/newsfirstlive-kannada/media/media_files/2025/09/01/bda-head-office02-2025-09-01-17-13-19.jpg)
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಥವಾ ಪಿಆರ್‌ಆರ್ ನಲ್ಲಿ 6 ಲೇಔಟ್ ನಿರ್ಮಾಣ
ಬೆಂಗಳೂರಿನಲ್ಲಿ ಬಿಡಿಎ ಸೈಟ್ ಗಳಿಗೆ ಭಾರಿ ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ಲೇಔಟ್ ಗಳನ್ನು ನಿರ್ಮಿಸಿ ಜನರಿಗೆ ನೀಡಲು ಬಿಡಿಎಗೆ ಸಾಧ್ಯವಾಗುತ್ತಿಲ್ಲ. ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರಸ್ತೆಗೆ ಹೊಂದಿಕೊಂಡಂತೆ 6 ಹೊಸ ಬಡಾವಣೆ ನಿರ್ಮಿಸಲು ಬಿಡಿಎ ನಿರ್ಧರಿಸಿದೆ. ಈ 6 ಬಡಾವಣೆಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಈಗ ಅನುಮೋದನೆ ನೀಡಿದೆ.
ಬೆಂಗಳೂರಿನ ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆಗೆ ಹಾದು ಹೋಗುವ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2 (ಪಿಆರ್‌ಆರ್) ರಸ್ತೆಗೆ ಹೊಂದಿಕೊಂಡಂತೆ ನಿರ್ಮಿಸಲು ಉದ್ದೇಶಿಸಿರುವ 6 ಬಡಾವಣೆಗಳಿಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರಕಾರ ಅನುಮೋದನೆ ನೀಡಿದೆ.
ಬಿಡಿಎ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2 ರಸ್ತೆಗೆ ಹೊಂದಿಕೊಂಡಂತೆ 6217 ಎಕರೆ ಪ್ರದೇಶದಲ್ಲಿ 6 ಬಡಾವಣೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಈ ಯೋಜನೆಗಾಗಿ 854 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಮತ್ತು ಭೂಮಾಲೀಕರಿಗೆ 40:60ರ ಅನುಪಾತದಲ್ಲಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಅನಧಿಕೃತ ಬಡಾವಣೆಗೆ ಕಡಿವಾಣ ಹಾಕಲು ಬಿಡಿಎ ಯೇ ಈ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಬೆಂಗಳೂರಿನ ಏರುತ್ತಿರುವ ಜನಸಂಖ್ಯೆಗೆ ಬೆಂಗಳೂರು ಹೊರವಲಯದಲ್ಲಿ ನಿವೇಶನ ನೀಡಿ, ಹೊರ ವಲಯದಲ್ಲಿ ವ್ಯವಸ್ಥಿತವಾಗಿ ಬೆಂಗಳೂರು ಬೆಳೆಯುವಂತೆ ಮಾಡಲು 6 ಬಡಾವಣೆ ನಿರ್ಮಿಸಲು ನಿರ್ಧರಿಸಿದೆ.
ರಾಜ್ಯ ಸರ್ಕಾರದ ನಗರಾಭಿವೃದ್ದಿ ಇಲಾಖೆಯು ಬಡಾವಣೆ ನಿರ್ಮಾಣಕ್ಕಾಗಿ ರೈತರ ಭೂಮಿ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ತನ್ನ ಒಪ್ಪಿಗೆಯನ್ನು ನೀಡಿದೆ. ಇದರಿಂದಾಗಿ ಈಗ ಭೂ ಸ್ವಾಧೀನಕ್ಕೆ ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತೆ. ರೈತರಿಂದ, ಜನರಿಂದ ಏನಾದರೂ, ಆಕ್ಷೇಪಣೆಗಳು ಇದ್ದಲ್ಲಿ ಬಿಡಿಎಗೆ ಸಲ್ಲಿಸಲು ಅವಕಾಶ ನೀಡಲಾಗುತ್ತೆ. ಬಳಿಕ ಭೂಸ್ವಾಧೀನದ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತೆ. ಫೈನಲ್ ನೋಟೀಫಿಕೇಷನ್ ಅನ್ನು 6/1 ನೋಟೀಫಿಕೇಷನ್ ಎಂದು ಕರೆಯಲಾಗುತ್ತೆ. ಭೂ ಸ್ವಾಧೀನದ ಫೈನಲ್ ನೋಟಿಫಿಕೇಷನ್ ಹೊರಡಿಸಿದ ಮೇಲೆ ಆ ಭೂಮಿ ಸಂಪೂರ್ಣವಾಗಿ ಬಿಡಿಎ ಯಿಂದ ಸ್ವಾಧೀನವಾಯಿತು ಎಂದೇ ಅರ್ಥ.
