ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಮಾಯ..! ಆಗಿದ್ದೇನು..?

ಅತ್ಯಂತ ಬಿಗಿ ಭದ್ರತೆ ಹೊಂದಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ವೈಫಲ್ಯವೋ ಅಥವಾ ಸಿಬ್ಬಂದಿಯ ಕೈಚಳಕವೋ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

author-image
Ganesh Kerekuli
kempegowda
Advertisment

ಬೆಂಗಳೂರು: ಅತ್ಯಂತ ಬಿಗಿ ಭದ್ರತೆ ಹೊಂದಿರುವ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ವೈಫಲ್ಯವೋ ಅಥವಾ ಸಿಬ್ಬಂದಿಯ ಕೈಚಳಕವೋ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಮಾನ ನಿಲ್ದಾಣದಲ್ಲಿ ಲಗೇಜ್ ಬ್ಯಾಗ್‌ನಲ್ಲಿದ್ದ ಕೋಟಿ ಕೋಟಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳು ಕಳ್ಳತನವಾಗಿದ್ದು, ಹುಬ್ಬಳ್ಳಿ ಮೂಲದ ಮಹಿಳೆ ಕಂಗಾಲಾಗಿದ್ದಾರೆ.

ಘಟನೆಯ ವಿವರ

ಹುಬ್ಬಳ್ಳಿಯ ಶಿಗ್ಗಾಂವ್ ಪ್ಲಾಟ್ ನಿವಾಸಿ ಶಾಂತಾ ಕಾಶೀನ್‌ಕುಂಟಿ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಕಳೆದ ನವೆಂಬರ್ 16 ರಂದು ಇವರು ಬೆಂಗಳೂರಿನಿಂದ ದುಬೈ ಮಾರ್ಗವಾಗಿ ಅಮೆರಿಕದಲ್ಲಿರುವ ತಮ್ಮ ಮಗನ ಬಳಿಗೆ ತೆರಳುತ್ತಿದ್ದರು. ಈ ವೇಳೆ ವಿಮಾನ ನಿಲ್ದಾಣದ ಚೆಕ್-ಇನ್ (Check-in) ಸಂದರ್ಭದಲ್ಲಿ ತಮ್ಮ ಬ್ಯಾಗ್‌ನಲ್ಲಿ ಚಿನ್ನಾಭರಣ ಇರುವುದನ್ನು ಅಧಿಕಾರಿಗಳಿಗೆ ತೋರಿಸಿ, ಬ್ಯಾಗ್‌ಗೆ ಟ್ಯಾಗ್ ಹಾಕಿಸಿ ಫ್ಲೈಟ್ ಲಗೇಜ್‌ಗೆ ನೀಡಿದ್ದರು.

ಇದನ್ನೂ ಓದಿ: ಎಂಎಸ್‌ಎಂಇ ಗಳಿಗೆ 20 ಲಕ್ಷದವರೆಗೂ ಅಡಮಾನ ರಹಿತ ಸಾಲ: ಸೈಬರ್ ವಂಚನೆಗಳಿಗೆ 25 ಸಾವಿರ ಪರಿಹಾರಕ್ಕೆ ಆರ್‌ಬಿಐ ಪ್ರಸ್ತಾಪ

ಶಾಂತಾ ಅವರು ಅಬುಧಾಬಿ ತಲುಪಿದಾಗ ಅವರ ಬ್ಯಾಗ್ ಹಗುರವಾಗಿರುವುದು ಕಂಡುಬಂದಿದೆ. ಅನುಮಾನಗೊಂಡು ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿದ್ದ ಬೆಲೆಬಾಳುವ ಚಿನ್ನಾಭರಣಗಳು ಮಾಯವಾಗಿದ್ದವು.

ಏನೇನು ಕಳ್ಳತನವಾಗಿದೆ?

  • ಶಾಂತಾ ಅವರ ಬ್ಯಾಗ್‌ನಲ್ಲಿದ್ದ ಸುಮಾರು 790 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 8 ಲಕ್ಷ ರೂ. ಮೌಲ್ಯದ ವಜ್ರಾಭರಣಗಳು ಕಳ್ಳತನವಾಗಿವೆ.
  • ಒಂದು ಡೈಮಂಡ್ ಮಾಂಗಲ್ಯ ಚೈನ್
  • ಒಂದು ಜೊತೆ ಡೈಮಂಡ್ ಕಿವಿಯೋಲೆ
  • ವಜ್ರದ ಉಂಗುರಗಳು ಸೇರಿದಂತೆ ಅಪಾರ ಮೌಲ್ಯದ ಆಭರಣಗಳನ್ನು ಕಳ್ಳರು ಎಗರಿಸಿದ್ದಾರೆ.

ಸಿಬ್ಬಂದಿ ಮೇಲೆಯೇ ಶಂಕೆ

ಬ್ಯಾಗ್ ಅನ್ನು ಚೆಕ್-ಇನ್ ಮಾಡಿದ ಬಳಿಕ ಅದು ಪ್ರಯಾಣಿಕರ ಕೈಗೆ ಸಿಗುವುದಿಲ್ಲ. ಹೀಗಾಗಿ ಬ್ಯಾಗ್ ಫ್ಲೈಟ್ ಏರುವ ಮೊದಲು ಅಥವಾ ವಿಮಾನ ನಿಲ್ದಾಣದ ಲಗೇಜ್ ನಿರ್ವಹಣೆ ಮಾಡುವ ಸಿಬ್ಬಂದಿಯೇ (Ground Staff) ಈ ಕೃತ್ಯ ಎಸಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಬಿಗ್ ಶಾಕ್; ಟಿ-20 ವಿಶ್ವಕಪ್​ನಿಂದ ಹರ್ಷಿತ್ ರಾಣಾ ಔಟ್!

ಘಟನೆ ನವೆಂಬರ್‌ನಲ್ಲಿ ನಡೆದಿದ್ದರೂ, ಶಾಂತಾ ಅವರು ಅಮೆರಿಕದಲ್ಲಿದ್ದ ಕಾರಣ ತಕ್ಷಣ ದೂರು ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಜನವರಿ 17 ರಂದು ರಾಜ್ಯಕ್ಕೆ ಮರಳಿದ ಅವರು, ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸಂತ್ರಸ್ತೆ ಹೇಳಿದ್ದೇನು?

"ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಬ್ಯಾಗ್‌ನಲ್ಲಿ ಎಲ್ಲ ಒಡವೆಗಳು ಭದ್ರವಾಗಿದ್ದವು. ಚೆಕ್-ಇನ್ ವೇಳೆ ಅಧಿಕಾರಿಗಳಿಗೂ ತೋರಿಸಿದ್ದೆ. ಆದರೆ ಅಬುಧಾಬಿಯಲ್ಲಿ ಇಳಿದು ನೋಡುವಾಗ ಬ್ಯಾಗ್ ಹಗುರವಾಗಿತ್ತು, ಒಡವೆಗಳು ಇರಲಿಲ್ಲ. ಕೂಡಲೇ ತನಿಖೆ ನಡೆಸಿ ನ್ಯಾಯ ಒದಗಿಸಬೇಕು" ಎಂದು ಶಾಂತಾ ಕಾಶೀನ್‌ಕುಂಟಿ ಆಗ್ರಹಿಸಿದ್ದಾರೆ. ಸದ್ಯ ಏರ್‌ಪೋರ್ಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಲಗೇಜ್ ನಿರ್ವಹಣೆ ಮಾಡಿದ ಸಿಬ್ಬಂದಿಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:15 ಸಿಕ್ಸರ್, 15 ಬೌಂಡರಿ! U-19 ವಿಶ್ವಕಪ್ ಫೈನಲ್​ನಲ್ಲಿ ಸೂರ್ಯವಂಶಿ ದಾಖಲೆಯ ಶತಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment