/newsfirstlive-kannada/media/media_files/2025/12/03/minister-krishna-byregowa-lashes-out-at-bmrcl-2025-12-03-18-52-35.jpg)
ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಭೈರೇಗೌಡ
ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಯಾವುದೇ ಮಾರ್ಗದ ಕಾಮಗಾರಿಯನ್ನಾಗಲೀ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿಯೇ ಇಲ್ಲ. ಬೆಂಗಳೂರಿನ ಕೆ.ಆರ್.ಪುರದಿಂದ ಹೆಬ್ಬಾಳ ಮೂಲಕ ಯಲಹಂಕ ಹಾಗೂ ಏರ್ ಪೋರ್ಟ್ ವರೆಗಿನ ಕಾಮಗಾರಿ ಕೂಡ ಕುಂಟುತ್ತಾ ಸಾಗುತ್ತಿದೆ. ಇದು ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋ ಕಾಮಗಾರಿ ವಿಳಂಬದಿಂದ ಆಕ್ರೋಶಗೊಂಡ ಸಚಿವ ಕೃಷ್ಣ ಭೈರೇಗೌಡ, ಸಾರ್ವಜನಿಕವಾಗಿಯೇ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್, ಬ್ಯಾಟರಾಯನಪುರ ಬಳಿ ಮೆಟ್ರೋ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವೇಳೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಟ್ರೋ ಇಂಜಿನಿಯರ್, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಏಕವಚನದಲ್ಲೇ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡ ಸಚಿವರು, ಇವನು ಯಾವನೋ ಮೆಂಟಲ್ ಥರಾ ಮಾತಾಡಿದ್ರೆ ನನಗೆ ಪಿತ್ತ ನೆತ್ತಿಗೇರುತ್ತೆ ಅಷ್ಟೇ. ಎಲ್ಲಿಂದ ಬಂದಿದ್ದಿಯಾ ನೀನು ಅಂತ ಕೋಪಗೊಂಡರು. ಒಂದು ಪಿಲ್ಲರ್ ಹಾಕುವುದಕ್ಕೆ ಎರಡು ವರ್ಷ ಬೇಕಾ? ಎಷ್ಟು ಜಾಗ ಆಕ್ರಮಿಸಿಕೊಂಡಿದ್ದೀರಾ? ಕೆಲಸ ಮಾಡಲ್ಲ ಅಂದ್ಮೇಲೆ ಇದೆಲ್ಲ ರಸ್ತೆಯಲ್ಲಿ ಹಾಕಿ ತೊಂದರೆ ಕೊಡ್ತಿದ್ದೀರಾ ಅಂತ ಕೋಪಗೊಂಡರು. ನಾಗವಾರದಿಂದ ಯಲಹಂಕ ಜಂಕ್ಷನ್ ವರೆಗೆ ಮೆಟ್ರೋ ಕಾಮಗಾರಿಯನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ವೀಕ್ಷಿಸಿದ್ದರು.
