/newsfirstlive-kannada/media/media_files/2025/12/04/forest-land-case-2025-12-04-13-05-31.jpg)
ಕೆಂಗೇರಿ ಬಳಿಯ ಅರಣ್ಯ ಇಲಾಖೆ ಜಾಗ ತನ್ನದೆಂದು ಎಂ.ಬಿ.ನೇಮನಗೌಡರಿಂದ ಅರ್ಜಿ
ಕರ್ನಾಟಕದ ಅರಣ್ಯ ಇಲಾಖೆ ಬೆಂಗಳೂರಿನ ಕೆಂಗೇರಿಯ ಬಳಿಯ 517 ಎಕರೆ ಮೀಸಲು ಅರಣ್ಯ ಪ್ರದೇಶವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಬರೋಬ್ಬರಿ 517 ಎಕರೆ ಮೀಸಲು ಅರಣ್ಯ ಪ್ರದೇಶವೇ ಸಂಪೂರ್ಣವಾಗಿ ಎಂ.ಬಿ.ನೇಮನ ಗೌಡ ಎಂಬ ಖಾಸಗಿ ವ್ಯಕ್ತಿಗೆ ಸೇರಿದ್ದು. ಜಮೀನಿನ ಪಹಣಿಯಲ್ಲಿ ಎಂ.ಬಿ.ನೇಮನಗೌಡ ಹೆಸರು ಅನ್ನು ನಮೂದಿಸಬೇಕೇಂದು ಹೈಕೋರ್ಟ್ ಆದೇಶ ನೀಡಿದೆ!
ಕೆಂಗೇರಿ ಬಳಿಯ 517 ಎಕರೆ ಭೂಮಿಯ ಮಾರುಕಟ್ಟೆ ಮೌಲ್ಯ ಬರೋಬ್ಬರಿ 25 ಸಾವಿರದಿಂದ 30 ಸಾವಿರ ಕೋಟಿ ರೂಪಾಯಿ!.
ಇಷ್ಟು ದೊಡ್ಡ ಮೊತ್ತದ ಭೂಮಿಯು ಒಬ್ಬನೇ ಒಬ್ಬ ಖಾಸಗಿ ವ್ಯಕ್ತಿಯ ಪಾಲಾಗುತ್ತಿದೆ!. ಹೈಕೋರ್ಟ್ ನಲ್ಲಿ ಎಲ್ಲವೂ ರಾಕೆಟ್ ವೇಗದಲ್ಲಿ ನಡೆದು ಹೋಗಿದೆ . ಯಾವ ದಾಖಲೆಗಳ ಆಧಾರದ ಮೇಲೆ ಹೈಕೋರ್ಟ್, ಮೀಸಲು ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗೆ ನೀಡಬೇಕೆಂದು ಆದೇಶ ನೀಡಿದೆಯೋ ಎಂದು ಗೊತ್ತಾಗದೇ ಅರಣ್ಯಇಲಾಖೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಪ್ರದೇಶದ ಸರ್ವೇ ನಂಬರ್ 4, 48,90 , 91 ಮತ್ತು 92 ರಲ್ಲಿ 532 ಎಕರೆ ಭೂಪ್ರದೇಶ ಇದೆ. ಈ ಜಾಗವು ತನಗೆ ಮಂಜೂರಾಗಿದೆ ಎಂದು 2025ರ ಆಗಸ್ಟ್ 13 ರಂದು ಎಂ.ಬಿ.ನೇಮನ ಗೌಡ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸಿದ 17 ದಿನಗಳ ಬಳಿಕ ಅಂದರೇ, 2025ರ ಆಗಸ್ಟ್ 30 ರಂದು ಹೈಕೋರ್ಟ್, ಕಂದಾಯ ಅಧಿಕಾರಿಗಳಿಗೆ ಕಂದಾಯ ದಾಖಲೆಗಳಲ್ಲಿ ಎಂ.ಬಿ.ನೇಮನ ಗೌಡ ಹೆಸರು ಅನ್ನು ನಮೂದಿಸುವಂತೆ ಆದೇಶ ನೀಡಿದೆ. ಮುಂದಿನ 90 ದಿನಗಳೊಳಗಾಗಿ ಎಂ.ಬಿ.ನೇಮನ ಗೌಡ ಹೆಸರು ನಮೂದಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಆದರೇ, ಹೈಕೋರ್ಟ್‌ನ ಈ ಆದೇಶದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಮಾಹಿತಿಯೂ ಇಲ್ಲವಂತೆ.
ಬಳಿಕ ಮಾಹಿತಿ ಪಡೆದ ಅಧಿಕಾರಿಗಳು ಅಡಿಷನಲ್ ಅಡ್ವೋಕೇಟ್ ಜನರಲ್ ಕೆ.ಪಿ.ಯೋಗಣ್ಣ ಅವರ ಬಳಿ ಈ ಕೇಸ್ ಗೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದಿದ್ದಾರೆ. ನವಂಬರ್ 27 ರಂದು ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೆ.ಪಿ.ಯೋಗಣ್ಣ ಕಾನೂನು ಸಲಹೆ ನೀಡಿದ್ದಾರೆ. ಬಳಿಕ ಭೂಮಿಯು ಮೀಸಲು ಅರಣ್ಯ ಪ್ರದೇಶ ಎಂಬುದು ಗೊತ್ತಾಗಿದೆ. ಬಳಿಕ ಕೆ.ಪಿ.ಯೋಗಣ್ಣ ತಾವು ಈ ಹಿಂದೆ ನೀಡಿದ್ದ ಕಾನೂನು ಸಲಹೆಯನ್ನು ಹಿಂತೆಗೆದುಕೊಂಡು, ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಕೇಸ್ ಅಲ್ಲ ಎಂದು ಸಲಹೆ ನೀಡಿದ್ದಾರೆ.
ಸರ್ವೇ ನಂಬರ್ 48ರ 15 ಎಕರೆ ಭೂಮಿ ಹೊರತುಪಡಿಸಿ, ಉಳಿದ 517 ಎಕರೆ ಪ್ರದೇಶವು ಮೀಸಲು ಅರಣ್ಯ ಪ್ರದೇಶ. ಇದು ಬಿ.ಎಂ.ಕಾವಲ್ ರಾಜ್ಯ ಅರಣ್ಯ ಅಧಿಸೂಚಿತ ಭೂಮಿ.
ಎಂ.ಬಿ.ನೇಮಣ್ಣಗೌಡ, ಹೈಕೋರ್ಟ್ ಗೆ ವಕೀಲ ರಮೇಶ್ ಎಚ್.ಇ. ಎಂಬುವವರ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಭೂಮಿಯನ್ನು ಹಾಸನ ವಿಭಾಗದ ಇನಾಂ ರದ್ದತಿ ಸ್ಪೆಷಲ್ ಡೆಪ್ಯುಟಿ ಕಮೀಷನರ್ ಮಂಜೂರು ಮಾಡಿದ್ದರು. 1973ರ ಡಿಸೆಂಬರ್ 20ರ ದಾಖಲೆ ಇದೆ ಎಂದು ದಾಖಲೆಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಇನಾಂ ರದ್ದತಿ ಕಾಯಿದೆಯಡಿ ಭೂಮಿಯ ವಶಕ್ಕೆ, ಸ್ವಾಧೀನಕ್ಕೆ ತೆಗೆದುಕೊಳ್ಳುವ ಹಕ್ಕು ನೀಡಬೇಕು. ಜಮೀನಿನ ಪಹಣಿಯಲ್ಲಿ ತಮ್ಮ ಹೆಸರು ನಮೂದಿಸಬೇಕೆಂದು ಹೈಕೋರ್ಟ್ ಗೆ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಜೊತೆಗೆ 1974 ರಿಂದ 1981 ರವರೆಗೆ ಜಮೀನಿನ ಪಹಣಿಯಲ್ಲಿ ತಮ್ಮ ಹೆಸರು ಇತ್ತು . ಬಳಿಕ ಅರಣ್ಯ ಇಲಾಖೆ ಜಮೀನು ಅನ್ನು ಒತ್ತುವರಿ ಮಾಡಿಕೊಂಡು ಆರ್‌ಟಿಸಿಯಿಂದ ತಮ್ಮ ಹೆಸರು ಕೈ ಬಿಟ್ಟಿದ್ದಾರೆ. ಹಾಸನ ಜಿಲ್ಲೆಯ ಡಿಸಿಎಫ್ ಇದಕ್ಕೆ 1984ರ ಏಪ್ರಿಲ್ ನಲ್ಲಿ ಎನ್ಓಸಿ ನೀಡಿದ್ದರು.
ಆದರೇ, ಸ್ಪೆಷಲ್ ಡೆಪ್ಯುಟಿ ಕಮೀಷನರ್ ಜಮೀನಿನ ಮೇಲೆ ನನ್ನ ಹಕ್ಕು ಅನ್ನು ಗುರುತಿಸಿದ್ದರು ಎಂದು ಎಂ.ಬಿ.ನೇಮನ ಗೌಡ ರಿಟ್ ಅರ್ಜಿಯಲ್ಲಿ ಹೇಳಿದ್ದರು.
ಎಂ.ಬಿ.ನೇಮನ ಗೌಡ ಕೆಲವೊಂದು ದಾಖಲೆಗಳನ್ನು ಪೋರ್ಜರಿ ಮಾಡಿದ್ದಾರೆ ಎಂದು ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.
