ಇದು ನನ್ನ ಕೊನೆಯ ಮೆಸೇಜ್.. ಅಪಘಾತಕ್ಕೂ ಮುನ್ನ ದಕ್ಷಿಣ ಕೊರಿಯಾ ವಿಮಾನದ ಪ್ರಯಾಣಿಕ ಹೇಳಿದ್ದೇನು?

author-image
admin
Updated On
ಇದು ನನ್ನ ಕೊನೆಯ ಮೆಸೇಜ್.. ಅಪಘಾತಕ್ಕೂ ಮುನ್ನ ದಕ್ಷಿಣ ಕೊರಿಯಾ ವಿಮಾನದ ಪ್ರಯಾಣಿಕ ಹೇಳಿದ್ದೇನು?
Advertisment
  • ಮೂರು ದೇಶಗಳಲ್ಲಿ ಮೂರು ಪ್ರಮುಖ ವಿಮಾನ ಅವಘಡಗಳು
  • ಅಪಘಾತಕ್ಕೂ ಮುನ್ನ ವಿಮಾನದಲ್ಲಿದ್ದ ಪ್ರಯಾಣಿಕ ಕಳಿಸಿದ ಸಂದೇಶ
  • ದುರಂತದಲ್ಲಿ 181 ಪ್ರಯಾಣಿಕರ ಪೈಕಿ ಕೇವಲ ಇಬ್ಬರು ಮಾತ್ರ ಪಾರು

ಕಳೆದ 24 ಗಂಟೆಗಳಲ್ಲಿ ಮೂರು ದೇಶಗಳಲ್ಲಿ ಮೂರು ಪ್ರಮುಖ ವಿಮಾನ ಅಪಘಾತಗಳು ಸಂಭವಿಸಿವೆ. ದಕ್ಷಿಣ ಕೊರಿಯಾದಲ್ಲಿ ಮೊದಲು ಭಾರಿ ವಿಮಾನ ಅಪಘಾತವಾಗಿದೆ. ಇದರಲ್ಲಿ 179 ಪ್ರಯಾಣಿಕರು ಮೃತಪಟ್ಟಿದ್ದಾರೆ. ಎರಡನೇ ಅಪಘಾತ ಕೆನಡಾದ ಹ್ಯಾಲಿಫ್ಯಾಕ್ಸ್​​ ಏರ್​ಪೋರ್ಟ್​​ನಲ್ಲಿ ಆಗಿದೆ. ನಾರ್ವೆಯ ಓಸ್ಲೋ ಏರ್​ಪೋರ್ಟ್​ನಲ್ಲಿ ಮೂರನೇ ವಿಮಾನ ಅಪಘಾತವಾಗಿದೆ.

ಇಂದು ಸಂಭವಿಸಿದ ಮೂರು ವಿಮಾನ ಅಪಘಾತಗಳ ಪೈಕಿ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ದಕ್ಷಿಣ ಕೊರಿಯಾದ ಮುವಾನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ಅಪಘಾತವಾಗಿದೆ. ಕನಿಷ್ಟ 179 ಜನರು ಮೃತಪಟ್ಟಿದ್ದಾರೆ. ಜೆಜು ಏರ್ ಬೋಯಿಂಗ್-737-800 ದುರಂತದಿಂದ ಇಡೀ ಜಗತ್ತು ಶೋಕ ಸಾಗರದಲ್ಲಿ ಮುಳುಗಿದೆ. ವಿಮಾನದಲ್ಲಿದ್ದ 181 ಪ್ರಯಾಣಿಕರ ಪೈಕಿ ಕೇವಲ ಇಬ್ಬರು ಮಾತ್ರ ಬದುಕಿದ್ದಾರೆ.

ಬ್ಯಾಂಕಾಕ್​ನಿಂದ ಹೊರಟಿದ್ದ ಜೆಜು ಏರ್​ಲೈನ್ಸ್​ ವಿಮಾನ ಮುವಾನ್ ಏರ್​​ಪೋರ್ಟ್​ನಲ್ಲಿ ಇಳಿಯುವ ಕೆಲವೇ ಕ್ಷಣಗಳ ಮುನ್ನ ಪ್ರಯಾಣಿಕನೋರ್ವ ಸಂಬಂಧಿಕರಿಗೆ ಕಳಿಸಿದ ಕೊನೆಯ ಮೆಸೇಜ್ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿದೆ.

ನನ್ನ ಕೊನೆಯ ಸಂದೇಶ ಇದು
ದಕ್ಷಿಣ ಕೊರಿಯಾದಲ್ಲಿ ಸ್ಥಳಿಯ ಕಾಲಮಾನ ಬೆಳಗ್ಗೆ 9 ಗಂಟೆಗೆ ವಿಮಾನ ಅಪಘಾತವಾಗಿದೆ. ಬೋಯಿಂಗ್ 737-800 ವಿಮಾನವು ಲ್ಯಾಂಡಿಂಗ್ ವೇಳೆ ರನ್​ ವೇಯಿಂದ ಜಾರಿ ನಿಲ್ದಾಣದ ತಡೆಗೋಡೆಗೆ ಅಪ್ಪಳಿಸಿದೆ. ವಿಮಾನ ಉರುಳುತ್ತಲೇ ಹಲವು ಬಾರಿ ಸ್ಫೋಟದ ಸದ್ದು ಕೇಳಿಸಿದೆ. ಏರ್​ಪೋರ್ಟ್​ನಿಂದ 4-5 ಕಿಮೀವರೆಗೆ ಸ್ಫೋಟದ ಸದ್ದು ಕೇಳಿಸಿದೆ. ಬೆಂಕಿಯ ಜ್ವಾಲೆಯಲ್ಲಿ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ. ಆದರೆ ಘಟನೆಯಲ್ಲಿ 78 ವರ್ಷದ ವ್ಯಕ್ತಿ, 3 ವರ್ಷದ ಮಗು ಬದುಕುಳಿದಿದ್ದಾರೆ.

ಅಪಘಾತಕ್ಕೂ ಮುನ್ನ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಕಳಿಸಿದ ಸಂದೇಶ ಮಾತ್ರ ಎಲ್ಲರಲ್ಲೂ ಕಣ್ಣೀರು ತರಿಸುತ್ತಿದೆ. ವಿಮಾನ ನಿಲ್ದಾಣಕ್ಕೆ ತಮ್ಮವರನ್ನು ಬರಮಾಡಿಕೊಳ್ಳಲು ಕಾದಿದ್ದ ಕುಟುಂಬಸ್ಥರು, ಸಂಬಂಧಿಕರ ದುಃಖದ ಕಟ್ಟೆ ಒಡೆದಿದೆ.

ದುರಂತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಕುಟುಂಬ ಸದಸ್ಯರಿಗೆ ಟೆಕ್ಸ್ಟ್​ ಮೆಸೇಜ್ ಕಳಿಸಿದ್ದು ವಿಮಾನಕ್ಕೆ ಹಕ್ಕಿಯೊಂದು ಬಡಿದಿದ್ದು ನಾವು ಇಳಿಯಲು ಸಾಧ್ಯವಿಲ್ಲ ಎಂದು Kakao Talk ಆ್ಯಪ್​ನಲ್ಲಿ ಮೆಸೇಜ್ ಮಾಡಿದ್ಧಾನೆ.

ಇದು ಎಷ್ಟು ಹೊತ್ತಿನಿಂದ ಸಮಸ್ಯೆಯಾಗುತ್ತಿದೆ ಅಂತ ಕೇಳಿದ್ದಾಗ, ಒಂದು ನಿಮಿಷದ ಬಳಿಕ ಪ್ರತಿಕ್ರಿಯೆ ಬಂದಿದೆ.

‘ವಿಮಾನ ಲ್ಯಾಂಡಿಂಗ್ ವೇಳೆ ರನ್​ವೇ ಬಿಟ್ಟು ಕೆಳಗಡೆ ಇಳಿದಿದೆ. ಕ್ಷಣಗಳಲ್ಲೇ ವಿಮಾನ ಅಪಘಾತವಾಗಲಿದೆ. ಇದು ನನ್ನ ಕೊನೆಯ ಸಂದೇಶ’ ಅಂತ ಆತ ಮೆಸೇಜ್ ಹಾಕಿದ್ದಾನೆ.

ಹಕ್ಕಿ ಬಡಿದಿದ್ದರಿಂದ ಲ್ಯಾಂಡಿಂಗ್ ಗೇರ್ ಕೆಲಸ ಮಾಡದೇ ಬೆಲ್ಲಿ ಲ್ಯಾಂಡಿಂಗ್ ಅಂದರೆ ವಿಮಾನ ಚಕ್ರದ ಬದಲು ಹೊಟ್ಟೆಯ ಮೂಲಕ ವಿಮಾನ ಲ್ಯಾಂಡಿಂಗ್​ಗೆ ಪೈಲಟ್ ಪ್ರಯತ್ನಿಸಿದ್ದಾನೆ. ಕ್ಷಣಾರ್ಧದಲ್ಲೇ ಏರ್​​ಪೋರ್ಟ್​ನ ತಡೆಗೋಡೆಗೆ ಬಡಿದು ವಿಮಾನ ಅಪಘಾತಕ್ಕೀಡಾಗಿದ್ದು 179 ಜನ ಮೃತಪಟ್ಟಿದ್ದಾರೆ.

ಕೆಲವೇ ಕ್ಷಣಗಳಲ್ಲಿ ಪ್ರೀತಿಪಾತ್ರರನ್ನು ಸ್ವಾಗತಿಸಬೇಕಾದ ಕುಟುಂಬಸ್ಥರು, ಬಂಧುಗಳು ತಮ್ಮವರನ್ನು ಕಳೆದುಕೊಂಡಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ.

ಅಪಘಾತದ ಬಳಿಕ 32 ಅಗ್ನಿಶಾಮಕ ವಾಹನಗಳು ಕಾರ್ಯಚರಣೆ ಮಾಡಿದ್ದರೂ 2 ಗಂಟೆ ಬಳಿಕವೂ ವಿಮಾನದ ಹಿಂಬದಿ ರೆಕ್ಕೆಯಿಂದ ಭಾರಿ ಪ್ರಮಾಣದ ಬೆಂಕಿ ನಿಯಂತ್ರಿಸಲಾಗಿರಲಿಲ್ಲ ಎಂದು ವರದಿಯಾಗಿದೆ.

ಘಟನೆ ಬಗ್ಗೆ ತನಿಖೆಗೆ ಆದೇಶಿಸಿರುವ ದಕ್ಷಿಣಕೊರಿಯಾ ಸರ್ಕಾರ ಮೃತರ ಕುಟುಂಬಸ್ಥರ ಜೊತೆಗಿರುವುದಾಗಿ ಹೇಳಿದೆ. ಘಟನೆ ಬಗ್ಗೆ ಜೆಜು ಏರ್​​ಲೈನ್ಸ್​​ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಿದೆ.

ಸದ್ಯ ಮುವಾನ್ ಏರ್​ಪೋರ್ಟ್​ನಿಂದ ದೇಶಿಯ, ಅಂತಾರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ತಾತ್ಕಾಲಿಕವಾಗಿ ಏರ್​ಪೋರ್ಟ್​ ಬಂದ್ ಮಾಡಲಾಗಿದೆ.

ವಿಶೇಷ ವರದಿ: ವಿಶ್ವನಾಥ್ ಜಿ. ಸೀನಿಯರ್ ಕಾಪಿ ಎಡಿಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment