/newsfirstlive-kannada/media/media_files/2026/02/23/team-india-23-2026-02-23-09-28-30.jpg)
2026ರ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಟೀಮ್ ಇಂಡಿಯಾಗೆ ಸೂಪರ್-8 ಹಂತದಲ್ಲಿ ಆರಂಭಿಕ ಆಘಾತ ಎದುರಾಗಿದೆ. ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಈ ಸೋಲು ಭಾರತದ ಸೆಮಿಫೈನಲ್ ಹಾದಿಯನ್ನು ದುರ್ಗಮವಾಗಿಸಿದೆ.
ದಕ್ಷಿಣ ಆಫ್ರಿಕಾ ನೀಡಿದ್ದ 188 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ನೆಟ್ ರನ್ ರೇಟ್ (NRR) ಮೇಲೂ ಭಾರೀ ಪೆಟ್ಟು ಮಾಡಿಕೊಂಡಿದೆ. ಈಗ ಭಾರತ ಸೆಮಿಫೈನಲ್ ತಲುಪಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹಾಗಾದರೆ ಭಾರತದ ಮುಂದಿನ ಸೆಮಿಫೈನಲ್ ಹಾದಿ ಹೇಗಿದೆ?
ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?
ಭಾರತ ತನ್ನ ಮುಂದಿನ ಎರಡು ಪಂದ್ಯಗಳನ್ನು ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಬೇಕಿದೆ.
ಸನ್ನಿವೇಶ-1: ಭಾರತ ಎರಡೂ ಪಂದ್ಯಗಳನ್ನು ಗೆದ್ದರೆ?
ಒಂದು ವೇಳೆ ಭಾರತ ತನ್ನ ಬಾಕಿ ಉಳಿದಿರುವ ಎರಡೂ ಪಂದ್ಯಗಳನ್ನು (ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ) ಗೆದ್ದರೆ, ಒಟ್ಟು 4 ಅಂಕಗಳನ್ನು ಪಡೆಯಲಿದೆ. ಸಾಮಾನ್ಯವಾಗಿ 4 ಅಂಕಗಳು ಸೆಮಿಫೈನಲ್ ತಲುಪಲು ಸಾಕಾಗುತ್ತದೆ.
ಆದರೆ, ದಕ್ಷಿಣ ಆಫ್ರಿಕಾ ತನ್ನ ಮುಂದಿನ ಪಂದ್ಯಗಳಲ್ಲಿ ಒಂದರಲ್ಲಿ ಸೋತು, ವೆಸ್ಟ್ ಇಂಡೀಸ್ ಅಥವಾ ಜಿಂಬಾಬ್ವೆ ಆಫ್ರಿಕಾ ವಿರುದ್ಧ ಗೆದ್ದರೆ ಆಗ ಮೂರು ತಂಡಗಳ ಬಳಿ ತಲಾ 4 ಅಂಕಗಳು ಆಗುವ ಸಾಧ್ಯತೆಯಿರುತ್ತದೆ.
ಆಗ ‘ನೆಟ್ ರನ್ ರೇಟ್’ (NRR) ನಿರ್ಣಾಯಕವಾಗಲಿದೆ. ಹೀಗಾಗಿ ಭಾರತ ಕೇವಲ ಗೆದ್ದರೆ ಸಾಲದು, ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ.
ಸನ್ನಿವೇಶ-2: ಭಾರತ ಒಂದು ಪಂದ್ಯ ಗೆದ್ದು, ಒಂದರಲ್ಲಿ ಸೋತರೆ?
ಒಂದು ವೇಳೆ ಭಾರತ ಉಳಿದೆರಡು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದರೆ, ಸೆಮಿಫೈನಲ್ ಪ್ರವೇಶ ಅದೃಷ್ಟದ ಮೇಲೆ ನಿರ್ಧಾರವಾಗುತ್ತದೆ.
ಈ ಸನ್ನಿವೇಶದಲ್ಲಿ ದಕ್ಷಿಣ ಆಫ್ರಿಕಾ ತನ್ನೆಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕು.
ಭಾರತವು ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೋ, ಆ ತಂಡವನ್ನು ಸೋಲಿಸಲೇಬೇಕು.
ಆಗ ಭಾರತ, ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಮೂರು ತಂಡಗಳು ತಲಾ 2 ಅಂಕಗಳನ್ನು ಹೊಂದುತ್ತವೆ. ಆಗ ಮತ್ತೆ 'ನೆಟ್ ರನ್ ರೇಟ್' ಪ್ರಮುಖವಾಗುತ್ತದೆ.
ಬಾಕಿ ಉಳಿದಿರುವ ಪಂದ್ಯಗಳ ವೇಳಾಪಟ್ಟಿ
- ಫೆಬ್ರವರಿ 23 (ಇಂದು): ವೆಸ್ಟ್ ಇಂಡೀಸ್ vs ಜಿಂಬಾಬ್ವೆ (ಮುಂಬೈ)
- ಫೆಬ್ರವರಿ 26: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ (ಅಹಮದಾಬಾದ್)
- ಫೆಬ್ರವರಿ 26: ಭಾರತ vs ಜಿಂಬಾಬ್ವೆ (ಚೆನ್ನೈ)
- ಮಾರ್ಚ್ 1: ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ (ದೆಹಲಿ)
- ಮಾರ್ಚ್ 1: ಭಾರತ vs ವೆಸ್ಟ್ ಇಂಡೀಸ್ (ಕೋಲ್ಕತ್ತಾ)
ಒಟ್ಟಿನಲ್ಲಿ ಸೂರ್ಯಕುಮಾರ್ ಪಡೆಗೆ ಮುಂದಿನ ದಾರಿ ಹೂವಿನ ಹಾದಿಯಲ್ಲ. ದೊಡ್ಡ ಅಂತರದ ಗೆಲುವೊಂದೇ ಈಗ ಭಾರತಕ್ಕೆ ಶ್ರೀರಕ್ಷೆಯಾಗಬೇಕಿದೆ.
ಇದನ್ನೂ ಓದಿ: ರಾತ್ರಿ ಹಂಪ್ ಕಾಣದೇ ಭೀಕರ ಅಪಘಾತ; MCA ವಿದ್ಯಾರ್ಥಿನಿ ನಿಧನ, ಮತ್ತೊಬ್ಬಳ ಸ್ಥಿತಿ ಗಂಭೀರ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us