/newsfirstlive-kannada/media/media_files/2026/03/05/newzealand-2026-03-05-08-06-57.jpg)
2026ರ ಟಿ20 ವಿಶ್ವಕಪ್‌ನ ಮೊದಲ ಫೈನಲಿಸ್ಟ್ ತಂಡ ಸಿದ್ಧವಾಗಿದೆ. ಬುಧವಾರ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳ ಅಂತರದಿಂದ ಮಣಿಸಿದ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಸೋಲಿಲ್ಲದ ಸರದಾರನಿಗೆ ಶಾಕ್
ದಕ್ಷಿಣ ಆಫ್ರಿಕಾ ತಂಡಕ್ಕೆ ಈ ವಿಶ್ವಕಪ್‌ನಲ್ಲಿ ಇಲ್ಲಿಯವರೆಗೇ ಸೋಲೇ ಕಂಡಿರಲಿಲ್ಲ. ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತ ಕಲೆಹಾಕಲು ವಿಫಲವಾಯಿತು. ಕೆಳಕ್ರಮಾಂಕದಲ್ಲಿ ಮಾರ್ಕೊ ಜಾನ್ಸೆನ್ ಅಬ್ಬರಿಸಿದರು. ಅವರು ಕೇವಲ 30 ಎಸೆತಗಳಲ್ಲಿ ಅಜೇಯ 55 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್‌ಗಳಿಗೆ ತಲುಪಿಸಿದರು.
ವಿಶ್ವ ದಾಖಲೆಯ ಶತಕ
170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡಕ್ಕೆ ಫಿನ್ ಅಲೆನ್ ಮತ್ತು ಟಿಮ್ ಸೈಫರ್ಟ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 9.1 ಓವರ್‌ಗಳಲ್ಲಿ 117 ರನ್ ಸೇರಿಸಿ ಗೆಲುವನ್ನು ಸುಲಭಗೊಳಿಸಿತು. ಸೈಫರ್ಟ್ 33 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು.
ಆದರೆ, ಫಿನ್ ಅಲೆನ್ ಅಕ್ಷರಶಃ ರನ್ ಮಳೆ ಸುರಿಸಿದರು. ಕೇವಲ 33 ಎಸೆತಗಳಲ್ಲಿ 10 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 100 ರನ್ ಸಿಡಿಸಿದರು. ಇದು ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲಾದ ಅತ್ಯಂತ ವೇಗದ ಶತಕವಾಗಿದೆ. ಅಲೆನ್ ಅವರ ಈ ಅಬ್ಬರದಿಂದಾಗಿ ನ್ಯೂಜಿಲೆಂಡ್ ಕೇವಲ 12.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿ ವಿಜಯಶಾಲಿಯಾಯಿತು.
ಎರಡನೇ ಬಾರಿ ಫೈನಲ್‌ಗೆ ನ್ಯೂಜಿಲೆಂಡ್
ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಹಿಂದೆ 2021ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್ ತಲುಪಿತ್ತು. ಅಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ಅವರ 85 ರನ್‌ಗಳ ಅಮೋಘ ಆಟದ ಹೊರತಾಗಿಯೂ ಕಿವೀಸ್ ಸೋಲನ್ನು ಅನುಭವಿಸಿತ್ತು.
ಈ ಬಾರಿ ಫಿನ್ ಅಲೆನ್ ಅವರ ಅಮೋಘ ಫಾರ್ಮ್‌ನೊಂದಿಗೆ ನ್ಯೂಜಿಲೆಂಡ್ ಚೊಚ್ಚಲ ಟಿ20 ವಿಶ್ವಕಪ್ ಮುಕುಟವನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸೆಮಿಫೈನಲ್: ಟೀಮ್ ಇಂಡಿಯಾದ ಬಲಿಷ್ಟ ಪ್ಲೇಯಿಂಗ್ 11 ಹೇಗಿರಲಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us