/newsfirstlive-kannada/media/post_attachments/wp-content/uploads/2025/01/Sri-Ravishankar-guruji.jpg)
ಬೆಂಗಳೂರು: ಸತತ 3 ವರ್ಷಗಳಿಂದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ ಟ್ರಸ್ಟ್‌ನ ವತಿಯಿಂದ ಶ್ರೀ ಶ್ರೀ ಶೈಕ್ಷಣಿಕ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ವರ್ಷ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೀಡಲಾಯಿತು. ಸಮಗ್ರವಾದ ಶಿಕ್ಷಣವನ್ನು ನೀಡುವ, ಮೌಲ್ಯಾಧಾರಿತವಾದ, ನವೀನತೆಯನ್ನೊಳಗೊಂಡ, ಪ್ರಾಚೀನ ಜ್ಞಾನ ಮತ್ತು ಶಾಂತಿಯ ಶಿಕ್ಷಣದ ಮೇಲೆ ಒತ್ತೆಯಿಟ್ಟು, ಪಠ್ಯೇತರ ಶಿಕ್ಷಣಕ್ಕಿಂತಲೂ ಹೊರತಾಗಿ ಇವುಗಳನ್ನು ಜಾರಿಗೆ ತಂದ ಶಿಕ್ಷಕರಿಗೆ, ಸಂಸ್ಥೆಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಆಧ್ಯಾತ್ಮಿಕ ಗುರುಗಳೂ, ಜಾಗತಿಕ ಮಾನವತಾವಾದಿಗಳೂ ಆಗಿರುವ ಶ್ರೀ ಶ್ರೀ ರವಿಶಂಕರ್, ಕೇಂದ್ರ ರಾಜ್ಯ ಆಯುಷ್ ಮಂತ್ರಾಲಯ, ಭಾರತ ಸರ್ಕಾರದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಶ್ರೀ ಪ್ರತಾಪ್ ರಾವ್ ಜಾಧವ್ ಅವರು ಉಪಸ್ಥಿತರಿದ್ದರು.
ಸಾಮರಸ್ಯಮಯವಾದ ಸಮಾಜದ ನಿರ್ಮಾಣಕ್ಕಾಗಿ ಸಮಗ್ರ ಶಿಕ್ಷಣದ ಪಾತ್ರದ ಬಗ್ಗೆ ಒತ್ತು ನೀಡಿದ ರವಿಶಂಕರ್ ಗುರೂಜಿ ಅವರು "ಶಿಕ್ಷಣ ಎಂದರೆ ಕೇವಲ ಮಾಹಿತಿಯನ್ನು ನೀಡುವುದಲ್ಲ. ಶಿಕ್ಷಣವೆಂದರೆ ಮಾನವತ್ವದ ಪೋಷಣೆ ಹಾಗೂ ಮೌಲ್ಯಗಳಲ್ಲಿ ನೆಲೆಗೊಂಡಿರುವ, ನವೀನತೆಯ ಸ್ಫೂರ್ತಿಯನ್ನು ಹೊಂದಿರುವಂತಹ ಭವಿಷ್ಯದ ನಾಯಕರನ್ನು ರೂಪಿಸುವುದು" ಎಂದರು.
