/newsfirstlive-kannada/media/media_files/2026/03/07/india-vs-newzealand-2-2026-03-07-11-25-16.jpg)
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಪಂದ್ಯಕ್ಕಾಗಿ ತಂಡದ ಕಾಂಬಿನೇಷನ್ ಹೇಗಿರಬೇಕು? ಯಾರಿಗೆ ಮಣೆ ಹಾಕಬೇಕು? ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಎಲ್ಲದರ ನಡುವೆ ಫೈನಲ್ ಪಂದ್ಯದ ಫಲಿತಾಂಶವನ್ನು ಮೌನವಾಗಿ ನಿರ್ಧರಿಸುವ ಮತ್ತೊಂದು ಪ್ರಮುಖ ಅಸ್ತ್ರ ಎಂದರೆ ಅದು ಅಹಮದಾಬಾದ್‌ನ ‘ಪಿಚ್’.
ಮೊಟೆರಾ ಕ್ರೀಡಾಂಗಣವು ಭಾರತದ ಇತರ ಮೈದಾನಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇಲ್ಲಿ ಮೂರು ವಿಭಿನ್ನ ರೀತಿಯ ಪಿಚ್‌ಗಳಿವೆ. ಕೆಂಪು ಮಣ್ಣು, ಕಪ್ಪು ಮಣ್ಣು ಮತ್ತು ಇವೆರಡರ ಮಿಶ್ರಣವಿರುವ ಹೈಬ್ರಿಡ್ ಮಣ್ಣಿನ ಪಿಚ್. ಪ್ರತಿಯೊಂದು ಪಿಚ್ ಕೂಡ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ.
ಯಾವ ಪಿಚ್‌ನ ಗುಣಲಕ್ಷಣಗಳೇನು?
ಕಪ್ಪು ಮಣ್ಣಿನ ಪಿಚ್‌ಗಳು ಸಾಮಾನ್ಯವಾಗಿ ನಿಧಾನಗತಿಯಿಂದ ಕೂಡಿರುತ್ತವೆ. ಇಲ್ಲಿ ಚೆಂಡು ಗ್ರಿಪ್ ಆಗುವುದರಿಂದ ಬ್ಯಾಟರ್‌ಗಳಿಗೆ ಸರಾಗವಾಗಿ ರನ್ ಗಳಿಸುವುದು ಕಷ್ಟ. ಮತ್ತೊಂದೆಡೆ, ಕೆಂಪು ಮಣ್ಣಿನ ಪಿಚ್‌ಗಳು ಉತ್ತಮ ಬೌನ್ಸ್ ಮತ್ತು ವೇಗವನ್ನು ಒದಗಿಸುತ್ತವೆ. ಇದು ಸಾಮಾನ್ಯವಾಗಿ ಹೈ-ಸ್ಕೋರಿಂಗ್ ಪಂದ್ಯಗಳಿಗೆ ಕಾರಣವಾಗುತ್ತದೆ. ಈ ಹಿಂದಿನ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಪ್ಪು ಮಣ್ಣಿನ ಪಿಚ್‌ನಲ್ಲಿ ಆಡಿದ್ದ ಭಾರತ, ರನ್ ಗಳಿಸಲು ಪರದಾಡಿ ಹೀನಾಯ ಸೋಲು ಕಂಡಿತ್ತು. ಆ ಕಹಿ ನೆನಪು ಟೀಮ್ ಇಂಡಿಯಾದ ಮನಸ್ಸಿನಲ್ಲಿ ಇನ್ನೂ ಇದೆ.
ಫೈನಲ್‌ಗೆ ಯಾವ ಪಿಚ್?
ಹಾಗಾಗಿಯೇ ಫೈನಲ್ ಪಂದ್ಯಕ್ಕೆ ಯಾವ ಪಿಚ್ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಕ್ಯುರೇಟರ್‌ಗಳು ಎಚ್ಚರಿಕೆ ವಹಿಸಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೋ (ESPNcricinfo) ವರದಿಯ ಪ್ರಕಾರ, ಫೈನಲ್ ಕದನಕ್ಕೆ ಕೆಂಪು ಮತ್ತು ಕಪ್ಪು ಮಣ್ಣಿನ ಮಿಶ್ರಣವಿರುವ 'ಹೈಬ್ರಿಡ್ ಪಿಚ್' (Hybrid Pitch) ಬಳಸುವ ಸಾಧ್ಯತೆಯಿದೆ. ಈ ಪಿಚ್ ಬ್ಯಾಟರ್‌ಗಳಿಗೆ ಉತ್ತಮ ಬೌನ್ಸ್ ಮತ್ತು ವೇಗವನ್ನು ನೀಡುವ ಜೊತೆಗೆ, ಪಂದ್ಯ ಸಾಗಿದಂತೆ ಬೌಲರ್‌ಗಳಿಗೂ ನೆರವಾಗುತ್ತದೆ.
