/newsfirstlive-kannada/media/media_files/2026/02/21/bagalakote-accident-1-2026-02-21-10-35-04.jpg)
ಬಾಗಲಕೋಟೆ: ಕಬ್ಬು ಕಟಾವು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ, ಮಗು ಹಾಗೂ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ಹೊರವಲಯದಲ್ಲಿ ನಡೆದಿದೆ.
ಘಟನೆಯ ವಿವರ
ಜಮಖಂಡಿ ಹೊರವಲಯದ ಮುಧೋಳ ರಸ್ತೆಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಕಾರ್ಮಿಕರ ತಂಡ ಮುಧೋಳ ಕಡೆಯಿಂದ ಜಮಖಂಡಿ ಕಡೆಗೆ ಟ್ರ್ಯಾಕ್ಟರ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ.
ಮೃತ ದುರ್ದೈವಿಗಳು:
ಅಪಘಾತದಲ್ಲಿ ಮಹಾರಾಷ್ಟ್ರ ರಾಜ್ಯದ ಯುತನಾಳ ಜಿಲ್ಲೆಯ ಗುಪ್ತವಾಡ ಗ್ರಾಮದ ಒಂದೇ ಕುಟುಂಬದವರು ಎನ್ನಲಾದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಮನುಷ್ (23), ಲಕ್ಷ್ಮೀ (27), ರೇಖಾ (28) ಮತ್ತು 2 ವರ್ಷದ ಮಗು ಹಾಲಕಿ ಎಂದು ಗುರುತಿಸಲಾಗಿದೆ.
8 ಜನರಿಗೆ ಗಂಭೀರ ಗಾಯ
ಟ್ರ್ಯಾಕ್ಟರ್‌ನಲ್ಲಿ ಒಟ್ಟು 20 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಟ್ರ್ಯಾಕ್ಟರ್ ಪಲ್ಟಿಯಾದ ರಭಸಕ್ಕೆ ಇಂಜಿನ್ ಮತ್ತು ಟ್ರಾಲಿಯ ಅಡಿಯಲ್ಲಿ ಸಿಲುಕಿ ನಾಲ್ವರು ಮೃತಪಟ್ಟರೆ, ಉಳಿದ ಎಂಟು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ರಕ್ಷಣಾ ಕಾರ್ಯಾಚರಣೆ
ವಿಷಯ ತಿಳಿದ ತಕ್ಷಣ ಜಮಖಂಡಿ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಂದಕಕ್ಕೆ ಬಿದ್ದಿದ್ದ ಟ್ರ್ಯಾಕ್ಟರ್ ಅನ್ನು ಕ್ರೇನ್ ಮೂಲಕ ಮೇಲೆತ್ತಿ, ಅದರಡಿ ಸಿಲುಕಿದ್ದವರನ್ನು ಹೊರತೆಗೆಯಲಾಗಿದೆ. ಮೃತರ ದೇಹಗಳನ್ನು ಹಾಗೂ ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಜಮಖಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದಿಂದ ಬಂದಿದ್ದ ಕೂಲಿ ಕಾರ್ಮಿಕರ ಬದುಕು ಇದೀಗ ಬೀದಿಗೆ ಬಿದ್ದಂತಾಗಿದ್ದು, ಆಸ್ಪತ್ರೆ ಆವರಣದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ: ಕರ್ನಾಟಕ ಬಿಜೆಪಿಗೆ ಮತ್ತೆ ‘ರಾಜಾಹುಲಿ’ ಕಳೆ.. ಒಂದೇ ಕಲ್ಲಲ್ಲಿ ಎರಡು ಗುರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us