ಬಳ್ಳಾರಿಯಲ್ಲಿ ಫೈರಿಂಗ್ ಕೇಸ್‌ : ಎಲ್ಲ 26 ಆರೋಪಿಗಳಿಗೆ ನ್ಯಾಯಾಂಗ ಬಂಧನ, ಇಂದು ಪತ್ತೆಯಾಯ್ತು ಬುಲೆಟ್‌!

ಬಳ್ಳಾರಿಯಲ್ಲಿ ಶಾಸಕ ಜನಾರ್ಧನ ರೆಡ್ಡಿ ಮನೆ ಮುಂದೆ ನಡೆದ ಫೈರಿಂಗ್ ಕೇಸ್ ನಲ್ಲಿ ಪೊಲೀಸರು 26 ಆರೋಪಿಗಳನ್ನು ಬಂಧಿಸಿದ್ದರು. ಎಲ್ಲ 26 ಮಂದಿಗೂ ಬೆಂಗಳೂರಿನ ಕೋರ್ಟ್ ಜನವರಿ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇಂದು ಜನಾರ್ಧನ ರೆಡ್ಡಿ ಮನೆ ಮುಂದೆ 9 ಎಂಎಂ ಬುಲೆಟ್ ಪತ್ತೆಯಾಗಿದೆ.

author-image
Chandramohan
BALLARI POLITICS FIGHT
Advertisment


ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಫೈರಿಂಗ್ ಪ್ರಕರಣದ ತನಿಖೆಗೆ ಚುರುಕು ಸಿಕ್ಕಿದೆ. ಗಲಾಟೆ ಸಂಬಂಧ ಎದೆ ಉಬ್ಬಿಸಿಕೊಂಡು ಫೈರಿಂಗ್ ಮಾಡಿದ ಗನ್​ಮ್ಯಾನ್​ಗಳು ಸೇರಿ ಒಟ್ಟು 26 ಜನ ಆರೋಪಿಗಳನ್ನು ಪರಪ್ಪನ ಮಡಿಲು ಸೇರಿದ್ದಾರೆ. ಈ ನಡುವೆ ರೆಡ್ಡಿ ಮನೆ ಮುಂದೆ ಬುಲೆಟ್​ವೊಂದು ಸಿಕ್ಕಿದ್ದು ತನಿಖೆ ಮುಂದುವರೆದಿದೆ.


