/newsfirstlive-kannada/media/media_files/2025/08/22/banu-mushtaq-2025-08-22-15-19-21.jpg)
ಸಾಹಿತಿ ಭಾನು ಮುಷ್ತಾಕ್ ರಿಂದ ಈ ಭಾರಿಯ ದಸರಾ ಉದ್ಘಾಟನೆ
2025ರ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದೆ. 2025ರ ದಸರಾ ಹಬ್ಬವನ್ನು ಯಾರು ಉದ್ಘಾಟಿಸುತ್ತಾರೆ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. 2025ರ ಮೈಸೂರು ದಸರಾವನ್ನು ಖ್ಯಾತ ಸಾಹಿತಿ ಹಾಗೂ ಈ ಭಾರಿಯ ಬೂಕರ್ ಪ್ರಶಸ್ತಿ ಪುರಸ್ಕೃತ ಭಾನು ಮುಷ್ತಾಕ್ ಉದ್ಘಾಟಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಭಾರಿ ಮೈಸೂರು ದಸರಾ ಉದ್ಘಾಟನೆಗೆ ಅನೇಕ ಗಣ್ಯರ ಹೆಸರುಗಳು ಚರ್ಚೆಯಲ್ಲಿದ್ದವು. ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಅನೇಕರ ಹೆಸರುಗಳು ಚರ್ಚೆಯಲ್ಲಿದ್ದವು. ಕೊನೆಗೆ ಈಗ ರಾಜ್ಯ ಸರ್ಕಾರವು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ ರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದೆ. ಭಾನು ಮುಷ್ತಾಕ್ ಅವರು ಬರೆದ ಹಾರ್ಟ್ ಲ್ಯಾಂಪ್ ಕೃತಿಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿದೆ.
2025 ಸೆಪ್ಟೆಂಬರ್ 22 ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಆಕ್ಟೋಬರ್ 2 ರಂದು ಮೈಸೂರು ಅರಮನೆ ಆವರಣದಲ್ಲಿ ಜಂಬೂಸವಾರಿ ನಡೆಯಲಿದೆ.
ಈ ಭಾರಿಯ ದಸರಾದಲ್ಲಿ ಭಾರತೀಯ ವಾಯುಪಡೆಯಿಂದ ಏರ್ ಷೋ ಕೂಡ ಇರಲಿದೆ. ಏರ್ ಷೋ ನಡೆಸಲು ಒಪ್ಪಿದ್ದಕ್ಕಾಗಿ ಕೇಂದ್ರದ ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ಅರ್ಪಿಸಿದ್ದಾರೆ. ಜೊತೆಗೆ ರಾಜನಾಥ್ ಸಿಂಗ್ ರನ್ನು ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದಾರೆ.
ಈ ಭಾರಿ ಮೈಸೂರು ದಸರಾ 11 ದಿನ ನಡೆಯಲಿದೆ. ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 2 ರವರೆಗೆ ಮೈಸೂರು ದಸರಾ ನಡೆಯಲಿದೆ. ಮೈಸೂರು ದಸರಾಕ್ಕಾಗಿ ಮೈಸೂರಿನಲ್ಲಿ ಭರದ ಸಿದ್ದತೆಗಳು ನಡೆಯುತ್ತಿವೆ. ಈಗಾಗಲೇ ಚಿನ್ನದ ಅಂಬಾರಿ ಹೊರಲಿರುವ ಆನೆಗಳು ತಂಡ ಮೈಸೂರಿಗೆ ಆಗಮಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.