಟ್ ನಾಯಕತ್ವದ ವಿವಾದಕ್ಕೆ ಗಂಗೂಲಿ ಸ್ಪಷ್ಟನೆ.!
ಗಂಗೂಲಿ ಅಧ್ಯಕ್ಷತೆಯಲ್ಲಿ ಭಾರೀ ವಿವಾದ ಸೃಷ್ಟಿಯಾಗಿದ್ದು. ವಿರಾಟ್ ಕೊಹ್ಲಿಯ ನಾಯಕತ್ವ ಬದಲಾವಣೆ. ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದ ವಿರಾಟ್, ಏಕದಿನ ಹಾಗೂ ಟೆಸ್ಟ್ ನಾಯಕನಾಗಿ ಮುಂದುವರೆಯುವ ಲೆಕ್ಕಾಚಾರದಲ್ಲಿದ್ದರು. ಆದ್ರೆ, ಇದಕ್ಕೆ ಅನುವು ಮಾಡದ ಬಿಸಿಸಿಐ, ಟಿ20, ಏಕದಿನಕ್ಕೆ ರೋಹಿತ್ ಶರ್ಮಾನ ನಾಯಕನಾಗಿ ಮಾಡಿತ್ತು. ಇದಕ್ಕೆ ಗರಂ ಆಗಿದ್ದ ವಿರಾಟ್, ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದರು. ಈ ವಿಚಾರವಾಗಿಯೂ ಗಂಗೂಲಿ ಮಾತನಾಡಿದ್ದಾರೆ.
ವೈಟ್ಬಾಲ್ಗೆ ಒಬ್ಬ ನಾಯಕ ಇರುವುದು ಸಹಜ. ವಿರಾಟ್, ನಾಯಕರಾಗಿರಲು ನಾವು ಬಯಸುತ್ತಿದ್ದೆವು. ಆದ್ರೆ, ಅವರು ಮುಂದುವರಿಯಲು ಬಯಸಲಿಲ್ಲ. ನಂತರ ರೋಹಿತ್ ಶರ್ಮಾ ನೇಮಿಸಲಾಯ್ತು. ಮುಂಬೈ ಇಂಡಿಯನ್ಸ್ ನಾಯಕನಾಗಿ ಯಶಸ್ವಿಯಾಗಿದ್ದರು. ಆಗಾಗಿ 50, 20 ಓವರ್ಗಳ ತಂಡದ ನಾಯಕತ್ವದ ರೋಹಿತ್ಗೆ ವಹಿಸಲಾಯ್ತು. ಆಗ ವಿರಾಟ್, ಟೆಸ್ಟ್ ತಂಡದ ನಾಯಕನಾಗಿದ್ದರು. ಆದ್ರೆ, ಆಫ್ರಿಕಾದಲ್ಲಿ ಟೆಸ್ಟ್ ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಹೀಗಾಗಿ ಟೆಸ್ಟ್ ನಾಯಕ ನೇಮಿಸುವ ಅಗತ್ಯ ಇತ್ತು. ನಾನು ರೋಹಿತ್ ಉತ್ತಮ ನಾಯಕ ಎಂದು ನಂಬಿದ್ದೆ. ರೋಹಿತ್ಗೆ ಮನವಿ ಮಾಡಿದ್ವಿ. ವರ್ಕ್ಲೋಡ್ ದೃಷ್ಟಿಯಿಂದ ಹಿಂಜರಿದಿದ್ದರು. ನಾನು ಅವರ ಜೊತೆ ಮಾತನಾಡಿದೆ. ಟೆಸ್ಟ್ ನಾಯಕತ್ವ ಇಲ್ಲದೆ, ನಿಮ್ಮ ಕರಿಯರ್ ಮುಗಿಯಲು ಬಯಸಲ್ಲ ಎಂದು ಹೇಳಿದ್ದೆ. ಒಂದೆರೆಡು ದಿನಗಳ ಬಳಿಕ ರೋಹಿತ್, ಒಪ್ಪಿಕೊಂಡರು.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ
ಇದನ್ನೂ ಓದಿ:ಗ್ಯಾಂಗ್ಸ್ಟರ್ ತಾಯಿ ಮೇಲೆ ಬೈಕ್ನಲ್ಲಿ ಬಂದವರಿಂದ ಗುಂಡಿನ ದಾಳಿ.. ಉಸಿರು ಚೆಲ್ಲಿದ ಇಬ್ಬರು!
