/newsfirstlive-kannada/media/media_files/2026/03/06/industry-in-budget-2026-03-06-14-21-17.jpg)
ರಾಜ್ಯದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. ಹೊಸ ಕೈಗಾರಿಕೆ ನೀತಿ ಜಾರಿಗೆ ತಂದಿದ್ದಾರೆ . ಬೆಂಗಳೂರಿನಿಂದ ಆಚೆಯೂ ಕೈಗಾರಿಕೆ ಸ್ಥಾಪನೆಗೆ ಪೋತ್ಸಾಹವನ್ನು ನೀಡಲಾಗುತ್ತಿದೆ.
ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ಘೋಷಣೆಗಳ ವಿವರ ಇಲ್ಲಿದೆ ಓದಿ.
* ಹೊಸ ಕೈಗಾರಿಕಾ ನೀತಿ 2025-30ರಡಿ ಪ್ರಪ್ರಥಮ ಬಾರಿಗೆ ಅತಿ ಹಿಂದುಳಿದ ಪ್ರದೇಶಗಳಿಗೆ ಶೇ.5ರಷ್ಟು ಹಾಗೂ ಹಿಂದುಳಿದ ಪ್ರದೇಶಗಳಿಗೆ ಶೇ.3ರಷ್ಟು ಹೆಚ್ಚುವರಿ ಪ್ರೋತ್ಸಾಹವನ್ನು ನೀಡುವ ಮೂಲಕ ಬೆಂಗಳೂರಿನಿಂದಾಚೆಯೂ ಕೈಗಾರಿಕಾಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
* ರಾಜ್ಯದಲ್ಲಿ ಹೂಡಿಕೆಗೆ ಪೂರಕವಾಗುವಂತೆ ಸುಲಲಿತವಾಗಿ ಉದ್ಯಮ ನಡೆಸಲು ಅತ್ಯಾಧುನಿಕ ಏಕಗವಾಕ್ಷಿ ಪೋರ್ಟಲ್ ಅನ್ನು ಮೈಕ್ರೋಸಾಫ್ಟ್ ವತಿಯಿಂದ ಅಭಿವೃದ್ಧಿಪಡಿಸಿದ್ದು, ಹೂಡಿಕೆಗೆ ಅವಶ್ಯವಿರುವ ಸಮಗ್ರ ಮಾಹಿತಿಯೊಂದಿಗೆ ಸುಮಾರು 30 ಇಲಾಖೆಗಳ 100ಕ್ಕೂ ಹೆಚ್ಚು ಸೇವೆಗಳನ್ನು ಏಕೀಕರಣ ಮಾಡಲಾಗಿದೆ.
* ರಾಜ್ಯದಲ್ಲಿ ಸುಲಲಿತ ವ್ಯವಹಾರಗಳಿಗೆ ಒತ್ತು ನೀಡಲು ಕರ್ನಾಟಕ ನಿರಪರಾಧೀಕರಣ (ಉಪಬಂಧಗಳ ತಿದ್ದುಪಡಿ) ಅಧಿನಿಯಮ, 2025ನ್ನು ಜಾರಿಗೆ ತರುವ ಮೂಲಕ ರಾಜ್ಯದ ಒಟ್ಟು 13 ಅಧಿನಿಯಮಗಳಡಿಯಲ್ಲಿನ 278 ಅನುಚ್ಛೇದಗಳನ್ನು ಕ್ರಿಮಿನಲ್ ಅಪರಾಧ ವ್ಯಾಪ್ತಿಯಿಂದ ಹೊರತುಪಡಿಸಲಾಗಿದೆ.
* ಪ್ರಸಕ್ತ ಸಾಲಿನಲ್ಲಿ ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಲು KIADB ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕ್ರ್ಯಾಪಿಂಗ್ (Vehicle Scrapping) ಸೌಲಭ್ಯ ಘಟಕವನ್ನು ಸ್ಥಾಪಿಸಲಾಗುವುದು.
* ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾರವರಿಂದ ಮಂಡ್ಯದಲ್ಲಿ 500 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ’ ವನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ವತಿಯಿಂದ 100 ಎಕರೆ
*KIADB ಏರೋಸ್ಪೇಸ್ ಪಾರ್ಕ್‌ನಲ್ಲಿ ಏರೋಸ್ಪೇಸ್ ಕಾಮನ್ ಫೆಸಿಲಿಟಿ ಸೆಂಟರ್ ಅನ್ನು 30 ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1೦ ಕೋಟಿ ರೂ.ಗಳ ಅನುದಾನವನ್ನು ನಿಗದಿಪಡಿಸಲಾಗಿದೆ.
* ಉನ್ನತ ಮಟ್ಟದ ಜಾಗತಿಕ ಸಮ್ಮೇಳನಗಳು, ಶೃಂಗಸಭೆಗಳು ಮತ್ತು ಪ್ರದರ್ಶನಗಳನ್ನು (MICE) ಆಯೋಜಿಸಲು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್‌ನ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಸಂಕೀರ್ಣವನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.
* ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಸುಮಾರು 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗುವುದು.
* ಮೈಸೂರಿನಲ್ಲಿ ಏರೋಸ್ಪೇಸ್ ಕೈಗಾರಿಕೆಗಳನ್ನು ಉತ್ತೇಜಿಸಲು ಮೈಸೂರು ವಿಮಾನ ನಿಲ್ದಾಣದ ಹತ್ತಿರದಲ್ಲಿ ಏರೋಸ್ಪೇಸ್ ಪಾರ್ಕ್ ಅನ್ನು KIADB ವತಿಯಿಂದ ಅಭಿವೃದ್ಧಿಪಡಿಸಲಾಗುವುದು.
* NGEF ಆವರಣದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಟ್ರೀ ಪಾರ್ಕ್ ಯೋಜನೆಯ ಮೊದಲನೆಯ ಹಂತವನ್ನು ಪ್ರಸಕ್ತ ಸಾಲಿನಲ್ಲಿ ಲೋಕಾರ್ಪಣೆ ಮಾಡಲಾಗುವುದು. ಎರಡನೇ ಹಂತದಡಿ ಸಾಂಸ್ಕೃತಿಕ ಮತ್ತು ಕ್ರೀಡಾ ಕೇಂದ್ರವನ್ನು ಪಿ.ಪಿ.ಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಯಡಿ 30,000 ಕೋಟಿ ರೂ.ಗಳ ಹೂಡಿಕೆಯನ್ನು ಆಕರ್ಷಿಸುವುದರೊಂದಿಗೆ 75,000 ಉದ್ಯೋಗಾವಕಾಶವನ್ನು ಕಲ್ಪಿಸುವ ಸದುದ್ದೇಶದಿಂದ ʻಧಾರವಾಡ ಕೈಗಾರಿಕಾ ನೋಡ್ʼಗೆ ಸಂಬಂಧಿಸಿದಂತೆ 1,000 ಎಕರೆಯನ್ನು ಭೂಸ್ವಾಧೀನ ಮಾಡಲು 600 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.
* MSME ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಉದ್ಯೋಗಾವಕಾಶವನ್ನು ಕಲ್ಪಿಸಲು MSE-CDP ಯೋಜನೆಯಡಿ ೨೦೨೬-೨೭ನೇ ಸಾಲಿಗೆ 10 ಕ್ಲಸ್ಟರ್ಗಳನ್ನು ೧೫ ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
* MSME ಗಳನ್ನು ಪ್ರೋತ್ಸಾಹಿಸಲು KSSIDC ಮೂಲಕ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಎಂಟು ಕೈಗಾರಿಕಾ ವಸಾಹತುಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುತ್ತಿದೆ. 2026-27ನೇ ಸಾಲಿನಲ್ಲಿ ವಿಜಯಪುರದ ಮುದ್ದೇಬಿಹಾಳ ಹಾಗೂ ಬಳ್ಳಾರಿಯ ಕಂಪ್ಲಿಯಲ್ಲಿ ಎರಡು ವಸಾಹತುಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 10 ಕೈಗಾರಿಕಾ ವಸಾಹತುಗಳಲ್ಲಿ 1,500 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.
* ರಾಜ್ಯದ ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ:
• ನೇಕಾರರ ಸಮ್ಮಾನ್ ಯೋಜನೆಯಡಿ ಒಟ್ಟು 1.30 ಲಕ್ಷ ನೇಕಾರರಿಗೆ ವಾರ್ಷಿಕ 5,000 ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ.
• ವಿದ್ಯುತ್ ಸಹಾಯಧನ ಯೋಜನೆಯಡಿ 01 ರಿಂದ 10 ಹೆಚ್.ಪಿ. ವರೆಗೆ ಉಚಿತವಾಗಿ ಮತ್ತು 10 ರಿಂದ 20 ಹೆಚ್.ಪಿ. ವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಒದಗಿಸಲಾಗುತ್ತಿದೆ.
• ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 20 ಹೆಚ್.ಪಿ.ಯಿಂದ 200 ಹೆಚ್.ಪಿ. ವರೆಗಿನ ವಿದ್ಯುತ್ ಮಗ್ಗ ನೇಕಾರರಿಗೆ ಪ್ರತಿ ಯೂನಿಟ್ಗೆ ಶೇ.50ರಷ್ಟು ಸಹಾಯಧನ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ.
• ನೇಕಾರರ ಏಳಿಗೆಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 225 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ.
