/newsfirstlive-kannada/media/media_files/2025/09/28/tilak_varma-2-2025-09-28-23-43-25.jpg)
ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಈ ಮೂಲಕ 9ನೇ ಬಾರಿಗೆ ಭಾರತ ತಂಡ ಏಷ್ಯಾಕಪ್​ಗೆ ಮುತ್ತಿಕ್ಕಿದಂತೆ ಆಗಿದೆ. ಬೌಲಿಂಗ್​ನಲ್ಲಿ ಕುಲ್​ ದೀಪ್ ಯಾದವ್ ಅವರು ಪಾಕಿಸ್ತಾನಕ್ಕೆ ಕಾಡಿದರೆ, ಬ್ಯಾಟಿಂಗ್​ನಲ್ಲಿ ತಿಲಕ್ ವರ್ಮಾ ಅವರು ಸೋಲಿನ ರುಚಿ ತೋರಿಸಿದರು.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಟಾಸ್ ಗೆದ್ದು ಎದುರಾಳಿ ಪಾಕಿಸ್ತಾನವನ್ನು ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಮೊದಲ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭದಲ್ಲೇ ದೊಡ್ಡ ರನ್​ ಗಳಿಸಿತು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಸಾಹಿಬ್ಜಾದಾ ಫರ್ಹಾನ್ 57, ಹಾಗೂ ಫಖರ್ ಜಮಾನ್ 46 ರನ್ ನೆರವಿನಿಂದ ಪಾಕ್​ 147 ರನ್​ ಟಾರ್ಗೆಟ್ ನೀಡಿತ್ತು.
ಈ ಟಾರ್ಗೆಟ್​ ಬೆನ್ನು ಹತ್ತಿದ್ದ ಟೀಮ್ ಇಂಡಿಯಾ ಓಪನರ್ಸ್​ ಆರಂಭದಲ್ಲೇ ದೊಡ್ಡ ಆಘಾತ ಎದುರಿಸಿದರು. ಕಳೆದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಓಪನರ್​​ ಅಭಿಷೇಕ್ ಶರ್ಮಾ ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿದರು. ಇವರ ಬೆನ್ನಲ್ಲೇ ಬ್ಯಾಟಿಂಗ್​ಗೆ ಬಂದಿದ್ದ ನಾಯಕ ಸೂರ್ಯ ಫೈನಲ್​ ಮ್ಯಾಚ್​ನಲ್ಲೂ ತೀವ್ರ ಕಳಪೆ ಬ್ಯಾಟಿಂಗ್ ಮಾಡಿ 1 ರನ್​ಗೆ ಔಟ್ ಆದರು.
ಸೂರ್ಯ ಬೆನ್ನಲ್ಲೇ ಮತ್ತೊಬ್ಬ ಓಪನರ್ ಶುಭ್​ಮನ್ ಗಿಲ್ 12 ರನ್​ಗೆ ಕ್ಯಾಚ್​ ಔಟ್ ಆದರು​. ಇವರ ಬಳಿಕ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್​ ಇಬ್ಬರು ಜೋಡಿಯಾಗಿ ಟೀಮ್ ಇಂಡಿಯಾಕ್ಕೆ ಜೀವ ತುಂಬಿದರು. ತಿಲಕ್-ಸಂಜು ಜೋಡಿಯಾಟ ಭಾರತಕ್ಕೆ ಕಳೆ ತುಂಬಿತು. ಆದರೆ ಈ ನಡುವೆ ಸಂಜು ಸ್ಯಾಮ್ಸನ್ 24 ರನ್​ ಗಳಿಸಿ ಆಡುವಾಗ ಫರ್ಹಾನ್​ಗೆ ಕ್ಯಾಚ್​ ಕೊಟ್ಟು ಹೊರ ನಡೆದರು.
ಇನ್ನೊಂದೆಡೆ ತಿಲಕ್ ವರ್ಮಾ ಏಕಾಂಗಿ ಹೋರಾಟ ಮುಂದುವರೆದಿತ್ತು. ಸಂಜು ಬಳಿಕ ಕ್ರೀಸ್​ಗೆ ಆಗಮಿಸಿದ್ದ ಶಿವಂ ದುಬೆ ಅವರು ಉತ್ತಮ ಸಾಥ್ ಕೊಟ್ಟರು. ಹೀಗಾಗಿ ಇಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಪಾರ್ಟನರ್​ಶಿಪ್ ಮೂಡಿ ಬಂದಿತು. ಇಲ್ಲಿ ಪಾಕಿಸ್ತಾನದ ಬೌಲರ್​ಗಳು ವಿಕೆಟ್​ಗಾಗಿ ಪರದಾಡಿದರು. ಆರಂಭದಲ್ಲಿ ಭಾರತದ ಮೇಲೆ ಒತ್ತಡ ತಂದಿದ್ದ ಪಾಕಿಸ್ತಾನದವರು ಕೊನೆ ಕೊನೆಗೆ ಫುಲ್ ಡಲ್ ಆಗಿ ಹೋದರು.
ಭಾರತ ತಂಡದಲ್ಲಿ ಒಂದು ಕಡೆ ವಿಕೆಟ್​ ಹೋಗುತ್ತಿದ್ದರೂ ತಿಲಕ್ ವರ್ಮಾ ಅವರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. 53 ಎಸೆತಗಳನ್ನು ಎದುರಿಸಿದ ತಿಲಕ್​ 3 ಫೋರ್ ಹಾಗೂ 4 ಸಿಕ್ಸರ್ ಸಮೇತ 69 ರನ್​ ಸಿಡಿಸಿ, ಭಾರತವನ್ನು ಗೆಲ್ಲಿಸಿದರು. ಶಿವಂ ದುಬೆ 2 ಫೋರ್ ಹಾಗೂ 2 ಸಿಕ್ಸರ್​ನಿಂದ 33 ರನ್​ ಬಾರಿಸಿದರು.
ತಿಲಕ್ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ಇಡೀ ಪಾಕಿಸ್ತಾನವನ್ನೇ ನಡುಗಿಸಿತು. ಮ್ಯಾಚ್ ವಿನ್ನರ್ ಎಂದು ಮತ್ತೊಮ್ಮೆ ತಿಲಕ್ ವರ್ಮಾ ಸಾಭೀತು ಪಡಿಸಿಕೊಂಡರು. ಕೊನೆಯಲ್ಲಿ ಪಂದ್ಯ ತುಂಬಾ ರೋಚಕವಾಗಿತ್ತು. ಆದರೆ ಶಿವಂ ದುಬೆ ಹಾಗೂ ತಿಲಕ್ ಅವರ ಬ್ಯಾಟಿಂಗ್ ಅಭಿಮಾನಿಗಳಿಗೆ ಡಬಲ್ ಖುಷಿ ನೀಡಿತು. ರಿಂಕು ಸಿಂಗ್ ಕೊನೆಗೆ ಬೌಂಡರಿ ಬಾರಿಸುವ ಮೂಲಕ ಪಾಕಿಸ್ತಾನ ನೀಡಿದ್ದ 147 ಗುರಿಯನ್ನು ಟೀಮ್ ಇಂಡಿಯಾ ತಲುಪಿ, ಜಯಭೇರಿ ಬಾರಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