ಸಿಎಂರಿಂದ ಮೂಲಸೌಕರ್ಯ ಅಭಿವೃದ್ದಿ ಯೋಜನೆ ಪ್ರಗತಿ ಪರಿಶೀಲನೆ: ರೈಲ್ವೇ ಯೋಜನೆಗೆ ಶೀಘ್ರ ಭೂಸ್ವಾಧೀನಕ್ಕೆ ಸೂಚನೆ

ಸಿಎಂ ಸಿದ್ದರಾಮಯ್ಯ ಇಂದು ರಾಜ್ಯದ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದರು. ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂಬ ಸೂಚನೆಯನ್ನು ಸಿಎಂ ನೀಡಿದ್ದಾರೆ. ರೈಲ್ವೇ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಕ್ಕೆ ಸೂಚನೆ ನೀಡಿದ್ದಾರೆ.

author-image
Chandramohan
CM siddaramaiah development project review

ಸಿಎಂ ಸಿದ್ದರಾಮಯ್ಯರಿಂದ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ

Advertisment
  • ಸಿಎಂ ಸಿದ್ದರಾಮಯ್ಯರಿಂದ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆ
  • ಕಾಮಗಾರಿಗಳನ್ನ ಕಾಲಮಿತಿಯಲ್ಲಿ ಪೂರ್ಣಕ್ಕೆ ಸೂಚನೆ
  • ರೈಲ್ವೇ ಭೂಸ್ವಾಧೀನ ಪೂರ್ಣಕ್ಕೆ ಅಧಿಕಾರಿಗಳಿಗೆ ಸೂಚನೆ

ಸಿಎಂ ನೇತೃತ್ವದಲ್ಲಿ ನಡೆದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೇ ಯೋಜನೆಗಳ ಭೂಸ್ವಾಧೀನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

1.    2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ರೂ.25 ಕೋಟಿಯಂತೆ ಒಟ್ಟು ರೂ. 3510 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿತ್ತು.

ಇದರಲ್ಲಿ ಈಗಾಗಲೇ ರೂ. 2040 ಕೋಟಿ ಮೊತ್ತದಲ್ಲಿ ಶೇ.58ರಷ್ಟು ಕಾಮಗಾರಿಗಳು ಪೂರ್ಣಗೊಂಡಿದ್ದು, ರೂ.920 ಕೋಟಿ ವೆಚ್ಚ ಭರಿಸಲಾಗಿದೆ.

ಇನ್ನೂ ರೂ. 1205 ಕೋಟಿ ಬಿಡುಗಡೆ ಮಾಡಲು ಬೆಳಗಾವಿ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಆದೇಶ ನೀಡಲಾಗಿದೆ. 

ಅನುಷ್ಠಾನ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ಲುಗಳನ್ನು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

2.    2024-25ರಲ್ಲಿ ಮಳೆ ಹಾನಿಯಿಂದ ಉಂಟಾದ ರಸ್ತೆ ದುರಸ್ತಿಗಾಗಿ ರೂ.1890 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಲಾಗಿದ್ದು, ರೂ.250 ಕೋಟಿ ಬಿಡುಗಡೆ ಮಾಡಲಾಗಿದೆ. 

3.    ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ ರೂ. 8666.50 ಕೋಟಿ ಅನುಮೋದನೆ ನೀಡಲಾಗಿದ್ದು, ಈಗಾಗಲೇ ರೂ.1 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ.

4.    ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಿ, ಅನುದಾನ ಪಾವತಿಸುವುದು ಆಯಾ ಜಿಲ್ಲಾಧಿಕಾರಿಗಳ ಜವಾಬ್ದಾರಿಯಾಗಿದೆ.

ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಆಗಬಾರದು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಾ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

5.    2024-25 ನೇ ಸಾಲಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ಒಟ್ಟು ರೂ. 8666.50 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. 