* ರಾಜ್ಯದಲ್ಲಿರುವ ಸಹಕಾರಿ ನೂಲಿನ ಗಿರಣಿಗಳನ್ನು ಪ್ರೋತ್ಸಾಹಿಸಲು ಪ್ರತಿ ಯೂನಿಟ್ಗೆ 3 ರೂ. ರಂತೆ ವಿದ್ಯುತ್ ಸಹಾಯಧನವನ್ನು ಒದಗಿಸಲಾಗುವುದು.
* ಕಲಬುರಗಿ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಪಿ.ಎಂ. ಮಿತ್ರ ಮೆಗಾ ಜವಳಿ ಪಾರ್ಕ್ನಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು 390 ಕೋಟಿ ರೂ.ಗಳನ್ನು ಅನುಮೋದಿಸಿದೆ. ಈ ಯೋಜನೆಗಾಗಿ 2026-27ನೇ ಸಾಲಿಗೆ 75 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* 2025-26ನೇ ಸಾಲಿನ ಸಕ್ಕರೆ ಹಂಗಾಮಿಗೆ ಕೇಂದ್ರ ಸರ್ಕಾರವು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಶೇ. 10.25 ಸಕ್ಕರೆ ಇಳುವರಿಯಂತೆ 3,55೦ ರೂ.ಗಳ ಎಫ್.ಆರ್.ಪಿ. ದರವನ್ನು ನಿಗದಿಪಡಿಸಿದೆ. ರಾಜ್ಯದಲ್ಲಿ ಕಬ್ಬು ಬೆಳೆಯುವ ರೈತರಿಗೆ ತಗಲುವ ವಾಸ್ತವಿಕ ವೆಚ್ಚವನ್ನು ಹಾಗೂ ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನೆಯಂತಹ ವಿವಿಧ ಸಹ-ಉತ್ಪಾದನಾ (co-generation) ಚಟುವಟಿಕೆಗಳಿಂದ ಕಾರ್ಖಾನೆಗಳಿಗೆ ಆಗುವ ಲಾಭವನ್ನು ಗಣನೆಗೆ ತೆಗೆದುಕೊಳ್ಳದೆ ಅವೈಜ್ಞಾನಿಕವಾಗಿ ದರವನ್ನು ನಿಗದಿಪಡಿಸಲಾಗಿದೆ. ಇದರಿಂದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಸಿಗದೆ ರೈತರು ಸಂಕಷ್ಟಗೊಳಗಾಗಿರುತ್ತಾರೆ. ರೈತರ ಹಿತದೃಷ್ಟಿಯನ್ನು ಕಾಪಾಡುವ ನಿಟ್ಟಿನಲ್ಲಿ ಒಂದು ಬಾರಿಯ ಕ್ರಮವಾಗಿ ಆರ್ಥಿಕ ನೆರವು ನೀಡಲು ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 50 ರೂ.ಗಳನ್ನು ಪಾವತಿಸಲು 300 ಕೋಟಿ ರೂ. ಒದಗಿಸಲಾಗಿದೆ.
* ಕರ್ನಾಟಕ ತೈಲ ಮಾರುಕಟ್ಟೆ ಕಂಪನಿಗಳಿಗೆ ನಿಗದಿಪಡಿಸಲಾದ ಎಥೆನಾಲ್ ಖರೀದಿ ಪ್ರಮಾಣವು ನಮ್ಮ ರಾಜ್ಯದ ಉತ್ಪಾದನಾ ಸಾಮರ್ಥ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿರುವುದಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರೂ ಪರಿಗಣನೆಯಾಗದೇ ಇರುವುದರಿಂದ, ನಮ್ಮ ರೈತರು ಮಾರುಕಟ್ಟೆ ಏರಿಳಿತಗಳು ಮತ್ತು ಬೆಲೆ ಅನಿಶ್ಚಿತತೆಗೆ ಒಳಗಾಗಿರುತ್ತಾರೆ. ಆದ್ದರಿಂದ, ರಾಜ್ಯ ಸರ್ಕಾರದ ಕೋಟಾವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು.
* ಜಿಲ್ಲಾ ಮಟ್ಟದಲ್ಲಿ ಕಾರ್ಖಾನೆವಾರು ಪ್ರತ್ಯೇಕ ತಂಡಗಳ ಮುಖಾಂತರ 2025-26ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ಕನಿಷ್ಟ ತಿಂಗಳಿಗೆ ಎರಡು ಬಾರಿ ಸಕ್ಕರೆ ಇಳುವರಿಯನ್ನು ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ 2022-23ನೇ ಸಾಲಿನಲ್ಲಿದ್ದ ಸಕ್ಕರೆ ಇಳುವರಿ ಪ್ರಮಾಣ ಶೇ.9.91 ರಿಂದ 2025-26ನೇ ಸಾಲಿನಲ್ಲಿ ಶೇ.11ಕ್ಕೆ ಗಣನೀಯವಾಗಿ ಏರಿಕೆಯಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us