ಇದೀಗ ರೋಹಿತ್, ವಿರಾಟ್ ಇಬ್ಬರೂ ಟೆಸ್ಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಗಂಗೂಲಿ ವಿರಾಟ್, ರೋಹಿತ್ ಅನುಪಸ್ಥಿತಿಯಲ್ಲೂ ಟೀಮ್ ಇಂಡಿಯಾದ ಭವಿಷ್ಯ ಉತ್ತಮವಾಗಿರಲಿದೆ ಎಂದಿದ್ದಾರೆ. ಜೊತೆಗೆ ಹೆಡ್ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿ ಬಗ್ಗೆ ಮಾತನಾಡಿದ್ದಾರೆ.
ಗಂಭೀರ್ ಉತ್ತಮ ಕೆಲಸ ಮಾಡ್ತಿದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಸೋತರು. ಚಾಂಪಿಯನ್ಸ್ ಟ್ರೋಫಿಯೊಂದಿಗೆ ಯಶಸ್ಸು ಕಂಡಿದ್ದಾರೆ. ಆದ್ರೆ, ಇಂಗ್ಲೆಂಡ್ ಸರಣಿ ಚಾಲೆಂಜ್ ಆಗಿದೆ. ನಾನು ಆತನನ್ನು ಹತ್ತಿರದಿಂದ ನೋಡಿಲ್ಲ. ಆದ್ರೆ, ಆತ passionate ಕೋಚ್. ನಾನು ಆತನ ಸ್ಟ್ರಾಟರ್ಜಿಗಳನ್ನು ನೋಡಿಲ್ಲ. ಯಾಕಂದ್ರೆ, ನಾನು ಆತನ ಜೊತೆ ಕೆಲಸ ಮಾಡಿಲ್ಲ. ನಾನು ಅವರೊಂದಿಗೆ ಆಡಿದ್ದೇನೆ. ನನ್ನ ಮತ್ತು ಹಿರಿಯ ಆಟಗಾರರ ಬಗ್ಗೆ ಗೌರವ ಹೊಂದಿರುವ ವ್ಯಕ್ತಿ. ಗಂಭೀರ್, ತಮ್ಮ ಅಭಿಪ್ರಾಯಗಳನ್ನ ನೇರವಾಗಿ ವ್ಯಕ್ತಪಡಿಸುವ ವ್ಯಕ್ತಿ.
ಸೌರವ್ ಗಂಗೂಲಿ, ಬಿಸಿಸಿಐ ಮಾಜಿ ಅಧ್ಯಕ್ಷ
ಇದಿಷ್ಟೇ ಅಲ್ಲ, ಇನ್ನು ಹಲವು ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿರುವ ಗಂಗೂಲಿ, ಟೀಮ್ ಇಂಡಿಯಾ ಭವಿಷ್ಯ ಉಜ್ವಲವಾಗಿರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಜೊತೆಗೆ ಕೆಲ ವಿವಾದ, ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕೋಚ್ ಆಗುವ ಬಯಕೆ ಹೊಂದಿರುವ ಕೊಲ್ಕತ್ತಾ ಪ್ರಿನ್ಸ್, ಮತ್ತೆ ಟೀಮ್ ಇಂಡಿಯಾದಲ್ಲಿ ದಾದಾಗಿರಿ ಶುರು ಮಾಡಲಿ, ಮತ್ತಷ್ಟು ಕೊಡುಗೆ ನೀಡಲಿ ಅನ್ನೋದೆ ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