ನೀವು ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲದ ಮೇಲೆ ಕಾಮಗಾರಿಯನ್ನು ಆರಂಭಿಸಿದ್ದೇಕೆ? ಎಂದು ಸಚಿವ ಕೃಷ್ಣ ಭೈರೇಗೌಡ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ನಾನು ನೀವು ಯಾವಾಗ ಮೆಟ್ರೋ ಕಾಮಗಾರಿ ಪೂರ್ಣಗೊಳಿಸುತ್ತೀರಾ ಎಂದು ಕೇಳುತ್ತಿಲ್ಲ. ಪಿಲ್ಲರ್ ಕಾಮಗಾರಿಯನ್ನು ಪೂರ್ಣಗೊಳಿಸದೇ ಏಕೆ ವರ್ಷಗಟ್ಚಲೇ ರಸ್ತೆಯ ಜಾಗವನ್ನು ಆಕ್ರಮಿಸಿಕೊಂಡಿದ್ದೀರಿ? ನಿಮ್ಮ ಉದ್ದೇಶ ಏನು? ಎರಡು ಮೂರು ವರ್ಷದಿಂದ ಒಂದು ಪಿಲ್ಲರ್ ಕೆಲಸವನ್ನು ಪೂರ್ಣಗೊಳಿಸಲು ನಿಮ್ಮಿಂದ ಸಾಧ್ಯವಾಗಿಲ್ಲ. ಪಿಲ್ಲರ್ ನಿರ್ಮಾಣ ಮಾಡುವುದು ರಾಕೆಟ್ ಸೈನ್ಸಾ? ನೀವು ಜನರಿಗೆ ಸೇವೆ ಸಲ್ಲಿಸುವ ಅಧಿಕಾರಿಗಳೋ ಅಥವಾ ಕಂಟ್ರಾಕ್ಟರ್ ಗಳಾ ಏಜೆಂಟರಾ? ಮೆಟ್ರೋದಲ್ಲಿ ಜನರಿಗೆ ಸೇವೆ ಮಾಡದೇ , ಕಂಟ್ರಾಕ್ಟರ್ ಗಳಿಗೆ ಸೇವೆ ಮಾಡುವ ಬಹಳಷ್ಟು ಅಧಿಕಾರಿಗಳನ್ನು ನೋಡಿದ್ದೇವೆ. ಮೆಟ್ರೋ ಧೋರಣೆ ಹೇಗಿದೆ ಅಂದರೇ, ಇದು ನಿಮ್ಮ ಜಾಗ ಮತ್ತು ಎಷ್ಟು ವರ್ಷ ಬೇಕಾದರೂ ಜಾಗವನ್ನು ಬ್ಲಾಕ್ ಮಾಡುತ್ತೇವೆ ಎಂಬಂತಿದೆ. ಟ್ರಾಫಿಕ್ ಪೊಲೀಸರು ನಿಮ್ಮ ಬೆಂಬಲಕ್ಕೆ ಇದ್ದಾರೆ. ಜನರಿಗೆ ದಿನ ನಿತ್ಯ ಆಗುವ ತೊಂದರೆ ಬಗ್ಗೆ ಟ್ರಾಫಿಕ್ ಪೊಲೀಸರು ಕೂಡ ನಿಮ್ಮನ್ನು ಪ್ರಶ್ನೆ ಮಾಡಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಬಿಎಂಆರ್‌ಸಿಎಲ್ ಅಧಿಕಾರಿಗಳನ್ನು ಸಾರ್ವಜನಿಕವಾಗಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಚಿವ ಕೃಷ್ಣ ಭೈರೇಗೌಡ ಮಾತಿಗೆ ಸಾರ್ವಜನಿಕರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೆಟ್ರೋ ಕಾಮಗಾರಿಗಳು ಎಲ್ಲ ಮಾರ್ಗಗಳಲ್ಲೂ ನಿಧಾನ ಗತಿಯಲ್ಲೇ ನಡೆಯುತ್ತಿವೆ. ಯಾವ ಮಾರ್ಗದಲ್ಲೂ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣವಾಗುತ್ತಿಲ್ಲ. ಜನರಿಗೆ ತೊಂದರೆಯಾಗುತ್ತಿದೆ. ಇದರ ಪರಿಣಾಮ ಮೆಟ್ರೋ ನಿರ್ಮಾಣ ವೆಚ್ಚ ಏರಿಕೆಯಾಗುತ್ತಿದೆ. ಇದಕ್ಕೆ ಮೆಟ್ರೋ ಅಧಿಕಾರಿಗಳು, ಇಂಜಿನಿಯರ್ ಗಳು, ಕಂಟ್ರಾಕ್ಟರ್ ಗಳೇ ಕಾರಣ ಎಂದು ಜನರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/03/minister-krishna-byregowa-lashes-out-at-bmrcl02-2025-12-03-18-56-54.jpg)
ಈ ವೇಳೆ ಬಿಎಂಆರ್‌ಸಿಎಲ್ ಎಂ.ಡಿ. ರವಿಶಂಕರ್, ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸಹ ಸ್ಥಳದಲ್ಲೇ ಇದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us