ಇದನ್ನೂ ಓದಿ: ವಿದ್ಯಾರ್ಥಿಗಳು ಶ್ರದ್ಧೆಯಿಂದ ತಪಸ್ಸು ಮಾಡಿದರೆ ಯಶಸ್ಸು ಖಚಿತ; ಗಾಯಕ ರಾಜೇಶ್ ಕೃಷ್ಣನ್
ಒತ್ತಡ ರಹಿತ ಶಿಕ್ಷಣದ ಅವಶ್ಯಕತೆಯ ಬಗ್ಗೆ ಮಾತನಾಡಿದ ಶ್ರೀ ಪ್ರತಾಪ್ ರಾವ್ ಜಾದವ್ ಅವರು "ಶಿಕ್ಷಣವು ಕೇವಲ ಜ್ಞಾನವನ್ನು ಪಡೆಯುವ ಸಲುವಾಗಿ ಅಲ್ಲ. ಅದು ವ್ಯಕ್ತಿಯ ಸಮಗ್ರ ಬೆಳವಣಿಗೆಗಾಗಿಯೂ ಹೌದು. ಒತ್ತಡವು ವಿದ್ಯಾರ್ಥಿಗಳಲ್ಲಿ ಸರ್ವೇ ಸಾಮಾನ್ಯವಾಗಿರುವಂತಹ, ಆತ್ಮಹತ್ಯೆಗಳು ಹೆಚ್ಚಿರುವಂತಹ ಕಾಲದಲ್ಲಿ ನಾವಿದ್ದೇವೆ. ನಾಗಾಲೋಟವಾಗಿ ಓಡುತ್ತಿರುವ ಈ ಜೀವನದಲ್ಲಿ ಗುರುದೇವರು ಒತ್ತಡರಹಿತ ಶಿಕ್ಷಣದ ಮೇಲೆ ಗಮನವನ್ನಿಟ್ಟಿರುವುದು ಶ್ಲಾಘನೀಯವಾದದ್ದು, ಅತೀ ಮಹತ್ವವಾದದ್ದು" ಎಂದರು.
ಇದೇ ವೇಳೆ "ಕಲಿಕೆಗೆ ಬುನಾದಿಯಾಗಿ ಮಾನಸಿಕ ಆರೋಗ್ಯ: ಇದೇಕೆ ಮುಖ್ಯ?" ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಬೆಂಗಳೂರಿನ ಐ.ಐ.ಎಸ್.ಸಿ ವೈದ್ಯಕೀಯ ಶಾಲೆಯ ನರರೋಗಶಸ್ತ್ರಚಿಕಿತ್ಸಕರಾದ, ಆರೋಗ್ಯದ ಅಧಿಕಾರಿಯಾದ, ಡಾ.ಉಮಾ ನಂಬಿಯಾರ್, ಖ್ಯಾತ ಮಕ್ಕಳ ಹಾಗೂ ಹದಿಹರೆಯದ ಮಾನಸಿಕರೋಗ ತಜ್ಞರಾದ ಡಾ. ಶೇಖರ್ ಶೇಷಾದ್ರಿ ಮತ್ತು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ನ್ಯಾಯ ಶಾಲೆ ಮತ್ತು ಆಡಳಿತದ ಡೀನ್ ಆದ ಡಾ. ಚೇತನ್ ಸಿಂಗಲ್ ರವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಡಾ. ಚೇತನ್ ಸಿಂಗಲ್ ರವರು, "ನಾವು ಅಭಿಮನ್ಯುಗಳನ್ನು ಸೃಷ್ಟಿಸಬಾರದು. ಅವರಿಗೆ ಚಕ್ರವ್ಯೂಹದೊಳಗೆ ಹೊಕ್ಕುವುದು ಹೇಗೆಂದು ತಿಳಿದಿದೆ. ಅದರಿಂದ ಹೊರಬರುವುದು ಹೇಗೆಂದು ಅವರಿಗೆ ತಿಳಿಯುವುದಿಲ್ಲ. ಹೊಸ ಶಿಕ್ಷಣ ನೀತಿಯು ಹೆಚ್ಚು ಸ್ವಾತಂತ್ರ್ಯವನ್ನು ನೀಡಿದೆ" ಎಂದರು.
