/newsfirstlive-kannada/media/media_files/2025/12/29/namma-metro-2-2025-12-29-11-06-57.jpg)
ಬೆಂಗಳೂರು: ಸಿಲಿಕಾನ್ ಸಿಟಿಯ ಲೈಫ್‌ಲೈನ್ ಎನಿಸಿಕೊಂಡಿರುವ ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ (BMRCL) ದರ ಏರಿಕೆಯ ಬರೆ ಎಳೆದಿದೆ. ಫೆಬ್ರವರಿ 9ರಿಂದ ಜಾರಿಗೆ ಬರುವಂತೆ ಮೆಟ್ರೋ ಟಿಕೆಟ್ ದರವನ್ನು ಶೇಕಡಾ 5ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ದರ ಏರಿಕೆಗೆ ಕಾರಣವೇನು?
ಮೆಟ್ರೋ ರೈಲ್ವೇ ಕಾಯ್ದೆ 2002ರ ಅಡಿಯಲ್ಲಿ ರಚಿಸಲಾದ ‘ಫೇರ್ ಫಿಕ್ಸೇಷನ್ ಕಮಿಟಿ’ (FFC) ಶಿಫಾರಸಿನಂತೆ ಈ ದರ ಪರಿಷ್ಕರಣೆ ಮಾಡಲಾಗಿದೆ. ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕಳೆದ 7.5 ವರ್ಷಗಳ ನಂತರ ಮೊದಲ ಬಾರಿಗೆ ಈ ದರ ಪರಿಷ್ಕರಣೆ ಮಾಡಲಾಗಿದ್ದು, ಭವಿಷ್ಯದಲ್ಲಿ ಒಮ್ಮಿಂದೊಮ್ಮೆಗೆ ದರ ಏರಿಕೆ ಮಾಡುವುದನ್ನು ತಪ್ಪಿಸಲು ಪ್ರತಿವರ್ಷ ‘ಸ್ವಯಂಚಾಲಿತ ದರ ಪರಿಷ್ಕರಣೆ’ ಜಾರಿಗೆ ತರಲು ನಿರ್ಧರಿಸಲಾಗಿದೆ.
ಪರಿಷ್ಕೃತ ಮೆಟ್ರೋ ದರ ಪಟ್ಟಿ
ದೂರಕ್ಕೆ ಅನುಗುಣವಾಗಿ ಕನಿಷ್ಠ 1 ರೂಪಾಯಿಯಿಂದ ಗರಿಷ್ಠ 5 ರೂಪಾಯಿಗಳವರೆಗೆ ದರ ಹೆಚ್ಚಳವಾಗಿದೆ.
0-2 ಕಿ.ಮೀ: ₹10 ರಿಂದ ₹11ಕ್ಕೆ ಏರಿಕೆ
2-4 ಕಿ.ಮೀ: ₹20 ರಿಂದ ₹21ಕ್ಕೆ ಏರಿಕೆ
4-6 ಕಿ.ಮೀ: ₹30 ರಿಂದ ₹32ಕ್ಕೆ ಏರಿಕೆ
6-8 ಕಿ.ಮೀ: ₹40 ರಿಂದ ₹42ಕ್ಕೆ ಏರಿಕೆ
8-10 ಕಿ.ಮೀ: ₹50 ರಿಂದ ₹53ಕ್ಕೆ ಏರಿಕೆ
10-15 ಕಿ.ಮೀ: ₹60 ರಿಂದ ₹63ಕ್ಕೆ ಏರಿಕೆ
15-20 ಕಿ.ಮೀ: ₹70 ರಿಂದ ₹74ಕ್ಕೆ ಏರಿಕೆ
20-25 ಕಿ.ಮೀ: ₹80 ರಿಂದ ₹84ಕ್ಕೆ ಏರಿಕೆ
25 ಕಿ.ಮೀ ಮೇಲ್ಪಟ್ಟು: ₹90 ರಿಂದ ₹95ಕ್ಕೆ ಏರಿಕೆ
ಪ್ರಮುಖ ಮಾರ್ಗಗಳ ಹೊಸ ದರಗಳು:
- ವೈಟ್‌ಫೀಲ್ಡ್ - ಚಲ್ಲಘಟ್ಟ (ಪರ್ಪಲ್ ಲೈನ್): ₹90 ರಿಂದ ₹95
- ಸಿಲ್ಕ್ ಇನ್‌ಸ್ಟಿಟ್ಯೂಟ್ - ಮಾದಾವರ (ಗ್ರೀನ್ ಲೈನ್): ₹90 ರಿಂದ ₹95
- ಮೆಜೆಸ್ಟಿಕ್ - ವೈಟ್‌ಫೀಲ್ಡ್: ₹80 ರಿಂದ ₹84
- ಮೆಜೆಸ್ಟಿಕ್ - ಬೊಮ್ಮಸಂದ್ರ: ₹80 ರಿಂದ ₹84
- ಆರ್.ವಿ ರಸ್ತೆ - ಬೊಮ್ಮಸಂದ್ರ (ಯೆಲ್ಲೋ ಲೈನ್): ₹60 ರಿಂದ ₹63
ಸಂಸದ ಪಿ.ಸಿ. ಮೋಹನ್ ಆಕ್ರೋಶ
ಬಿಎಂಆರ್‌ಸಿಎಲ್‌ನ ಈ ನಿರ್ಧಾರಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ರಾಜ್ಯ ಸರ್ಕಾರದ ಆಡಳಿತಾತ್ಮಕ ವೈಫಲ್ಯ ಮತ್ತು ಆರ್ಥಿಕ ಸಂಕಷ್ಟದ ಹೊರೆಯನ್ನು ಮೆಟ್ರೋ ಪ್ರಯಾಣಿಕರ ಮೇಲೆ ಹಾಕಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಮಾಡುವ ಅನ್ಯಾಯ," ಎಂದು ಅವರು ಕಿಡಿಕಾರಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಶೇ. 101 ರಷ್ಟು ದರ ಏರಿಕೆ ಮಾಡಿ, ಸಾರ್ವಜನಿಕರ ಪ್ರತಿಭಟನೆಯಿಂದಾಗಿ ಅದನ್ನು ಹಿಂಪಡೆಯಲಾಗಿತ್ತು. ಆದರೆ ಈ ಬಾರಿ ಶೇ. 5ರಷ್ಟು ಏರಿಕೆಯನ್ನು ಅಧೀಕೃತವಾಗಿ ಜಾರಿಗೊಳಿಸಲಾಗುತ್ತಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us