/newsfirstlive-kannada/media/media_files/2025/11/05/sugarcane-farmers-negotiation-failed-2025-11-05-19-57-46.jpg)
ಕಬ್ಬು ಬೆಳೆಗಾರರ ಜೊತೆಗೆ ಸಚಿವ ಎಚ್.ಕೆ ಪಾಟೀಲ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ ಬಳಿ ನಡೆದ ಸಂಧಾನ ಸಭೆ ವಿಫಲವಾಗಿದೆ. ರೈತರ ಬೇಡಿಕೆ ಈಡೇರಿಕೆಗೆ ಸಚಿವ ಎಚ್.ಕೆ. ಪಾಟೀಲ್ ಸಮಯಾವಕಾಶ ಕೇಳಿದ್ದಾರೆ. ಇದರಿಂದಾಗಿ ರೈತರು ನಾಳೆ ಸಂಜೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ರೈತರ ಸಭೆ ಆಯೋಜಿಸುತ್ತೇವೆ, ಸಭೆಗೆ ರೈತರು ಬನ್ನಿ ಎಂದು ಸಚಿವ ಎಚ್.ಕೆ.ಪಾಟೀಲ್ ಆಹ್ವಾನ ನೀಡಿದ್ದರು.
ಆದರೇ, ರೈತರು ನಾವು ಸಿಎಂ ಸಿದ್ದರಾಮಯ್ಯರ ಕರೆಯುವ ಸಭೆಗೆ ಬರುವುದಿಲ್ಲ . ಸಚಿವರಾಗಿ ನೀವೇ ಸಿಎಂ ಜೊತೆಗೆ ಮಾತುಕತೆ ನಡೆಸಿ ಸರ್ಕಾರದ ನಿರ್ಧಾರ ಪ್ರಕಟಿಸಿ. ನಾಳೆ ಸಂಜೆಯವರೆಗೆ ನಾವು ನಿಮ್ಮ ಪ್ರಕಟಣೆ, ಸರ್ಕಾರದ ನಿಲುವಿಗೆ ಕಾಯುತ್ತೇವೆ. ನಾಳೆ ಸಂಜೆ ನಿಮ್ಮ ನಿರ್ಧಾರ ಇಷ್ಟವಾದ್ರೆ ನಾವು ಪ್ರತಿಭಟನೆ ಕೈಬಿಡುತ್ತೇವೆ. ಇಲ್ಲವಾದರೆ ನವೆಂಬರ್ 7ಕ್ಕೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು ಖಚಿತ ಎಂದು ರೈತ ಮುಖಂಡರು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಭೆಗೆ ನಾವು ಬರಲ್ಲ, ಈ ಭಾಗದ ಜನರು ತಪ್ಪು ತಿಳಿಯುತ್ತಾರೆ ಎಂದು ರೈತ ಮುಖಂಡರು ಹೇಳಿದ್ದಾರೆ. ಸಿಎಂ ಭೇಟಿ ಆಗಿ ಚರ್ಚಿಸಿದ ಬಳಿಕ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿ ಸಚಿವ ಎಚ್.ಕೆ.ಪಾಟೀಲ್ ರೈತರ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದ್ದಾರೆ.
ರೈತರು ಪ್ರತಿ ಟನ್ ಕಬ್ಬುಗೆ 3,500 ರೂಪಾಯಿ ಬೆಲೆ ನೀಡಬೇಕೆಂದು ಬಿಗಿ ಪಟ್ಟು ಹಿಡಿದಿದ್ದಾರೆ. ಕಳೆದ ವರ್ಷ 2,900 ರೂಪಾಯಿಯಿಂದ 3,150 ರೂಪಾಯಿವರೆಗೂ ಸಕ್ಕರೆ ಕಾರ್ಖಾನೆಗಳು ಬೆಲೆ ನೀಡಿದ್ದವು. ಈ ವರ್ಷ ಮುಂಚಿತವಾಗಿ ಬೆಲೆ ನಿಗದಿಪಡಿಸಿ ರೈತರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಬೇಕೆಂದು ರೈತರು ಈಗ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಮೊದಲ ಭಾರಿಗೆ ಸರ್ಕಾರದ ಸಚಿವರೊಬ್ಬರು ಬಂದು ರೈತರನ್ನು ಭೇಟಿಯಾಗಿದ್ದಾರೆ. ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ರಾಜ್ಯ ಕ್ಯಾಬಿನೆಟ್ ಸಭೆ ನಡೆಯಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಕಬ್ಬು ಬೆಳೆಯ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ಕಬ್ಬು ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕೆಂದು ರಾಜ್ಯ ಸರ್ಕಾರ ಹೇಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us