ಆರ್ಟ್ ಆಫ್ ಲಿವಿಂಗ್‌ನ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಆರೈಕೆಯ ಕಾರ್ಯಕ್ರಮಗಳ ಅಧ್ಯಕ್ಷೆ, ಶ್ರೀ ಶ್ರೀ ರವಿಶಂಕರರ ಸಹೋದರಿಯಾಗಿರುವ ಶ್ರೀಮತಿ ಭಾನುಮತಿ ನರಸಿಂಹನ್ ಅವರು "ನಾವು ಎತ್ತಿ ಹಿಡಿಯುವ ಮೌಲ್ಯಗಳು ನಮ್ಮ ಶಿಕ್ಷಣದಿಂದಾಗಿ. ಮಾನವತೆಗೆ ನೀಡಲಾಗುತ್ತಿರುವ ಅಮೂಲ್ಯವಾದ ಸೇವೆಯನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್‌ನ ಉಚಿತ ಶಾಲೆಯು 43 ವರ್ಷಗಳ ಹಿಂದೆ ಒಂದೇ ಶಾಲೆಯಿಂದ ಪ್ರಾರಂಭವಾಗಿ, ಈಗ 1263 ಶಾಲೆಗಳಾಗಿ ಬೆಳೆದಿದೆ. ಭಾರತದ ಅತ್ಯಂತ ದೂರದ ಪ್ರದೇಶಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದೇವೆ" ಎಂದರು.
ಪ್ರಶಸ್ತಿ ಪಡೆದವರು
ಬೆಂಗಳೂರು ಪಶ್ಚಿಮದ ಡೆಲ್ಲಿ ಪಬ್ಲಿಕ್ ಶಾಲೆಗೆ ‘ಓವರಾಲ್ ಎಕ್ಸೆಲೆನ್ಸ್ ಇನ್ ಎಜುಕೇಷನ್’ ವಿಭಾಗದಲ್ಲಿ ಪ್ರಶಸ್ತಿ ನೀಡಲಾಯಿತು. ಈ ಶಾಲೆಯು ಅಂತಾರಾಷ್ಟ್ರೀಯ ವಿನಿಮಯ ಕಾರ್ಯಕ್ರಮಗಳನ್ನು, ಪರಿಸರ-ಸ್ನೇಹಿ ಕಾರ್ಯಕ್ರಮಗಳನ್ನು ನಡೆಸುವುದರಿಂದ, ಸುಭದ್ರವಾದ ಶೈಕ್ಷಣಿಕ ಹಾಗೂ ಆಪ್ತಸಲಹೆಯ ವ್ಯವಸ್ಥೆಗಳನ್ನು ಹೊಂದಿರುವುದರಿಂದ, ಈ ಶಾಲೆಗೆ ಪ್ರಶಸ್ತಿಯನ್ನು ನೀಡಲಾಯಿತು.
ಆಯುರ್ವೇದ ವೈದ್ಯರಾದ ಡಾ. ಪ್ರಸನ್ನ ನರಸಿಂಹ ರಾವ್ ರವರಿಗೆ ಉತ್ತಮ ಆಯುರ್ವೇದ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಯಿತು. ಇವರು 33 ವರ್ಷಗಳ ಆಯುರ್ವೇದ ಶಿಕ್ಷಣಕ್ಕೆ ಮತ್ತು ಆಡಳಿತಕ್ಕೆ ಕಾಣಿಕೆಯನ್ನು ನೀಡಿದ್ದಾರೆ. ಇವರು ಐದು ಆಸ್ಪತ್ರೆಗಳನ್ನು ಮತ್ತು ಮೂರು ಶೈಕ್ಷಣಿಕ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದರ ಮೂಲಕ ಆಯುರ್ವೇದದ ಜಾಗತಿಕ ಮನ್ನಣೆ ಮತ್ತು ಗುಣಮಟ್ಟವನ್ನು ಹೆಚ್ಚಿಸಿದ್ದಾರೆ.
ತಿರುನೆಲ್ವೇಲಿಯ ಪುಷ್ಪಲತ ವಿದ್ಯಾಮಂದಿರವು ಪಠ್ಯಗಳೊಡನೆ ಸಮುದಾಯ ಸೇವೆಯನ್ನು, ಪರಿಸರ-ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿ, ಇದರಿಂದ ಹಿಂದುಳಿದ ವರ್ಗದ ಮಕ್ಕಳ ಜೀವನಗಳ ಮೇಲೆ ಅಪಾರ ಪ್ರಭಾವವನ್ನು ಬೀರಿದೆ ಮತ್ತು ಪರಿಸರ ಪ್ರಜ್ಞೆಯನ್ನೂ ಬೆಳೆಸಿದೆ.
