ಇಂಡೋ - ಪಾಕ್​ ವಿಶ್ವಕಪ್​ ಫೈಟ್​ಗೆ ಕೌಂಟ್​ಡೌನ್​: ಪಾಕ್​ಗೆ ಸೇಡಿನ ಸಮರ, ಭಾರತಕ್ಕೆ ಪ್ರತಿಷ್ಠೆಯ ಯುದ್ಧ

ನಾಳೆ ಸಂಜೆ ಟಿ-20 ವಿಶ್ವಕಪ್ ನಲ್ಲಿ ಬದ್ದ ವೈರಿಗಳು ಮುಖಾಮುಖಿಯಾಗಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ನಾಳೆ ಪಾಕಿಸ್ತಾನವನ್ನು ಬಗ್ಗು ಬಡಿಯಲೇಬೇಕೆಂದು ಟೀಮ್ ಇಂಡಿಯಾ ಪಣ ತೊಟ್ಟಿದೆ. ಅಭಿಷೇಕ್ ಶರ್ಮಾ ಬ್ಯಾಟ್ ಬೀಸಲು ರೆಡಿಯಾಗಿದ್ದಾರೆ.

author-image
Chandramohan
T20 WORLD CUP INDIA AND PAK MATCH
Advertisment


T20 ವಿಶ್ವಕಪ್​ ಟೂರ್ನಿಯಲ್ಲಿ ನಾಳೆ ನಡೀತಾ ಇರೋದು ಸೂಪರ್​ ಸಂಡೇಯ ಸೂಪರ್​ ಕದನ.! ಈ ಒಂದು ಪಂದ್ಯ ನೋಡಲು ಇಡೀ ಕ್ರಿಕೆಟ್​ ಲೋಕ ತುದಿಗಾಲಲ್ಲಿ ನಿಂತಿದೆ. ಯಾಕಂದ್ರೆ, ನಾಳೆ ರಣರಂಗದಲ್ಲಿ ಎದುರು ಬದುರಾಗಿ ಹೋರಾಡ್ತಿರೋದು ಟೀಮ್​ ಇಂಡಿಯಾ ಹಾಗೂ ಪಾಕಿಸ್ತಾನ..! ಈ ಹೈವೋಲ್ಟೆಜ್​ ಕದನದ ಫೀವರ್, ನಿರೀಕ್ಷೆಯೂ ಮಾಡದ ರೀತಿಯಲ್ಲಿ​ ಕ್ರಿಕೆಟ್​ ಲೋಕವನ್ನ ಆವರಿಸಿದೆ.  
ವಿಶ್ವ ಕ್ರಿಕೆಟ್​​ ಲೋಕವೇ ಕುತೂಹಲದ ಕಣ್ಣಿನಿಂದ ಕಾಯ್ತಿರೋ ಪಂದ್ಯದ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ. ಕೊಲಂಬೋದ ಪ್ರೇಮದಾಸ ಸ್ಟೇಡಿಯಂನ ರಣರಂಗದಲ್ಲಿ  ಬದ್ಧವೈರಿಗಳ ನಡುವೆ ಬಿಗ್​ ಬ್ಯಾಟಲ್​ ನಡೆಯಲಿದೆ. ಬ್ಯಾಟಲ್​ಫೀಲ್ಡ್​ನಲ್ಲಿ ಟೀಮ್​ ಇಂಡಿಯಾ - ಪಾಕಿಸ್ತಾನ ತಂಡಗಳು ತೊಡೆತಟ್ಟಲು ಸಜ್ಜಾಗಿವೆ. ಇಡೀ T20 ವಿಶ್ವಕಪ್​​ ಟೂರ್ನಿಯದ್ದು ಒಂದು ತೂಕವಾದ್ರೆ, ನಾಳೆ ಪಂದ್ಯದ್ದೇ ಒಂದು ತೂಕ.! ನೋಡೋಕಷ್ಟೆ ಇದು ಕ್ರಿಕೆಟ್​ ಪಂದ್ಯ.. ಆದ್ರೆ, ಅಕ್ಷರಶಃ ವಾರ್ ಸ್ವರೂಪ ಪಡೆದಿರುತ್ತೆ..!​

