ಪಿಸಿಬಿ ಅಧ್ಯಕ್ಷ ಒಬ್ಬ ಅನಕ್ಷರಸ್ಥ.. ಸೋತ ಬೆನ್ನಲ್ಲೇ ಆಟಗಾರರ ಮೇಲೆ ಉರಿದುಬಿದ್ದ ಅಖ್ತರ್..!

ಟಿ20 ವಿಶ್ವಕಪ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್‌ಗಳಿಂದ ಮಣಿಸುವ ಮೂಲಕ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಹೀನಾಯ ಸೋಲಿನ ಬಳಿಕ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಆಟಗಾರರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

author-image
Ganesh Kerekuli
Shoaib Akhtar
Advertisment

ಟಿ20 ವಿಶ್ವಕಪ್ 2026ರ (T20 World Cup 2026) ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್‌ಗಳಿಂದ ಮಣಿಸುವ ಮೂಲಕ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಹೀನಾಯ ಸೋಲಿನ ಬಳಿಕ ಪಾಕ್ ಮಾಜಿ ವೇಗಿ, ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಹಾಗೂ ಆಟಗಾರರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಪಾಕಿಸ್ತಾನದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕ್ ತಂಡದ ಶರಣಾಗತಿಯನ್ನು ತೀವ್ರವಾಗಿ ಖಂಡಿಸಿದ್ದು, ಪಿಸಿಬಿ ಅಧ್ಯಕ್ಷರ ವಿರುದ್ಧ ಸ್ಫೋಟಕ ಹೇಳಿಕೆ ನೀಡಿದ್ದಾರೆ.

‘‘ಪಿಸಿಬಿ ಅಧ್ಯಕ್ಷರಿಗೆ ಕ್ರಿಕೆಟ್ ಗಂಧಗಾಳಿ ಗೊತ್ತಿಲ್ಲ’’

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಅಖ್ತರ್ ನೇರ ವಾಗ್ದಾಳಿ ನಡೆಸಿದ್ದಾರೆ. ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲದ ವ್ಯಕ್ತಿ (ಮೊಹ್ಸಿನ್ ನಖ್ವಿ) ಪಿಸಿಬಿ ಅಧ್ಯಕ್ಷರಾಗಿದ್ದಾರೆ. ಇಂತಹ ಅನಕ್ಷರಸ್ಥ  ಹಾಗೂ ಅಸಮರ್ಥ ವ್ಯಕ್ತಿಗಳಿಗೆ ಜವಾಬ್ದಾರಿ ನೀಡುವುದೇ ಜಗತ್ತಿನ ಅತಿದೊಡ್ಡ ಅಪರಾಧ. ಇವರಿಂದ ತಂಡ ಹೇಗೆ ಮುಂದುವರಿಯಲು ಸಾಧ್ಯ? ಎಂದು ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಬರ್ ಅಜಂ, ಶಾಹೀನ್ ಅಫ್ರಿದಿಗೂ ಕ್ಲಾಸ್

ಕೇವಲ ಆಡಳಿತ ಮಂಡಳಿ ಮಾತ್ರವಲ್ಲದೆ, ಆಟಗಾರರ ಪ್ರದರ್ಶನವನ್ನೂ ಅಖ್ತರ್ ಟೀಕಿಸಿದ್ದಾರೆ. ಶಾಹೀನ್ ಅಫ್ರಿದಿ 125 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಆಧುನಿಕ ಕ್ರಿಕೆಟ್‌ಗೆ ಇದು ಸಾಲುವುದಿಲ್ಲ. ನೀವು ಬಾಬರ್ ಅಜಂ ಅವರನ್ನು ಸೂಪರ್ ಸ್ಟಾರ್ ಮಾಡಿದ್ದೀರಿ, ಆದರೆ ಅವರಿಗೆ ಒಂದು ಪಂದ್ಯವನ್ನು ಗೆಲ್ಲಿಸಿಕೊಡಲು ಆಗುತ್ತಿಲ್ಲ. ಕಳೆದ 15-20 ವರ್ಷಗಳಿಂದ ಪಾಕ್ ಕ್ರಿಕೆಟ್‌ನಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ, ಹೀಗಾಗಿ ಇಂದು ನಾವು ಭಾರತವನ್ನು ಸೋಲಿಸುವ ಕನಸು ಕಾಣಲೂ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದ ಬ್ಯಾಟಿಂಗ್: ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ಇಶಾನ್ ಕಿಶನ್ (40 ಎಸೆತಗಳಲ್ಲಿ 77 ರನ್) ಅವರ ಅಬ್ಬರದ ಅರ್ಧಶತಕ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ (32) ಮತ್ತು ಶಿವಂ ದುಬೆ (27) ಅವರ ನೆರವಿನಿಂದ 175/7 ರನ್ ಕಲೆಹಾಕಿತ್ತು.

ಗುರಿ ಬೆನ್ನತ್ತಿದ ಪಾಕಿಸ್ತಾನ, ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆಯುವ ಮೂಲಕ ಪಾಕ್ ತಂಡವನ್ನು 114 ರನ್‌ಗಳಿಗೆ ಆಲೌಟ್ ಮಾಡಿದರು. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 8-1 ಅಂತರದ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ:ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದ ಭಾರತ; 61 ರನ್ ಅಂತರದ ಭರ್ಜರಿ ಜಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

india vs pakistan
Advertisment