ಬೆಂಗಳೂರಲ್ಲಿ 3.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಸೀಜ್! ಲಕಲಕ ಹೊಳೆಯೋ ಕಾರಿನ ಸುತ್ತ ರೋಚಕ ರಹಸ್ಯಗಳು..!

ಬರೋಬ್ಬರಿ 3.5 ಕೋಟಿ ರೂಪಾಯಿ ಬೆಲೆಬಾಳುವ, ಸರ್ಕಾರಕ್ಕೆ 36 ಲಕ್ಷ ರೂ. ತೆರಿಗೆ ವಂಚಿಸಿದ್ದ ಲ್ಯಾಂಬೋರ್ಗಿನಿ ಕಾರನ್ನು ಕೊಡಿಗೇಹಳ್ಳಿ ಪೊಲೀಸರು ಮತ್ತು ಆರ್​ಟಿಓ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ.

author-image
Ganesh Kerekuli
Lamborghini
Advertisment

ಬೆಂಗಳೂರು: ಇದು ಯಾವುದೋ ಕ್ರೈಮ್ ಥ್ರಿಲ್ಲರ್ ಸಿನಿಮಾ ಕಥೆಯಲ್ಲ.. ಲಕ ಲಕ ಹೊಳೆಯುವ ಲ್ಯಾಂಬೋರ್ಗಿನಿ ಕಾರಿನ ಹಿಂದಿನ ‘ಮಹಾ ಪುರಾಣ’! ಕಾರು ಖರೀದಿಸಿದ್ದು ಯಾರೋ, ಓಡಿಸ್ತಿರೋದು ಮತ್ಯಾರೋ, ತೆರಿಗೆ ಕಟ್ಟದೇ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸಿದ್ದು ಇನ್ನೊಬ್ಬರು.. ಹೀಗೆ ಸಾಲು ಸಾಲು ರಹಸ್ಯಗಳನ್ನಿಟ್ಟುಕೊಂಡಿದ್ದ ಐಷಾರಾಮಿ ಕಾರೊಂದು ಕೊನೆಗೂ ಆರ್​ಟಿಓ ಅಧಿಕಾರಿಗಳ ಬಲೆಗೆ ಬಿದ್ದಿದೆ.

ಬರೋಬ್ಬರಿ 3.5 ಕೋಟಿ ರೂಪಾಯಿ ಬೆಲೆಬಾಳುವ, ಸರ್ಕಾರಕ್ಕೆ 36 ಲಕ್ಷ ರೂ. ತೆರಿಗೆ ವಂಚಿಸಿದ್ದ ಲ್ಯಾಂಬೋರ್ಗಿನಿ ಕಾರನ್ನು ಕೊಡಿಗೇಹಳ್ಳಿ ಪೊಲೀಸರು ಮತ್ತು ಆರ್​ಟಿಓ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಸೀಜ್ ಮಾಡಿದ್ದಾರೆ.

ಏನಿದು ಪ್ರಕರಣ? 

ಪ್ರಕರಣದ ಮೂಲ ಇರುವುದು ಕಾರಿನ ಮಾಲೀಕತ್ವದಲ್ಲಿ. ‘ಹರ್ಷಾ ಇನ್ಫ್ರಾ ಕನ್ಸ್ಟ್ರಕ್ಷನ್ ಪ್ರೈ. ಲಿಮಿಟೆಡ್’ ಮಾಲೀಕ ಹರ್ಷಾ ಎಂಬುವವರು ಈ ದುಬಾರಿ ಲ್ಯಾಂಬೋರ್ಗಿನಿ ಕಾರನ್ನು ಮೊದಲು ಖರೀದಿಸಿದ್ದರು. ತೆಲಂಗಾಣ ಆರ್​ಟಿಓದಲ್ಲಿ ತಾತ್ಕಾಲಿಕ ನೋಂದಣಿ ಮಾಡಿಸಿದ್ದ ಹರ್ಷಾ, ನಂತರ ಮೂರು ವರ್ಷಗಳ ಕಾಲ ಶಾಶ್ವತ ನೋಂದಣಿ (Registration) ಮಾಡಿಸಿರಲಿಲ್ಲ.

ಬಳಿಕ ಈ ಕಾರನ್ನು ‘ಎಚ್ 1 ಕಾರ್ ಕೇರ್’ (H1 Car Care) ಎಂಬ ಸಂಸ್ಥೆಗೆ ಮಾರಾಟ ಮಾಡಿದ್ದರು. ಹೆಚ್ 1 ಕಾರ್ ಕೇರ್ ಕಂಪನಿಯು ಹರ್ಷಾ ಅವರಿಂದ ಅಧಿಕೃತವಾಗಿ ಮಾಲೀಕತ್ವ ವರ್ಗಾವಣೆ ಮಾಡಿಕೊಂಡಿರಲಿಲ್ಲ. ಬದಲಿಗೆ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಂದಿರಾನಗರ ಆರ್​ಟಿಓದಲ್ಲಿ ಕಾರನ್ನು ನೋಂದಣಿ ಮಾಡಿಸಿದ್ದರು. ಕಾರಿಗೆ KA-03-NX0016 ನಂಬರ್ ನೀಡಲಾಗಿತ್ತು.

