/newsfirstlive-kannada/media/media_files/2025/08/19/hosur-road-03-2025-08-19-18-54-03.jpg)
ಬೆಂಗಳೂರು ಮೆಟ್ರೋದ ಯೆಲ್ಲೋ ಲೇನ್ ಉದ್ಘಾಟಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಬೆಂಗಳೂರು ಮೆಟ್ರೋದ ಯೆಲ್ಲೋ ಲೇನ್ ಅನ್ನು ಉದ್ಘಾಟಿಸಿದ್ದರು. ಬೆಂಗಳೂರಿನ ಆರ್.ವಿ. ರಸ್ತೆಯಿಂದ ಹೊಸೂರು ರಸ್ತೆಯ ಬೊಮ್ಮಸಂದ್ರದವರೆಗೂ ಮೆಟ್ರೋ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಈ ಮಾರ್ಗದಲ್ಲೇ ಇನ್ಪೋಸಿಸ್, ಬಯೋಕಾನ್, ಡೆಲ್ಟಾ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹತ್ತಾರು ಐ.ಟಿ. ಕಂಪನಿಗಳಿವೆ. ಈ ಮಾರ್ಗದಲ್ಲಿ ಮೆಟ್ರೋ ಉದ್ಘಾಟನೆಗೂ ಮುಂಚೆ ಇದ್ದ ಟ್ರಾಫಿಕ್ ಜಾಮ್ ಗೂ ಈಗಿನ ಪರಿಸ್ಥಿತಿಗೂ ಬದಲಾವಣೆಯಾಗಿದೆ.
ಮೆಟ್ರೋ ಯೆಲ್ಲೋ ಲೇನ್ ಉದ್ಘಾಟಿಸಿದ ಬಳಿಕ ಹೊಸೂರು ರಸ್ತೆಯಲ್ಲಿ ಶೇ.10 ರಿಂದ ಶೇ.32 ರವರೆಗೂ ಟ್ರಾಫಿಕ್ ಜಾಮ್ ಕಡಿಮೆಯಾಗಿದೆ ಎಂಬುದು ಈಗ ಪೊಲೀಸರ ವಿಶ್ಲೇಷಣೆಯಿಂದ ತಿಳಿದು ಬಂದಿರುವ ಹೊಸ ವಿಷಯ. ಬ್ಯುಸಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಮೆಟ್ರೋ ಯೆಲ್ಲೋ ಲೇನ್ ಸಹಾಯಕವಾಗುತ್ತೆ ಎಂಬ ನಿರೀಕ್ಷೆ ನಿಜವಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಅಸ್ಟ್ರಾಮ್( Actionable intelligence for sustainable Traffic Management) ಹೊಸೂರು ರಸ್ತೆಯ ಟ್ರಾಫಿಕ್ ಜಾಮ್ ಬಗ್ಗೆ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸಿದೆ. ಯೆಲ್ಲೋ ಲೇನ್ ಮೆಟ್ರೋ ಪ್ರಾರಂಭವಾದ ಮೊದಲ ದಿನವಾದ ಆಗಸ್ಟ್ 11 ರಂದು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಬೊಮ್ಮಸಂದ್ರದವರೆಗೂ 11.5 ಕಿ.ಮೀ. ದೂರದ ಮಾರ್ಗದಲ್ಲಿ ಟ್ರಾಫಿಕ್ ಒತ್ತಡ ಶೇ.10 ರಷ್ಟು ಕಡಿಮೆಯಾಗಿತ್ತು. ಸಾಮಾನ್ಯ ಸೋಮವಾರಗಳಿಗೆ ಹೋಲಿಸಿದರೇ, ಮೊದಲ ಸೋಮವಾರವೇ ಶೇ.10 ರಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗಿತ್ತು ಎಂದು ಅಸ್ಟ್ರಾಮ್ ವಿಶ್ಲೇಷಣೆ ಹೇಳಿದೆ.
ಇನ್ನೂ ಸಂಜೆಯ ವೇಳೆಯ ಪೀಕ್ ಅವರ್ ಆದ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಆರ್.ವಿ. ರಸ್ತ್ತೆಯಿಂದ ಬೊಮ್ಮಸಂದ್ರದವರೆಗೂ ಶೇ.32 ರಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗಿತ್ತು ಎಂದು ಅಸ್ಟ್ರಾಮ್ ವಿಶ್ಲೇಷಣೆ ಹೇಳಿದೆ. ಮೊದಲ ದಿನವೇ ಹೆಚ್ಚಿನ ಟೆಕ್ಕಿಗಳು ಮೆಟ್ರೋದಲ್ಲೇ ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಬೈಕ್, ಕಾರ್ ಗಳನ್ನು ಬಳಸಿ ರಸ್ತೆಗೆ ಇಳಿದಿಲ್ಲ. ಸಂಜೆ ವೇಳೆಗೆ ಟೆಕ್ಕಿಗಳು ಮೆಟ್ರೋವನ್ನು ಬಳಸಿ ಮನೆಗೆ ಹಿಂತಿರುಗಿದ್ದಾರೆ.
ಇನ್ನೂ ಆಗಸ್ಟ್ 12 ರಂದು ಬೆಳಿಗ್ಗೆ 7 ರಿಂದ 11 ಗಂಟೆಯವರೆಗೂ ಶೇ.22 ರಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗಿತ್ತು ಎಂದು ಅಸ್ಟ್ರಾಮ್ ವಿಶ್ಲೇಷಣೆ ಹೇಳಿದೆ.
