ನಾವೆಲ್ಲರೂ ಜೊತೆಯಾಗಿದ್ದೇವೆ.. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸ್ಪೀಕರ್ U.T ಖಾದರ್‌ ಒಂದು ವಿಶೇಷ ಪತ್ರ

author-image
admin
Updated On
ನಾವೆಲ್ಲರೂ ಜೊತೆಯಾಗಿದ್ದೇವೆ.. ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಸ್ಪೀಕರ್ U.T ಖಾದರ್‌ ಒಂದು ವಿಶೇಷ ಪತ್ರ
Advertisment
  • ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಜೊತೆಯಾಗಿದ್ದೇವೆ
  • ನಾವು ಪ್ರೀತಿ, ವಿಶ್ವಾಸ, ಕರುಣೆ, ಶಾಂತಿಯಿಂದ ಇರಬೇಕಾದ ಸಮಯ
  • ಮಾನವೀಯತೆಯ ಎದುರು ದ್ವೇಷ ವಿಜೃಂಭಿಸಲು ಅವಕಾಶ ನೀಡಬಾರದು

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವಂತಹ ಕೆಲವು ಘಟನೆಗಳು ಪ್ರತಿಯೊಬ್ಬರಿಗೂ ನೋವನ್ನು ಉಂಟು ಮಾಡಿದೆ. ಹಿಂಸಾಚಾರ, ದ್ವೇಷ ಭಾಷಣ ಮತ್ತು ಸಮುದಾಯಗಳ ನಡುವಿನ ಉದ್ವಿಗ್ನತೆ ಇವೆಲ್ಲವೂ ನಮಗೆ ಆಂತರಿಕವಾಗಿ ತೀವ್ರ ಅಶಾಂತಿ, ಆತಂಕವನ್ನುಂಟು ಮಾಡಿವೆ. ನಾನು ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಮತ್ತು ವಿಧಾನಸಭೆಯ ಸಭಾಧ್ಯಕ್ಷರಾಗಿ, ಒಬ್ಬ ರಾಜಕಾರಣಿಯಾಗಿ ಮಾತ್ರವಲ್ಲ, ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ, ನಿಮ್ಮ ನೆರೆಹೊರೆಯವನಾಗಿ ಮತ್ತು ಈ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ನಿಮ್ಮಷ್ಟೇ ಪ್ರೀತಿ, ಕಾಳಜಿ ವಹಿಸುವ ವ್ಯಕ್ತಿಯಾಗಿ ನಿಮ್ಮೊಂದಿಗೆ ಮಾತನಾಡಲು ಇಚ್ಚಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆ ಇಲ್ಲಿನ ಜನರ ಪರಸ್ಪರ ನಂಬಿಕೆಯ ಮತ್ತು ಒಗ್ಗಟ್ಟಿನ ಆಧಾರದ ಮೇಲೆ ನಿರ್ಮಿತವಾಗಿದೆ. ಇಲ್ಲಿ ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು-ಎಲ್ಲರೂ ತಲೆಮಾರುಗಳಿಂದ ಪ್ರೀತಿ ವಿಶ್ವಾಸದೊಂದಿಗೆ ಜೊತೆಯಾಗಿ ಬದುಕುತ್ತಾ ಬಂದಿದ್ದೇವೆ. ಒಂದೇ ಶಾಲೆಗಳಲ್ಲಿ ಓದಿದ್ದೇವೆ. ಒಂದೇ ಮಾರುಕಟ್ಟೆಗಳಲ್ಲಿ ಕೆಲಸ ಮಾಡಿದ್ದೇವೆ. ಒಟ್ಟಿಗೆ ಹಬ್ಬಗಳನ್ನು ಸೇರಿ ಆಚರಿಸಿದ್ದೇವೆ. ಇಂತಹ ಸಾಮರಸ್ಯದ ಜಿಲ್ಲೆಯನ್ನು ನೋಡಿ ಬೆಳೆದು ಬಂದಿರುವ ನಮಗೆ, ಅದು ನಮ್ಮ ಕೈ ತಪ್ಪುತ್ತಿರುವುದು ಸಹಿಸಲು ಅಸಾಧ್ಯವಾದ ಸಂಗತಿಯಾಗಿದೆ. ಇದಕ್ಕೆ ನಾವು ಯಾವುದೇ ಅವಕಾಶ ನೀಡಬಾರದು.

ಈಗ ನಾವು ಒಂದು ಅತ್ಯಂತ ಸೂಕ್ಷ್ಮವಾದ ಕಾಲಘಟ್ಟದಲ್ಲಿದ್ದೇವೆ. ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳು, ವದಂತಿಗಳನ್ನು, ದ್ವೇಷಭರಿತ ಹೇಳಿಕೆಗಳನ್ನು ಅತ್ಯಂತ ವೇಗದಲ್ಲಿ ಹರಡುವ ಮೂಲಕ ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸುತ್ತವೆ. ಈ ಹಿನ್ನೆಲೆಯಲ್ಲಿ ನಾನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ. ಇದು ಕೋಪದಿಂದ, ಭಯದಿಂದ ಅಥವಾ ದ್ವೇಷದಿಂದ ಪ್ರತಿಕ್ರಿಯಿಸುವ ಸಮಯವಲ್ಲ. ಇದು ಶಾಂತಿ, ಘನತೆ ಮತ್ತು ಪ್ರತಿಯೊಂದು ಧರ್ಮಕ್ಕೆ ಗೌರವ ನೀಡುವ ನಮ್ಮ ನೈತಿಕ ಮೌಲ್ಯಗಳೊಂದಿಗೆ ದೃಢವಾಗಿ ನಿಲ್ಲುವ ಹಾಗೂ ಜವಾಬ್ದಾರಿಯುತವಾಗಿ ಪ್ರತಿಸ್ಪಂದಿಸುವ ಸಮಯವಾಗಿದೆ.

publive-image

ನಾನು ಈಗಾಗಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ. ದ್ವೇಷವನ್ನು ಹರಡುವ ಅಥವಾ ಸಮಾಜವನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳು ಯಾರೇ ಆಗಿರಲಿ, ಅವರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆದರೆ, ಕಾನೂನು ಮತ್ತು ಸುವ್ಯವಸ್ಥೆ ಏನೇ ಇರಲಿ, ಇವೆಲ್ಲವನ್ನೂ ಮೀರಿ, ನಾವು ಒಗ್ಗಟ್ಟಿನಿಂದ, ತಾಳ್ಮೆಯಿಂದ, ಪರಸ್ಪರ ಪ್ರೀತಿ ವಿಶ್ವಾಸ, ಕರುಣೆ ಮತ್ತು ಶಾಂತಿಯಿಂದ ಇರಬೇಕಾದ ಸಮಯ ಇದಾಗಿದೆ.

ಇದನ್ನೂ ಓದಿ: RCB ಟೀಮ್ ಖರೀದಿ ಮಾಡ್ತಾರಾ ಡಿ.ಕೆ ಶಿವಕುಮಾರ್? ದೆಹಲಿಯಲ್ಲಿ DCM ಹೇಳಿದ್ದೇನು? 

ನಾನು ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರೊಂದಿಗೆ ಮತ್ತು ವಿವಿಧ ಸಮುದಾಯಗಳ ಪ್ರತಿನಿಧಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅರ್ಥ ಪೂರ್ಣ ಮಾತುಕತೆಯ ಮೂಲಕ ಸಮಾಜದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ನಾವು ಈಗ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಪರಿಸ್ಥಿತಿಯನ್ನು ಮತ್ತಷ್ಟು ಪ್ರಕ್ಷುಬ್ಧಗೊಳಿಸುವ ಬದಲು, ಶಾಂತಿಯತ್ತ ಮುನ್ನಡೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

publive-image

ಇಂದು ಎಲ್ಲರ ಹೃದಯಗಳು ನೋವಿನಿಂದ ತುಂಬಿವೆ, ಮನಸ್ಸುಗಳು ಕೋಪದಿಂದ ಕುರುಡಾಗಿದೆ. ಹೇಗೆ ಕುದಿಯುವ ನೀರಿನಲ್ಲಿ ಪ್ರತಿಬಿಂಬ ಕಾಣುವುದಿಲ್ಲವೋ ಹಾಗೆ, ಮನಸ್ಸು ಉದ್ವಿಗ್ನವಾಗಿರುವಾಗ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸರಿ-ತಪ್ಪುಗಳ ವಿಶ್ಲೇಷಣೆಯು ಅಸಾಧ್ಯವಾಗುತ್ತದೆ. ಆದ್ದರಿಂದ ನಾವು ತಾಳ್ಮೆಯಿಂದ, ಜವಾಬ್ದಾರಿಯುತವಾಗಿ ಭವಿಷ್ಯದ, ಸಾಮರಸ್ಯ ಸಮಾಜದ ಉಳಿವಿಗಾಗಿ ಗಂಭೀರ ಚಿಂತನೆ, ವಿಶ್ಲೇಷಣೆ ಮಾಡಬೇಕಿದೆ.

ನನ್ನ ಜಿಲ್ಲೆಯ ಪ್ರೀತಿಯ ಜನತೆಗೆ ನಾನು ಹೇಳುವುದಿಷ್ಟೇ, ಮಾನವೀಯತೆಯ ಎದುರು ದ್ವೇಷವು ವಿಜೃಂಭಿಸಲು ನಾವು ಅವಕಾಶ ನೀಡಬಾರದು. ಹಿಂಸೆಯು ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸಲು, ನಿರ್ಧರಿಸಲು ನಾವು ಬಿಡಬಾರದು. ನಾನು ನಿಮ್ಮೊಂದಿಗಿದ್ದೇನೆ. ಈ ಸಂಕಲ್ಪದಲ್ಲಿ ನಾವೆಲ್ಲರೂ ಜೊತೆಯಾಗಿದ್ದೇವೆ. ಒಗ್ಗಟ್ಟು ನಮ್ಮ ಶಕ್ತಿ, ಸಹಿಷ್ಣುತೆ ನಮ್ಮ ಮೌಲ್ಯ, ಮತ್ತು ಶಾಂತಿ ನಮ್ಮ ಗುರಿ, ಈ ಮೌಲ್ಯಗಳ ಜೊತೆಗೆ ನಾವು ಧೈರ್ಯದಿಂದ ಮುಂದೆ ಸಾಗೋಣ.
ಲೇಖನ - ಯು.ಟಿ ಖಾದರ್, ವಿಧಾನಸಭಾಧ್ಯಕ್ಷರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment