/newsfirstlive-kannada/media/media_files/2026/01/29/mayur-patel-2026-01-29-09-07-44.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಸರಣಿ ಅಪಘಾತ ಎಸಗಿದ ಘಟನೆ ನಡೆದಿದೆ. ಸ್ಯಾಂಡಲ್​ವುಡ್ ನಟ ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರು ನಿಯಂತ್ರಣ ತಪ್ಪಿ ನಾಲ್ಕು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ವಾಹನಗಳು ಜಖಂಗೊಂಡಿವೆ.
ಘಟನೆ ಹಿನ್ನೆಲೆ
ಬುಧವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ಮಯೂರ್ ಪಟೇಲ್ ತಮ್ಮ ಫಾರ್ಚೂನರ್ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆಯಲ್ಲಿದ್ದ ಇತರ ನಾಲ್ಕು ಕಾರುಗಳಿಗೆ ಸರಣಿ ಡಿಕ್ಕಿ ಹೊಡೆದಿದೆ. ಇದರಲ್ಲಿ ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ವಾಹನ ಸೇರಿದೆ.
ಮದ್ಯದ ಅಮಲಿನಲ್ಲಿ ಚಾಲನೆ - ಪಾಸಿಟಿವ್ ರಿಪೋರ್ಟ್!
ಅಪಘಾತದ ಸುದ್ದಿ ತಿಳಿದ ತಕ್ಷಣ ಹಲಸೂರು ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು 'ಡ್ರಿಂಕ್ ಆಂಡ್ ಡ್ರೈವ್' (DD) ತಪಾಸಣೆಗೆ ಒಳಪಡಿಸಿದಾಗ, ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ (Positive). ಅಲ್ಲದೆ, ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರಿನ ಇನ್ಸೂರೆನ್ಸ್ (ವಿಮೆ) ಕೂಡ ಲ್ಯಾಪ್ಸ್ ಆಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮಯೂರ್ ಪಟೇಲ್ ಅವರ ಕಾರನ್ನು ಸೀಜ್ ಮಾಡಿದ್ದಾರೆ.
ಹೊಸ ಕಾರು ಕಳೆದುಕೊಂಡು ಕಣ್ಣೀರಿಟ್ಟ ಮಾಲೀಕ
ಈ ಅಪಘಾತದಲ್ಲಿ ಅತೀ ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದು ಸ್ವಿಫ್ಟ್ ಡಿಜೈರ್ ಕಾರಿನ ಮಾಲೀಕ ಶ್ರೀನಿವಾಸ್. ಅವರು ನೀಡಿದ ಹೇಳಿಕೆ ಕೇಳುಗರ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ.
"ಕಾರ್ ಖರೀದಿಸಿ ಕೇವಲ ಒಂದು ವಾರವಾಗಿತ್ತು. ಹೆಂಡತಿಯ ಒಡವೆಯನ್ನು ಅಡವಿಟ್ಟು ಈ ಕಾರನ್ನು ಖರೀದಿಸಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಬಿಟ್ಟು ಎಂಪ್ಲಾಯ್ ಪಿಕಪ್ ಅಂಡ್ ಡ್ರಾಪ್ ಕೆಲಸ ಮಾಡುತ್ತಿದ್ದೆ. ಇದೇ ತಿಂಗಳು 5ನೇ ತಾರೀಕು ಇಎಂಐ (EMI) ಕಟ್ಟಬೇಕಿದೆ. ಈಗ ಕಾರ್ ಹೀಗಾದರೆ ನಾನು ಜೀವನ ಮಾಡುವುದು ಹೇಗೆ?" ಎಂದು ಶ್ರೀನಿವಾಸ್ ಹಲಸೂರು ಪೊಲೀಸ್ ಠಾಣೆಯ ಮುಂದೆಯೇ ಕಣ್ಣೀರಿಟ್ಟಿದ್ದಾರೆ.
ಪೊಲೀಸ್ ಕ್ರಮ:
ಶ್ರೀನಿವಾಸ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ಯದ ಅಮಲಿನಲ್ಲಿ ವಾಹನ ಚಾಲನೆ, ಅಜಾಗರೂಕತೆ ಹಾಗೂ ವಿಮೆ ಇಲ್ಲದೆ ವಾಹನ ಚಲಾಯಿಸಿದ ಆರೋಪದಡಿ ಮಯೂರ್ ಪಟೇಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಬೆಂಗಳೂರು ಟ್ರಾಫಿಕ್‌ಗೆ ಬ್ರೇಕ್ ಹಾಕಲು ಸಂಚಾರಿ ಪೊಲೀಸರ ಮಾಸ್ಟರ್ ಪ್ಲಾನ್: ಪಾಲಿಕೆಗೆ ಸಲ್ಲಿಕೆಯಾಯ್ತು ಬೃಹತ್ ಪಟ್ಟಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us