ಬೆಂಗಳೂರಿನ ಹೊರವಲಯದಲ್ಲಿ ನಿರ್ಮಾಣವಾಗುವ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಗೆ ಹೊಂದಿಕೊಂಡಂತೆ, 6,217 ಎಕರೆ ಜಾಗದಲ್ಲಿ 6 ಬಡಾವಣೆ ನಿರ್ಮಾಣ ಮಾಡಲಾಗುತ್ತೆ. ಈ ಮೊದಲು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅನ್ನು ಫೆರಿಫರಲ್ ರಿಂಗ್ ರೋಡ್-2 ಎಂದು ಕರೆಯಲಾಗುತ್ತಿತ್ತು. ಆದರೇ, ಈ ಹೆಸರು ಇದ್ದರೇ, ಬಂಡವಾಳ ಹೂಡಿಕೆಯಾಗಲ್ಲ ಎಂದು ಡಿಸಿಎಂ ಡಿಕೆಶಿ ಹೆಸರು ಬದಲಾವಣೆ ಮಾಡಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ನಾಮಕರಣ ಮಾಡಿದ್ದಾರೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಥವಾ ಫೆರಿಫರಲ್ ರಿಂಗ್ ರೋಡ್ ಅನ್ನು 2 ಹಂತದಲ್ಲಿ ನಿರ್ಮಿಸಲಾಗುತ್ತೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ -1 ತುಮಕೂರು ರಸ್ತೆಯಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುತ್ತೆ. ಇನ್ನೂ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-2 ಹೊಸೂರು ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. 100 ಮೀಟರ್ ಅಗಲದ 30 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗುತ್ತೆ. ಕಾರಿಡಾರ್ ನ 2 ಬದಿಗಳಲ್ಲಿ 24 ಮೀಟರ್ ಉದ್ದಕ್ಕೂ ವಾಣಿಜ್ಯ ನಿವೇಶನಗಳನ್ನು ನಿರ್ಮಿಸಲಾಗುತ್ತೆ.
ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ -2 ಗಾಗಿ 854 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತೆ. 6 ಬಡಾವಣೆ ನಿರ್ಮಾಣಕ್ಕಾಗಿ 21 ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ.
ಆದರೇ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-1 ರ ನಿರ್ಮಾಣಕ್ಕಾಗಿ ಭೂಮಿ ನೀಡಲು ರೈತರು ಸಿದ್ದರಿಲ್ಲ. ನಿನ್ನೆ( ಸೆಪ್ಟೆಂಬರ್ 25 ) ಬಿಡಿಎ ನಲ್ಲಿ ರೈತರು ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರೀಸ್, ಬಿಬಿಸಿ ಅಧ್ಯಕ್ಷ ಎಲ್.ಕೆ.ಅತೀಕ್ ಮಧ್ಯೆ ನಡೆದ ಸಭೆ ವಿಫಲವಾಗಿದೆ. ರೈತರು 2013ರ ಭೂ ಸ್ವಾಧೀನ ಕಾಯಿದೆಯಡಿ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೇ, ಬಿಡಿಎ ಇದಕ್ಕೆ ಸಿದ್ದವಿಲ್ಲ.
ಬಿಬಿಸಿ( ಬೆಂಗಳೂರ ಬ್ಯುಸಿನೆಸ್ ಕಾರಿಡಾರ್ ) ನಿರ್ಮಾಣಕ್ಕೆ ಒಟ್ಟಾರೆ 27 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ. ಭೂ ಸ್ವಾಧೀನಕ್ಕೆ 20 ಸಾವಿರ ಕೋಟಿ ರೂ ವೆಚ್ಚವಾದರೇ, ಕಾರಿಡಾರ್ ನಿರ್ಮಾಣದ ಸಿವಿಲ್ ಕೆಲಸಗಳಿಗೆ 7 ಸಾವಿರ ಕೋಟಿ ರೂಪಾಯಿ ವೆಚ್ಚವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.