/newsfirstlive-kannada/media/media_files/2025/09/22/gill-19-2025-09-22-14-16-29.jpg)
ಏಷ್ಯಾಕಪ್​​ನಲ್ಲಿ ಟೀಂ ಇಂಡಿಯಾ ಎದುರು ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ ಆಗಿದೆ. ಅಭಿಷೇಕ್ ಶರ್ಮಾರ ಅರ್ಧಶತಕ ಮತ್ತು ಗಿಲ್ ಜೊತೆಗಿನ ಶತಕದ ಪಾಲುದಾರಿಕೆ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯ್ತು. ಆ ಮೂಲಕ ಸೂಪರ್​ ಫೋರ್​ನ ಹಂತದ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ.
ಪಾಕಿಸ್ತಾನ ನೀಡಿದ್ದ 172 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಅಭಿಷೇಕ್ (74 ರನ್, 39 ಎಸೆತ, ಆರು ಬೌಂಡರಿ, ಐದು ಸಿಕ್ಸರ್) ಮತ್ತು ಗಿಲ್ (47 ರನ್, 28 ಎಸೆತ, ಎಂಟು ಬೌಂಡರಿ) ರನ್​ಗಳ ಕಾಣಿಕೆ ನೀಡಿದರು. ಇವರಿಬ್ಬರ 105 ರನ್‌ಗಳ ಪಾಲುದಾರಿಕೆ ಗೆಲುವಿಗೆ ಭದ್ರ ಅಡಿಪಾಯ ಹಾಕಿತು. ತಿಲಕ್ ವರ್ಮಾ ಕೂಡ 19 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಯೊಂದಿಗೆ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಪಾಕ್​ಗೆ ಟಾಂಗ್ ಕೊಟ್ಟ ಗಿಲ್
ಮೈದಾನದಲ್ಲಿ ಪಾಕಿಸ್ತಾನಿ ಆಟಗಾರರು ವಿಚಿತ್ರ ಮತ್ತು ಅನಗತ್ಯವಾಗಿ ಟೀಂ ಇಂಡಿಯಾ ಆಟಗಾರರ ಜೊತೆ ಜಗಳಕ್ಕೆ ನಿಂತಿದ್ದರು. ಅದಕ್ಕೆ ಅಭಿಷೇಕ್ ಮತ್ತು ಗಿಲ್ ಸುಮ್ಮನೆ ಕೂರಲಿಲ್ಲ. ತಕ್ಕ ಉತ್ತರವನ್ನು ಬ್ಯಾಟ್ ಮೂಲಕ ಕೊಟ್ಟರು. ಹ್ಯಾಂಡ್‌ಶೇಕ್ ವಿವಾದದ ಬಳಿಕ ಪಾಕಿಸ್ತಾನ ಕ್ರಿಕೆಟ್ ಅಭ್ಯಾಸಕ್ಕಿಂತ ಇತರ ಆಟಗಾರರನ್ನು ಹೇಗೆ ಕೀಟಲೆ ಮಾಡಬೇಕೆಂದು ಕಲಿಯುವುದರ ಮೇಲೆ ಹೆಚ್ಚು ಗಮನಹರಿಸಿದೆ. ಪರಿಣಾಮ ಭಾರತದ ಎದುರು ಮತ್ತೊಮ್ಮೆ ಸೋತು ಸುಣ್ಣವಾಗಿದೆ.
ಪಾಕ್ ಕೆರಳುವಂತೆ ಪೋಸ್ಟ್ ಹಾಕಿದ ಗಿಲ್
ಗೆಲುವಿನ ನಂತರ ಸೋಶಿಯಲ್ ಮೀಡಿಯಾದಲ್ಲಿ ಗಿಲ್, ಪಾಕಿಸ್ತಾನಿ ಕ್ರಿಕೆಟಿಗರನ್ನು ಕೆರಳಿಸಿದ್ದಾರೆ. ಗಿಲ್ ಏಷ್ಯಾ ಕಪ್​​ನಲ್ಲಿ ಆಡಿದ ನಾಲ್ಕು ಪಂದ್ಯಗಳ ಫೋಟೋಗಳನ್ನು ಹಾಕಿಕೊಂಡಿದ್ದಾರೆ. ಅದಕ್ಕೆ ‘ಆಟವು ಮಾತನಾಡುತ್ತದೆ, ಪದಗಳಲ್ಲ’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅಂದರೆ ನಿಮ್ಮ ಆಟವು ಮಾತನಾಡುತ್ತದೆ, ಪದಗಳಲ್ಲ. ಪದಗಳಿಂದ ಇತರ ತಂಡವನ್ನು ಕಿರುಕುಳ ಮಾಡುವುದು ಆಟದ ತಂತ್ರದ ಭಾಗವಾಗಿರಬಹುದು. ಆದರೆ ಪಂದ್ಯವನ್ನು ಗೆಲ್ಲುವ ಏಕೈಕ ಮಾರ್ಗವಲ್ಲ ಎಂದು ಕಿಡಿಕಾರಿದ್ದಾರೆ.
ಕೆಟ್ಟ ದಾಖಲೆ
ಟೀಮ್ ಇಂಡಿಯಾ ವಿರುದ್ಧ 15ನೇ ಟಿ20ಐ ಆಡುತ್ತಿರುವ ಪಾಕಿಸ್ತಾನಕ್ಕೆ ಇದು 12ನೇ ಸೋಲಾಗಿದೆ. ಟಿ20 ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಭಾರತವನ್ನು ಕೇವಲ ಮೂರು ಬಾರಿ ಸೋಲಿಸಿದೆ. ನಿನ್ನೆಯ ಗೆಲುವಿನೊಂದಿಗೆ ಭಾರತ ಏಷ್ಯಾಕಪ್​​ನ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
Game speaks, not words 🇮🇳🏏 pic.twitter.com/5yNi2EO70P
— Shubman Gill (@ShubmanGill) September 21, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