/newsfirstlive-kannada/media/media_files/2026/02/03/hd_kumaraswamy_nirmala-sitaraman_union-finance-minister-2026-02-03-21-08-23.jpeg)
ಬೆಂಗಳೂರು: ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರ ನಿರಂತರ ಪ್ರಯತ್ನದ ಫಲವಾಗಿ, ಎಫ್‌ಸಿವಿ (FCV) ತಂಬಾಕು ಮೇಲೆ ವಿಧಿಸಲಾಗಿದ್ದ ಶೇಕಡ 18ರಷ್ಟು ಸುಂಕವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ತಂಬಾಕು ಹರಾಜು ಪ್ರಕ್ರಿಯೆ ಮತ್ತೆ ಚಾಲನೆ ಪಡೆಯಲಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.
ಬೆಳೆಗಾರರ ಕಣ್ಣೀರಿಸಿದ್ದ ಸುಂಕದ ಹೊರೆ
ತಂಬಾಕಿನ ಮೇಲೆ ಶೇಕಡ 18ರಷ್ಟು ಅಬಕಾರಿ ಸುಂಕ ವಿಧಿಸಿದ್ದರಿಂದ ಹೊರೆ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಖರೀದಿದಾರರು ಹರಾಜು ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಇದರಿಂದಾಗಿ ಮೈಸೂರು ಮತ್ತು ಹಾಸನ ಜಿಲ್ಲೆಯ ಪ್ರಮುಖ ತಂಬಾಕು ವಲಯಗಳಾದ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ಹಾಗೂ ಅರಕಲಗೂಡು ಭಾಗದ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬೆಳೆದ ಬೆಳೆ ಮಾರಾಟವಾಗದೆ ಮಾರುಕಟ್ಟೆಗಳು ಸ್ಥಗಿತಗೊಂಡಿದ್ದವು.
ಕುಮಾರಸ್ವಾಮಿ ಅವರ ತಕ್ಷಣದ ಮಧ್ಯಪ್ರವೇಶ
ಸಂಕಷ್ಟಕ್ಕೀಡಾಗಿದ್ದ ಬೆಳೆಗಾರರು ಇತ್ತೀಚೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಸಚಿವರು, ಬೆಂಗಳೂರಿನ ತಂಬಾಕು ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್ಟಿ ಮುಖ್ಯ ಆಯುಕ್ತರಿಂದ ಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದರು.
ನಂತರ ಈ ವಿಷಯವನ್ನು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ತಂದ ಕುಮಾರಸ್ವಾಮಿ ಅವರು, ರೈತರ ಹಿತದೃಷ್ಟಿಯಿಂದ ಅಬಕಾರಿ ಸುಂಕವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಫೆಬ್ರವರಿ 5ರಿಂದ ಹರಾಜು ಪ್ರಕ್ರಿಯೆ ಆರಂಭ
ಸಚಿವ ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹಣಕಾಸು ಸಚಿವರು, ಅಬಕಾರಿ ಸುಂಕ ವಿನಾಯಿತಿಗೆ ಸಮ್ಮತಿಸಿದ್ದಾರೆ. ಈ ಸಂಬಂಧ ಫೆಬ್ರವರಿ 1ರಂದು ಅಧಿಕೃತ ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು, ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದೆ. ಅಲ್ಲದೆ, ಫೆಬ್ರವರಿ 5ರಿಂದಲೇ ಮಾರುಕಟ್ಟೆಗಳಲ್ಲಿ ಹರಾಜು ಪ್ರಕ್ರಿಯೆ ಆರಂಭಿಸುವಂತೆ ನಿರ್ದೇಶನ ನೀಡಿದೆ.
ಹಣಕಾಸು ಸಚಿವರಿಗೆ ಕೃತಜ್ಞತೆ
ತಂಬಾಕು ಬೆಳೆಗಾರರ ಪರವಾಗಿ ಕೈಗೊಂಡ ಈ ನಿರ್ಧಾರಕ್ಕಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೆಚ್.ಡಿ. ಕುಮಾರಸ್ವಾಮಿ ಅವರು ಧನ್ಯವಾದ ಅರ್ಪಿಸಿದ್ದಾರೆ. "ಈ ನಿರ್ಧಾರದಿಂದ ಲಕ್ಷಾಂತರ ತಂಬಾಕು ಬೆಳೆಗಾರರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ," ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಮ್ಮೊಂದಿಗೆ ಚರ್ಚೆ ನಡೆಸಿದ್ದ ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ, ಅರಕಲಗೂಡು ಶಾಸಕ ಎ. ಮಂಜು, ಪಿರಿಯಾಪಟ್ಟಣದ ಮಾಜಿ ಶಾಸಕ ಮಹದೇವು ಹಾಗೂ ಹೆಚ್.ಡಿ. ಕೋಟೆಯ ಜೆಡಿಎಸ್ ಮುಖಂಡ ಕೃಷ್ಣ ನಾಯಕ್ ಅವರ ಸಹಕಾರವನ್ನು ಸಚಿವರು ಸ್ಮರಿಸಿದ್ದಾರೆ.
ಏನಿದು ಸಮಸ್ಯೆ?
ತಂಬಾಕು ಮೇಲೆ ಅಬಕಾರಿ ಸುಂಕ ಹಾಗೂ ಜಿಎಸ್‌ಟಿ ದರ ಏರಿಕೆಯನ್ನು ವಿರೋಧಿಸಿ ಖರೀದಿ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದವು. ಇದರಿಂದ ಮಾರುಕಟ್ಟೆಗಳು ಬಂದ್ ಆಗಿ, ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಾರಾಟವಾಗದೆ ಒಣಗುತ್ತಿತ್ತು. ದಿನದಿಂದ ದಿನಕ್ಕೆ ಬೆಲೆ ಕುಸಿಯುವ ಭೀತಿ ಎದುರಾಗಿತ್ತು. ಈಗ ಸರ್ಕಾರದ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಮತ್ತೆ ಚಟುವಟಿಕೆಗಳು ಆರಂಭವಾಗಲಿವೆ.
ನನ್ನ ಮನವಿಗೆ ಸ್ಪಂದಿಸಿದ ವಿತ್ತ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹರಾಜು ಪ್ರಕ್ರಿಯೆ ಆರಂಭವಾಗಿ ತಂಬಾಕು ಬೆಳೆಗಾರರಿಗೆ ಅನುಕೂಲ ಆಗುತ್ತಿರುವುದು ಸಂತೋಷದ ಸಂಗತಿ. ನರೇಂದ್ರ ಮೋದಿ ಅವರ ಸರಕಾರ ಸದಾ ರೈತಪರ ಎನ್ನುವುದಕ್ಕೆ ಈ ಕ್ರಮವು ಉತ್ತಮ ಉದಾಹರಣೆ ಆಗಿದೆ.
- ಹೆಚ್.ಡಿ. ಕುಮಾರಸ್ವಾಮಿ
ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು, ಭಾರತ ಸರಕಾರ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us