/newsfirstlive-kannada/media/post_attachments/wp-content/uploads/2024/08/Mohammed.jpg)
ಕಡು ಬಡತನದಲ್ಲಿ ಹುಟ್ಟಿದ ಹಲವು ಕ್ರಿಕೆಟ್ ಪ್ರತಿಭೆಗಳು ರಾತ್ರೋ ರಾತ್ರಿ ಕೋಟ್ಯಾಧೀಶರಾಗಿದ್ದಾರೆ. ರಾತ್ರೋ ರಾತ್ರಿ ಸೂಪರ್ ಸ್ಟಾರ್ಗಳಾಗಿದ್ದಾರೆ. ಇಂಥವರಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. ಸ್ಲಮ್ನಲ್ಲಿ ಹುಟ್ಟಿದ್ದ ಈತ, ಇವತ್ತು ಕನಸಿನ ಕಾರು ಖರೀದಿಸಿದ್ದಾರೆ. ಈ ಕಾರು ಖರೀದಿಯ ಹಿಂದೆ ನಿದ್ದೆ ಇಲ್ಲದ ರಾತ್ರಿಗಳ ಕತೆ ಇದೆ.
ಇದನ್ನೂ ಓದಿ: ವಯನಾಡಿನಲ್ಲಿ ಮತ್ತೆ ಮಹಾಮಳೆ ಭಯ.. ಕೇರಳಕ್ಕೆ ಭಾರತೀಯ ಹವಾಮಾನ ಇಲಾಖೆ ಭಾರೀ ಎಚ್ಚರಿಕೆ!
ಜಂಟಲ್ಮನ್ ಗೇಮ್ನಲ್ಲಿ ಮನೆ ಮನೆಗೆ ಹಾಲು ಹಾಕುತ್ತಿದ್ದ ಬಡ ಹುಡುಗ ವಿಶ್ವಗೆದ್ದ ನಾಯಕನಾಗಿದ್ದಾನೆ. ಪಾನಿಪೂರಿ ಮಾರ್ತಿದ್ದ ಬಡ ಹುಡುಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾನೆ. ಇಂತಹ ಹಲವಾರು ರೋಚಕ ಕಥೆಗಳು ಭಾರತೀಯ ಕ್ರಿಕೆಟ್ನಲ್ಲಿವೆ. ಇಂಥ ಹಲವು ಕಥೆಗಳಲ್ಲಿ ಒಂದು ಮೊಹಮ್ಮದ್ ಸಿರಾಜ್ ಅಧ್ಯಾಯವೂ ಇದೆ. ಮೊಹಮ್ಮದ್ ಸಿರಾಜ್, ಟೀಮ್ ಇಂಡಿಯಾ ಸ್ಟಾರ್ ವೇಗಿ. ಟೆನಿಸ್ ಬಾಲ್ ಕ್ರಿಕೆಟರ್ ಆಗಿದ್ದ ಸಿರಾಜ್, ಇಂದು ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್. ಈ ಸೂಪರ್ ಸ್ಟಾರ್ ಲಂಕಾ ಸರಣಿ ಬಳಿಕ ತಮ್ಮ ಬಹುಕಾಲದ ಕನಸನ್ನ ನನಸಾಗಿಸಿಕೊಂಡು ಸುದ್ದಿಯಾಗಿದ್ದಾರೆ.
ಕನಸಿನ ಕಾರು ಖರೀದಿಸಿದ ಸಿರಾಜ್
ಲಂಕಾ ಪ್ರವಾಸದ ಬೆನ್ನಲ್ಲೇ ತಾಯ್ನಾಡಿಗೆ ಹಿಂದಿರುಗಿರುವ ಮೊಹಮ್ಮದ್ ಸಿರಾಜ್, 2.8 ಕೋಟಿ ಬೆಲೆಯ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರ್ ಖರೀದಿಸಿರುವ ಸಿರಾಜ್, ತಮ್ಮ ಕುಟುಂಬದೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಕಪ್ಪು ಬಣ್ಣದ ಬ್ಲೇಝರ್ನಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಈ ಸಂತಸವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನಂಬಿಕೆ ಇದ್ದರೆ, ಬಯಸಿದ್ದನ್ನು ಸಾಧಿಸಬಹುದು’
ಕನಸುಗಳಿಗೆ ಮಿತಿಯೇ ಇಲ್ಲ. ಏಕೆಂದರೆ ಆ ಕನಸುಗಳು ನಮ್ಮನ್ನು ಮತ್ತಷ್ಟು ಸಾಧಿಸುವಂತೆ, ಮತ್ತಷ್ಟು ಸಂಪಾದಿಸುವಂತೆ ಪ್ರೇರೇಪಿಸುತ್ತವೆ. ನಿರಂತರ ಪ್ರಯತ್ನ ನಡೆಸಿದರೆ ಮಾತ್ರ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ. ಆ ದೇವರ ಆಶೀರ್ವಾದದಿಂದ ಕನಸಿನ ಲ್ಯಾಂಡ್ ರೋವರ್ ಕಾರನ್ನು ಖರೀದಿಸಲು ಸಾಧ್ಯವಾಗಿದೆ. ಇದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ಬಯಸಿದ್ದನ್ನು ಖಂಡಿತ ಸಾಧಿಸಬಹುದು.
ಮೊಹಮ್ಮದ್ ಸಿರಾಜ್, ವೇಗಿ
ಸಿರಾಜ್ರ ಈ ಪೋಸ್ಟ್ನ ಹಿಂದೆ ಒಂದು ಕಥೆಯೇ ಇದೆ. ಕಲ್ಲು ಮುಳ್ಳಿನ ಹಾದಿಯಲ್ಲಿ ಸಾಗಿಬಂದ ಕಷ್ಟದ ದಿನಗಳಿವೆ. ಹೈದರಾಬಾದಿನ ಸ್ಲಮ್ಗಳಲ್ಲಿ, ಗಲ್ಲಿಗಳಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಸಿರಾಜ್, ಕ್ರಿಕೆಟರ್ ಆಗುವ ಕನಸು ಕಂಡಿದ್ದ. ಆಟೋ ಚಾಲಕನ ಮಗನಿಗೆ ಆರಂಭದಲ್ಲಿ ಅದು ಕೈಗೆಟುಕ ಕನಸು ಆಗಿತ್ತು. ಅಪ್ಪನ ಸಂಪಾದನೆ ಮನೆ ನಡೆಸಲೇ ಸರಿ ಹೋಗ್ತಿತ್ತು. ಕ್ರಿಕೆಟರ್ ಆಗೋ ಕನಸನ್ನ ಮಾತ್ರ ಸಿರಾಜ್ ಬಿಟ್ಟಿರಲಿಲ್ಲ. ಫ್ರೀ ಟೈಮ್ನಲ್ಲಿ ತಾನೇ ಆಟೋ ಚಲಾಯಿಸಿ ಒಂದಿಷ್ಟು ಹಣ ಕೂಡಿಟ್ಟು ಅಮ್ಮನಿಗೆ ಕೊಡ್ತಿದ್ದ. ಕಿಕ್ಕರ್ ಇಲ್ಲದ ಬೈಕ್ನಲ್ಲೇ ಸ್ಟ್ರೈಡಿಯಂಗೆ ಹೋಗಿ ಅಭ್ಯಾಸ ನಡೆಸ್ತಿದ್ದ ಸಿರಾಜ್, ಇತರೆ ಆಟಗಾರರು ಮನೆಗೆ ಹೊರಟ್ಮೇಲೆ ಬೈಕ್ ತಳ್ಳಿ ಸ್ಟಾರ್ಟ್ ಮಾಡಿ ಮನೆಗೆ ದೌಡಾಯಿಸ್ತಿದ್ದ. ಅಂತಿಮವಾಗಿ ಕ್ರಿಕೆಟ್ ಆಗಬೇಕೆಂಬ ಅಚಲ ನಂಬಿಕೆಯ ಜೊತೆ ಕಠಿಣ ಪರಿಶ್ರಮ ಸಿರಾಜ್ ಕೈ ಹಿಡಿದಿತ್ತು. ನೋಡ ನೋಡುತ್ತಿದ್ದಂತೆಯೇ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆದ್ರು.