ಬಳ್ಳಾರಿ ದಳ್ಳುರಿ.. ಫೈರಿಂಗ್ ಪ್ರಕರಣ ರಾಯಲಸೀಮೆಯಲ್ಲಿ ಮತ್ತೊಮ್ಮೆ ರಾಜಕೀಯ ಕಿಚ್ಚು ಹಚ್ಚಿದೆ. ರೆಡ್ಡಿಗಳ ಕಾಳಗದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಭಾರೀ ರೋಷಾವೇಶದಲ್ಲಿ ಫೈರಿಂಗ್ ಮಾಡಿ ಬಳಿಕ ನಾಪತ್ತೆಯಾಗಿದ್ದ ಗನ್​ಮ್ಯಾನ್​ಗಳು ಸೇರಿ ಹಲವರನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಬಳ್ಳಾರಿ ಫೈರಿಂಗ್ ಪ್ರಕರಣದಲ್ಲಿ 26 ಜನ ಆರೋಪಿಗಳು ಅರೆಸ್ಟ್
ಶಾಸಕ ಜನಾರ್ದನ ರೆಡ್ಡಿ ಮನೆ ಬಳಿ ಫೈರಿಂಗ್ ಪ್ರಕರಣ ಸಂಬಂಧ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕೇಸ್​ನಲ್ಲಿ ಒಟ್ಟು 26 ಜನ ಆರೋಪಿಗಳನ್ನು ಬ್ರೂಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಇಂದು ಬೆಂಗಳೂರಿಗೆ ಪ್ರತ್ಯೇಕವಾಗಿ ಕರೆದೊಯ್ದು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಕಾಂಗ್ರೆಸ್‌ನ 11 ಜನ ಆರೋಪಿಗಳು, ಬಿಜೆಪಿಯ 15 ಆರೋಪಿಗಳನ್ನು ಜನಪ್ರತಿನಿಧಿಗಳ ಕೋರ್ಟ್‌ಗೆ ಹಾಜರುಪಡಿಸಿದ್ರು. 
ಗುರುಚರಣ್​ ಸಿಂಗ್ ಸೇರಿ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ
ಇನ್ನು ಬಳ್ಳಾರಿ ಗಲಾಟೆ ಕೇಸ್​ನ 26 ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗುರುಚರಣ್​ ಸಿಂಗ್ ಸೇರಿ ಎಲ್ಲಾ ಆರೋಪಿಗಳನ್ನು ಜನವರಿ 19ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಆರೋಪಿಗಳನ್ನು 14 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಆತಿಥ್ಯ ಸ್ವೀಕರಿಸಲಿದ್ದಾರೆ.
ಜನಾರ್ದನ ರೆಡ್ಡಿ ಮನೆಯಲ್ಲಿ ದೊಣ್ಣೆಗಳ ರಾಶಿ ಪತ್ತೆ 
ಇನ್ನು ನಿನ್ನೆಯಷ್ಟೇ ಆಟೋದಲ್ಲಿ ಬಾಟಲಿಗಳನ್ನು ತಂದ ಆಘಾತಕಾರಿ ವಿಡಿಯೋ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಶಾಸಕ ಜನಾರ್ದನ ರೆಡ್ಡಿ ಮನೆಯಲ್ಲಿ ದೊಣ್ಣೆಗಳ ರಾಶಿ ಪತ್ತೆಯಾಗಿದೆ. ಗಲಾಟೆಯಲ್ಲಿ ರೆಡ್ಡಿ ಬೆಂಬಲಿಗರು ದೊಣ್ಣೆಗಳಿಂದ ದಾಳಿ ಮಾಡಿದ ಆರೋಪ ಕೇಳಿಬಂದಿದೆ. ದೊಣ್ಣೆ ಹಿಡಿದು ಹೊಡೆದಾಡಿದ್ದ ರೆಡ್ಡಿ ಬೆಂಬಲಿಗರು ‘ಕೈ’ ಕಾರ್ಯಕರ್ತರ ಮೇಲೆ ದೊಣ್ಣೆ ಬೀಸಿದ್ದರು. ಬಳಿಕ ಕಾಂಪೌಂಡ್​ನಲ್ಲಿ ದೊಣ್ಣೆ ಇಟ್ಟು ತೆರಳಿದ್ದರು.
ಜನಾರ್ದನ ರೆಡ್ಡಿ ಮನೆ ಮುಂದೆ 9 MM ಬುಲೆಟ್ ಪತ್ತೆ
ಇನ್ನು ಫೈರಿಂಗ್ ನಡೆದು ನಾಲ್ಕು ಐದು  ದಿನಗಳ ಬಳಿಕ ಬಳ್ಳಾರಿಯ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದೆ. ಹುಬ್ಬಳ್ಳಿಯ 10ಕ್ಕೂ ಹೆಚ್ಚು ಸಿಬ್ಬಂದಿ ಪರಿಶೀಲನೆ ಮಾಡಿದ್ದಾರೆ. ಬುಲೆಟ್​ಗಾಗಿ NLJD ಮತ್ತು Dsmd ಯಂತ್ರಗಳ ಮೂಲಕ ಹುಡುಕಾಡಿದ್ದಾರೆ. ಈ ವೇಳೆ ಜನಾರ್ದನ ರೆಡ್ಡಿ ಮನೆ ಮುಂಭಾಗದಲ್ಲಿ ಗಲಾಟೆಯ ಸ್ಥಳದಲ್ಲಿ 9 MM ಬುಲೆಟ್ ಪತ್ತೆಯಾಗಿದೆ. ಇತ್ತ SOCO, FSL ತಂಡದಿಂದ ಸಾಕ್ಷ್ಯಗಳ ಶೋಧ ಕಾರ್ಯ ಕೂಡ ನಡೆದಿದೆ.

ballari janradhana reddy




ಒಟ್ಟಾರೆ ಪೊಲೀಸರು ಫೈರಿಂಗ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಈಗಾಗಲೇ 26 ಆರೋಪಿಗಳನ್ನು ಬಂಧಿಸಿ ಪರಪ್ಪನ ಮಡಿಲಿಗೆ ಸೇರಿಸಿದ್ದಾರೆ. ಇತ್ತ ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲನೆ ಮಾಡ್ತಿದೆ. ಈ ವೇಳೆ ಬುಲೆಟ್ ಸಿಕ್ಕಿದ್ದರಿಂದ ಪ್ರಕರಣಕ್ಕೆ ಮಹತ್ವದ ಸಾಕ್ಷಿ ಸಿಕ್ಕಂತಾಗಿದೆ. 

ಶಿವಾನಂದ, ನ್ಯೂಸ್​ ಫಸ್ಟ್ ಬಳ್ಳಾರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ballari banner dispute
Advertisment