ಕುತೂಹಲಕಾರಿ ಸಂಗತಿಯೆಂದರೆ ಫೈನಲ್ ಪಂದ್ಯಕ್ಕೆ ಯಾವ ಪಿಚ್ ಬಳಸಲಾಗುತ್ತದೆ ಎಂಬುದು ಇನ್ನೂ ಅಧಿಕೃತವಾಗಿ ನಿರ್ಧಾರವಾಗಿಲ್ಲ. ಬ್ರಾಡ್‌ಕಾಸ್ಟರ್‌ಗಳು ಸ್ಟಂಪ್ ಕ್ಯಾಮೆರಾಗಳನ್ನು ಇನ್ನೂ ಅಳವಡಿಸಿಲ್ಲ. ಕ್ಯುರೇಟರ್‌ಗಳು ಮತ್ತು ಬಿಸಿಸಿಐ ಸಿಇಒ ಹೇಮಂಗ್ ಅಮಿನ್ ಅವರು ಒಂದು ನಿರ್ದಿಷ್ಟ ಪಿಚ್ ಅನ್ನು ನಿಕಟವಾಗಿ ಪರಿಶೀಲಿಸಿದ್ದು ಆ ಪಿಚ್ ಮೇಲೆ ಕವರ್ ಹೊದಿಸಲಾಗಿದೆ.
ಈ ಪಿಚ್ ಅನ್ನು ಈ ಟೂರ್ನಿಯಲ್ಲಿ ಹೆಚ್ಚಾಗಿ ಬಳಸಲಾಗಿಲ್ಲ. ಫೆಬ್ರವರಿ 9 ರಂದು ನಡೆದ ಕೆನಡಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಒಂದೇ ಒಂದು ಪಂದ್ಯಕ್ಕೆ ಮಾತ್ರ ಈ ಪಿಚ್ ಬಳಸಲಾಗಿತ್ತು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 213 ರನ್ ಕಲೆಹಾಕಿ 53 ರನ್‌ಗಳಿಂದ ಜಯಗಳಿಸಿತ್ತು. ಅಂದಿನಿಂದ ಈ ಪಿಚ್ ಬಳಸದ ಕಾರಣ ಫೈನಲ್ ಪಂದ್ಯವು ಫ್ರೆಶ್ ಪಿಚ್ ಮೇಲೆ ನಡೆಯುವುದು ಬಹುತೇಕ ಖಚಿತವಾಗಿದೆ.
ಪಿಚ್ ಯಾರಿಗೆ ಒಲಿಯಲಿದೆ?
ಒಂದು ವೇಳೆ ನಿರೀಕ್ಷೆಯಂತೆ ಹೈಬ್ರಿಡ್ ಪಿಚ್ ಬಳಸಿದರೆ ಫೈನಲ್ ಪಂದ್ಯವು ವೇಗದ ಹಾಗೂ ಹೈ-ಸ್ಕೋರಿಂಗ್ ಪಂದ್ಯವಾಗಿ ಮಾರ್ಪಾಡಾಗಲಿದೆ. ಈ ಪಿಚ್‌ನ ಬೌನ್ಸ್ ಮತ್ತು ವೇಗವು ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್ ಎರಡಕ್ಕೂ ನೆರವಾಗುತ್ತದೆ.
ಭಾರತದ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಹೊಸ ಚೆಂಡಿನಲ್ಲಿ ಆಕ್ರಮಣ ಮಾಡಲು ಎದುರು ನೋಡುತ್ತಿದ್ದಾರೆ. ಬೌನ್ಸಿ ಟ್ರ್ಯಾಕ್‌ಗಳಲ್ಲಿ ಬುಮ್ರಾ ಅವರ ನಿಖರತೆ ಅತ್ಯಂತ ಅಪಾಯಕಾರಿಯಾಗಬಲ್ಲದು. ಸ್ಪಿನ್ ವಿಭಾಗದಲ್ಲಿ ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಮಧ್ಯಮ ಓವರ್‌ಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಇತ್ತ ನ್ಯೂಜಿಲೆಂಡ್‌ನ ಬೌಲಿಂಗ್ ದಾಳಿ ಕೂಡ ಈ ಪರಿಸ್ಥಿತಿಗಳಿಗೆ ಸಮಾನವಾಗಿ ಹೊಂದಿಕೊಳ್ಳುತ್ತದೆ. ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ಇಬ್ಬರೂ ಬೌನ್ಸ್ ಮತ್ತು ವೇಗವನ್ನು ಬಳಸಿಕೊಳ್ಳುವಲ್ಲಿ ನಿಸ್ಸೀಮರು, ಜೊತೆಗೆ ಜೇಮ್ಸ್ ನೀಶಮ್ ಕೂಡ ಕಿವೀಸ್ ಪಡೆಗೆ ಆಸರೆಯಾಗಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us