ಹೈಕೋರ್ಟ್ ಆದೇಶದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಅವರು, ಎಂ.ಬಿ.ನೇಮನ ಗೌಡ ಹೆಸರು ಅನ್ನು ಕಂದಾಯ ದಾಖಲೆಗಳಲ್ಲಿ ನಮೂದಿಸಲು ಎಷ್ಟು ಬೇಗ ಸಾಧ್ಯವಾಗುತ್ತೋ ಅಷ್ಟು ಬೇಗ ಅಗತ್ಯ ಆದೇಶ ನೀಡಬೇಕು. ಹೈಕೋರ್ಟ್ ಆದೇಶ ಸಿಕ್ಕ, 3 ತಿಂಗಳುಗಳಲ್ಲಿ ಆದೇಶ ನೀಡಬೇಕು. ಹೆಚ್ಚುವರಿ ಸರ್ಕಾರಿ ವಕೀಲರು ವಿಚಾರಣೆಗೆ ಹಾಜರಾದ ಬಗ್ಗೆ ನಾಲ್ಕು ವಾರಗಳೊಳಗಾಗಿ ಮೆಮೊ ಸಲ್ಲಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಇನ್ನೂ 517 ಎಕರೆ ಪೈಕಿ ಕೆಲವೊಂದು ಜಮೀನು ಅನ್ನು ಎಂ.ಬಿ.ನೇಮನಗೌಡರಿಂದ ಖರೀದಿಸಲು ಕೆಲವರು ಅರಣ್ಯ ಇಲಾಖೆಯ ಅಭಿಪ್ರಾಯ ಕೇಳಿದ್ದಾರೆ. ಯಾವ ಆಧಾರದ ಮೇಲೆ ಅರಣ್ಯ ಇಲಾಖೆಯ ಜಾಗ ಖರೀದಿಸುತ್ತಿದ್ದೀರಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದಾಗ, ಹೈಕೋರ್ಟ್ ಆದೇಶದ ಬಗ್ಗೆ ಹೇಳಿದ್ದಾರೆ. ಆಗ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಹೈಕೋರ್ಟ್ ಆದೇಶದ ವಿಷಯ ಬಂದಿದೆಯಂತೆ.
/filters:format(webp)/newsfirstlive-kannada/media/media_files/2025/12/04/forest-minister-eshwar-khandre02-2025-12-04-13-29-28.jpg)
ಈಗ 517 ಎಕರೆ ಅರಣ್ಯ ಇಲಾಖೆಯ ಜಾಗವನ್ನು ಖಾಸಗಿ ವ್ಯಕ್ತಿ ನೇಮನಗೌಡ ಎಂಬ ವ್ಯಕ್ತಿಗೆ ನೀಡಬೇಕೆಂದು ಹೈಕೋರ್ಟ್ ನೀಡಿರುವ ಆದೇಶವು ಈಗ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನಕ್ಕೆ ಬಂದಿದೆ. ಹೈಕೋರ್ಟ್ ಹೇಗೆ ಈ ಕೇಸ್ ನಲ್ಲಿ ಹೀಗೆ ಆದೇಶ ನೀಡಿದೆ ಎಂಬುದು ಈಶ್ವರ್ ಖಂಡ್ರೆ ಅವರಿಗೂ ಗೊತ್ತಾಗಿಲ್ಲ. ರಾಜ್ಯ ಸರ್ಕಾರದ ಪರ ವಕೀಲರು ಏಕೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ತಿರಸ್ಕರಿಸಬೇಕೆಂದು ವಾದಿಸಲಿಲ್ಲ ಎಂಬ ಪ್ರಶ್ನೆ ಈಶ್ವರ್ ಖಂಡ್ರೆ ಅವರನ್ನು ಕಾಡಿದೆ. ಈಗ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇನ್ನೂ ನಕಲಿ ದಾಖಲೆ ಸೃಷ್ಟಿಸಿ, ದಾಖಲೆಗಳನ್ನು ಪೋರ್ಜರಿ ಮಾಡಿದ ವ್ಯಕ್ತಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಜಾಗ 1935 ರಲ್ಲಿ ಮೀಸಲು ಅರಣ್ಯ ಪ್ರದೇಶವಾಗಿದೆ. ಬೆಂಗಳೂರಿನ ಈ ಜಾಗವನ್ನು ಮಂಜೂರು ಮಾಡುವ ಅಧಿಕಾರ ಹಾಸನದ ವಿಶೇಷ ಡೆಪ್ಯುಟಿ ಕಮೀಷನರ್ ಗೆ ಹೇಗೆ ಬಂತು ? ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ. ಈ ಕೇಸ್ ನಲ್ಲಿ ಭೂ ಮಿತಿ ಕಾಯಿದೆ ಅನ್ವಯವಾಗುವುದಿಲ್ಲವೇ ಎಂಬುದನ್ನು ಹೈಕೋರ್ಟ್ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us