/newsfirstlive-kannada/media/post_attachments/wp-content/uploads/2025/04/power-cut1.jpg)
ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಇಲ್ಲದೇ ಒಂದು ಕ್ಷಣವೂ ಜೀವನ ಮಾಡೋಕಾಗಲ್ಲ. ವಿದ್ಯುತ್ ಇಲ್ಲದೇ ಜೀವನವೇ ಇಲ್ಲ. ಆದ್ರೆ, ಸಡನ್ ಆಗಿ ಇಡೀ ದೇಶದಲ್ಲಿ ಪವರ್ ಹೋದ್ರೆ ಹೇಗೆ? ಯುರೋಪ್‌ನಲ್ಲಿ ನಿನ್ನೆ ಆಗಿದ್ದು ಇದೇ. ಒಂದೇ ಬಾರಿಗೆ ಮೂರಕ್ಕೂ ಹೆಚ್ಚು ದೇಶಗಳಲ್ಲಿ ವಿದ್ಯುತ್ ಕೈಕೊಟ್ಟು ಭಾರೀ ಅವಾಂತರವೇ ಸೃಷ್ಟಿಯಾಗಿತ್ತು.
ನಿನ್ನೆ ಯುರೋಪ್ ಪಾಲಿಗೆ ಕರಾಳ ದಿನ. ಯುರೋಪ್‌ನ ಲಕ್ಷಾಂತರ ಜನರು ಕರೆಂಟ್ ಇಲ್ಲದೆ ಪರದಾಡುವ ಸ್ಥಿತಿ ಎದುರಾಯ್ತು. ಸ್ಪೇನ್, ಪೋರ್ಚುಗಲ್, ಫ್ರಾನ್ಸ್ ಹಾಗೂ ಬೆಲ್ಜಿಯಂನಲ್ಲಿ ಲಕ್ಷಾಂತರ ಜನರು ಇದ್ದಲ್ಲಿಯೇ ಸಿಲುಕಿಕೊಂಡಿದ್ದರು. ಏಕಾಏಕಿ ವಿದ್ಯುತ್ ಪೂರೈಕೆ ಕಡಿತದಿಂದ ಯುರೋಪ್‌ನ ಹಲವು ರಾಷ್ಟ್ರಗಳು ಅಂಧಕಾರದಲ್ಲಿ ಮುಳುಗಿದ್ದವು.
ಇದನ್ನೂ ಓದಿ:NIAಗೆ ಸಖತ್ ಕ್ಲೂ ಕೊಟ್ಟ ಅದೊಂದು ವಿಡಿಯೋ, ಪಹಲ್ಗಾಮ್ ದಾಳಿ ತನಿಖೆಗೆ ಬಿಗ್ ಟ್ವಿಸ್ಟ್..!
ಮೆಟ್ರೋ, ರೈಲುಗಳು, ವಿಮಾನಯಾನ, ದೂರವಾಣಿ ಸಂಪರ್ಕ, ಇಂಟರ್‌ನೆಟ್ ಸೇವೆ. ಎಲ್ಲದಕ್ಕೂ ಎಲೆಕ್ಟ್ರಿಸಿಟಿ ಬೇಕೇ ಬೇಕು. ಆದ್ರೆ, ದಿಢೀರ್ ವಿದ್ಯುತ್ ಸಂಪರ್ಕ ಕಡಿತ ಆಗಿ, ರೈಲುಗಳು ಅರ್ಧದಲ್ಲೇ ನಿಲ್ಲುವಂತ ಪರಿಸ್ಥಿತಿ ನಿನ್ನೆ ಯುರೋಪ್‌ನಲ್ಲಿ ನಿರ್ಮಾಣವಾಗಿತ್ತು. ಸ್ಥಳೀಯ ಕಾಲಮಾನ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಕಾಣಿಸಿಕೊಂಡಿದ್ದು, ಜನರಿಗೆ ಏನಾಗ್ತಿದೆ ಅನ್ನೋದು ಗೊತ್ತಾಗದೆ ಪರದಾಡಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಮಕ್ಕಳು ಶಾಲೆಗೆ ಹೋಗೋದು, ಜನರು ಕೆಲಸಕ್ಕೆ ಹೋಗೋದು ಎಲ್ಲದರಲ್ಲೂ ವ್ಯತ್ಯಾಸವಾಗಿತ್ತು.
ಫ್ರಾನ್ಸ್‌ನ ದಕ್ಷಿಣ ಭಾಗ, ಬೆಲ್ಜಿಯಂ, ಸ್ಪೇನ್ ಹಾಗೂ ಪೋರ್ಚುಗಲ್‌ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೆ ಪೆಟ್ಟು ಬಿದ್ದಿತ್ತು. ದೂರವಾಣಿ ಸಂಪರ್ಕ ಸೇವೆಗಳಲ್ಲಿ ವ್ಯತ್ಯಯವಾಗಿತ್ತು. ರೈಲುಗಳಷ್ಟೇ ಅಲ್ಲದೇ ವಿಮಾನ ಸೇವೆಗಳಲ್ಲಿ ವ್ಯತ್ಯಾಸವಾಗಿ ಹೋಗಿತ್ತು. ಸ್ಪೇನ್ ಮತ್ತು ಪೋರ್ಚುಗಲ್‌ನ ಸುಮಾರು ಐದು ಕೋಟಿ ಜನರು ವಿದ್ಯುತ್ ವ್ಯತ್ಯಯದ ಹೊಡೆತ ಅನುಭವಿಸಿದ್ದಾರೆ. ಈ ಬ್ಲ್ಯಾಕ್‌ಔಟ್‌ಗೆ ಏನು ಕಾರಣ ಅನ್ನೋದನ್ನು ಪತ್ತೆ ಮಾಡುವ ಪ್ರಯತ್ನ ನಡೆಸಲಾಗ್ತಿದೆ.
ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನ ಬರಾಹಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದರ ಜೊತೆಗೆ ಇನ್ನೂ ಹಲವು ವಿಮಾನ ನಿಲ್ದಾಣಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ವಿಮಾನ ಸಂಚಾರಕ್ಕೆ ತೊಡಕಾಗಿತ್ತು. ಇನ್ನು ಮೆಟ್ರೋ ಮತ್ತು ರೈಲುಗಳಲ್ಲಿ ಸಂಚಾರ ಮಾಡ್ತಿದ್ದ ಪ್ರಯಾಣಿಕರು ಸುರಂಗಗಳಲ್ಲಿ ಹಾಗೂ ಎರಡು ನಿಲ್ದಾಣಗಳ ಮಧ್ಯದಲ್ಲಿ ಸಿಲುಕಿಕೊಂಡಿದ್ರು. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಅಂತ ತಿಳಿದುಬಂದಿದೆ.
2003ರಲ್ಲಿ ಇಟಲಿ ಮತ್ತು ಸ್ವಿಡ್ಜರ್ಲೆಂಡ್ ನಡುವೆ ಹೈಡ್ರೋಎಲೆಕ್ಟ್ರಿಕ್ ಪವರ್‌ಲೈನ್‌ನಲ್ಲಿ ವ್ಯತ್ಯಯ ಉಂಟಾಗಿದ್ದು ಬಿಟ್ಟರೆ, ಯುರೋಪ್‌ನಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯವಾದ ಸನ್ನಿವೇಶಗಳು ತೀರಾ ಕಡಿಮೆ. ಆದರೆ, ನಿನ್ನೆಯ ಪರಿಸ್ಥಿತಿಯು ತೀರಾ ಕೆಟ್ಟದಾಗಿದೆ. ಇದೀಗ ಏಕಾಏಕಿ ಇಂಥ ಪರಿಸ್ಥಿತಿ ಸೃಷ್ಟಿಯಾಗಿದ್ದು ಹೇಗೆ ಅನ್ನೋದು ತನಿಖೆಯಿಂದಲೇ ಗೊತ್ತಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