ವಿಶ್ವಕಪ್ ಅಖಾಡದಲ್ಲಿ ಬದ್ಧವೈರಿಗಳ ಮುಖಾಮುಖಿ
ಪಾಕ್​ಗೆ ಸೇಡಿನ ಸಮರ, ಭಾರತಕ್ಕೆ ಪ್ರತಿಷ್ಟೆಯ ಯುದ್ಧ
ಟಿ20 ವಿಶ್ವಕಪ್​ನ ಇಂದಿನ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗ್ತಿವೆ. ಕೊಲಂಬೋದ ಪ್ರೇಮದಾಸ ಮೈದಾನದಲ್ಲಿ ನಡೆಯೋ ಪಂದ್ಯ ಟೀಮ್​ ಇಂಡಿಯಾಗೆ ಪ್ರತಿಷ್ಠೆಯಾದ್ರೆ, ಪಾಕ್​ಗಿದು ಸೇಡಿನ ಸಮರ. ಕಳೆದ ಏಷ್ಯಾಕಪ್​ನಲ್ಲಿ ಟೀಮ್​ ಇಂಡಿಯಾ ಕೊಟ್ಟ ಏಟಿಗೆ ಪಾಕಿಸ್ತಾನ ಪಡೆ ಪತರುಗುಟ್ಟಿ ಹೋಗಿತ್ತು. ಟಿ20 ವಿಶ್ವಕಪ್​ನಲ್ಲೂ ಈವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಭಾರತ 7 ಪಂದ್ಯ ಗೆದ್ದಿದ್ರೆ, ಪಾಕ್​ ಕೇವಲ 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. 
ಗೆಲುವೊಂದೆ ಗುರಿ, ಸೋಲು ಅನ್ನೋ ಪದವನ್ನೇ ಸಹಿಸಲ್ಲ..!
ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಫ್ರೆಂಡ್ಲಿ ಆಗೇ ಇರ್ತಾರೆ. ಆದ್ರೆ, ಮೈದಾನ ಹೊರಗೆ ಇರೋ ಅಭಿಮಾನಿಗಳಿಗೆ ಈ ಪಂದ್ಯ ಒಂದು ಯುದ್ಧ.! ಪ್ರತಿಷ್ಟೆಯ ಕಾಳಗ..! ಸೋಲು ಅನ್ನೋ ಪದವನ್ನೇ ಫ್ಯಾನ್ಸ್​ ಸಹಿಸಲ್ಲ. ಫ್ಯಾನ್ಸ್​ ಪಾಲಿಗೆ ಕ್ರಿಕೆಟ್​ ಫೀಲ್ಡ್​ ಇಲ್ಲಿ ರಣರಂಗವಾದ್ರೆ, ಆಟಗಾರರು ಇಲ್ಲಿ ರಣಕಲಿಗಳು.. ಬ್ಯಾಟ್​ & ಬಾಲ್​ ಇಲ್ಲಿ ಅಸ್ತ್ರಗಳು.. ವಿಶ್ವಕಪ್​ ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡೆರಿ.. ಈ ಪಂದ್ಯದಲ್ಲಿ ಸೋಲಬಾರದು  ಅನ್ನೋದು ಉಭಯ ತಂಡಗಳ ಅಭಿಮಾನಿಗಳ ನಿರೀಕ್ಷೆಯಾಗಿರುತ್ತೆ. 

ಇಂದಿನ ಪಂದ್ಯದಲ್ಲೂ ಟೀಮ್​ ಇಂಡಿಯಾನೇ ಫೇವರಿಟ್​.!
ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆರಂಭಿಕ ಅಭಿಷೇಕ್ ಶರ್ಮಾ, ಪಾಕ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಇಶಾನ್ ಕಿಶನ್, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಸಾಲಿಡ್ ಫಾರ್ಮ್​ನಲ್ಲಿ ರನ್​ಗಳಿಸ್ತಿದ್ದಾರೆ. ಇವರ ಜೊತೆಗೆ ಆಲ್​ರೌಂಡರ್​ಗಳಾದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಸಹ, ಕಾಂಟ್ರಿಬ್ಯೂಟ್ ಮಾಡ್ತಿದ್ದಾರೆ. ಬೂಮ್ರಾ, ಆರ್ಷ್​​ದೀಪ್​, ವರುಣ್​ ಚಕ್ರವರ್ತಿ ಒಳಗೊಂಡ ಬೌಲಿಂಗ್​ ಅಟ್ಯಾಕ್​ ಕೂಡ ಬಲಿಷ್ಠವಾಗಿದ್ದು, ಇಂದೂ ಕೂಡ ಭಾರತವೇ ಗೆಲ್ಲೋ ಫೇವರಿಟ್​ ಆಗಿದೆ. 

ಪಾಕಿಸ್ತಾನಕ್ಕೆ ಯುವ ಆಟಗಾರರ ಪಡೆಯ ಬಲ.!
ಪಾಕಿಸ್ತಾನ ತಂಡ ಹೊಸ ಮುಖಗಳಿಂದ ಕೂಡಿದೆ. ಹಾಗಾಗಿ ಸದ್ಯ ಹೈ ಜೋಷ್​ನಲ್ಲಿರುವಂತೆ ಕಾಣ್ತಿದೆ. ಟಿ-ಟ್ವೆಂಟಿ ವಿಶ್ವಕಪ್​ಗೂ ಮುನ್ನ ಆಸಿಸ್ ವಿರುದ್ಧ ಟಿ-ಟ್ವೆಂಟಿ ಸರಣಿ ಗೆಲುವು, ವಿಶ್ವಕಪ್​ನಲ್ಲಿ ನೆದರ್​ಲೆಂಡ್ಸ್​ ಮತ್ತು ಯುಎಸ್​ಎ ವಿರುದ್ಧದ ಗೆಲುವು, ಪಾಕ್ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಿದೆ. ಇದೇ ಫಾರ್ಮ್​​ ಟೀಮ್ ಇಂಡಿಯಾ ವಿರುದ್ಧವೂ ಮುಂದುವರೆಸುವ ವಿಶ್ವಾಸದಲ್ಲಿದೆ.
ಹೈವೋಲ್ಟೆಜ್​ ಕದನಕ್ಕೆ ಮಳೆಯ ಭೀತಿ.!
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮತ್ತೊಂದು ತಡೆಯೂ ಎದುರಾಗಿದೆ. ಇಂದಿನ ಪಂದ್ಯಕ್ಕೆ ಮಳೆಯ ಭೀತಿ ಎದುರುರಾಗಿದೆ. ಭಾನುವಾರ ಸಂಜೆ ವೇಳೆಗೆ ಕೊಲಂಬೋದಲ್ಲಿ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ ಎಂದು ಶ್ರೀಲಂಕಾ ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರೋದ್ರಿಂದ ತೀವ್ರ ಮಳೆ ಬೀಳೋ ಸಾಧ್ಯತೆಯಿದೆ ಎಂದು ತಿಳಿಸಿದೆ. 
ಮಳೆ ಭೀತಿ ಇದ್ರೂ ಪಂದ್ಯದ ಕ್ರೇಜ್​ ಕಡಿಮೆಯಾಗಿಲ್ಲ. ಯಾಕಂದ್ರೆ, ಇಂಡೋ - ಪಾಕ್​ ತಂಡಗಳು ರೆಗ್ಯುಲರ್​ ಆಗಿ ಮುಖಾಮುಖಿಯಾಗಲ್ಲ. ಒಂದೋ ಐಸಿಸಿ ಟೂರ್ನಿ ನಡೆಯಬೇಕು ಅಥವಾ ಏಷ್ಯಾಕಪ್​ ನಡೀಬೇಕು. ಇದೀಗ ಟಿ20 ವಿಶ್ವಕಪ್​ನಲ್ಲಿ ಹೈವೋಲ್ಟೆಜ್​ ಕದನಕ್ಕೆ ರಣಕಣ ಸಜ್ಜಾಗಿದೆ. ಆಟಗಾರರು ಬ್ಯಾಟ್,ಬಾಲ್​ ಹಿಡಿದು ಆರ್ಭಟಿಸಲು ರೆಡಿಯಾಗಿದ್ದಾರೆ. ರಣರೋಚಕ ಕಾದಾಟವನ್ನ ನೋಡಲು ಫ್ಯಾನ್ಸ್​ ಕೂಡ ತುದಿಗಾಲಲ್ಲಿ ನಿಂತಿದ್ದು, ದೇಶದೆಲ್ಲೆಡೆ ಟೀಮ್​ ಇಂಡಿಯಾ ಗೆಲ್ಲಲಿ ಅನ್ನೋ ಪ್ರಾರ್ಥನೆಯೂ ಜೋರಾಗಿದೆ. 

ವಸಂತ್​ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ. ನ್ಯೂಸ್​ ಫಸ್ಟ್​ .


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

T20 world cup T20 WORLD CUP INDIA AND PAK MATCH
Advertisment