/newsfirstlive-kannada/media/media_files/2025/12/10/gold-and-lithium-found-in-karnataka03-2025-12-10-12-12-55.jpg)
ಕೊಪ್ಪಳ , ರಾಯಚೂರು ಜಿಲ್ಲೆಯಲ್ಲಿ ಚಿನ್ನ, ಲಿಥಿಯಂ ನಿಕ್ಷೇಪ ಪತ್ತೆ!
ಕರ್ನಾಟಕ ಚಿನ್ನದ ನಾಡು, ಗಂಧದ ಬೀಡು. ಇದು ಪದೇ ಪದೇ ಸಾಬೀತಾಗುತ್ತಿದೆ. ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಯಥೇಚ್ಛವಾಗಿ ಶ್ರೀಗಂಧದ ಮರಗಳಿವೆ. ರೈತರು ಕೂಡ ನಾಡಿನುದ್ದಕ್ಕೂ ಈಗ ಶ್ರೀಗಂಧ ಬೆಳೆಯುತ್ತಿದ್ದಾರೆ.
ಇದರ ಜೊತೆಗೆ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಚಿನ್ನದ ಗಣಿ ಕೂಡ ಇದೆ. ಕೋಲಾರದ ಕೆಜಿಎಫ್ ಮಾತ್ರವಲ್ಲದೇ, ರಾಯಚೂರಿನ ಹಟ್ಟಿ ಚಿನ್ನದ ಗಣಿಯೂ ಇದೆ.
ಈಗ ಇವುಗಳ ಜೊತೆಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಚಿನ್ನ ಮತ್ತು ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ . ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಡೆಸಿದ ಸರ್ವೇಯಲ್ಲೇ 65 ಸ್ಥಳಗಳಲ್ಲಿ ಚಿನ್ನ ಮತ್ತು ಅಪರೂಪದ ಖನಿಜಗಳ ನಿಕ್ಷೇಪ ಪತ್ತೆಯಾಗಿದೆ. ಆದರೇ, ಚಿನ್ನ ಮತ್ತು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವ ಜಾಗವೂ ಸಂಪೂರ್ಣವಾಗಿ ಮೀಸಲು ಅರಣ್ಯ ಪ್ರದೇಶವಾಗಿದೆ. ಇದೇ ಈಗ ಗಣಿಗಾರಿಕೆಗೆ ದೊಡ್ಡ ಸವಾಲಾಗಿದೆ.
ಇದೇ ಮೊದಲ ಭಾರಿಗೆ ಅಪರೂಪದ ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಅಮರಾಪುರ ಬ್ಲಾಕ್ ನಲ್ಲಿ ಪ್ರತಿ ಟನ್ ಮಣ್ಣಿಗೆ 12-14 ಗ್ರಾಂ ಚಿನ್ನ ಇರೋದು ಪತ್ತೆಯಾಗಿದೆ. ಸಾಮಾನ್ಯವಾಗಿ ಚಿನ್ನದ ಗಣಿಗಳಲ್ಲಿ ಪ್ರತಿ ಟನ್ ಮಣ್ಣಿನಲ್ಲಿ 2-3 ಗ್ರಾಂ ಚಿನ್ನ ಮಾತ್ರ ಇರುತ್ತೆ. ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ ಪ್ರತಿ ಟನ್ ಮಣ್ಣಿನಲ್ಲಿ 2- 2.5 ಗ್ರಾಂ ಮಾತ್ರ ಚಿನ್ನ ಇದೆ. ಆದರೇ ಕೊಪ್ಪಳದ ಸ್ಥಳವು ಸಂಪೂರ್ಣವಾಗಿ ಅರಣ್ಯ ಪ್ರದೇಶವಾಗಿದೆ. ಅರಣ್ಯ ಇಲಾಖೆಯ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಎಂದು ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ ಲಿಥಿಯಂ ಅನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಬಳಕೆ ಮಾಡಲಾಗುತ್ತೆ. ಲಿಥಿಯಂ ಅನ್ನು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬ್ಯಾಟರಿಗಳಲ್ಲಿ ಬಳಕೆ ಮಾಡಲಾಗುತ್ತೆ. ಲಿಥಿಯಂಗೆ ಭಾರತದಲ್ಲಿ ಭಾರಿ ಬೇಡಿಕೆ ಇದೆ. ಇತ್ತೀಚೆಗೆ ಜಮ್ಮುು ಕಾಶ್ಮೀರದ ರಸೋಯಿ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಲಿಥಿಯಂ ಅನ್ನು ಭಾರತವು ಆಫ್ರಿಕಾ ದೇಶಗಳಿಂದ ಅಮದು ಮಾಡಿಕೊಳ್ಳುತ್ತಿದೆ. ಲಿಥಿಯಂ ಅನ್ನು ಭಾರತದಲ್ಲೇ ಉತ್ಪಾದಿಸಿದರೇ, ಎಲೆಕ್ಟ್ರಿಕ್ ಕಾರ್, ಬೈಕ್ ಗಳ ಬೆಲೆ ಕೂಡ ಕಡಿಮೆಯಾಗುತ್ತೆ. ವಿದೇಶಗಳ ಮೇಲಿನ ಅವಲಂಬನೆ ಕೂಡ ಕಡಿಮೆಯಾಗುತ್ತೆ.
