/newsfirstlive-kannada/media/media_files/2025/12/22/adikeshavalu-son-daughter-arrested-2025-12-22-20-56-06.jpg)
ದಿವಂಗತ ಉದ್ಯಮಿ ಆದಿಕೇಶವಲು, ಪುತ್ರ ಶ್ರೀನಿವಾಸ್, ಪುತ್ರಿ ಕಲ್ಪಜಾ
ಉದ್ಯಮಿ ರಘುನಾಥ್ ಕೊಲೆ ಪ್ರಕರಣದ ನಕಲಿ ಛಾಪಾ ಕಾಗದ ಹಾಗೂ ನಕಲಿ ವಿಲ್ ಸೃಷ್ಟಿ ಮಾಡಿದ್ದ ಆರೋಪದ ಕೇಸ್ ನಲ್ಲಿ ಮಾಜಿ ಸಂಸದ ಆದಿಕೇಶವಲು ಮಗ ಶ್ರೀನಿವಾಸ್ ಮತ್ತು ಮಗಳು ಕಲ್ಪಜಾ ಹಾಗೂ ಡಿವೈಎಸ್ಪಿ ಮೋಹನ್ ರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಇಂದು ಸಂಜೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮೂವರು ಆರೋಪಿಗಳನ್ನ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ದಾರೆ.
ಮೂವರು ಆರೋಪಿಗಳನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿಕೊಂಡರು. ಈ ವೇಳೆ ಜಡ್ಜ್ ಮುಂದೆ ನಿಂತು ಆದಿಕೇಶವಲು ಪುತ್ರಿ ಕಲ್ಪಜಾ ಕಣ್ಣೀರು ಹಾಕಿದ್ದರು. ಗ್ರೌಂಡ್ಸ್ ಆಫ್ ಅರೆಸ್ಟ್ ನೀಡಿಲ್ಲ ಎಂದು ಕಲ್ಪಜಾ ಪರ ವಕೀಲ ಕಿರಣ ಜವಳಿ ಆಕ್ಷೇಪಿಸಿದ್ದರು. ಬಂಧನ ಪ್ರಕ್ರಿಯೆ ಸರಿಯಿಲ್ಲ ಎಂದು ವಕೀಲ ಕಿರಣ್ ಜವಳಿ ಆಕ್ಷೇಪಿಸಿದ್ದರು.
ಬಂಧಿಸುವಾಗ ಯಾಕೆ ಬಂಧಿಸುತ್ತಿದ್ದೇವೆ ಎಂಬ ಮಾಹಿತಿ, ದಾಖಲೆ ಕೊಟ್ಟಿದ್ದಾರೆಯೇ ಎಂದು ಜಡ್ಜ್ ಆರೋಪಿಗಳಿಗೆ ಪ್ರಶ್ನೆ ಮಾಡಿದ್ದರು. ಮಾಹಿತಿ, ದಾಖಲೆ ನೀಡಿದ್ದಾರೆ ಎಂದು ಆರೋಪಿ ಕಲ್ಪಜಾ ಕೋರ್ಟ್ ಗೆ ತಿಳಿಸಿದ್ದರು.
ಆರೋಪಿ ಕಲ್ಪಜಾಗೆ ಅಂಗವೈಕಲ್ಯ ಮಗಳಿದ್ದಾಳೆ. ಆಕೆಯನ್ನ ನೋಡಿಕೊಳ್ಳುವ ಅವಶ್ಯಕತೆ ಇದೆ. ಹೀಗಾಗಿ ಆಕೆಯನ್ನ ವಶಕ್ಕೆ ನೀಡದೆ, ಜಾಮೀನು ನೀಡಬೇಕೆಂದು ಕಲ್ಪಜಾ ಪರ ವಕೀಲ ಕಿರಣ್ ಜವಳಿ ಕೋರ್ಟ್ ಗೆ ಮನವಿ ಮಾಡಿಕೊಂಡರು. ಪ್ರತಿದಿನಿ ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗಲಿದ್ದಾರೆಂದು ಜವಳಿ ವಾದಿಸಿದ್ದರು.
ಆರೋಪಿಗಳು ಪ್ರಭಾವಿಗಳಾಗಿದ್ದಾರೆ ಎಂದು ಸಿಬಿಐ ಪರ ವಕೀಲರು ವಾದಿಸಿದ್ದರು.
ಮೂವರು ಆರೋಪಿಗಳನ್ನು ನಕಲಿ ಛಾಪಾಕಾಗದ ಮತ್ತು ನಕಲಿ ವಿಲ್ ಸೃಷ್ಟಿ ಮಾಡಿದ್ದಕ್ಕೆ ಅರೆಸ್ಟ್ ಮಾಡಲಾಗಿದೆ.. ರಘುನಾಥ್ ಕೊಲೆ ಪ್ರಕರಣಕ್ಕೆ ಇನ್ನೂ ಯಾರನ್ನು ಅರೆಸ್ಟ್ ಮಾಡಿಲ್ಲ.
ವಾದ- ಪ್ರತಿವಾದ ಆಲಿಸಿದ ಸಿಬಿಐ ವಿಶೇಷ ಕೋರ್ಟ್ ಡಿಸೆಂಬರ್ 29 ರವರೆಗೆ ಮೂವರು ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಿ ಆದೇಶ ನೀಡಿದೆ.
/filters:format(webp)/newsfirstlive-kannada/media/media_files/2025/12/22/adikeshavalu-son-daughter-arrested-1-2025-12-22-20-59-05.jpg)
ಮೃತ ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಹಾಗೂ ಆರೋಪಿ ಕಲ್ಪಜಾ
ಕೇಸ್ ಹಿನ್ನಲೆ ಏನು ಗೊತ್ತಾ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮೃತ ರಘುನಾಥ್, ಕರ್ನಾಟಕ ,ಆಂಧ್ರಪ್ರದೇಶದಲ್ಲಿ ಹೆಚ್ಚು ಭೂ ವ್ಯವಹಾರ ನಡೆಸುತ್ತಿದ್ದರು. ಮಾಜಿ ಸಂಸದ, ಉದ್ಯಮಿ ಆದಿಕೇಶವಲುಗೂ ಆತ್ಮೀಯರಾಗಿದ್ದರು. 2013 ಏಪ್ರಿಲ್ 24 ರಂದು ಉದ್ಯಮಿ ಆದಿಕೇಶವುಲು ಮೃತಪಟ್ಟಿದ್ದರು.
ರಘುನಾಥ್ ಹೆಸರಿನಲ್ಲಿದ್ದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಆದಿಕೇಶವುಲು ಪುತ್ರ ಡಿ.ಎ.ಶ್ರೀನಿವಾಸ್ ಒತ್ತಡ ಹೇರುತ್ತಿದ್ದಾರೆಂದು ಆರೋಪ ಮಾಡಲಾಗಿದೆ.
ಆದಿಕೇಶವುಲು ಬದುಕಿದ್ದಾಗ ತಮ್ಮ ಹಣದಿಂದ ರಘುನಾಥ್ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದಾರೆಂಬುದು ಆದಿಕೇಶವುಲು ಮಕ್ಕಳ ಆರೋಪ. ಹೀಗಾಗಿ ಆಸ್ತಿಯನ್ನು ತಮ್ಮ ಹೆಸರಿಗೆ ಹಿಂತಿರುಗಿಸುವಂತೆ ಒತ್ತಡ ಹೇರುತ್ತಿದ್ದಾರೆಂದು ಆರೋಪ ಮಾಡಲಾಗಿತ್ತು. ಆದರೆ ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನು ಆದಿಕೇಶವಲು ಮಕ್ಕಳಾದ ಶ್ರೀನಿವಾಸ್, ಕಲ್ಪಜಾ ಹೆಸರಿಗೆ ವರ್ಗಾಯಿಸಲು ಕೆ.ರಘುನಾಥ್ ನಿರಾಕರಿಸಿದ್ದರು.
ತಾವೇ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ತಮ್ಮ ಹೆಸರಿನಲ್ಲಿರುವ ಆಸ್ತಿ ಖರೀಸಿದಿಸಿರುವುದಾಗಿ ರಘುನಾಥ್ ಹೇಳಿದ್ದರು. ತಮ್ಮ ಹೆಸರಿನಲ್ಲಿದ್ದ ಆಸ್ತಿಪಾಸ್ತಿಗಳನ್ನ ಆದಿಕೇಶವುಲು ಮಕ್ಕಳಿಗೆ ವರ್ಗಾಯಿಸುವುದಿಲ್ಲವೆಂದು ರಘುನಾಥ್ ಪಟ್ಟು ಹಿಡಿದಿದ್ದರು. 2016 ರಲ್ಲಿ ರಘುನಾಥ್ ತಮ್ಮ ಪತ್ನಿ ಮಂಜುಳಾ ಹೆಸರಿಗೆ ತಮ್ಮ ಆಸ್ತಿಗಳನ್ನು ಹಸ್ತಾಂತರಿಸಲು ವಿಲ್ ಬರೆದಿದ್ದರು. ಈ ಮಧ್ಯೆ ರಘುನಾಥ್ ತಮ್ಮ ಆಸ್ತಿಯನ್ನು ಮಾರಲು ಮುಂದಾಗಿದ್ದರು.