ಹೈದ್ರಾಬಾದ್ನ ಸಣ್ಣ ಗಲ್ಲಿಗಳಲ್ಲಿದ್ದ ಸಿರಾಜ್, ಇದೀಗ ಶ್ರೀಮಂತರೇ ನೆಲೆಸಿರುವ ಜೂಬ್ಲಿಹಿಲ್ಸ್ನ ಫಿಲ್ಮ್ನಗರದಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಐಷಾರಾಮಿ ಮನೆಯ ಬೆಲೆ ಸುಮಾರು 50 ಕೋಟಿ ರೂಪಾಯಿ. ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಸಿರಾಜ್ಗೆ ಈಗ ತೆಲಂಗಾಣ ಸರ್ಕಾರ, ಸರ್ಕಾರಿ ಉದ್ಯೋಗದ ಜೊತೆಗೆ ಮನೆ ನಿರ್ಮಿಸಲು ಸ್ಥಳವನ್ನೂ ಉಡುಗೊರೆಯಾಗಿ ಘೋಷಿಸಿದೆ.
ಇದನ್ನೂ ಓದಿ:ಆರ್ಸಿಬಿ ಫ್ಯಾನ್ಸ್ಗೆ ಬೇಸರದ ಸುದ್ದಿ! ಈ ಮೂವರನ್ನು ತಂಡದಿಂದ ಕೈ ಬಿಡೋದು ಪಕ್ಕನಾ?
ಮೊಹಮ್ಮದ್ ಸಿರಾಜ್ ಈಗಾಗಲೇ ಹಲವು ದುಬಾರಿ ಕಾರುಗಳನ್ನ ಹೊಂದಿದ್ದಾರೆ. ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಸಿರಾಜ್ ಖರೀದಿಸಿದ್ದ ಕಾರು, ಸೆಕೆಂಡ್ ಹ್ಯಾಂಡ್ ಟೊಯೋಟಾ ಕೊರೊಲಾ ಆಗಿತ್ತು. ಬಳಿಕ 40 ಲಕ್ಷದ ಟೊಯೊಟಾ ಫಾರ್ಚುನರ್, 75 ಲಕ್ಷದ ಬಿಎಂಡಬ್ಲ್ಯು 5 ಸಿರೀಸ್, 1.86 ಕೋಟಿಯ ಮರ್ಸಿಡಿಸ್ ಬೆಂಜ್ ಖರೀದಿಸಿದ್ದ ಸಿರಾಜ್, ಇದೀಗ 2.8 ಕೋಟಿ ಮೌಲ್ಯದ Land Range Rover ದುಬಾರಿ ಕಾರು ಖರೀದಿಸಿದ್ದಾರೆ. 6 ವರ್ಷಗಳ ಹಿಂದೆ ಆಟೋ ರಿಕ್ಷಾದಲ್ಲಿ ಓಡಾಡುತ್ತಿದ್ದ ಸಿರಾಜ್, ಇಂದು ಐಷರಾಮಿ ಕಾರುಗಳಲ್ಲಿ ಓಡಾಟ ನಡೆಸ್ತಿದ್ದಾರೆ. ಅಂದು ತನ್ನ ವಾಸ್ತವದ ಮಿತಿ ಮೀರಿ ಕನಸು ಕಂಡಿದ್ದ ಸಿರಾಜ್, ಕಲ್ಲು ಮುಳ್ಳಿನ ಹಾದಿಯನ್ನೇ ಯಶಸ್ಸಿನ ಮೆಟ್ಟಿಲುಗಳನ್ನಾಗಿಸಿಕೊಂಡರು. ಹೈದರಾಬಾದ್‌ನ ಗಲ್ಲಿ ಕ್ರಿಕೆಟ್ನಿಂದ ವಿಶ್ವ ಕಿರೀಟ ಮುಡಿಗೇರಿಸುವ ಹಂತಕ್ಕೆ ಬೆಳದ ಸಿರಾಜ್ ಜೀವನ ಕನಸು ಕಾಣುವ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