ಅಂಬೇಡ್ಕರ್​ಗೆ ಅವಮಾನ: ಕೇಂದ್ರ ಸಚಿವ ಅಮಿತ್​​ ಶಾ ರಾಜೀನಾಮೆಗೆ ದಲಿತ ಹೋರಾಟಗಾರರ ಆಗ್ರಹ

author-image
Ganesh Nachikethu
Updated On
ಅಂಬೇಡ್ಕರ್​ಗೆ ಅವಮಾನ: ಕೇಂದ್ರ ಸಚಿವ ಅಮಿತ್​​ ಶಾ ರಾಜೀನಾಮೆಗೆ ದಲಿತ ಹೋರಾಟಗಾರರ ಆಗ್ರಹ
Advertisment
  • ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಆರೋಪ
  • ದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಮುಂದುವರಿದ ಹೋರಾಟ
  • ಇಂದು ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ಬೃಹತ್ ಧರಣಿ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ಅಮಿತ್​ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ವಜಾ ಮಾಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್​​ ಸೇರಿದಂತೆ ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟಿಸಿದ್ದವು. ರಾಜ್ಯದಲ್ಲೂ ಹಲವು ಹಲವು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹೋರಾಟ ಮಾಡಿದ್ದವು.

ಇಂದು ನಗರದ ಫ್ರೀಡಂ ಪಾರ್ಕ್​ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ಬೃಹತ್ ಧರಣಿ ನಡೆಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚನೆಗೆ ಆಗ್ರಹಿಸಲಾಯ್ತು.

ಇನ್ನು, ಧರಣಿ ವೇಳೆ ಮಾತನಾಡಿದ ಉರಿಲಿಂಗಪೆದ್ದಿ ಮಠದ ಜ್ಷಾನಪ್ರಕಾಶ್ ಸ್ವಾಮೀಜಿ ಅವರು, ಸ್ವಾಭಿಮಾನ ಮತ್ತು ಘನತೆಯ ಬದುಕು ಕಟ್ಟಿಕೊಳ್ಳಲಾಗದಿದ್ದರೆ ತಾಯಿ ಹೊಟ್ಟೆಯಲ್ಲೇ ಸಾಯಬೇಕು ಎಂದು ಡಾ.ಅಂಬೇಡ್ಕರ್ ಹೇಳಿದ್ದರು. ನಮ್ಮ ದೇಶ ಮೋದಿ ಮತ್ತು ಅಮಿತ್ ಶಾ ಅವರ ಕೈಯಲ್ಲಿದೆ. ಶೋಷಿತರು ಮತ್ತು ಎಸ್ಸಿ ಎಸ್ಟಿ ಜನರು ಯವಾಗಲೂ ಬೀದಿಯಲ್ಲೇ ಇರಬೇಕು ಎಂದು ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗಣರಾಜ್ಯೋತ್ಸವದೊಳಗೆ ಕ್ಷಮೆ ಕೇಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ನಾವು ಎಲ್ಲರೂ ಒಗ್ಗಟ್ಟಾಗಬೇಕು. 70ರ ದಶಕದಲ್ಲಿ ದಲಿತ ನಾಯಕರು ಎದ್ದು ನಿಂತರೆ ವಿಧಾನಸೌಧ ನಡುಗುತ್ತಿತ್ತು. ಈಗ ನಿಂತುಕೊಳ್ಳಲು ಮಂಡಿಯಲ್ಲಿ ಶಕ್ತಿಯಿಲ್ಲವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ನಮಗೆ ವಿಷ ಹಾಕುತ್ತಿವೆ ಎಂದರು.

ಹಿರಿಯ ಹೋರಾಟಗಾರ ಬಿ.ಗೋಪಾಲ್ ಮಾತನಾಡಿ, ದಿಲ್ಲಿಯಲ್ಲಿರುವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ ಅವರಿಗೆ ಒಂದು ಮಾತು ಹೇಳುತ್ತೇನೆ. ಅಗ್ರಗಣ್ಯ ಜಾತಿಯವರು ನಮಗೆ ಕೆರೆಯ ನೀರನ್ನು ಮುಟ್ಟಲು ಬಿಟ್ಟಿಲ್ಲ. ತುಪ್ಪ ತಿನ್ನುವುದು, ಬಂಗಾರವನ್ನು ನಿಷೇಧ ಮಾಡಿದ್ದೀರಿ. ನಮಗೆ ಸ್ವರ್ಗವನ್ನು ತೋರಿಸಿದವರು ಭಗವಾನ್ ಬುದ್ಧರು ಎಂದರು.

publive-image

ಮೊಟ್ಟ ಮೊದಲಿಗೆ ಸ್ವರ್ಗದ ಕಿಂಡಿಯನ್ನು ತೋರಿಸಿದವರು ಜ್ಯೋತಿ ಬಾಫುಲೆ ಮತ್ತು ಸಾವಿತ್ರಿ ಬಾಫುಲೆ ಅವರು. ಅವರು ದೇಶದಲ್ಲಿ ಹುಟ್ಟಲಿಲ್ಲವೆಂದರೆ ನಾವು ಸೂಟು ಬೂಟು ಹಾಕಲು ಆಗುತ್ತಿರಲಿಲ್ಲ. ಪಾರ್ಲಿಮೆಂಟ್‌ನಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದರೆ, ಪಾರ್ಲಿಮೆಂಟ್‌ಗೂ ಅವಮಾನ ಜತೆಗೆ 140 ಕೋಟಿ ಜನರಿಗೂ ಅವಮಾನ ಎಂದು ತಿಳಿಸಿದರು.

ಚಂದ್ರು ಪೆರಿಯಾರ್​ ಏನಂದ್ರು?

ಜಾತ್ಯತೀತವಾಗಿ ಪಕ್ಷಾತೀತವಾಗಿ ಸಂವಿಧಾನದ ಉಳಿವಿಗಾಗಿ ನಾವೆಲ್ಲಾ ಹೋರಾಡಬೇಕು. ದೇಶದಲ್ಲಿ ಕೋಮು ಗಲಭೆಗಳಿಗೆ ದಾರಿ ದೀಪವಾಗಿರುವ ಮನುವಾದವನ್ನು ದೂರ ಮಾಡಬೇಕು. ಅದಕ್ಕಾಗಿ ಅಮಿತ್​ ಶಾ ಅವರ ವಿರುದ್ಧ ಅಂಬೇಡ್ಕರ್‌ ಅನುಯಾಯಿಗಳು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಚಂದ್ರು ಪೆರಿಯಾರ್.

ಹೀಗೆ ಮುಂದುವರಿದ ಚಂದ್ರು ಪೆರಿಯಾರ್​​, ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಅಮಿತ್‌ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಒಬ್ಬ ಗೃಹ ಸಚಿವರಾಗಿ ಸಂವಿಧಾನ ಶಿಲ್ಪಿಯನ್ನು ಅಪಮಾನ ಮಾಡಿದ್ದಾರೆ. ಆದ್ದರಿಂದ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.

ಧರಣಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಕೌತಾಳ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹೆಣ್ಣೂರು ಶ್ರಿನಿವಾಸ್, ರಾಜ್ಯ ಸರಕಾರಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಶಿವಶಂಕರ್, ದಲಿತ ಸಂಘರ್ಷ ಸಮಿತಿ- ಭೀಮಶಕ್ತಿ ಅಧ್ಯಕ್ಷ ಹೆಬ್ಬಾಳ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ರೋಹಿತ್​ ಶರ್ಮಾಗೆ ಬಿಗ್​ ಶಾಕ್​​; ಸ್ಟಾರ್​ ಪ್ಲೇಯರ್​​ ಅಜಿಂಕ್ಯ ರಹಾನೆಗೆ ಕ್ಯಾಪ್ಟನ್ಸಿ ಪಟ್ಟ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment