/newsfirstlive-kannada/media/media_files/2025/08/21/apple-iphone-in-bangalore02-2025-08-21-15-03-36.jpg)
ಬೆಂಗಳೂರಿನಲ್ಲಿ ಆ್ಯಪಲ್ ಐಪೋನ್ ಮಳಿಗೆ ಸದ್ಯದಲ್ಲೇ ಆರಂಭ
ಬೆಂಗಳೂರು ಹಾಗೂ ಕರ್ನಾಟಕದ ಐಪೋನ್ ಪ್ರಿಯರಿಗೊಂದು ಸಿಹಿ ಸುದ್ದಿ. ಮುಂದಿನ ತಿಂಗಳೇ ಬೆಂಗಳೂರಿನಲ್ಲಿ ಆ್ಯಪಲ್ ಐಪೋನ್ ಮಾರಾಟ ಮಳಿಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ.
ಭಾರತದಲ್ಲಿ ಆ್ಯಪಲ್ ಐಪೋನ್ ಕಂಪನಿಯು ಈಗಾಗಲೇ ತನ್ನ ಎರಡು ಚಿಲ್ಲರೆ ಮಾರಾಟ ಮಳಿಗೆಗಳನ್ನು ಮುಂಬೈ ಮತ್ತು ದೆಹಲಿಯಲ್ಲಿ ತೆರೆದಿದೆ. ಈಗ ದೇಶದ ಮೂರನೇ ಆ್ಯಪಲ್ ಐಪೋನ್ ಮಾರಾಟ ಮಳಿಗೆ ನಮ್ಮ ಬೆಂಗಳೂರಿನಲ್ಲಿ ಓಪನ್ ಆಗಲಿದೆ. ಸೆಪ್ಟೆಂಬರ್ 2 ರಂದು ಬೆಂಗಳೂರಿನ ಹೆಬ್ಬಾಳದಲ್ಲಿ ಆ್ಯಪಲ್ ಐಪೋನ್ ಕಂಪನಿಯು ತನ್ನ ಚಿಲ್ಲರೆ ಮಾರಾಟ ಮಳಿಗೆಯನ್ನು ತೆರೆಯಲಿದೆ.
ಭಾರತದಲ್ಲಿ, ಕರ್ನಾಟಕದಲ್ಲಿ ಆ್ಯಪಲ್ ಐಪೋನ್ ಗಳಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಬೆಂಗಳೂರಿನಲ್ಲಿ ತನ್ನ ಮಳಿಗೆ ತೆರೆಯಲು ಆ್ಯಪಲ್ ಕಂಪನಿ ನಿರ್ಧರಿಸಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತನ್ನ ಮೂರನೇ ಮಳಿಗೆಯನ್ನು ತೆರೆಯಲಿದೆ.
ಈಗಾಗಲೇ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ದೆಹಲಿಯ ಸಾಕೇತ್ ನಲ್ಲಿ ಆ್ಯಪಲ್ ಐಪೋನ ಕಂಪನಿಯು ತನ್ನ ಮಳಿಗೆಗಳನ್ನು ತೆರೆದಿದೆ. ಮುಂಬೈ ಮತ್ತು ದೆಹಲಿ ಮಳಿಗೆಗಳು ಪ್ರತಿ ತಿಂಗಳು 22 ರಿಂದ 25 ಕೋಟಿ ರೂಪಾಯಿವರೆಗೂ ಆದಾಯ ಗಳಿಸುತ್ತಿವೆ. ಹೀಗಾಗಿ ಐ.ಟಿ. ಸಿಟಿ ಬೆಂಗಳೂರಿನಲ್ಲಿ ಈಗ ಮೂರನೇ ಮಳಿಗೆ ತೆರೆಯಲು ನಿರ್ಧರಿಸಿದೆ.
ಆ್ಯಪಲ್ ಕಂಪನಿಗೆ ಅಮೆರಿಕಾ, ಜಪಾನ್, ಚೀನಾದ ನಂತರ ಭಾರತವೇ ನಾಲ್ಕನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
ಬೆಂಗಳೂರಿನ ಮಳಿಗೆಯಲ್ಲಿ ಗ್ರಾಹಕರಿಗೆ ಆ್ಯಪಲ್ ಐಪೋನ್ ಕಂಪನಿಯ ಎಲ್ಲ ಉತ್ಪನ್ನಗಳನ್ನು ಎಕ್ಸ್ ಪ್ಲೋರ್ ಮಾಡುವ ಅವಕಾಶ ಸಿಗಲಿದೆ. ಆ್ಯಪಲ್ ಐಪೋನ್ ಸರ್ವೀಸ್ ಕೂಡ ಗ್ರಾಹಕರಿಗೆ ಸಿಗಲಿದೆ. ಬ್ಯುಸಿನೆಸ್ ಗ್ರಾಹಕರಿಗೆ ಪ್ರತೇಕ ಟೀಮ್ ಗಳೂ ಇರಲಿವೆ. ಬೆಂಗಳೂರಿನ ಹೆಬ್ಬಾಳದಲ್ಲಿ ಮಳಿಗೆ ತೆರೆಯುವ ಮುನ್ನ ಆ್ಯಪಲ್ ಕಂಪನಿಯು ಹೆಬ್ಬಾಳ ಮಳಿಗೆಯ ವಾಲ್ ಪೇಪರ್ ಗಳನ್ನು ಬೆಂಗಳೂರಿನಿಂದ ಸ್ಪೂರ್ತಿ ಪಡೆದು ವಿನ್ಯಾಸಗೊಳಿಸಿರುವುದನ್ನು ಬಿಡುಗಡೆ ಮಾಡಿದೆ.
ಆ್ಯಪಲ್ ಕಂಪನಿಯು ಭಾರತದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದೆ. ಭಾರತದಲ್ಲೇ ಸ್ಥಳೀಯವಾಗಿ ಐಪೋನ್ ಗಳನ್ನು ಉತ್ಪಾದಿಸುತ್ತಿದೆ. ಬೆಂಗಳೂರು ಏರ್ ಪೋರ್ಟ್ ಬಳಿ ಐಪೋನ್ ತಯಾರಿಕಾ ಘಟಕದಲ್ಲಿ ಈಗಾಗಲೇ ಐಪೋನ್ ಉತ್ಪಾದನೆ ಆರಂಭವಾಗಿದೆ. ಪ್ರಾಜೆಕ್ಟ್ ಐಲಿಫೆಂಟಾ ಅಡಿಯಲ್ಲಿ ದೇವನಹಳ್ಳಿ ಏರ್ ಪೋರ್ಟ್ ಬಳಿ ಫಾಕ್ಸ್ ಕಾನ್ ಕಂಪನಿಯಿಂದ ಐಪೋನ್ ಉತ್ಪಾದನೆ ಆರಂಭವಾಗಿದೆ. 300 ಎಕರೆ ವಿಶಾಲ ಪ್ರದೇಶದಲ್ಲಿ ಐಪೋನ್ ಉತ್ಪಾದನೆ ಮಾಡಲಾಗುತ್ತಿದೆ. ಈ ಘಟಕಕ್ಕೆ 25 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.
ಜೊತೆಗೆ ಭಾರತದಲ್ಲಿ ಐಪೋನ್ ಮಾರಾಟ ಸೇವೆ, ಚಿಲ್ಲರೆ ಮಾರಾಟವನ್ನು ಮಾಡಲು ನಿರ್ಧರಿಸಿದೆ. ಭಾರತದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ದಾಖಲೆ ಪ್ರಮಾಣದಲ್ಲಿ ಐಪೋನ್ ಗಳು ಮಾರಾಟವಾಗಿವೆ. ಭಾರತೀಯರಿಗೆ ಐಪೋನ್ ಕ್ರೇಜ್ ಹೆಚ್ಚಾಗಿದೆ. ಹೀಗಾಗಿ ಇದನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಮುಂಬೈ, ದೆಹಲಿಯ ನಂತರ ಈಗ ದಕ್ಷಿಣ ಭಾರತದ ಮೊದಲ ಮಳಿಗೆಯನ್ನು ಬೆಂಗಳೂರಿನಲ್ಲಿ ಆರಂಭಿಸುತ್ತಿದೆ. ಸೆಪ್ಟೆಂಬರ್ 2 ರ ಮಧ್ಯಾಹ್ನ 1 ಗಂಟೆಗೆ ಆ್ಯಪಲ್ ಹೆಬ್ಬಾಳ ಸ್ಟೋರ್ ಓಪನ್ ಆಗಲಿದೆ ಎಂದು ಆ್ಯಪಲ್ ಕಂಪನಿಯು ಹೇಳಿದೆ.
ಆ್ಯಪಲ್ ಕಂಪನಿಯ ಸಿಇಓ ಟೀಕ್ ಕುಕ್ ಇತ್ತೀಚೆಗೆ ಭಾರತವು ಕಂಪನಿಗೆ ದೊಡ್ಡ ಅವಕಾಶ ಎಂದು ಬಣ್ಣಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.