ಇನ್ನೂ ಬೆಂಗಳೂರು ದಕ್ಷಿಣ ವಿಭಾಗದ ಟ್ರಾಫಿಕ್ ಡಿಸಿಪಿ ಗೋಪಾಲ್ ಎಂ ಬ್ಯಾಕೋಡ್ ಅವರು ಮೆಟ್ರೋ ಯೆಲ್ಲೋ ಲೇನ್ ಕಾರ್ಯಾಚರಣೆ ಆರಂಭವಾದ ಬಳಿಕ ಹೊಸೂರು ರಸ್ತೆಯಲ್ಲಿ ಶೇ.10 ರಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗಿದೆ ಎಂದಿದ್ದಾರೆ. ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಾದ ಬಳಿಕ ಮತ್ತಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗಲಿದೆ ಎಂದು ಡಿಸಿಪಿ ಗೋಪಾಲ್ ಎಂ ಬ್ಯಾಕೋಡ್ ಹೇಳಿದ್ದಾರೆ.
ಬೆಂಗಳೂರಿನ ಹೊಸೂರು ರಸ್ತೆ
ಸದ್ಯ ಯೆಲ್ಲೋ ಲೇನ್ ನಲ್ಲಿ ಮೂರು ಟ್ರೇನ್ ಗಳು ಮಾತ್ರ ಸಂಚಾರ ಮಾಡುತ್ತಿವೆ. 25 ನಿಮಿಷಕ್ಕೊಂದರಂತೆ ಟ್ರೇನ್ ಗಳು ಬರುತ್ತಿವೆ. ಇನ್ನೂ ಮೆಟ್ರೋ ನಿಲ್ದಾಣಗಳಿಂದ ದೂರದ ಪ್ರದೇಶಗಳಿಗೆ ಮೆಟ್ರೋ ಫೀಡರ್ ಬಸ್ ವ್ಯವಸ್ಥೆಯನ್ನು ಸರಿಯಾಗಿ ಮಾಡಿದರೇ, ಮೆಟ್ರೋಗೆ ಇನ್ನೂ ಹೆಚ್ಚಿನ ಪ್ರಯಾಣಿಕರು ಬರುತ್ತಾರೆ. ಇದರಿಂದ ಮತ್ತಷ್ಟು ಟ್ರಾಫಿಕ್ ಒತ್ತಡ ಕಡಿಮೆಯಾಗುತ್ತೆ ಎಂಬ ನಿರೀಕ್ಷೆಯಲ್ಲಿ ಟ್ರಾಫಿಕ್ ಪೊಲೀಸರು ಇದ್ದಾರೆ.
ಈಗಲೂ ಟೆಕ್ಕಿಗಳು ಬೆಳಿಗ್ಗೆ ವೇಳೆ ಬೈಕ್, ಕಾರ್ ಗಳನ್ನು ಬಳಸುತ್ತಿರಬಹುದು, ಸಂಜೆ ವೇಳೆ ಮಾತ್ರ ಮೆಟ್ರೋ ಬಳಸುತ್ತಿರಬಹುದು. ಹೀಗಾಗಿ ಬೆಳಿಗ್ಗೆ ವೇಳೆ ಟ್ರಾಫಿಕ್ ಒತ್ತಡ ಹೆಚ್ಚು ಕಡಿಮೆಯಾಗಿದೆ ಎಂದು ಟ್ರಾಫಿಕ್ ಪೊಲೀಸರು ಹೇಳುತ್ತಾರೆ. ಇನ್ನೂ ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಇನ್ನೂ ಹೆಚ್ಚಿನ ಮೆಟ್ರೋ ಬೋಗಿಗಳು ಯೆಲ್ಲೋ ಲೇನ್ ಗೆ ಸೇರ್ಪಡೆಯಾಗುತ್ತಾವೆ. ಆದಾದ ಬಳಿಕ ಹೊಸೂರು ರಸ್ತೆಯಲ್ಲಿ ಇನ್ನೂ ಹೆಚ್ಚಿನ ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆ ಇದೆ. ಬೊಮ್ಮಸಂದ್ರ ಇಂಡಸ್ಟ್ರೀಯಲ್ ಏರಿಯಾ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರದಲ್ಲೇ ಹೆಚ್ಚಿನ ಇಂಡಸ್ಟ್ರಿಗಳು , ಐ.ಟಿ. ಕಂಪನಿಗಳಿವೆ. ಹೀಗಾಗಿ ಇಂಡಸ್ಟ್ರಿಗೆ ಹೋಗುವ ಕಾರ್ಮಿಕರು, ಐ.ಟಿ. ಉದ್ಯೋಗಿಗಳು ಐದು ನಿಮಿಷಕ್ಕೊಂದರಂತೆ ಮೆಟ್ರೋ ಬಂದರೇ, ಮೆಟ್ರೋ ಟ್ರೇನ್ ಅನ್ನೇ ಬಳಸುತ್ತಾರೆ. ಇದರಿಂದಾಗಿ ಹೊಸೂರು ರಸ್ತೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಟ್ರಾಫಿಕ್ ಜಾಮ್ ಕಡಿಮೆಯಾಗುವ ನಿರೀಕ್ಷೆಯಲ್ಲಿ ಜನರು ಹಾಗೂ ಟ್ರಾಫಿಕ್ ಪೊಲೀಸರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.