Advertisment

ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆಗೆ 269 ಕೋಟಿ ರೂ. ಮೀಸಲು

ರಾಜ್ಯ ಬಜೆಟ್ ನಲ್ಲಿ ಕರ್ನಾಟಕ ಮಾನವ- ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆಗೆ 269 ಕೋಟಿ ರೂಪಾಯಿ ಮೀಸಲಿಡಸಲಾಗಿದೆ. ಕಳೆದ 3 ವರ್ಷಗಳಲ್ಲಿ 1,044 ಕೋಟಿ ರೂಪಾಯಿ ಹಣವನ್ನು ಇದಕ್ಕಾಗಿ ವೆಚ್ಚ ಮಾಡಲಾಗಿದೆ. ಸಾಲುಮರದ ತಿಮ್ಮಕ್ಕ ಸ್ಮಾರಕ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

author-image
Chandramohan
MAN ANIMAL CONFLICT FUND ALLOCATION
Advertisment

ಕರ್ನಾಟಕದಲ್ಲಿ ಮಾನವ- ವನ್ಯಪ್ರಾಣಿ ಸಂಘರ್ಷ ಸಮಸ್ಯೆ ಇದೆ. ಇದರ ನಿವಾರಣೆಗೆ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಮುಂದಿನ 5 ವರ್ಷದಲ್ಲಿ 1,500 ಕೋಟಿ ರೂಪಾಯಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

Advertisment

ಅರಣ್ಯ  ಮತ್ತು ಪರಿಸರ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಮಾಡಲಾದ ಘೋಷಣೆಯ ವಿವರ ಇಲ್ಲಿದೆ ಓದಿ. 
*     ಮಾನವ-ವನ್ಯ ಪ್ರಾಣಿ ಸಂಘರ್ಷ ನಿವಾರಣೆಯು ಅತೀ ಮುಖ್ಯವಾದ ಕಾರ್ಯವಾಗಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ, ಈ ಕೆಳಕಂಡ ಉಪಕ್ರಮಗಳಿಗಾಗಿ ಒಟ್ಟಾರೆ 1,044 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ: 
•    ಬೆಳೆ ಹಾನಿ, ಜಾನುವಾರು ನಷ್ಟ, ಮಾನವ ಪ್ರಾಣ ಹಾನಿ ಇತ್ಯಾದಿ ಪರಿಹಾರ;
•    ಹೊಸದಾಗಿ ಮೂರು ಆನೆ ಕಾರ್ಯಪಡೆಗಳು ಮತ್ತು ಒಂದು ಹೊಸ ಚಿರತೆ ಕಾರ್ಯಪಡೆಯ ರಚನೆ; ಕಾರ್ಯಪಡೆಗಳಿಗಾಗಿ ಹೊಸದಾಗಿ 358 ಹುದ್ದೆಗಳ ಸೃಜನೆ;  
•    ರೈಲ್ವೆ ಬ್ಯಾರಿಕೇಡ್, ಟ್ರೆಂಚಿಂಗ್, ಸೋಲಾರ್ ಫೆನ್ಸಿಂಗ್ ಇತರೆ ರಕ್ಷಣಾ ಕಾರ್ಯ. 

*    ಮಾನವ–ವನ್ಯಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡುವ ಉದ್ದೇಶದಿಂದ ʻಕರ್ನಾಟಕ ಮಾನವ–ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆʼಯನ್ನು ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.
*    ಉದ್ಯಾನ ನಗರಿ ಬೆಂಗಳೂರಿನ ಹೆಸರಘಟ್ಟ ಹುಲ್ಲುಗಾವಲಿನ ಒಟ್ಟು 5,676 ಎಕರೆ ವಿಸ್ತೀರ್ಣದ ಪ್ರದೇಶವನ್ನು ʻಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲುʼ ಎಂದು ಘೋಷಿಸಿದ್ದು, ಈ ಪ್ರದೇಶದ ಆವಾಸಸ್ಥಾನ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು.
*    ಬೆಂಗಳೂರು ಹೊರವಲಯದ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆಹಿಡಿಯಲ್ಪಟ್ಟ ಸಂದರ್ಭಗಳಲ್ಲಿ ಅವುಗಳ ಪುನರ್ವಸತಿಗಾಗಿ ಬನ್ನೇರುಘಟ್ಟದಲ್ಲಿ ಐದು ಕೋಟಿ ರೂ.ಗಳ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಲಾಗುವುದು.
*    ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳನ್ನು 2026-27ನೇ ಆರ್ಥಿಕ ವರ್ಷದಲ್ಲಿ ಭರ್ತಿ ಮಾಡುವ ಮೂಲಕ ಇಲಾಖೆಯನ್ನು ಸಬಲೀಕರಣಗೊಳಿಸಲಾಗುವುದು.
*    ಮೈಸೂರು ಮೃಗಾಲಯ ಹಾಗೂ ಬನ್ನೇರುಘಟ್ಟ ಉದ್ಯಾನವನದ ಕಡೆಗೆ ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಪ್ರವಾಸಿಗರ ಅನುಕೂಲತೆಗಾಗಿ PPP ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು.
*    ರಾಷ್ಟ್ರೀಯ ಅರಣ್ಯ ನೀತಿಯಂತೆ ರಾಜ್ಯದ ಶೇ.10 ಕ್ಕಿಂತ ಕಡಿಮೆ ಅರಣ್ಯ ಹೊದಿಕೆ ಹೊಂದಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಿಗೆ ವಿಶೇಷ ಆದ್ಯತೆ ನೀಡಿ, 75,000 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ KKRDB ವತಿಯಿಂದ 50 ಕೋಟಿ ರೂ. ಸೇರಿದಂತೆ ಒಟ್ಟು 150 ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗುವುದು.
*    ಬೆಂಗಳೂರು ಉತ್ತರ ತಾಲ್ಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶವನ್ನು ಶ್ವಾಸತಾಣವನ್ನಾಗಿ ಪರಿವರ್ತಿಸಿ, ʻಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನʼವನ್ನು ನಿರ್ಮಿಸಲಾಗುವುದು.
*    ವಾಯು ಗುಣಮಟ್ಟ ಮಾಪನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 15 ಹೊಸ ನಿರಂತರ ಪರಿವೇಷ್ಠಿಕ ವಾಯು ಗುಣಮಟ್ಟ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
*    ಕರ್ನಾಟಕದ ಪ್ರಸಿದ್ಧ ಪರಿಸರವಾದಿ ವೃಕ್ಷಮಾತೆ ʻಸಾಲುಮರದ ತಿಮ್ಮಕ್ಕʼ ಇವರ ಸ್ಮರಣಾರ್ಥ ಹುಲಿಕಲ್-ಕುದೂರು ಹತ್ತಿರ ಸ್ಮಾರಕವನ್ನು ನಿರ್ಮಿಸಲಾಗುವುದು.

wild elephant attack in chikkamagaluru (1)





ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Fund allocation to forest department
Advertisment
Advertisment
Advertisment