ಉತ್ತಮ ಶುಶ್ರೂಷಕಿ ಶಿಕ್ಷಕಿಯಾದ ಡಾ. ಜಾಸ್ಮಿನ್ ಜೋಸೆಫ್ ರವರಿಗೆ, ಶುಶ್ರೂಷೆ ವಿದ್ಯೆಯ ಕ್ಷೇತ್ರದಲ್ಲಿ ಮತ್ತು ಸಂಶೋಧನೆಯಲ್ಲಿ ಸೇವೆಯನ್ನಾಧಾರಿತ ನಾಯಕತ್ವವನ್ನು ವಹಿಸಿದ್ದಕ್ಕಾಗಿ ಪ್ರಶಸ್ತಿಯನ್ನು ನೀಡಲಾಯಿತು. ಗುಲ್ ಮೊಹರ್ ಪ್ರೌಢಶಾಲೆಯ (ಪೂರ್ವ ವಲಯದ) ಪ್ರಾಂಶುಪಾಲೆಯಾದ ಪ್ರೀತಿ ಸಿನ್ಹಾರವರಿಗೆ, ಮಾನಸಿಕ ಆರೋಗ್ಯದ ಬಗ್ಗೆ ಮಾಡಿರುವ ಕೆಲಸಕ್ಕಾಗಿ ಮತ್ತು "ಕೇರಿಂಗ್ ಕಾನ್ವರ್ಸೇಷನ್ಸ್" ಕಾರ್ಯಕ್ರಮಕ್ಕಾಗಿ ಮತ್ತು ವೃತ್ತಿಪರ ಸಮಾವೇಶಗಳನ್ನು ನಡೆಸಿದ್ದಕ್ಕಾಗಿ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ನೀಡಲಾಯಿತು. ದಕ್ಷಿಣ ವಲಯದಲ್ಲಿ ಶ್ರೀ ಚಂದ್ರಚೂಡೀಶ್ವರನ್ ರವರಿಗೆ, ಶಾಲೆಯನ್ನು ತಂತ್ರಜ್ಞಾನದ ಮೂಲಕ, ಶಿಕ್ಷಕರ ತರಬೇತಿಯ ಮೂಲಕ, ಪ್ರಭಾವಶಾಲಿ ಸಮುದಾಯದ ಕಾರ್ಯಕ್ರಮಗಳ ಮೂಲಕ ಪರಿವರ್ತಿಸಿದುದಕ್ಕಾಗಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಎಸ್.ಎಸ್.ಆರ್.ವಿ.ಯೆಮ್ ಪಾತ್ರ!
1999ರಲ್ಲಿ ಶ್ರೀ ಶ್ರೀ ರವಿಶಂಕರರಿಂದ ಸ್ಥಾಪಿತವಾದ ಎಸ್.ಎಸ್.ಆರ್.ವಿ.ಯೆಮ್ ಟ್ರಸ್ಟ್ ಭಾರತದಲ್ಲಿ 110 ಸಂಸ್ಥೆಗಳನ್ನು ನಡೆಸುತ್ತಿದೆ. ಇದರಲ್ಲಿ ಶ್ರೀ ಶ್ರೀ ವಿಶ್ವವಿದ್ಯಾಲಯ, ಆಯುರ್ವೇದ ಕಾಲೇಜುಗಳು ಮತ್ತು 2 ಆಯುರ್ವೇದ ಆಸ್ಪತ್ರೆಗಳು ಒಳಗೊಂಡಿವೆ. ಈ ಟ್ರಸ್ಟ್, ಪಠ್ಯಗಳಲ್ಲಿ ನಿಪುಣತೆಯೊಡನೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವುದರ ಮೂಲಕ ಶಿಕ್ಷಣದಲ್ಲಿ ಪರಿವರ್ತನೆಯನ್ನು ತರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