ಆಗ ಆದಿಕೇಶವುಲು ಮಕ್ಕಳು ವೈಟ್‌ಫೀಲ್ಡ್ ನ ಗೆಸ್ಟ್ ಹೌಸ್ ಗೆ ರಘುನಾಥ್ ರನ್ನು ಬರಹೇಳಿದ್ದ ಆರೋಪ ಇದೆ. 2019 ರ ಮೇ 2 ರಂದು ವೈಟ್ ಫೀಲ್ಡ್ ನ ಗೆಸ್ಟ್ ಹೌಸ್ ಗೆ ರಘುನಾಥ್ ತೆರಳಿದ್ದರು. ಮೇ, 4 ರಂದು ಪತ್ನಿ ಮಂಜುಳಾಗೆ ಕರೆ ಮಾಡಿ ತಾನು ಅಪತ್ತಿನಲ್ಲಿರುವುದಾಗಿ ಹೇಳಿದ್ದರು.
ಆದಿಕೇಶವಲು ಪುತ್ರ ಡಿ .ಎ. ಶ್ರೀನಿವಾಸ್ ಗೆ ಸೇರಿದ ಗೆಸ್ಟ್ ಹೌಸ್ ಗೆ ತೆರಳಿದಾಗ ರಘುನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವು ಅನ್ನು ಆತ್ಮಹತ್ಯೆ ಪ್ರಕರಣವೆಂದು ಪ್ರಕರಣ ಮುಕ್ತಾಯಗೊಳಿಸಲಾಗಿತ್ತು.
ಕೆಲ ತಿಂಗಳ ನಂತರ ಫೆ. 15,2020 ರಂದು ರಘುನಾಥ್ ರನ್ನು ಕೊಲೆ ಮಾಡಿರಬಹುದೆಂದು ಅವರ ಪತ್ನಿ ಮಂಜುಳಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೇ, ಪೊಲೀಸರು ದೂರು ಸ್ವೀಕರಿಸದಿದ್ದಾಗ ಕೋರ್ಟ್ ಗೆ ಖಾಸಗಿ ದೂರು ಸಲ್ಲಿಸಿದ್ದರು. ಕೋರ್ಟ್ ಆದೇಶದಂತೆ ಎಸ್ಐಟಿ ರಚಿಸಿ ತನಿಖೆ ನಡೆಸಲಾಗಿತ್ತು. ರಘುನಾಥ್ ಪತ್ನಿ ಮಂಜುಳಾ ಆರೋಪದಲ್ಲಿ ಹುರುಳಿಲ್ಲವೆಂದು ಎಸ್‌ಐಟಿ ಪೊಲೀಸರು ಅಂತಿಮ ವರದಿ ಸಲ್ಲಿಕೆ ಮಾಡಿದ್ದರು. ಎಸ್ಐಟಿ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಮಂಜುಳಾ ಮತ್ತೆ ಮರುತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಆರೋಪಿಗಳು ಪ್ರಭಾವಿಗಳಾಗಿರುವುದರಿಂದ ಈ ಕೇಸ್ ಬಗ್ಗೆ ಮರು ತನಿಖೆ ನಡೆಸಬೇಕು ಹಾಗೂ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ , ಈ ಬಗ್ಗೆ ಸಿಬಿಐ ತನಿಖೆಗೆ ಆದೇಶ ಮಾಡಿತ್ತು. ಮೃತರ ಕುಟುಂಬಸ್ಥರು ನ್ಯಾಯಸಮ್ಮತ ತನಿಖೆ ಬಯಸುತ್ತಾರೆ. ಆರೋಪಿ ಪ್ರಭಾವಿಯಾಗಿರುವುದರಿಂದ, ತನಿಖೆಯ ಮೇಲೂ ಪ್ರಭಾವ ಬೀರಿರಬಹುದೆಂದು ಅರ್ಜಿದಾರೆ ಮಂಜುಳಾ ಆರೋಪ ಮಾಡಿದ್ದರು. ಬಿ ರಿಪೋರ್ಟ್ ಸಲ್ಲಿಸಿರುವುದರಿಂದ ಮತ್ತೊಂದು ಎಸ್ಐಟಿ ತನಿಖೆ ಅವಶ್ಯಕತೆ ಇಲ್ಲ. ಅನಂತರ ಸಿಬಿಐ ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿತ್ತು
ಕಿಡ್ನಾಪ್ ಮಾಡಿ ಆತ್ಮಹತ್ಯೆ ಎಂಬ ಭಾವನೆ ಬರುವಂತೆ ನಂಬಿಸಿ ಕೊಲೆ ಮಾಡಿದ್ದಾರೆ ಎಂದು ರಘುನಾಥ್ ಪತ್ನಿ ಮಂಜುಳಾ ದೂರು ನೀಡಿದ್ದರು.