ಜಮ್ಮು ಕಾಶ್ಮೀರ ಹೊರತುಪಡಿಸಿ, ಈಗ ರಾಯಚೂರಿನ ಅಮರೇಶ್ವರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಆದರೇ, ಇಲ್ಲೂ ಅರಣ್ಯ ಇಲಾಖೆಯ ಒಪ್ಪಿಗೆ ಪಡೆದಿಲ್ಲ. ಒಂದು ವೇಳೆ ಕರ್ನಾಟಕದ ಅರಣ್ಯ ಇಲಾಖೆಯ ಒಪ್ಪಿಗೆ ಸಿಕ್ಕರೇ, ಲಿಥಿಯಂ ಅನ್ನು ಹೊರ ತೆಗೆಯಬಹುದು. 2023 ರಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ. ಆದರೇ, ಇದುವರೆಗೂ ಲಿಥಿಯಂ ಅನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿಲ್ಲ.
ಚಿನ್ನ ಮತ್ತು ಲಿಥಿಯಂ ನಿಕ್ಷೇಪ ಪತ್ತೆಯಾಗಿರುವುದು ಮತ್ತು ಅರಣ್ಯ ಇಲಾಖೆಯಿಂದ ಒಪ್ಪಿಗೆ ಪಡೆಯುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ನಡುವೆ 2025ರ ನವಂಬರ್ ನಲ್ಲಿ ಚರ್ಚೆಯಾಗಿದೆ.
ಅಪರೂಪದ ಖನಿಜ ನಿಕ್ಷೇಪಗಳ ಅಧ್ಯಯನ ಮತ್ತು ಶೋಧನೆಯನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತೆ. ಮೊದಲ 2 ಹಂತಗಳಲ್ಲಿ ಶೋಧನೆ, ಗುಂಡಿ ತೆಗೆಯುವುದು ಮತ್ತು ಬೇಲಿ ಹಾಕುವ ಕೆಲಸ ಮಾಡಲಾಗುತ್ತೆ. ಕೊನೆಯ 2 ಹಂತಗಳಲ್ಲಿ 500 ಮೀಟರ್ ವರೆಗೂ ಡ್ರಿಲ್ಲಿಂಗ್ ಮಾಡಲಾಗುತ್ತೆ ಮತ್ತು ಪ್ರಾಥಮಿಕ ಗಣಿಗಾರಿಕೆ ನಡೆಸಲಾಗುತ್ತೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮೊದಲ 2 ಹಂತ ಪೂರ್ಣವಾಗಿದೆ.
/filters:format(webp)/newsfirstlive-kannada/media/media_files/2025/12/10/gold-and-lithium-found-in-karnataka-2025-12-10-12-11-27.jpg)
ವಿವರವಾದ ಕೆಲಸದ ನಂತರ 2023 ರಲ್ಲಿ ಲಿಥಿಯಂ ನಿಕ್ಷೇಪವನ್ನು ಕಂಡುಹಿಡಿಯಲಾಯಿತು. 2020 ರಲ್ಲಿ ಅಮರಾಪುರದಲ್ಲಿ ದೊಡ್ಡ ಚಿನ್ನದ ನಿಕ್ಷೇಪಗಳು ಕಂಡುಬಂದವು, ಆದರೆ 2024-25 ರಿಂದ ಕೆಲಸ ಮುಂದುವರೆಯಿತು. ಎರಡೂ ಸ್ಥಳಗಳಲ್ಲಿ ಇಲ್ಲಿಯವರೆಗೆ ಯಾವುದೇ ಭೂಮಿ ಕೊರೆಯುವ ಕೆಲಸ ನಡೆದಿಲ್ಲ. ನಮ್ಮ ಗ್ರೌಂಡ್ ಸಿಬ್ಬಂದಿಯ ಸುರಕ್ಷತೆಯ ಬಗ್ಗೆಯೂ ನಾವು ಚಿಂತಿತರಾಗಿದ್ದೇವೆ. ಸಂಪನ್ಮೂಲವನ್ನು ಅಕ್ರಮವಾಗಿ ಬಳಸಿಕೊಳ್ಳಲು ಬಯಸುವವರು ಮತ್ತು ಅಧ್ಯಯನವನ್ನು ನಿಲ್ಲಿಸಲು ಬಯಸುವವರಿಂದ ಅವರಿಗೆ ನಿರಂತರವಾಗಿ ಬೆದರಿಕೆ ಇದೆ ಎಂದು ಮೂಲಗಳು ತಿಳಿಸಿವೆ.
ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುವಂತೆ ಅವರ ಮೇಲೆ ಒತ್ತಡ ಹೆಚ್ಚುತ್ತಿದೆ ಎಂದು ಹೇಳಿದರು. ನಮ್ಮ ಮುಂದೆ ಅನೇಕ ಪ್ರಸ್ತಾವನೆಗಳನ್ನು ಮಾಡಲಾಗಿದೆ . ಒತ್ತಡವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಲಿಥಿಯಂ ಹೊರತೆಗೆಯುವ ಪ್ರಸ್ತಾವನೆಯು ಲಿಂಗಸಗೂರು ಮೀಸಲು ಅರಣ್ಯ ಪ್ರದೇಶದಲ್ಲಿದೆ, ಆದರೆ ಚಿನ್ನದ ನಿಕ್ಷೇಪವು ಕುಷ್ಟಗಿಯ ಅಮರಾಪುರ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಗಣಿಗಾರಿಕೆಗಾಗಿ ನಾವು ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ತೆರೆಯಲು ಸಾಧ್ಯವಿಲ್ಲ. "ಅರಣ್ಯಗಳು ಅತ್ಯಗತ್ಯ ಪರಿಸರ ಸಂಪತ್ತು ಕೂಡ" ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು 57 ಸ್ಥಳಗಳಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಎಂಟು ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ. ಹೊರತೆಗೆಯುವಿಕೆಗಾಗಿ ಅನ್ವೇಷಿಸಲಾಗುತ್ತಿರುವ ಖನಿಜಗಳಲ್ಲಿ ಪ್ಲಾಟಿನಂ ಗುಂಪಿನ ಲೋಹಗಳು, ಬಾಕ್ಸೈಟ್, ತಾಮ್ರ, ಕೋಬಾಲ್ಟ್, ನಿಕಲ್, ಸಿಲ್ಲಿಮನೈಟ್, ಟಂಗ್ಸ್ಟನ್, ವೆನಾಡಿಯಮ್, ಯುರೇನಿಯಂ, ವಜ್ರ, ಕೊಲಂಬೈಟ್-ಟ್ಯಾಂಟಲೈಟ್, ಮ್ಯಾಂಗನೀಸ್, ಕ್ರೋಮೈಟ್ ಮತ್ತು ಕಯಾನೈಟ್ ಮತ್ತು ಕ್ಸೆನೋಟೈಮ್ ಸೇರಿದಂತೆ ಅಪರೂಪದ ಭೂಮಿಯ ಅಂಶಗಳು ಸೇರಿವೆ.
ಈ ಹಿಂದೆ ಕರ್ನಾಟಕದ ಮಂಡ್ಯ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 1,600 ಟನ್ ನಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿತ್ತು. ಈ ಬಗ್ಗೆ ಕೇಂದ್ರ ಸರ್ಕಾರವೇ ಅಧಿಕೃತವಾಗಿ ಪಾರ್ಲಿಮೆಂಟ್ ಗೆ ಮಾಹಿತಿ ನೀಡಿದೆ. ಮಂಡ್ಯ ಜಿಲ್ಲೆಯಲ್ಲೂ ಇನ್ನೂ ಲಿಥಿಯಂ ಅನ್ನು ಹೊರ ತೆಗೆಯುವ ಕಾರ್ಯ ಆರಂಭವಾಗಿಲ್ಲ.
/filters:format(webp)/newsfirstlive-kannada/media/media_files/2025/12/10/gold-and-lithium-found-in-karnataka02-2025-12-10-12-13-11.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us