ಇನ್ನು ಬಾಕಿಯಿರುವ 19 ಕ್ಷೇತ್ರಗಳಿಂದ ಪ್ರಸ್ತಾವನೆಗಳನ್ನು ಪಡೆದ ಬಳಿಕ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಟೆಂಡರ್‌ ಪ್ರಕ್ರಿಯೆಗಳನ್ನು ಜನವರಿ 10ರೊಳಗಾಗಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಮೂಲಸೌಲಭ್ಯ ಅಭಿವೃದ್ಧಿ, (ರೈಲ್ವೇ ಮತ್ತು ವಿಮಾನ ನಿಲ್ದಾಣ)

6.    ರೈಲ್ವೇ ಕಾಮಗಾರಿಗಳಿಗೆ ಬಾಕಿಯಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು.ಕುಡಚಿ-ಬಾಗಲಕೋಟೆ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ರಾಣೆಬೆನ್ನೂರು, ಧಾರವಾಡ-ಬೆಳಗಾವಿ ರೈಲ್ವೇ ಮಾರ್ಗಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗಾಗಿ ಕೈಗೊಳ್ಳಲು ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.


7.    ರಾಜ್ಯದಲ್ಲಿ ಅನುಮೋದನೆಗೊಂಡಿರುವ ಎಲ್ಲಾ ರೈಲು ಯೋಜನೆಗಳಿಗೆ ಒಟ್ಟು 16554 ಎಕರೆ ಭೂಮಿ ಅವಶ್ಯಕತೆ ಇರುತ್ತದೆ. ಇದರ ಪೈಕಿ ಶೇಕಡಾ 84% ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನೂ ಅಂದಾಜು 2685 ಎಕರೆಗಳಷ್ಟು ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಿದೆ.

8.    ರಾಜ್ಯದಲ್ಲಿ ಪ್ರಗತಿಯಲ್ಲಿರುವ ವಿವಿಧ ರೇಲ್ವೆ ಯೋಜನೆಗಳಿಗೆ  ರಾಜ್ಯ ಸರ್ಕಾರದಿಂದ ನಿರ್ಮಾಣ ಕಾಮಗಾರಿಗಳಿಗೆ ರೂ. 2581.67 ಕೋಟಿ ರೂಪಾಯಿ ,  ಭೂಸ್ವಾಧೀನ ಪ್ರಕ್ರಿಯೆಗೆ ರೂ. 2950.22 ಕೋಟಿ ಬಿಡುಗಡೆ ಮಾಡಲಾಗಿದೆ.

9.    ರಾಜ್ಯದಲ್ಲಿ ಒಟ್ಟು 6 ವಿಮಾನ ನಿಲ್ದಾಣಗಳ ಕಾಮಗಾರಿಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ.  ಹಾಸನ ವಿಮಾನ ನಿಲ್ದಾಣ ಭೂಸ್ವಾಧೀನ ಪರಿಹಾರವನ್ನು ರೈತರಿಗೆ ಆದಷ್ಟು ಬೇಗನೆ ವಿತರಿಸಬೇಕು. ಎಲ್ಲಾ ವಿಮಾನ ನಿಲ್ದಾಣಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ನಿವಾರಿಸಬೇಕು. 

ಮೆಕ್ಕೆಜೋಳ ಮತ್ತು ತೊಗರಿ ಖರೀದಿ

10.    ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಒಟ್ಟು 17,350 ಮೆಟ್ರಿಕ್‌ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದು, ಇನ್ನೂ 76430 ಮೆ.ಟನ್‌ ಖರೀದಿಸಲು ಬಾಕಿಯಿದೆ. ಒಟ್ಟು 93,782 ಮೆ.ಟನ್‌ ಮೆಕ್ಕೆಜೋಳ ಖರೀದಿಗೆ ಇಂಡೆಂಟ್‌ ಪಡೆಯಲಾಗಿದ್ದು, ನಿಗದಿತ ಪ್ರಮಾಣದ ಮೆಕ್ಕೆಜೋಳ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

11.    ಎಥೆನಾಲ್ ಖರೀದಿ ಕುರಿತಾಗಿ ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಮನವಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಕೇಂದ್ರ ಸರ್ಕಾರ ರಾಜ್ಯದ ಮೆಕ್ಕೆಜೋಳ ಬೆಳೆಗಾರರ ಕುರಿತು ನಕಾರಾತ್ಮಕ ಧೋರಣೆಯನ್ನು ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಇಂಡೆಂಟ್‌ ನಿಗದಿಪಡಿಸಿರುವ ಪ್ರಮಾಣದಷ್ಟು ಮೆಕ್ಕೆಜೋಳ ಖರೀದಿಗೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು.

CM siddaramaiah development project review (1)







ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

CM SIDDARAMAIAH
Advertisment