ಹೆಚ್ ಎ ಎಲ್ ಪೊಲೀಸ್ ಠಾಣೆಗೆ ರಘುನಾಥ್ ಪತ್ನಿ ಮಂಜುಳ ದೂರು ನೀಡಿದ್ದರು. ಆರೋಪಿಗಳಾದ ಆದಿಕೇಶವಲು ಮಗ ಶ್ರೀನಿವಾಸ್, ದಾಮೋದರ್, ರಾಮಚಂದ್ರಯ್ಯ, ಪ್ರತಾಪ್ ವಿರುದ್ಧ ದೂರು ನೀಡಿದ್ದರು. 4-5-2019 ರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ನಂತರ ನಕಲಿ ವಿಲ್ ಅನ್ನು ಉಪವಿಭಾಗಾಧಿಕಾರಿ ಕೋರ್ಟ್ ಗೆ ಸಲ್ಲಿಕೆ ಮಾಡಿ ರಘುನಾಥ್ ಆಸ್ತಿ ಹೊಡೆಯಲು ಸಂಚು ಮಾಡಿದ್ದರು ಎಂದು ದೂರು ಸಲ್ಲಿಸಿದ್ದರು. ಹೆಚ್ ಎ ಎಲ್ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ರಘುನಾಥ್ ಪತ್ನಿ ಬಿ ರಿಪೋರ್ಟ್ ಪಶ್ನಿಸಿ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ರು. ರಿಟ್ ಅರ್ಜಿ ವಿಚಾರಣೆ ನಡೆಸಿ ಎಸ್ ಐ ಟಿ ತನಿಖೆಗೆ ಹೈಕೋರ್ಟ್ ಆದೇಶ ಮಾಡಿತ್ತು. ಎಸ್ ಐ ಟಿ ತಂಡ ಸಹ ಕೊಲೆ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿತ್ತು. ಬಳಿಕ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಮೃತನ ಪತ್ನಿ ಮಂಜುಳ ಸಿಬಿಐ ತನಿಖೆಗೆ ಮನವಿ ಮಾಡಿದ್ದರು. ಈಗ ನಕಲಿ ವಿಲ್ ಸೃಷ್ಟಿಸಿದ ಕೇಸ್ ನಲ್ಲಿ ಮಾತ್ರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಘನಾಥ್ ಕೊಲೆ ಕೇಸ್ ನಲ್ಲಿ ಇನ್ನೂ ಯಾರು ಅನ್ನು ಸಿಬಿಐ ಬಂಧಿಸಿಲ್ಲ.
ಆದಿಕೇಶವಲು ಕರ್ನಾಟಕದಲ್ಲಿ ಪ್ರಖ್ಯಾತ ಲಿಕ್ಕರ್ ಉದ್ಯಮಿಯಾಗಿದ್ದರು. ಜೊತೆಗೆ ಆಂಧ್ರದ ಟಿಟಿಡಿ ಅಧ್ಯಕ್ಷರಾಗಿದ್ದರು. ಆಂಧ್ರದಲ್ಲಿ TDP ಪಕ್ಷದಿಂದ ಚಿತ್ತೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆಂಧ್ರದ ಚಿತ್ತೂರು, ಕಡಪಾ, ಅನಂತಪುರ ಜಿಲ್ಲೆಗಳಲ್ಲಿ ಆದಿಕೇಶವಲು ನಾಯ್ಡು ರಾಜಕೀಯವಾಗಿ ಪ್ರಭಾವ ಹೊಂದಿದ್ದರು. ಆಂಧ್ರದ ಬಲಿಜ ಅಥವಾ ಕಾಪು ಸಮುದಾಯದ ಮೇಲೆ ರಾಜಕೀಯ ಹಿಡಿತ ಹೊಂದಿದ್ದರು. ಚಂದ್ರಬಾಬು ನಾಯ್ಡುಗೆ ಆಪ್ತರಾಗಿದ್ದರು.
ಕರ್ನಾಟಕದಲ್ಲಿ ಶ್ರೀಮಂತ ಉದ್ಯಮಿಯಾಗಿ ಸಾಕಷ್ಟು ಆಸ್ತಿಪಾಸ್ತಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ರಾಜಕಾರಣಿಗಳಿಗೆ ಆಪ್ತರಾಗಿದ್ದರು. ಈಗ ಅವರ ಮಕ್ಕಳಾದ ಶ್ರೀನಿವಾಸ್ ಮತ್ತು ಕಲ್ಪಜಾ ನಕಲಿ ಛಾಪಾ ಕಾಗದ ಹಾಗೂ ನಕಲಿ ವಿಲ್ ಸೃಷ್ಟಿಸಿ ರಘುನಾಥ್ ಅವರ ಆಸ್ತಿ ಕಬಳಿಕೆಗೆ ಯತ್ನಿಸಿದ ಕೇಸ್ ನಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿ ಕೋರ್ಟ್ ಹಾಲ್ ನಲ್ಲಿ ಕಣ್ಣೀರು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us