ಎದೆನೋವಿನ ನಾಟಕ & ಎಸ್ಕೇಪ್

ತೆರಿಗೆ ವಂಚಿಸಿ ಓಡಾಡುತ್ತಿದ್ದ ಈ ಕಾರಿಗಾಗಿ ಕಳೆದ ಮೂರು ತಿಂಗಳಿನಿಂದ ಆರ್​ಟಿಓ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದರು. ಡಿಸೆಂಬರ್ 13, 2025 ರಂದು ಕಾರು ಕೂರ್ಗ್ ನಿಂದ ಬೆಂಗಳೂರಿಗೆ ಬರುತ್ತಿದೆ ಎಂಬ ಖಚಿತ ಮಾಹಿತಿ ಹುಣಸೂರು, ಮಡಿಕೇರಿ, ಮೈಸೂರು ಪಶ್ಚಿಮ ಹಾಗೂ ಜಯನಗರ ಆರ್​ಟಿಓ ತಂಡಕ್ಕೆ ಲಭ್ಯವಾಗಿತ್ತು. ಅಧಿಕಾರಿಗಳು ಮೈಸೂರು ಮತ್ತು ಕೂರ್ಗ್ ನಡುವೆ ಕಾರನ್ನು ತಡೆದು ತಪಾಸಣೆ ನಡೆಸಿದಾಗ, ಕಾರಿನಲ್ಲಿದ್ದ 'ಅಖಿಲ್ ಹೇಮಾದ್ರಿ' ಎಂಬುವವರು ತಾವೇ ಮಾಲೀಕ ಎಂದು ಹೇಳಿಕೊಂಡಿದ್ದರು. ಆದರೆ ದಾಖಲೆ ಕೇಳಿದಾಗ ತಡಬಡಾಯಿಸಿದ್ದರು.

ಕಾರನ್ನು ಜಪ್ತಿ ಮಾಡಿ ಆರ್​ಟಿಓ ಕಚೇರಿಗೆ ಕೊಂಡೊಯ್ಯಲು ಮುಂದಾದಾಗ, ಅಖಿಲ್ ಹೇಮಾದ್ರಿ ಹೈಡ್ರಾಮಾ ಶುರು ಮಾಡಿದ್ದ. ‘ನನಗೆ ವಿಪರೀತ ಎದೆನೋವು ಬರುತ್ತಿದೆ’ ಎಂದು ನಟಿಸಿದ್ದ. ಇದನ್ನು ನಂಬಿದ ಇನ್ಸ್‌ಪೆಕ್ಟರ್ ಮಾನವೀಯತೆಯಿಂದ ನೀರು ತರಲು ಹೋದಾಗ, ಇದೇ ಸರಿಯಾದ ಸಮಯ ಎಂದು ಭಾವಿಸಿದ ಅಖಿಲ್, ಕಣ್ಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲೇ ಕಾರಿನ ಸಮೇತ ಅಲ್ಲಿಂದ ಪರಾರಿಯಾಗಿದ್ದ!

ಮಧ್ಯರಾತ್ರಿ ಕಾರ್ಯಾಚರಣೆ 

ಅಂದು ಎಸ್ಕೇಪ್ ಆಗಿದ್ದ ಕಾರನ್ನು ಕಳೆದ ಎರಡು ತಿಂಗಳಿಂದ ‘ಎಚ್ 1 ಕಾರ್ ಕೇರ್’ ಗ್ಯಾರೇಜ್‌ನಲ್ಲಿ ಮುಚ್ಚಿಡಲಾಗಿತ್ತು. ಈ ಬಗ್ಗೆ ಸುಳಿವು ಸಿಕ್ಕ ಆರ್​ಟಿಓ ಅಧಿಕಾರಿಗಳು, ಮೊನ್ನೆ ಮಧ್ಯರಾತ್ರಿ ದಿಢೀರ್ ದಾಳಿ ನಡೆಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರಕ್ಕೆ ಸೇರಬೇಕಿದ್ದ ಬರೋಬ್ಬರಿ 36 ಲಕ್ಷ ರೂ. ತೆರಿಗೆಯನ್ನು ಉಳಿಸಲು ಹೋಗಿ, ಈಗ ಕಾರು ಕಳೆದುಕೊಳ್ಳುವ ಜೊತೆಗೆ ಮಾಲೀಕರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಸದ್ಯ ಕೊಡಿಗೇಹಳ್ಳಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Lamborghini car
Advertisment